ವಿಕಾರಾಬಾದ್‌ ಜಿಲ್ಲೆಯ ಅನಂತಗಿರಿಯನ್ನು ಜಾಗತಿಕ ಪ್ರವಾಸಿತಾಣವನ್ನಾಗಿಸಲು ತೆಲಂಗಾಣ ಸರಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸುಮಾರು ₹2,950 ಕೋಟಿ ವೆಚ್ಚದ ಮಹತ್ತರ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಅನಂತಗಿರಿಯಲ್ಲಿ ವೆಲ್‌ನೆಸ್ ಸೆಂಟರ್, ಐಷಾರಾಮಿ ರೆಸಾರ್ಟ್‌ಗಳು, ಸುಂದರ ವಿಲ್ಲಾಗಳು, ಅದ್ಧೂರಿ ಟೆಂಟ್ ವಸತಿ ಸೌಲಭ್ಯಗಳು ಹಾಗೂ 130 ಕೊಠಡಿಗಳ ಪಂಚತಾರಾ ಹೊಟೇಲ್‌ ನಿರ್ಮಾಣವನ್ನು ಕೈಗೊಳ್ಳುವ ಚಿಂತನೆ ನಡೆಸಿದೆ.

Anantagiri


ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (TGTDC) ವ್ಯವಸ್ಥಾಪಕ ನಿರ್ದೇಶಕಿ ವಲ್ಲೂರು ಕ್ರಾಂತಿ ಅವರು ಅಕ್ಟೋಬರ್ 14 ಮತ್ತು 15 ರಂದು ಉದಯಪುರ, ರಾಜಸ್ಥಾನದಲ್ಲಿ ನಡೆದ ಎರಡು ದಿನಗಳ ರಾಜ್ಯ ಪ್ರವಾಸೋದ್ಯಮ ಮಂತ್ರಿಗಳ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಿದರು.

ತೆಲಂಗಾಣದ ಈ ಯೋಜನೆಯಿಂದ ಸುಮಾರು 2,500ಕ್ಕೂ ಹೆಚ್ಚು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯು ಪರಿಸರ ಸ್ನೇಹಿಯಾಗಿದ್ದು, ಪ್ರವಾಸಿತಾಣಗಳ ನಿರ್ವಹಣಾ ಗುಣಮಟ್ಟವನ್ನು ಸುಧಾರಿಸುವುದರೊಂದಿಗೆ ಪ್ರವಾಸೋದ್ಯಮದ ಸುಸ್ಥಿರ ಬೆಳವಣಿಗೆಗೆ ಸಹಕಾರಿಯಾಗಲಿದೆ.