ರೈಲು ಹೊರಡುವ 8 ಗಂಟೆ ಮೊದಲೇ ರಿಸರ್ವೇಷನ್ ಪಟ್ಟಿ ಬಿಡುಗಡೆ
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಿ ರಿಸರ್ವೇಷನ್ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ಸದ್ಯದಲ್ಲೇ ಇದು ಜಾರಿಗೆ ಬರಲಿವೆ.
ನವದೆಹಲಿ: ಭಾರತೀಯ ರೈಲ್ವೆ ಈವರೆಗೂ ರೈಲು ಹೊರಡುವ 4 ಗಂಟೆ ಮೊದಲು ತಯಾರಿಸಲಾಗುತ್ತಿದ್ದ ರಿಸರ್ವೇಷನ್ ಪಟ್ಟಿಯನ್ನು 8 ಗಂಟೆಗಳ ಮೊದಲೇ ತಯಾರಿಸಲು ನಿರ್ಧರಿಸಿರುವುದಾಗಿ ಮಾಹಿತಿ ನೀಡಿದೆ.

ಹೊಸ ಉಪಕ್ರಮದ ಪ್ರಕಾರ, ಮಧ್ಯಾಹ್ನ 2 ಗಂಟೆಗಿಂತ ಮೊದಲು ಹೊರಡುವ ರೈಲುಗಳಿಗೆ, ರಿಸರ್ವೇಷನ್ ಪಟ್ಟಿಯನ್ನು ಹಿಂದಿನ ದಿನ ರಾತ್ರಿ 9 ಗಂಟೆಗೆ ತಯಾರಿಸಲಾಗುತ್ತದೆ. ರೈಲ್ವೆ ಪ್ರಯಾಣಿಕರ, ವಿಶೇಷವಾಗಿ ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರು ತಮ್ಮ ಟಿಕೆಟ್ ದೃಢೀಕರಣದ ಮಾಹಿತಿಯನ್ನು ಮುಂಚಿತವಾಗಿ ಪಡೆಯಲು ನೆರವಾಗಲಿದೆ. ಅಲ್ಲದೆ ಈ ಕ್ರಮದಿಂದಾಗಿ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲು ಹೆಚ್ಚಿನ ಸಮಯವೂ ಪ್ರಯಾಣಿಕರಿಗೆ ದೊರೆಯಲಿದೆ. ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ, ಹಂತಹಂತವಾಗಿ ಈ ಉಪಕ್ರಮವನ್ನು ಜಾರಿಗೊಳಿಸಲು ಕೂಡ ಇಲಾಖೆ ಮುಂದಾಗಿದೆ.
ಅಲ್ಲದೆ, ಐಆರ್‌ಸಿಟಿಸಿ ಜಾಲತಾಣ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ತತ್ಕಾಲ್ ಟಿಕೇಟ್‌ಗಳನ್ನು ಖರೀದಿಸಲು ದೃಢೀಕೃತ ಬಳಕೆದಾರರಿಗೆ ಮಾತ್ರ ಅವಕಾಶ ನೀಡುವ ನಿಯಮ ಜು.1ರಿಂದ ಪ್ರಾರಂಭವಾಗಲಿದೆ.