ಭಾರತೀಯ ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತೇಜನ ನೀಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಪ್ರಸಿದ್ಧ ಪೇಮೆಂಟ್‌ ಸಂಸ್ಥೆಯಾದ ʼಮಾಸ್ಟರ್‌ಕಾರ್ಡ್‌ʼ ಜತೆ ಎರಡು ವರ್ಷದ ಅವಧಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಭಾರತವನ್ನು ಪ್ರೀಮಿಯಂ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದೇ ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

Mastercard MoU

ಮಾಸ್ಟರ್‌ಕಾರ್ಡ್‌ನ ಜಾಗತಿಕ ನೆಟ್‌ವರ್ಕ್‌ ಹಾಗೂ ಬ್ರ್ಯಾಂಡ್ ಪ್ರಾಬಲ್ಯವನ್ನು ಬಳಸಿಕೊಂಡು, ಭಾರತದ ವೈವಿಧ್ಯಮಯ ಸಂಸ್ಕೃತಿ, ಪಾರಂಪರಿಕ ಸ್ಮಾರಕಗಳು, ಪ್ರಕೃತಿ ತಾಣಗಳು, ಆಹಾರ ಪರಂಪರೆ ಮತ್ತು ಆಧ್ಯಾತ್ಮಿಕ ಪ್ರವಾಸಿ ತಾಣಗಳನ್ನು ವಿಶ್ವದ ಪ್ರವಾಸಿಗರಿಗೆ ಪರಿಚಯಿಸಲು ಜಂಟಿ ಪ್ರಚಾರ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ.

ಈ ಒಪ್ಪಂದದ ಭಾಗವಾಗಿ ಮಾಸ್ಟರ್‌ಕಾರ್ಡ್‌ ತನ್ನ “ಪ್ರೈಸ್‌ಲೆಸ್” ಪ್ಲಾಟ್‌ಫಾರ್ಮ್‌ನ ಮೂಲಕ ಪ್ರವಾಸಿಗರು ಭಾರತದಲ್ಲಿ ಪಡೆಯಬಹುದಾದ ವಿಭಿನ್ನ ಮತ್ತು ವಿಶಿಷ್ಟ ಪ್ರವಾಸಿ ಅನುಭವಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಸಹಕರಿಸುತ್ತದೆ. ಜತೆಗೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ವಿಸ್ತರಿಸುವುದು, ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಸುಗಮ ಪಾವತಿ ಅನುಭವ ಒದಗಿಸುವುದು ಈ ಯೋಜನೆಯ ಭಾಗವಾಗಿದೆ.