ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ವಜರ ಮನೆಯಿರುವ ಆಗ್ರಾದ ಬತೇಶ್ವರ ಗ್ರಾಮವು ಸದ್ಯದಲ್ಲೇ ಹೊಸ ರೂಪವನ್ನು ಪಡೆದು, ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ವಾಜಪೇಯಿ ಅವರ ಪರಂಪರೆಯನ್ನು ಗೌರವಿಸುವುದಕ್ಕಾಗಿ, ಆಗ್ರಾ ಜಿಲ್ಲೆಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಆದರೆ ಕಡಿಮೆ ಪ್ರಸಿದ್ಧ ತಾಣವನ್ನು ಪುನರುಜ್ಜೀವನಗೊಳಿಸಲು ಉತ್ತರಪ್ರದೇಶ ಸರ್ಕಾರ ಚಿಂತಿಸಿದ್ದು,ಈ ಯೋಜನೆಗೆ 27 ಕೋಟಿ ರು. ಅನುಮೋದನೆ ನೀಡಿದೆ.

Bateshwar Village

ಜಾಗತಿಕ ಆಕರ್ಷಣೆಯನ್ನು ಹೊಂದಿರುವ ತಾಜ್ ಮಹಲ್‌ ನಿಂದಾಗಿ ಬಟೇಶ್ವರದ ಯಮುನಾ ನದಿಯ ಉದ್ದಕ್ಕೂ ಇರುವ 101 ಪ್ರಾಚೀನ ಶಿವ ದೇವಾಲಯಗಳು ನಿರ್ಲಕ್ಷಿಸಲ್ಪಟ್ಟಿತ್ತು. ಪ್ರತಿಹಾರ ರಾಜವಂಶದ ಅವಧಿಯಲ್ಲಿ ಸಾಂಪ್ರದಾಯಿಕ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯಗಳು ನೆನಗುದಿಗೆ ಬಿದ್ದಿದ್ದು, ಇದನ್ನು ಮತ್ತೆ ಭಾರತದ ಧಾರ್ಮಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ತಾಣವನ್ನಾಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.