ವಿಶ್ವ ಪ್ರಸಿದ್ಧ ಮರುಭೂಮಿಯ ಪ್ರವಾಸಿ ತಾಣವಾಗಿರುವ ರಾಜಸ್ಥಾನದ ಸ್ಯಾಮ್‌ ಸ್ಯಾಂಡ್‌ ಡ್ಯುನ್ಸ್‌ ಪ್ರದೇಶದಲ್ಲಿರುವ ರೆಸಾರ್ಟ್‌ಗಳು, ಪ್ರವಾಸಕ್ಕೆ ಸಂಬಂಧಿಸಿದಂತೆ ಹೊಸ ನೀತಿಗಳ ಜಾರಿಗೆ ಮುಂದಾಗಿವೆ. ಈ ರೆಸಾರ್ಟ್‌ಗಳ ಮಾಲೀಕರು ಕುಟುಂಬ ಸಹಿತ ಬರುವ ಪ್ರವಾಸಿಗರು ಮತ್ತು ದಂಪತಿಗಳಿಗೆ ಮಾತ್ರ ತಮ್ಮ ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲು ನಿರ್ಧರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಯುವ ಜನರ ಗುಂಪುಗಳು ಇಲ್ಲಿಗೆ ಬಂದು ಮದ್ಯ ಸೇವನೆ, ಮಾದಕ ವಸ್ತುಗಳ ಸೇವನೆಯಲ್ಲಿ ನಿರತರಾಗಿ ಅಶ್ಲೀಲವಾಗಿ ವರ್ತಿಸುತ್ತಿದ್ದರಿಂದ ಬೇಸತ್ತ ರೆಸಾರ್ಟ್‌ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ರೀತಿಯ ಅಹಿತಕರ ಘಟನೆಗಳು ಪ್ರವಾಸಿತಾಣಗಳ ಬಗೆಗೆ ನಕಾರಾತ್ಮಕ ಭಾವವನ್ನು ಇತರ ಪ್ರವಾಸಿಗಳಲ್ಲಿ ಬೆಳೆಸುವ ಅಪಾಯವನ್ನು ತಪ್ಪಿಸುವುದೂ ಕೂಡ ಈ ನಿರ್ಧಾರದ ಹಿಂದಿನ ಕಾರಣವಾಗಿದೆ. ಇದು ರೆಸ್ಪಾನ್ಸಿಬಲ್‌ ಟೂರಿಸಂ ಅನ್ನು ಉತ್ತೇಜಿಸುವುದರ ಜತೆಗೆ ಪ್ರವಾಸಿ ತಾಣಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಹಕಾರಿಯಾಗಿವೆ.