ಉತ್ತರ ಪ್ರದೇಶ ಸರಕಾರವು ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ಷಮತೆ, ಪಾರದರ್ಶಕತೆ ಮತ್ತು ಸಿಬ್ಬಂದಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಹೊಸ 'ಅಧೀನಸ್ತ ಪ್ರವಾಸೋದ್ಯಮ ಸೇವಾ ನಿಯಮಾವಳಿʼಯನ್ನುಪ್ರಕಟಿಸಿದೆ. ಈ ನಿಯಮಾವಳಿ ರಾಜ್ಯದ ಪ್ರವಾಸೋದ್ಯಮ ವಲಯದ ಆಡಳಿತವನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಹೊಸ ನಿಯಮಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ, ಪದೋನ್ನತಿ, ಸೇವಾ ಷರತ್ತುಗಳು ಮತ್ತು ಹುದ್ದೆಗಳ ಪುನರ್‌ವ್ಯವಸ್ಥೆಯ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಪ್ರಕಟನಾ ಅಧಿಕಾರಿ, ಜಿಲ್ಲಾ ಮತ್ತು ಉಪಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ, ಪ್ರವಾಸೋದ್ಯಮ ಮಾಹಿತಿ ಅಧಿಕಾರಿ ಮೊದಲಾದ ಹುದ್ದೆಗಳಿಗೆ ಈಗ ನಿಗದಿತ ಅರ್ಹತೆ ಮತ್ತು ವೃತ್ತಿಪರ ಮಾನದಂಡಗಳು ಅನ್ವಯಿಸಲಿವೆ.

UP Tourism


ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, UP Public Service Commission (UPPSC) ಮೂಲಕ ಉನ್ನತ ಹುದ್ದೆಗಳ ನೇಮಕಾತಿ ನಡೆಯಲಿದೆ. ತಳಮಟ್ಟದ ಹುದ್ದೆಗಳ ನೇಮಕಾತಿಯನ್ನು UP Subordinate Services Selection Commission (UPSSSC) ನಿರ್ವಹಿಸಲಿದೆ. ಸರಕಾರದ ಪ್ರಕಾರ, ಈ ಕ್ರಮವು ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ನೆರವಾಗಲಿದೆ.

ಸೇವೆಗಳ ವೃತ್ತಿಪರತೆ ಹೆಚ್ಚಾದರೆ ಪ್ರವಾಸಿಗರಿಗೆ ದೊರೆಯುವ ಅನುಭವದ ಗುಣಮಟ್ಟವೂ ಸುಧಾರಿಸಲಿದೆ. ರಾಜ್ಯದ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗಿಸುವುದೇ ಈ ನಿಯಮಾವಳಿಯ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದರು.