ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ
ಜಪಾನ್ ದೇಶದ ತಂತ್ರಜ್ಞಾನದ ಸಹಾಯದಿಂದ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಜಪಾನ್ನ ಶೀಂಕಾನ್ಸೆನ್ ಇ5 ಅಥವಾ ಇ10 ಟ್ರೈನ್ ಅನ್ನು ಓಡಿಸುವ ಗುರಿ ಇದೆ. ಇನ್ನು 2-3 ವರ್ಷದಲ್ಲಿ ಈ ರೈಲು ಮಾರ್ಗ ಸಿದ್ಧವಾಗಲಿದೆ.
ಭಾರತದಲ್ಲಿ 7,000 ಕಿಮೀ ಉದ್ದದ ಹೈ ಸ್ಪೀಡ್ ರೈಲು ಜಾಲ ಸ್ಥಾಪಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಕಳೆದ ವಾರದ ಜಪಾನ್ ಭೇಟಿ ವೇಳೆ ಮೋದಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದಕ್ಷಿಣ ಭಾರತದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ ರಚನೆಯನ್ನೂ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಾಲ್ಕು ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲಕ್ಕಾಗಿ ಸರ್ವೆ ಕಾರ್ಯಕ್ಕೆ ಆದೇಶ ಹೊರಡಿಸಿರುವುದಾಗಿ ತಿಳಿಸಿದ್ಧಾರೆ.
ಪ್ರಸ್ತಾಪಿತ ಬುಲೆಟ್ ರೈಲು ಕಾರಿಡಾರ್ನಲ್ಲಿ ಹೈದರಾಬಾದ್, ಚೆನ್ನೈ, ಅಮರಾವತಿ ಮತ್ತು ಬೆಂಗಳೂರು ನಗರಗಳು ಹೈಸ್ಪೀಡ್ ರೈಲು ಮಾರ್ಗದಲ್ಲಿ ಒಳಗೊಳ್ಳಲಿವೆ. ಈ ಕಾರಿಡಾರ್ನಲ್ಲಿರುವ ನಾಲ್ಕು ನಗರಗಳಲ್ಲಿ ಐದು ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಹೈಸ್ಪೀಡ್ ರೈಲಿಗೆ ವಾಣಿಜ್ಯಾತ್ಮಕವಾಗಿ ಬಹಳ ಬೇಡಿಕೆಯಲ್ಲಿರುವ ಮಾರ್ಗವೆನಿಸಲಿದೆ ಎಂಬುದು ಆಂಧ್ರ ಸಿಎಂ ಅವರ ಅನಿಸಿಕೆ. ಈ ಸೌತ್ ಇಂಡಿಯಾ ಹೈಸ್ಪೀಡ್ ರೈಲು ಕಾರಿಡಾರ್ ಸಿದ್ಧವಾದಲ್ಲಿ ದಕ್ಷಿಣ ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಸಿಗುತ್ತದೆ ಎಂದಿದ್ದಾರೆ.

7,000 ಕಿಮೀ ಬುಲೆಟ್ ಟ್ರೈನ್ ನೆಟ್ವರ್ಕ್: ಮೋದಿ
ಕಳೆದ ವಾರ ನರೇಂದ್ರ ಮೋದಿ ಅವರು ಜಪಾನ್ ದೇಶಕ್ಕೆ ಭೇಟಿ ನೀಡಿದ್ದರು. ಜಪಾನ್ ಪ್ರಧಾನಿ ಶಿಗೆರು ಇಶಿಬಾ ಜೊತೆ ಮೋದಿ ಅವರು ಟೋಕಿಯೋದಿಂದ ಸೆಂಡೈವರೆಗೆ ಶೀನ್ಕಾನ್ಸೆನ್ ಬುಲೆಟ್ ಟ್ರೈನ್ನಲ್ಲಿ ಪ್ರಯಾಣಿಸಿದರು. ಈ ವೇಳೆ ಅಲ್ಲಿಯ ಮಾಧ್ಯಮವೊಂದರಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶದಲ್ಲಿ 7,000 ಕಿಮೀ ಉದ್ದದ ಬುಲೆಟ್ ರೈಲು ಜಾಲ ನಿರ್ಮಿಸುವ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ. ಜಪಾನ್ ದೇಶದ ತಂತ್ರಜ್ಞಾನದ ಸಹಾಯದಿಂದ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಜಪಾನ್ನ ಶೀಂಕಾನ್ಸೆನ್ ಇ5 ಅಥವಾ ಇ10 ಟ್ರೈನ್ ಅನ್ನು ಓಡಿಸುವ ಗುರಿ ಇದೆ. ಇನ್ನು 2-3 ವರ್ಷದಲ್ಲಿ ಈ ರೈಲು ಮಾರ್ಗ ಸಿದ್ಧವಾಗಲಿದೆ.