ಥೈಲ್ಯಾಂಡ್ : ವೀಸಾ ಮುಕ್ತ ಪ್ರವೇಶ ಮುಂದುವರಿಕೆ
ಭಾರತೀಯ ಪ್ರವಾಸಿಗರ ಸಾಮಾನ್ಯ ಪ್ರವಾಸದ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಗರಿಷ್ಠ ವಾಸ್ತವ್ಯವನ್ನು 30 ದಿನಗಳಿಗೆ ಮಿತಿಗೊಳಿಸಲಾಗಿದೆ.
ಭಾರತೀಯ ಪ್ರವಾಸಿಗರಿಗೆ ಥಾಯ್ಲೆಂಡ್ ಸರಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಭಾರತೀಯರಿಗೆ ವೀಸಾ-ಮುಕ್ತ (Visa-Free) ಪ್ರವೇಶ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ವೀಸಾ ಇಲ್ಲದೆ ದೇಶದಲ್ಲಿ ತಂಗುವ ಗರಿಷ್ಠ ಅವಧಿಯನ್ನು 60 ದಿನಗಳಿಂದ 30 ದಿನಗಳಿಗೆ ಇಳಿಸಲಾಗಿದೆ.

ಈ ಹಿಂದೆ ಭಾರತೀಯರಿಗೆ ನೀಡಲಾಗುತ್ತಿದ್ದ ವೀಸಾ-ಮುಕ್ತ ಪ್ರವೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬಗ್ಗೆ ಥೈಲ್ಯಾಂಡ್ ಸರಕಾರ ಚಿಂತನೆ ನಡೆಸಿತ್ತು. ಆದರೆ, ಈ ಪ್ರಸ್ತಾವನೆಯ ಸುದ್ದಿಯೇ ಭಾರತೀಯ ಪ್ರವಾಸಿಗರಲ್ಲಿ ಗೊಂದಲ ಉಂಟುಮಾಡಿ, ಥೈಲ್ಯಾಂಡ್‌ಗೆ ತೆರಳುವವರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿತ್ತು. ಇದನ್ನು ಗಮನಿಸಿದ ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ವೀಸಾ-ಮುಕ್ತ ಪ್ರವೇಶವನ್ನು ಮುಂದುವರಿಸಲು ತೀರ್ಮಾನಿಸಿದೆ.
ಭಾರತವು ಚೀನಾ ಮತ್ತು ಮಲೇಷ್ಯಾದ ನಂತರ ಥೈಲ್ಯಾಂಡ್‌ಗೆ ಅತಿ ಹೆಚ್ಚು ಪ್ರವಾಸಿಗರು ಬರುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವೀಸಾ-ಮುಕ್ತ ಪ್ರವೇಶವನ್ನು ಮುಂದುವರಿಸಲಾಗಿದೆ. ಆದರೆ, ಭಾರತೀಯ ಪ್ರವಾಸಿಗರ ಸಾಮಾನ್ಯ ಪ್ರವಾಸದ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಗರಿಷ್ಠ ವಾಸ್ತವ್ಯವನ್ನು 30 ದಿನಗಳಿಗೆ ಮಿತಿಗೊಳಿಸಲಾಗಿದೆ ಎಂದು ಥಾಯ್ಲೆಂಡ್‌ನ ಪ್ರವಾಸೋದ್ಯಮ ಸಚಿವ ಸುರಸಾಕ್ ಫನ್‌ಚಾರೋನ್‌ವೊರಾಕುಲ್ ತಿಳಿಸಿದ್ದಾರೆ.

ಈ ಬದಲಾವಣೆ ಭಾರತೀಯರಿಗೆ ಮಾತ್ರವಲ್ಲದೆ ಕ್ರೊಯೇಷಿಯಾ, ಬಲ್ಗೇರಿಯಾ, ಸೈಪ್ರಸ್, ಮಾಲ್ಟಾ ಮತ್ತು ಮಾಲ್ಡೀವ್ಸ್‌ನ ಪ್ರವಾಸಿಗರಿಗೂ ಅನ್ವಯವಾಗಲಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶಿ ನಾಗರಿಕರು ವೀಸಾ-ಮುಕ್ತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಉದ್ಯೋಗ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ವೀಸಾ ವ್ಯವಸ್ಥೆಯ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಥೈಲ್ಯಾಂಡ್ ಸರಕಾರ ಈ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.
ಪ್ರವಾಸೋದ್ಯಮವು ಥೈಲ್ಯಾಂಡ್‌ನ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಭಾರತೀಯ ಪ್ರವಾಸಿಗರ ಸಂಖ್ಯೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳುವುದು ದೇಶದ ಪ್ರಮುಖ ಆದ್ಯತೆಯಾಗಿದೆ. ಹೊಸ ನಿಯಮದ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ವಲಸೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಗುರಿಯನ್ನು ಸರಕಾರ ಹೊಂದಿದೆ.