ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಸುಮಾರು 473 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಇಂದು ಸೇತುವೆ ಉದ್ಘಾಟನೆಯಿಂದ ಮಲೆನಾಡ ಭಾಗದ ಜನರ ದಶಕಗಳ ಕನಸು ಪೂರ್ಣಗೊಂಡಿದೆ.
- ಪ್ರಭಾಕರ ಆರ್
ಶಿವಮೊಗ್ಗ: ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿರುವ ಸಿಗಂದೂರು ಸೇತುವೆಯನ್ನು (Siganduru Bridge) ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವರು ನೆರವೇರಿಸಿದರು. ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಸುಮಾರು 473 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಇಂದು ಸೇತುವೆ ಉದ್ಘಾಟನೆಯಿಂದ ಮಲೆನಾಡ ಭಾಗದ ಜನರ ದಶಕಗಳ ಕನಸು ಪೂರ್ಣಗೊಂಡಿದೆ.
ಲಿಂಗಮನಕ್ಕಿ ಜಲಾಶಯದ ಬಳಿಕ ಸಾಗರ ತಾಲೂಕಿನ ತುಮರಿ ಗ್ರಾ.ಪಂ. ಅನೇಕ ಹಳ್ಳಿಗಳಿಗೆ ಲಾಂಚ್ ಗಳೇ ಸಂಪರ್ಕ ಸಾಧನವಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಲಾಂಚ್ ಸೇವೆ ಇತ್ತು. ಸಂಜೆ ನಂತರ ಈ ಗ್ರಾಮಗಳಿಗೆ ಸಂಪರ್ಕ ಕೊಂಡಿ ಸಾಗರಕ್ಕೆ ಇರಲಿಲ್ಲ. ಇದೀಗ ಈ ಸೇತುವೆ ಗ್ರಾಮಸ್ಥರಿಗೆ ದೊಡ್ಡ ಅನುಕೂಲರವಾಗಿದೆ. ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಶಂಕುಸ್ಥಾಪನೆ 2018 ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಡಿದ್ದರು. ಇಂದು ಈ ಸೇತುವೆಯನ್ನು ಅವರೇ ಲೋಕಾರ್ಪಣೆ ಮಾಡಿದ್ದಾರೆ.
ಸಿಗಂದೂರು ಸೇತುವೆಯ ಲೋಕಾರ್ಪಣೆ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಗಡ್ಕರಿ ಅವರು ಚಾಲನೆ ಕೂಡ ನೀಡಿದರು. 625 ರೂ. ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ -ಸಾಗರದಿಂದ ಮರುಕುಟಿಕದ ವರೆಗೆ ಸಾಗರ ನಗರದ ಬೈಪಾಸ್ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕುಸ್ಥಾಪನೆಯೂ ನಡೆದಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ರೂ,2056 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸೇತುವೆಯು ಸುಮಾರು 2.25 ಕಿಲೋಮೀಟರ್ ಉದ್ದವಿದ್ದು, 11 ಮೀಟರ್ ರಸ್ತೆ ಅಗಲವಾಗಿದೆ. ಒಟ್ಟು 17 ಪಿಲ್ಲರ್‌ಗಳನ್ನು ಹೊಂದಿರುವ ಈ ಸೇತುವೆಯು, ಕೇಬಲ್-ಸ್ಟೇಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದಕ್ಕೆ ಅಡ್ವಾನ್ಸ್ಡ್ ಎಕ್ಸ್ಟ್ರಾಡೋಸ್ಡ್ ಬ್ಯಾಲೆನ್ಸ್ಡ್ ಕ್ಯಾಂಟಿಲಿವರ್ ತಂತ್ರಜ್ಞಾನ ಬಳಸಲಾಗಿದೆ. ಇನ್ನು ದೇಶದಲ್ಲೇ ಅತಿ ಉದ್ದದ ಕೇಬಲ್ ಸೇತುವೆ ʼ ಸುದರ್ಶನ್ ಸೇತುʼ ಗುಜರಾತ್‌ನಲ್ಲಿದ್ದು, ಓಖಾ ಮತ್ತು ಬೇಟ್ ದ್ವಾರಕಾ ದ್ವೀಪಗಳನ್ನು ಸಂಪರ್ಕಿಸಲು ಈ ಸೇತುವೆ ನಿರ್ಮಿಸಲಾಗಿದೆ. ಇದು 2.32 ಕಿ.ಮೀ. ಉದ್ದವಿದೆ.