ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವತಿಯಿಂದ ಪ್ರಖ್ಯಾತ "ಗೋಲ್ಡನ್ ಚಾರಿಯಟ್" ರೈಲಿನ ವಿಶಿಷ್ಟ ರೋಡ್ ಶೋ ಅಕ್ಟೋಬರ್ 24, 2025ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಬೆಂಗಳೂರಿನ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮವು ಭಾರತದ ಐಷಾರಾಮಿ ಹೆರಿಟೇಜ್ ರೈಲಾದ ಗೋಲ್ಡನ್ ಚಾರಿಯಟ್‌ನ ಅದ್ಭುತ ಸೌಂದರ್ಯ, ರಾಜ ವೈಭವ ಪ್ರಯಾಣದ ಅನುಭವವನ್ನು ಆಸಕ್ತರಿಗೆ ನೇರವಾಗಿ ಪರಿಚಯಿಸುವ ಉದ್ದೇಶ ಹೊಂದಿದೆ.

Golden chariot facilities


ಕಾರ್ಯಕ್ರಮದಲ್ಲಿ ಗೋಲ್ಡನ್ ಚಾರಿಯಟ್‌ನ ಒಳಾಂಗಣ ವಿನ್ಯಾಸ, ಸೌಲಭ್ಯಗಳು ಮತ್ತು ಐಷಾರಾಮಿ ವೈಶಿಷ್ಟ್ಯಗಳ ಪ್ರದರ್ಶನ, ಪ್ರವಾಸೋದ್ಯಮ ವಲಯದ ತಜ್ಞರಿಂದ ಪ್ರಸ್ತುತಿಗಳು ನಡೆಯಲಿದ್ದು, ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರೊಂದಿಗೆ ಸಂವಹನ ನಡೆಸುವ ಅವಕಾಶವೂ ದೊರೆಯಲಿದೆ. ಆಸಕ್ತರು ಅಕ್ಟೋಬರ್ 23, 2025ರೊಳಗೆ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬೇಕಾಗಿ KSTDC ತಿಳಿಸಿದೆ.

ಗೋಲ್ಡನ್ ಚಾರಿಯಟ್ ದಕ್ಷಿಣ ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಶ್ರೇಷ್ಠ ಪ್ರಯಾಣದ ಸೊಬಗನ್ನು ಪ್ರತಿಬಿಂಬಿಸುವ ವಿಶಿಷ್ಟ ಹೆರಿಟೇಜ್ ರೈಲು. ಈ ರೋಡ್ ಶೋ ಮೂಲಕ ಪ್ರವಾಸೋದ್ಯಮ ಪ್ರೇಮಿಗಳು, ಉದ್ಯಮಿಗಳು ಮತ್ತು ಪಾಲುದಾರರು ಈ ಐಕಾನಿಕ್ ರೈಲಿನ ವೈಭವವನ್ನು ನೇರವಾಗಿ ಅನುಭವಿಸುವ ಅಪೂರ್ವ ಅವಕಾಶವನ್ನು ಪಡೆಯಲಿದ್ದಾರೆ.