ಕೇರಳ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಗೆ ಒತ್ತು ನೀಡಿ ಕಾರ್ಯರೂಪಕ್ಕೆ ತಂದ ಮಹತ್ತರ ಯೋಜನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2022ರಲ್ಲಿ ಪ್ರಾರಂಭವಾದ “ಮಹಿಳಾ ಸ್ನೇಹಿ ಪ್ರವಾಸೋದ್ಯಮ” ಯೋಜನೆಗೆ ಈಗ ಶ್ರೀಲಂಕಾದ ಪ್ರವಾಸೋದ್ಯಮ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ಮಹಿಳೆಯರು ಪ್ರವಸೋದ್ಯಮದಿಂದ ಕೇವಲ ಪ್ರಯೋಜನ ಪಡೆಯುವವರಷ್ಟೇ ಆಗಬಾರದು, ಅವರು ಪ್ರವಾಸೋದ್ಯಮದ ನೇತೃತ್ವ ವಹಿಸಿಕೊಳ್ಳುವವರಾಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇರಳ ರಾಜ್ಯವು ಕಾರ್ಯರೂಪಕ್ಕೆ ತಂದಿತ್ತು. ಈ ಯೋಜನೆಯಡಿ ಈಗಾಗಲೇ 17,000ಕ್ಕೂ ಹೆಚ್ಚು ಮಹಿಳೆಯರು ಪ್ರವಾಸೋದ್ಯಮ ಸಂಬಂಧಿತ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Kerala women friendly initiatives


ಕೇರಳ ಪ್ರವಾಸೋದ್ಯಮ ಇಲಾಖೆ ಮಹಿಳಾ ಪ್ರವಾಸಿಗರ ಭದ್ರತೆ, ಗೌಪ್ಯತೆ ಮತ್ತು ವಿಶ್ವಾಸಾರ್ಹತೆಗೆ ವಿಶೇಷ ಆದ್ಯತೆ ನೀಡಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಲಿಂಗಪರ ಸುರಕ್ಷತಾ ಪರಿಶೀಲನೆ (Gender Audit) ಕಾರ್ಯರೂಪವನ್ನು ಪಡೆಯುತ್ತಿದ್ದು, ಮೂಲಸೌಕರ್ಯಗಳನ್ನು ಮಹಿಳಾ ಸ್ನೇಹಿಯಾಗಿ ರೂಪಿಸಲಾಗುತ್ತಿದೆ.

ಶ್ರೀಲಂಕಾ ಪ್ರವಾಸೋದ್ಯಮ ಮಂಡಳಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ, ಈ ಯೋಜನೆಯನ್ನು “ಜಾಗತಿಕ ಮಟ್ಟದಲ್ಲಿ ಅನುಕರಣೀಯ ಮಾದರಿ” ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಈ ಹಿಂದೆ ʼಗಾಡ್ಸ್‌ ಓನ್‌ ಕಂಟ್ರಿʼ ಎಂದು ಖ್ಯಾತಿ ಗಳಿಸಿದ್ದ ಕೇರಳ ರಾಜ್ಯ, ಇದೀಗ ʼವುಮೆನ್‌ ಫ್ರೆಂಡ್ಲಿ ಡೆಸ್ಟಿನೇಶನ್ʼ‌ ಆಗಿ ಹೊರಹೊಮ್ಮಿದೆ.