• ಅನಿಲ್ ಹೆಚ್.ಟಿ.

ದಟ್ಟ ಕಾನನದೊಳಗೆ ಹಾಯಾಗಿ ವಿಹರಿಸುತ್ತಿರುವ ವನ್ಯಜೀವಿಗಳನ್ನು, ಜೀಪು, ಮಿನಿ ಬಸ್ ನಲ್ಲಿ ಸಾಗುತ್ತಾ ಕುತೂಹಲದಿಂದ ಕಣ್ಣರಳಿಸಿ ನೋಡುವುದೇ ಒಂದು ವಿಶೇಷ ಅನುಭವ. ಪ್ರವಾಸೋದ್ಯಮದಲ್ಲಿ ಇಂಥ ಜಂಗಲ್ ಸಫಾರಿಗಳಿಗೆ ಬಹಳ ಬೇಡಿಕೆಯಿದೆ. ಹೀಗಾಗಿಯೇ ಕರ್ನಾಟಕದ ನಾಗರಹೊಳೆ, ಬಂಡೀಪುರ, ಕಬಿನಿ ರಕ್ಷಿತಾರಣ್ಯಗಳಲ್ಲಿ ಇಂಥ ಜಂಗಲ್ ಸಫಾರಿಗೆ ಸಾವಿರಾರು ಜನ ಕಾತುರದಿಂದ ಬರುತ್ತಾರೆ. ಆದರೀಗ ಈ ಸಫಾರಿಗಳಿಗೆ ತಾತ್ಕಾಲಿಕ ಕಡಿವಾಣ ಬಿದ್ದಿದೆ. ಮೈಸೂರು ಜಿಲ್ಲೆಯ ಸರಗೂರಿನಲ್ಲಿ ವ್ಯಾಘ್ರವೊಂದು ಬೊಬ್ಬಿರಿಸಿ ಮೂವರನ್ನು ಬೇರೆ ಬೇರೆ ಕಡೆ ಸಾಯಿಸಿದ್ದು, ಇಂಥ ನರಹಂತಕ ಹುಲಿಗಳು ಮತ್ತಷ್ಟು ಜೀವಗಳನ್ನು ಬಲಿಪಡೆಯಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಸದ್ಯಕ್ಕೆ ಸಫಾರಿಗಳನ್ನು ಸ್ಥಗಿತಗೊಳಿಸಿದೆ.

ಹೀಗಾಗಿ ಕೊಡಗು, ಮೈಸೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಕಾನನಗಳಲ್ಲಿ ವನ್ಯಜೀವಿಗಳನ್ನು ನೋಡಲು ಈಗ ಸಾಧ್ಯವಾಗುತ್ತಿಲ್ಲ. ಒಂದರ್ಥದಲ್ಲಿ ವನ್ಯಜೀವಿಗಳಿಗೂ ಈಗ ಮೊದಲಿನಂತೆ ಮನುಷ್ಯನ ದರ್ಶನವಾಗುತ್ತಿಲ್ಲ.

Untitled design (20)

ನಮ್ಮನ್ನು ನೋಡಲಿಕ್ಕೆಂದು ನೀವು ಬಂದರೆ, ನಿಮ್ಮನ್ನು ನೋಡಲಿಕ್ಕೆ ನಾವು ಬರಬಾರದಾ ಎಂಬ ಡೈಲಾಗ್ ಸದ್ಯಕ್ಕೆ ಈ ಕಾಂತಾರದಲ್ಲಿ ಅರ್ಥಹೀನವಾಗಿದೆ. ಯಾರು ಯಾರನ್ನೂ ನೋಡಲಾಗದಂಥ ಕಾಡಿನೊಳಗೆ ಹುಲುಮಾನವನ ಪ್ರವೇಶ ನಿಷೇಧಿಸಲಾಗಿದೆ. ಸಂದರ್ಶಕರಿಲ್ಲದೇ, ಸಫಾರಿ ವಾಹನಗಳ ಸಂಚಾರದ ಶಬ್ದ, ಜನರ ಉಸಿರಾಟದ ಶಬ್ದಗಳಿಲ್ಲದೇ ನಾಗರಹೊಳೆ, ಬಂಡೀಪುರ ಕಾನನಗಳು ಮೌನವಾಗಿದೆ. ಕಾಡಿನ ತಂಗಾಳಿ, ಹಕ್ಕಿಗಳ ಚಿಲಿಪಿಲಿ, ಆನೆಗಳ ಘೀಳು, ಹುಲಿಯ ಬೊಬ್ಬೆ ಈಗ ಇತರ ಶಬ್ದಗಳಿಲ್ಲದ ಕಾಡಿನಲ್ಲಿ ಅತ್ಯಂತ ಸ್ಪಷ್ಟ.

ಆದರೆ, ಅರಣ್ಯ ಇಲಾಖೆಯ ಈ ನಿರ್ಧಾರ ಜಂಗಲ್ ಸಫಾರಿಗೆ ತೆರಳುತ್ತಿದ್ದ ಕಾಡು ಪ್ರೇಮಿಗಳಿಗೆ ಅಪಾರ ನಿರಾಶೆ ಉಂಟು ಮಾಡಿದೆ. ಮಾತ್ರವಲ್ಲ ಸಫಾರಿಗಳಿಂದ ಲಭ್ಯವಾಗುತ್ತಿದ್ದ ಲಕ್ಷಾಂತರ ರುಪಾಯಿ ಆದಾಯಕ್ಕೂ ಖೋತಾ ಆಗಿದೆ.

ಹಾಗೆಯೇ, ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪ್ರವಾಸಿಗರನ್ನೇ ನಂಬಿಕೊಂಡಿದ್ದ ರೆಸಾರ್ಟ್, ಹೊಟೇಲ್, ರೆಸ್ಟೋರೆಂಟ್, ಅಂಗಡಿಗಳು, ಹೋಂಸ್ಟೇಗಳಿಗೂ ವರಮಾನ ಸ್ಥಗಿತವಾಗಿದೆ. ಗಮನಾರ್ಹವಾಗಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್, ಆರೆಂಜ್ ಕೌಂಟಿಯಂಥ ಪ್ರತಿಷ್ಠಿತ ರೆಸಾರ್ಟ್ ಗಳಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಸರಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಸದ್ಯಕ್ಕೆ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಕೆಲಸ ನಿಲ್ಲಿಸಲು ಹೇಳಿದೆ. ಅತಿಥಿಗಳೇ ಬಾರದ ಮೇಲೆ ಹೆಚ್ಚುವರಿ ಸಿಬ್ಬಂದಿ ಯಾಕೆ ಎಂಬ ನಿಲುವು ಇವರದ್ದು.

ಸಫಾರಿಯೇ ಮುಖ್ಯ ಆಕರ್ಷಣೆಯಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿಗಳನ್ನು ನೋಡಲಾಗದಿದ್ದರೆ ಕಾಡಿನಲ್ಲಿ ತಂಗಲು ಹೆಚ್ಚಿನವರು ಇಚ್ಛಿಸಲಾರರು. ಹೀಗಾಗಿ ಸಫಾರಿ ಬಂದ್ ಆದ ಕೂಡಲೇ ಪ್ರವಾಸಿಗರೂ ಕಾಡಿನಿಂದ ವಿಮುಖರಾಗುತ್ತಿದ್ದಾರೆ. ಜಂಗಲ್ ಲಾಡ್ಜಸ್ ನಂಥ ಪ್ರತಿಷ್ಠಿತ ರೆಸಾರ್ಟ್ ಗಳಿಗೆ ತಿಂಗಳಿಗೆ ಮುನ್ನವೇ ಕೊಠಡಿಗಳು ಬುಕ್ ಆಗಿರುತ್ತಿದ್ದವು. ಇದೀಗ ಸಫಾರಿ ಇಲ್ಲವೆಂದ ಮೇಲೆ ಕಾಡಿಗೆ ಹೋಗಿ ಮಾಡೋದೇನು ಎಂದು ದೇಶವಿದೇಶಗಳ ಪ್ರವಾಸಿಗರು ಅರಣ್ಯಕ್ಕೆ ಬರುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ವನ್ಯಜೀವಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

ವಿಪರ್ಯಾಸವೆಂದರೆ, ಮೈಸೂರು ಜಿಲ್ಲೆಯಲ್ಲಿ ಹುಲಿದಾಳಿಯಾಗಿದ್ದರೆ ಅಲ್ಲಿಂದ 200 ಕಿಮೀ. ದೂರದ ಕೊಡಗಿನ ತಡಿಯಂಡಮೋಳ್ ಗಿರಿಯಲ್ಲಿಯೂ ಚಾರಣಕ್ಕೆ ನಿರ್ಬಂಧ ಹೇರಲಾಗಿದೆ. ಕೊಡಗಿನ ಅತ್ಯಂತ ಎತ್ತರದ ಶಿಖರವಾಗಿ ಚಾರಣಿಗರಿಗೆ ಸವಾಲು ಎನಿಸಿರುವ ಬೆಟ್ಟಕ್ಕೂ ಈಗ ನಿಷೇಧ ಹೇರಿರುವುದು ಟೀಕೆಗೆ ಕಾರಣವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಹುಲಿಯ ದಾಳಿ, ಸುಳಿವೇ ಇಲ್ಲದ ತಡಿಯಂಡಮೋಳ್ ಶಿಖರ ಚಾರಣಕ್ಕೆ ನಿಷೇಧ ಹೇರಿದ್ದು ಯಾಕೆ ಎಂಬ ಪ್ರಶ್ನೆಗೆ ಕಾಡಿನ ಮೌನವೇ ಉತ್ತರದಂತಿದೆ.

ನಾಗರಹೊಳೆ ಮತ್ತು ಬಂಡೀಪುರಕ್ಕೆ ದಿನನಿತ್ಯ ಸಫಾರಿಯಿಂದಾಗಿಯೇ 15 ಲಕ್ಷ ರು. ಮಿಕ್ಕಿ ಆದಾಯ ಲಭ್ಯತೆಯಿತ್ತು. ಹುಣಸೂರು ತಾಲೂಕಿನ ವೀರನಹೊಸಹಳ್ಳಿ, ಹೆಚ್.ಡಿ.ಕೋಟೆ ತಾಲೂಕಿನ ದಮ್ಮನ ಕಟ್ಟೆ ಸಫಾರಿಗೂ ಬ್ರೇಕ್ ಬಿದ್ದಿದೆ. ವಾರಾಂತ್ಯದಲ್ಲಿ ಸಂದರ್ಶಕರಿಂದ ಗಿಜಿಗುಡುತ್ತಿದ್ದ ನಾಗರಹೊಳೆ, ಬಂಡೀಪುರ ಅರಣ್ಯವ್ಯಾಪ್ತಿ ಈಗ ಬಿಕೋ ಎನ್ನುತ್ತಿದೆ. ದೇಶವಿದೇಶಗಳಿಂದ ಈ ಕಾಡಿನಲ್ಲಿ ವನ್ಯಜೀವಿಗಳ ಫೊಟೋ ಕ್ಲಿಕ್ಕಿಸಲೆಂದೇ ನೂರಾರು ವೈಲ್ಡ್ ಲೈಫ್ ಫೊಟೋಗ್ರಾಫರ್ ಗಳೂ ಬರುತ್ತಿದ್ದರು. ಈಗ ಕ್ಯಾಮೆರಾ ಕಣ್ಣಿಗೂ ಪ್ರವೇಶ ಇಲ್ಲದಾಗಿದೆ.

Untitled design (21)

ಹುಲಿ ಜನರನ್ನು ಹತ್ಯೆ ಮಾಡಿತೆಂದು ಜಂಗಲ್ ಸಫಾರಿ ನಿಷೇಧ ಸರಿಯಲ್ಲ. ವೈಜ್ಞಾನಿಕ ಚಿಂತನೆಯೊಂದಿಗೆ ಸುರಕ್ಷಿತವಾಗಿ , ಕಟ್ಟೆಚ್ಚರದಿಂದ ಜಂಗಲ್ ಸಫಾರಿ ಕರೆದೊಯ್ಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಚಿಸಬೇಕಾಗಿತ್ತು ಎಂದು ಮೈಸೂರು - ಕೊಡಗು ಸಂಸದ ಯದುವೀರ್ ಕೖಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕಾಡಿನೊಳಗೆ ಮತ್ತು ಕಾಡಿನಂಚಿನ ಜನರ ಪ್ರಾಣ ರಕ್ಷಣೆ ಸರಕಾರದ ಆದ್ಯತೆಯಾಗಿದೆ. ಹೀಗಾಗಿ ವ್ಯಾಘ್ರ ದಾಳಿ ನಿಲ್ಲುವವರೆಗೆ ಸಫಾರಿ ಮತ್ತು ಚಾರಣ ನಿಷೇಧ ಅನಿವಾರ್ಯ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸರಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದಲ್ಲಿ ವನ್ಯಜೀವಿ ಸಫಾರಿಗಳಿಗೆ ಅನೇಕ ಅಭಯಾರಣ್ಯಗಳು ಖ್ಯಾತಿ ಹೊಂದಿವೆ. ಈ ಪೈಕಿ ಕರ್ನಾಟಕದ ನಾಗರಹೊಳೆ, ಬಂಡೀಪುರ ಕಾಡುಗಳೂ ಕೂಡ ಬಹಳ ಪ್ರಸಿದ್ಧಿ ಪಡೆದಿವೆ. ಆದರೀಗ ಸಫಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವನ್ಯಜೀವಿ ಪ್ರವಾಸೋದ್ಯಮಕ್ಕೇ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಸಫಾರಿಗೆ ಸೂಕ್ತ ದಿನಗಳಾಗಿರುವ ನವೆಂಬರ್ ನಲ್ಲಿಯೇ ಕಾಡು ಪ್ರವೇಶಕ್ಕೆ ಗೇಟ್ ಹಾಕಿರುವುದು ವನ್ಯಜೀವಿ ಪ್ರೇಮಿಗಳಿಗೆ ಬೇಸರ ಉಂಟು ಮಾಡಿದೆ. ಮೈಸೂರು ಜಿಲ್ಲೆಯ ಕಾಡಂಚಿನಲ್ಲಿ ಹುಲಿ ಬಾಯ್ತೆರೆದು ಮಾನವನ ರಕ್ತಹೀರುವುದು ಸಂಪೂರ್ಣ ನಿಲ್ಲುವವರೆಗೂ ಮಾನವನಿಗೆ ಹುಲಿ ಸಹಿತ ಯಾವುದೇ ಜೀವಿ ನೋಡಲೂ ಕಾಡಿಗೆ ಪ್ರವೇಶ ಸಾಧ್ಯವಿಲ್ಲ. ಅಷ್ಟೇ..!

ನಿಮ್ಮನ್ನು ನೋಡಲಿಕ್ಕೆ ನಾವಂತೂ ಬರೋದಿಲ್ಲ. ಹಾಗೇ ನಮ್ಮನ್ನು ನೋಡಲಿಕ್ಕೆ ನೀವೂ ಬರಬೇಡಿ ಎಂಬ ಮಾನವ ಸಮೂಹದ ಕೋರಿಕೆ ವನ್ಯಜೀವಿಗಳಿಗೆ ಅರ್ಥವಾದೀತೇ? ಸದ್ಯಕ್ಕಂತೂ ಈ ಪ್ರಶ್ನೆಗೆ ಕರುನಾಡಿನ ದಟ್ಟ ಕಾಂತಾರದೊಳಗಿನ ದಿವ್ಯ ಮೌನವೇ ಉತ್ತರ..!