ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಆಂಧ್ರಪ್ರದೇಶದ ಭೋಗಾಪುರಂನಲ್ಲಿ ಸುಮಾರು 18,000 ಕೋಟಿ ರು. ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ನೆರವೇರಿಸಲಿದ್ದಾರೆ.

ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 5,600 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಈ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

ವಿಶಾಖಪಟ್ಟಣದಲ್ಲಿ 460 ಕೋಟಿ ರು.ಗೂ ಅಧಿಕ ಹೂಡಿಕೆಯ ASIP ಸೆಮಿಕಂಡಕ್ಟರ್ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದು, ಇದು ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕವಾಗಿದೆ. ವಾರ್ಷಿಕ ಸುಮಾರು 9.6 ಕೋಟಿ ಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕಿದೆ.

ಇದರೊಂದಿಗೆ ಕರ್ನೂಲ್‌ ಮತ್ತು ಅನಂತಪುರದ ನವೀಕರಿಸಬಹುದಾದ ಇಂಧನ ವಲಯಗಳಿಗೆ ಸಂಬಂಧಿಸಿದ ವಿದ್ಯುತ್ ಪ್ರಸರಣ ಯೋಜನೆಗಳು ಹಾಗೂ 1,880 ಕೋಟಿ ರು.ಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಚಾಲನೆ ನೀಡಲಾಗುತ್ತದೆ.

ನಂತರ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ– ವಿವೇಕ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ಐತಿಹಾಸಿಕ ಸಂದರ್ಭವನ್ನು ಸ್ಮರಿಸುವ ಈ ಕೇಂದ್ರದಲ್ಲಿ 4-ಡಿ ಅನುಭವ ಕೇಂದ್ರ, ವಸ್ತುಪ್ರದರ್ಶನ, ಗ್ರಂಥಾಲಯ, ಧ್ಯಾನ–ಯೋಗ ಸಭಾಂಗಣ ಸೇರಿದಂತೆ ಹಲವು ಸೌಲಭ್ಯಗಳಿವೆ.