ಮೊದಲ ಹಂತದಲ್ಲಿ ಪ್ರಮುಖ ಪ್ರವಾಸಿ ತಾಣಗಳಿಗೆ ಮತ್ತು ನಂತರದಲ್ಲಿ ಇಡೀ ದೇಶಾದ್ಯಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈಫೈ ಸೌಲಭ್ಯ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಭಾರತೀಯ ಸಂಚಾರ ನಿಗಮದ ಸಹಯೋಗದಲ್ಲಿ ಜಿಎನ್ಎ ಇಂಡಿಯಾ ಸಂಸ್ಥೆಯು ಜಾರಿಗೊಳಿಸಲು ಉದ್ದೇಶಿಸಿದೆ.

ಇಂಡೋ ಜಪಾನ್ ಜಂಟಿ ಉದ್ಯಮವಾಗಿರುವ ಜಿಎನ್ಎ ಇಂಡಿಯಾ ಸಂಸ್ಥೆಯು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯತತ್ಪರವಾಗಿ ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ ವೈಫೈ ಸೌಲಭ್ಯ ನೀಡುವ ಯೋಜನೆಯನ್ನು ಇತ್ತೀಚೆಗಷ್ಟೇ ಯಶಸ್ವಿಯಾಗಿ ಜಾರಿಗೊಳಿಸಿದೆ.

yana wifi

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಈ ಅಪರೂಪದ ಜನೋಪಯೋಗಿ ಯೋಜನೆಯನ್ನು ಹಂತ ಹಂತವಾಗಿ ಇತರ ಪ್ರವಾಸಿ ಕೇಂದ್ರಗಳಲ್ಲಿ ಮತ್ತು ದೇಶದ ಪ್ರಮುಖ ಪಟ್ಟಣಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಎನ್ಎ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ನಾಗರಾಜ ಅವರು ತಿಳಿಸಿದ್ದಾರೆ.

ಬಿಎಸ್ಎನ್ಎಲ್ ಸಹಕಾರದೊಂದಿಗೆ ಭಾರತ್ ಏರ್ ಫೈ 7 ನೆಟ್ ವರ್ಕ್ ಜಪಾನ್ ತಂತ್ರಜ್ಞಾನದ ಮೂಲಕ ಈ ವೈಫೈ ಸೌಲಭ್ಯ ನೀಡಲಾಗುತ್ತಿರುವುದರಿಂದ ಪ್ರವಾಸಿ ತಾಣಗಳಿಂದ ಮೊಬೈಲಿನಲ್ಲಿ ಮಾತನಾಡಲು, ಹಣ ಪಾವತಿ ಮಾಡಲು ಮತ್ತು ಇಂಟರ್ ನೆಟ್ ಬಳಸಲು ಅನುಕೂಲವಾಗಲಿದೆ. ಅಪಘಾತ ಅಥವಾ ನೈಸರ್ಗಿಕ ವಿಕೋಪಗಳಂಥ ತುರ್ತು ಪರಿಸ್ಥಿತಿಗಳಲ್ಲೂ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು ಇದರಿಂದ ಸಹಾಯವಾಗಲಿದೆ ಎಂದು ನಾಗರಾಜ ಅವರು ಸ್ಪಷ್ಟಪಡಿಸಿದ್ದಾರೆ.

ವೈಫೈ ಸೇವಾ ಜಾಲವನ್ನು ದಕ್ಷಿಣ ಭಾರತದ ಉದ್ದಗಲಕ್ಕೂ ವಿಸ್ತರಿಸುವ ಉದ್ದೇಶದಿಂದ ಜಿಎನ್‌ಎ ಇಂಡಿಯಾ ತನ್ನ ಸೇವಾ ಸಾಮರ್ಥ್ಯವನ್ನು ಹೆಚ್ಚಿಸಿ, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿ ಕೆಐಡಿಬಿ ಕೈಗಾರಿಕಾ ವಲಯದ ಸಮೀಪದಲ್ಲಿ, ಮುಂದಿನ ತಲೆಮಾರಿಗೂ ಅನುಕೂಲವಾಗುವಂಥ ಹೆಚ್ಚಿನ ಸಾಮರ್ಥ್ಯದ ವೈ-ಫೈ ಸಂವಹನ ಮೂಲಸೌಕರ್ಯ ಸೇವಾ ಕೇಂದ್ರವನ್ನು ಸ್ಥಾಪಿಸುತ್ತಿದೆ.

ಜಿಎನ್‌ಎ ಇಂಡಿಯಾದ ನಾಗರಾಜ ಅವರ ಪ್ರಕಾರ, ಈ ಯೋಜನೆಗೆ 500 ಕೋಟಿ ರು. ಮೌಲ್ಯದ ಬಂಡವಾಳ ಹೂಡಿಕೆಯಾಗಲಿದ್ದು, 600 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ .

ಜಿಎನ್‌ಎ ಇಂಡಿಯಾ ಈಗಾಗಲೇ ಬೆಂಗಳೂರಿನ ಆಶಾಲ್ಟ್ ಇಂಡಸ್ಟ್ರೀಸ್ ಕಂಪನಿಯೊಂದಿಗೆ 1 ಲಕ್ಷ ಚದರ ಅಡಿಗಳಷ್ಟು ವ್ಯಾಪ್ತಿ ಪ್ರದೇಶದಲ್ಲಿ ದೀರ್ಘಾವಧಿಯ ಲೀಸ್‌ ಪಡೆದು ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ. ಸೂರ್ಬಾನಾ ಜುರಾಂಗ್ (ಸಿಂಗಪೂರ್ ಆಧಾರಿತ ಆರ್ಕಿಟೆಕ್ಟ್ ಸಂಸ್ಥೆ) ಈ ಯೋಜನೆಯನ್ನು ರೂಪಿಸಿದೆ.

wifi for tourist spots


• ಜಿಎನ್‌ಎ ಭಾರತ್ ಸ್ಮಾರ್ಟ್ ಚೈನ್ (BTSC) ಎಂಬ ಹೊಸ ಯೋಜನೆಯನ್ನು ಜೂನ್ 25, 2025 ರಂದು BSNL ಸಹಯೋಗದಲ್ಲಿ ಪ್ರಾರಂಭಿಸಿದೆ. ಇದು ಕ್ವಾಂಟಮ್ ತಂತ್ರಜ್ಞಾನವನ್ನು ಆಧರಿಸಿದೆ. ಈ ತಂತ್ರಜ್ಞಾನವು ಬ್ಲಾಕ್‌ಚೈನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಆಧಾರಿತ ವ್ಯವಸ್ಥೆಗಳನ್ನು ಜಾಗತಿಕ ಹಣಕಾಸು ಸಂಸ್ಥೆಗಳಿಗಾಗಿ ಅಭಿವೃದ್ಧಿಪಡಿಸಲು ಉಪಯೋಗವಾಗಲಿದೆ. 2026ರಲ್ಲಿ ದಕ್ಷಿಣ ಪೂರ್ವ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳನ್ನು ಗುರಿಯಾಗಿಟ್ಟುಕೊಂಡು ಜಾಗತಿಕ ವ್ಯಾಪಾರದ ಯೋಜನೆ ರೂಪಿಸಲಾಗಿದೆ.