ಜು.1 ರಿಂದ ರೈಲ್ವೆ ಟಿಕೆಟ್ ದರ ಏರಿಕೆ
ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ರೈಲು ಸಾರಿಗೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಸಾಮಾನ್ಯ ಜನರ ಜೀವನಾಡಿಯಾಗಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆ ದೂರ ಪ್ರಯಾಣದ ಟಿಕೆಟ್ ದರವನ್ನು ತುಸು ಏರಿಕೆ ಮಾಡಿದ್ದು, ಹೊಸ ದರ ಜಾರಿಯಿಂದ ಪ್ರಯಾಣಿಕರ ಮೇಲೆ ಅಷ್ಟೇನೂ ಹೊರೆ ಬೀಳದು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ದೆಹಲಿ: ಭಾರತೀಯ ರೈಲ್ವೆ ಅತಿ ದೂರದ ಪ್ರಯಾಣದ ಟಿಕೆಟ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡಲು ನಿರ್ಧರಿಸಿದ್ದು, ಹೊಸ ದರ ಜುಲೈ 1ರಿಂದ ಜಾರಿಗೆ ಬರಲಿದೆ. ಹವಾನಿಯಂತ್ರಿತ(ಎಸಿ) ಮತ್ತು ಹವಾನಿಯಂತ್ರಣ ಸೌಲಭ್ಯ ಇಲ್ಲದ ಎಕ್ಸ್ ಪ್ರೆಸ್ ರೈಲುಗಳು ಮತ್ತು 2ನೇ ದರ್ಜೆಯ ಬೋಗಿಗಳ ಟಿಕೆಟ್ ದರದಲ್ಲಿ ಭಾರತೀಯ ರೈಲ್ವೆ ಅಲ್ಪ ಹೆಚ್ಚಳ ಮಾಡಿದೆ. ಹೊಸ ದರ ಜಾರಿಯಿಂದ ಪ್ರಯಾಣಿಕರ ಮೇಲೆ ಅಷ್ಟೇನೂ ಹೊರೆ ಬೀಳುವುದಿಲ್ಲ. ಏಕೆಂದರೆ ಕಿಮೀಗೆ 1 -2 ಪೈಸೆಗಳಷ್ಟೇ ಏರಿಕೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಂಗಳವಾರ ತಿಳಿಸಿದ್ದಾರೆ.
ಉಪನಗರ ರೈಲುಗಳಲ್ಲಿನ ಸಂಚಾರದ ಟಿಕೆಟ್ ಅಥವಾ ಸೀಸನ್ ಟಿಕೆಟ್(ಮಾಸಿಕ ಪಾಸ್) ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿಲ್ಲ. ಅಂದರೆ, 500 ಕಿ.ಮೀ. ವರೆಗಿನ ಅಂತರದ ಪ್ರಯಾಣದಲ್ಲಿ ಸಾಮಾನ್ಯ 2ನೇ ದರ್ಜೆ ಬೋಗಿಗಳ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಏನಿದ್ದರೂ, ಸಾಮಾನ್ಯ 2ನೇ ದರ್ಜೆಯ ಬೋಗಿಗಳ ಪ್ರಯಾಣ 500 ಕಿ.ಮೀ. ಮೀರಿದ ಪ್ರಯಾಣಕ್ಕೆ ಅತ್ಯಲ್ಪ ದರದ ಏರಿಕೆ ಮಾಡಲಾಗಿದೆ. ಪ್ರತಿ ಕಿ.ಮೀ.ಗೆ ಅರ್ಧ ಪೈಸೆಯಷ್ಟು (100 ಕಿಮೀಗೆ 50 ಪೈಸೆ) ಹೆಚ್ಚಳವಾಗಲಿದೆ ಎಂದರು.
ಎಸಿ ಬೋಗಿ ಟಿಕೆಟ್ ದರ ಪ್ರತಿ ಕಿ.ಮೀ. ಗೆ 2 ಪೈಸೆ ಹೆಚ್ಚಳವಾಗಲಿದೆ. ಎಸಿ ಇಲ್ಲದ ಮೇಲ್‌ಗಾಡಿ ಮತ್ತು ಎಕ್ಸ್‌ಪ್ರೆಸ್ ರೈಲು ಪ್ರಯಾಣ ದರ ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳವಾಗಲಿದೆ. ನಿತ್ಯದ ಪ್ರಯಾಣಿಕರು, ಕಡಿಮೆ ದೂರ ಪ್ರಯಾಣಿಸುವವರಿಗೆ ಈಗಿನ ದರ ಏರಿಕೆಯಿಂದ ಯಾವುದೇ ಹೊರೆಯಾಗದು ಎಂದು ವಿವರಿಸಿದರು. ದೇಶಾದ್ಯಂತ ಪ್ರತಿದಿನ 13,000ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತವೆ.