ಕರ್ನಾಟಕ ಕರಾವಳಿ ಜಲಸಾರಿಗೆ ಮಂಡಳಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಮಂಗಳೂರಿಂದ ಕುಂದಾಪುರದ ಮರವಂತೆಗೆ ದೋಣಿ ಸೇವೆ (ಫೆರ್ರಿ) ಮತ್ತು ಮಂಗಳೂರಿನ ವಿವಿಧ ಭಾಗಗಳಿಗೆ ಜಲಮೆಟ್ರೋ ಸಂಚಾರ ಆರಂಭಿಸಲು ಯೋಜನೆ ಸಿದ್ಧಗೊಳಿಸಿದೆ.

WATER METRO (1)

ಮಂಗಳೂರಿನಿಂದ ಕುಂದಾಪುರದ ಮರವಂತೆಗೆ ಫೆರ್ರಿ ಸೇವೆ

ಮಂಗಳೂರಿನಿಂದ ಮರವಂತೆವರೆಗೆ ಒಟ್ಟು 110 ಕಿಮೀ ಉದ್ದದ ಜಲಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಈ ಸೇವೆಯು ಆರಂಭವಾದರೆ ರಾಷ್ಟೀಯ ಹೆದ್ದಾರಿ 66ರ ಸಂಚಾರ ದಟ್ಟಣೆಗೆ ಕೊಂಚ ರಿಲೀಫ್‌ ಸಿಗಲಿದೆ.

ಎಲ್ಲೆಲ್ಲಿ ದೋಣಿ ನಿಲುಗಡೆ

ಈ ಫೆರ್ರಿ ಸೇವೆಯು ಐದು ಕಡೆಗಳಲ್ಲಿ ನಿಲುಗಡೆ ಹೊಂದಿರಲಿದೆ. ಸದ್ಯಕ್ಕೆ ಹಳೆ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ, ಕೋಟ ಮತ್ತು ಮರವಂತೆಗಳನ್ನು ನಿಲುಗಡೆಗಾಗಿ ಗುರುತಿಸಲಾಗಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲು ಒಟ್ಟು ಅಂದಾಜು 37.8 ಕೋಟಿ ರುಪಾಯಿ ವೆಚ್ಚ ಯೋಜಿಸಲಾಗಿದ್ದು. ಸಹಭಾಗಿತ್ವಕ್ಕೆ ಆಯ್ಕೆಯಾದ ಸಂಸ್ಥೆಗೆ 20 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿ ಸಿಗಲಿದೆ.

ಮಂಗಳೂರಿಗೆ ಜಲ ಮೆಟ್ರೋ ಯೋಜನೆ

ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಮಾರು 180 ಕೋಟಿ ರುಪಾಯಿ ವೆಚ್ಚದಲ್ಲಿ 'ಜಲ ಮೆಟ್ರೋ' ಆರಂಭಿಸಲು ಯೋಜನೆ ರೂಪಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಮಳವೂರು ಸೇತುವೆಯಿಂದ ಜಪ್ಪಿನಮೊಗರು ಸೇತುವೆಯವರೆಗೆ ಈ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ. ಈ ಮಾರ್ಗವು ಗುರುಪುರ ಮತ್ತು ನೇತ್ರಾವತಿ ನದಿಗಳ ಮೂಲಕ ಹಳೆ ಮಂಗಳೂರು ಬಂದರನ್ನು ಸಂಪರ್ಕಿಸುವುದರಿಂದ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲಿದೆ.

ಈ ಯೋಜನೆಗಳು ಅನುಷ್ಟಾನಗೊಂಡರೆ ಮಂಗಳೂರಿನ ಸಾರಿಗೆ ಸಂಪರ್ಕ ಸುಲಭ ಮತ್ತು ಪರಿಸರ ಸ್ನೇಹಿಯಾಗಿರಲಿದೆ. ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೂ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಒಟ್ಟು ದಕ್ಷಿಣ ಕನ್ನಡದ ಆರ್ಥಿಕತೆಯು ಬಲಪಡೆಯಲಿದೆ.