ದೇಶದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಿಸುವ ಮಹತ್ವದ ಉದ್ದೇಶದಿಂದ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಭೆ ನಿನ್ನೆಯಿಂದ ರಾಜಸ್ಥಾನದ ಉದಯಪುರದಲ್ಲಿ ಪ್ರಾರಂಭವಾಯಿತು.

ಎರಡು ದಿನಗಳ ಮಟ್ಟಿಗೆ ನಡಯುತ್ತಿರುವ ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ, ಭಾರತೀಯ ಪ್ರವಾಸೋದ್ಯಮದ ಬೆಳವಣಿಗೆಗೆ ಅಗತ್ಯವಿರುವ ನೂತನ ಮಾರ್ಗಸೂಚಿಯ ಬಗ್ಗೆ ಚರ್ಚಿಸಿದರು.

Ministers conference

ಸಭೆಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಿದರು. ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಸೇರಿದಂತೆ ಕೇರಳ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಲಡಾಖ್, ಮೇಘಾಲಯ ಮತ್ತು ಇತರ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

50 ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃಧ್ಧಿ ಪಡಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ರಾಜ್ಯಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು ಯೋಜನೆಗೆ ಪೂರಕವಾಗಿರುವ ತಮ್ಮ ಪ್ರಸ್ತಾವನೆಗಳನ್ನು ರಾಜ್ಯ ಸರಕಾರಗಳು ಈ ಸಭೆಯಲ್ಲಿ ಮಂಡಿಸಿದವು. ಆಯ್ಕೆಯಾದ ರಾಜ್ಯಗಳಿಗೆ ಕೇಂದ್ರದಿಂದ ಹಣಕಾಸು ಸಹಾಯ ದೊರೆಯಲಿದೆ.

ಕೇಂದ್ರ ಸರಕಾರವು ಇದೇ ಸಂದರ್ಭದಲ್ಲಿ ʼಡಿಜಿಟಲ್ ಮತ್ತು ಗ್ರೀನ್ (ಡಿ.ಜಿ.) ಪ್ರವಾಸೋದ್ಯಮ ನೀತಿʼಯ ಮಸೂದೆಯನ್ನೂ ಬಿಡುಗಡೆ ಮಾಡಿತು. ಇದರ ಉದ್ದೇಶ ಉನ್ನತ ತಂತ್ರಜ್ಞಾನ, ಪರಿಸರ ಸ್ನೇಹಿ ಅಭಿವೃದ್ಧಿ ಹಾಗೂ ಸಮರ್ಪಕ ಆಡಳಿತದ ಮೂಲಕ ಭಾರತವನ್ನು ಸ್ಮಾರ್ಟ್ ಪ್ರವಾಸೋದ್ಯಮ ರಾಷ್ಟ್ರವನ್ನಾಗಿ ರೂಪಿಸುವುದಾಗಿದೆ.