ಗೋವಾದಲ್ಲಿ ನಿರ್ಮಾಣವಾಗಿರುವ ವಿಶ್ವದಲ್ಲೇ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದರು. ದಕ್ಷಿಣ ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ ವತಿಯಿಂದ ನಿರ್ಮಾಣವಾಗಿರುವ 77 ಅಡಿಗಳಷ್ಟು ಎತ್ತರವಾಗಿರುವ, ಅಷ್ಟೇ ಎತ್ತರದ ಬಿಲ್ಲು ಹಿಡಿದು ನಿಂತಿರುವ ಶ್ರೀರಾಮನ ಆಕರ್ಷಕ ಪ್ರತಿಮೆ ನೋಡುಗರ ಕಣ್ಮನ ಸೆಳೆಯಲಿದೆ.

ಗುಜರಾತ್‌ ರಾಜ್ಯದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ʼಏಕತಾ ಪ್ರತಿಮೆʼಯನ್ನು ಲೋಹದಿಂದಲೇ ವಿನ್ಯಾಸಗೊಳಿಸಿದ ಶಿಲ್ಪಿ, ಪದ್ಮಭೂಷಣ ಪುರಸ್ಕೃತ ರಾಮ್‌ ಸುತಾರ್‌ ಅವರೇ ಗೋವಾದಲ್ಲಿ ನಿರ್ಮಾಣಗೊಂಡಿರುವ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.

ಶ್ರೀರಾಮಚಂದ್ರನ ಈ ಪ್ರತಿಮೆ ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನೂ ಗಳಿಸಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಗಳು, ʼರಾಮಾಯಣ ಥೀಮ್‌ ಪಾರ್ಕ್‌ʼ, ಶ್ರೀರಾಮಚಂದ್ರನ ಮಹಿಮೆ ಸಾರುವ ವಸ್ತುಸಂಗ್ರಹಾಲಯವನ್ನೂ ಉದ್ಘಾಟಿಸಿದರು.