ಕಡಿಮೆ ಟೋಲ್ ಪಡೆವ ಹೆದ್ದಾರಿ: ಆ್ಯಪ್ ಮೂಲಕ ಚಾಲಕರಿಗೆ ಮಾಹಿತಿ
ಇನ್ಮುಂದೆ ದುಬಾರಿ ಟೋಲ್ ಕೊಟ್ಟು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ತಲೆಬಿಸಿ, ಚಾಲಕರಿಗೆ ಇರೋದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜಮಾರ್ಗ ಯಾತ್ರಾ ಆ್ಯಪ್, ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುವ ಟೋಲ್ ಗಳ ಮಾಹಿತಿಯನ್ನೂ ಸಹ ಚಾಲಕರಿಗೆ ನೀಡುವ ಹೊಸ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟುವುದೆಂದರೆ ತಲೆಬಿಸಿ ಮಾಡಿಕೊಳ್ಳುವ ಮಂದಿ ನಮ್ಮಲ್ಲಿ ಹಲವರು. ಅವರಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಮಾರ್ಗವನ್ನು ಕಂಡುಕೊಂಡಿದ್ದು, ಈಗಾಗಲೇ ರಾಜಮಾರ್ಗ ಯಾತ್ರಾ ಆ್ಯಪ್ ಕಾರ್ಯನಿರತವಾಗಿದೆ. ಈ ಆ್ಯಪ್ ಮೂಲಕ ಚಾಲಕರು ಟೋಲ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎನ್‌ಎಚ್‌ಎಐನ ರಾಜಮಾರ್ಗ ಆ್ಯಪ್‌ನಲ್ಲಿ ಮುಂದಿನ ತಿಂಗಳಿನಿಂದ ಜಾರಿ ಆಗುವಂತೆ ಹೊಸ ಫೀಚರ್ ಅಳವಡಿಸಲಾಗಿದೆ. ಇದರಲ್ಲಿ ಹೊರಡುವ ಸ್ಥಳದಿಂದ ಗಮ್ಯ ಸ್ಥಾನಕ್ಕೆ ಹಲವು ಮಾರ್ಗಗಳನ್ನು ಮಾಹಿತಿಯು ಲಭ್ಯವಿರಲಿದೆ. ದೂರ, ಟೋಲ್ ಸಂಗ್ರಹ ಮಾಹಿತಿ ಸೇರಿ ಹೆದ್ದಾರಿಗೆ ಸಂಬಂಧಿಸಿದ ಇತರೆ ಮಾಹಿತಿ ಇದರಲ್ಲಿರುತ್ತದೆ. ಜೊತೆಗೆ ದೂರು ಮತ್ತು ಸಲಹೆ ತಂತ್ರಾಂಶವೂ ಸಹ ಇದರಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಮಾರ್ಗ ಯಾತ್ರಾ ಆ್ಯಪ್ ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನೈಜ ಸಮಯದ ದಟ್ಟಣೆ ಬಗ್ಗೆ ಮಾಹಿತಿ ನೀಡುವ ಜತೆಗೆ ಹಲವು ದೂರುಗಳನ್ನು ನಿವಾರಿಸವುಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಮುಂದೆ ಯಾವ ಹೆದ್ದಾರಿಯಲ್ಲಿ ಎಷ್ಟು ಟೋಲ್ ಬೂತ್ ಸಿಗಲಿದೆ ಎಂಬ ಮಾಹಿತಿಯನ್ನು ಹಾಗೂ ಒಂದು ನಿಗದಿತ ಸ್ಥಳಕ್ಕೆ ತಲುಪಲು ಇರುವ ಮಾರ್ಗಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಡಿಮೆ ಟೋಲ್ ಸಂಗ್ರಹಿಸುವ ರಸ್ತೆಯ ಮಾಹಿತಿಯನ್ನು ಲಭ್ಯವಾಗುವ ಮೂಲಕ ಚಾಲಕರು ದುಬಾರಿ ಟೋಲ್ ಗಳನ್ನು ಬಿಟ್ಟು, ಕಡಿಮೆ ವೆಚ್ಚದಲ್ಲಿ ಪ್ರಯಾಣವನ್ನು ಎಂಜಾಯ್ ಮಾಡಬಹುದು.