ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು - ಸಚಿವರ ದೂರದೃಷ್ಟಿಯ ನಾಯಕತ್ವ
ದೂರದ ದುಬೈನ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ನಿಂದ ಕರಾವಳಿಯ ಸಸಿಹಿತ್ಲು ಬೀಚ್ವರೆಗೆ - ಕರ್ನಾಟಕದ ಪ್ರವಾಸೋದ್ಯಮಕ್ಕೆ ಈಗ ಜಾಗತಿಕ ರೆಕ್ಕೆಪುಕ್ಕ ಬಂದಿದೆ. 1080ಕೋಟಿ ಹೂಡಿಕೆ, 13ರೋಪ್‌ವೇ ಯೋಜನೆ, ಕರಾವಳಿ-ಮಲೆನಾಡು ನೀತಿ ಮತ್ತು ಭವಿಷ್ಯದ ಪಾಡ್ ಟ್ರಾನ್ಸ್‌ಪೋರ್ಟ್ ಕನಸಿನೊಂದಿಗೆ ಸಚಿವ ಕೆ.ಜೆ.ಜಾರ್ಜ್ ಅವರು ʼಒಂದು ರಾಜ್ಯ ಹಲವು ಜಗತ್ತುಗಳುʼ ಎಂಬುದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಬ್ರ್ಯಾಂಡ್ ಕರ್ನಾಟಕದ ಈ ಹೊಸ ಪಯಣದ ಕಥನ ಇಲ್ಲಿದೆ.
’ಬ್ರ್ಯಾಂಡ್ ಕರ್ನಾಟಕ ಮತ್ತು ಬ್ರ್ಯಾಂಡ್ ಬೆಂಗಳೂರು ನಮ್ಮ ಜಾಗತಿಕ ಪ್ರವಾಸೋದ್ಯಮ ದೃಷ್ಟಿಕೋನಕ್ಕೆ ನೇತೃತ್ವ ವಹಿಸಲಿವೆ’ ಇದು ಕೇವಲ ಒಂದು ಘೋಷಣೆಯಲ್ಲ, ಇದು ಕರ್ನಾಟಕದ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಬದ್ಧತೆಯ ನುಡಿ. ವಿಶ್ವ ಪ್ರವಾಸೋದ್ಯಮ ದಿನದ ಈ ಸಂದರ್ಭದಲ್ಲಿ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರ ಕಂಡಿರುವ ಬದಲಾವಣೆಗಳನ್ನು ಅವಲೋಕಿಸಿದಾಗ, ಸಚಿವರ ಈ ಮಾತುಗಳು ಕಾರ್ಯರೂಪಕ್ಕೆ ಬರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅನುಭವಿ ರಾಜಕಾರಣಿ, ಚಾಣಾಕ್ಷ ಆಡಳಿತಗಾರ, ಸ್ನೇಹಮಯಿ ಮತ್ತು ಜನಪರ ನಾಯಕ ಕೆ.ಜೆ. ಜಾರ್ಜ್ ಅವರು ಇಂಧನ ಖಾತೆಯ ಜತೆಗೆ ಪ್ರವಾಸೋದ್ಯಮದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಬಂದಿದೆ. ಸಾಂಪ್ರದಾಯಿಕ ಪ್ರವಾಸೋದ್ಯಮದ ಮಿತಿಯನ್ನು ಮೀರಿ, ಸುಸ್ಥಿರ, ಸುರಕ್ಷಿತ ಮತ್ತು ಜಾಗತಿಕ ಮಟ್ಟದ ಪ್ರವಾಸೋದ್ಯಮವನ್ನು ಕಟ್ಟುವ ಅವರ ಪ್ರಯತ್ನಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.
ಹೂಡಿಕೆಗೆ ಹೊಸ ಬಾಗಿಲು - 78 ಹೊಟೇಲ್ ಯೋಜನೆಗಳಿಗೆ ಹಸಿರು ನಿಶಾನೆ
ಇದನ್ನೂ ಓದಿ: ನಂಬಿದವರ ಪಾಲಿನ ಕಲ್ಪತರು ..
ಕೆ.ಜೆ. ಜಾರ್ಜ್ ಅವರು ಪ್ರವಾಸೋದ್ಯಮ ಖಾತೆಯ ಜವಾಬ್ದಾರಿ ವಹಿಸಿಕೊಂಡು ಕೇವಲ ನೂರು ದಿನಗಳಷ್ಟೇ ಕಳೆದಿದೆ. ಆದರೆ ಅವರ ಉತ್ಸಾಹಿ ನಡೆಗಳು ಮತ್ತು ದಿಟ್ಟ ನಿರ್ಧಾರಗಳು ಈಗಾಗಲೇ ಪ್ರವಾಸೋದ್ಯಮಕ್ಕೆ ದೊಡ್ಡ ಭರವಸೆಯಾಗಿ ಕಾಣುತ್ತಿವೆ. ಕಿರು ಅವಧಿಯಲ್ಲೇ ಅವರ ದೂರದರ್ಶಿತ್ವ ಗೋಚರಿಸುತ್ತಿದೆ. ಪ್ರವಾಸೋದ್ಯಮ ಖಾತೆಯನ್ನು ಅವರು ಇಷ್ಟಪಟ್ಟು ನಿರ್ವಹಿಸುತ್ತಿದ್ದಾರೆ ಎಂಬುದು ಖಾತರಿಯಾಗುತ್ತಿದೆ.

ಕಳೆದ ಮೂರು ತಿಂಗಳುಗಳಲ್ಲಿ ಅವರ ಅತ್ಯಂತ ಮಹತ್ವದ ಸಾಧನೆ ಎಂದರೆ ಖಾಸಗಿ ಹೂಡಿಕೆಯನ್ನು ಪ್ರವಾಸೋದ್ಯಮದತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದು. ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ರಚಿತವಾದ ಸಬಲೀಕೃತ ಸಮಿತಿಯ ಆರನೆಯ ಸಭೆಯಲ್ಲಿ, ಅವರ ಅಧ್ಯಕ್ಷತೆಯಲ್ಲಿ 18 ಹೊಸ ಹೊಟೇಲ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 8 ಪ್ರೀಮಿಯಂ ಮತ್ತು 10 ಬಜೆಟ್ ಹೊಟೇಲ್‌ಗಳು ಸೇರಿವೆ. ಒಟ್ಟು 314.93 ಕೋಟಿ ರುಪಾಯಿ ಹೂಡಿಕೆ, 655 ಹೊಸ ಕೊಠಡಿಗಳು ಮತ್ತು 1,542 ಉದ್ಯೋಗಗಳ ಸೃಷ್ಟಿ ಇದರಿಂದ ಆಗಲಿದೆ.
ಒಟ್ಟಾರೆಯಾಗಿ ಅವರ ಅಧ್ಯಕ್ಷತೆಯಲ್ಲಿ ಈವರೆಗೆ 78 ಹೊಟೇೆಲ್ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 1,080 ಕೋಟಿ ರುಪಾಯಿಗೂ ಅಧಿಕ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ. ‘ಗುಣಮಟ್ಟದ ವಸತಿ ಸೌಕರ್ಯವನ್ನು ಬಲಪಡಿಸುವುದು ನಮ್ಮ ಆದ್ಯತೆ. ಹೊಸ ನೀತಿಯು ಖಾಸಗಿ ಹೂಡಿಕೆಯನ್ನು ಆಕರ್ಷಿಸಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ’ ಎಂಬ ಅವರ ನುಡಿ ಕೇವಲ ಮಾತಾಗದೆ ಕಾರ್ಯರೂಪಕ್ಕೆ ಬಂದಿದೆ.
ಕರಾವಳಿ-ಮಲೆನಾಡಿಗೆ ವಿಶೇಷ ನೀತಿ
ಕರ್ನಾಟಕದ ನಿಜವಾದ ಸೌಂದರ್ಯ ಅಡಗಿರುವುದು ಕರಾವಳಿ ಮತ್ತು ಮಲೆನಾಡಿನಲ್ಲಿ. ಈ ಸಾಮರ್ಥ್ಯವನ್ನು ಅರಿತಿರುವ ಸಚಿವರು 'ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ' ರೂಪಿಸಲು ಮುಂದಾಗಿದ್ದಾರೆ. ಈ ನೀತಿಯ ಕರಡು ಸಿದ್ಧವಾಗಲು ಅಧಿಕಾರಿಗಳಿಗೆ ಗಡುವು ಕೂಡ ನೀಡಿದ್ದು, ವಿಧಾನಸೌಧದಲ್ಲಿ ಎರಡೂ ಭಾಗದ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಈ ನೀತಿಯು ಕೇವಲ ಬೀಚ್ ಪ್ರವಾಸೋದ್ಯಮಕ್ಕೆ ಸೀಮಿತವಾಗಿಲ್ಲ. ಬ್ಲೂ ಫ್ಲ್ಯಾಗ್ ಬೀಚ್‌ಗಳ ಅಭಿವೃದ್ಧಿ, ಕ್ರೂಸ್ ಪ್ರವಾಸೋದ್ಯಮ, ಹೌಸ್‌ಬೋಟ್, ಜಲಕ್ರೀಡೆಗಳು, ಸಾಹಸ ಪ್ರವಾಸೋದ್ಯಮ ಮತ್ತು ಸ್ಥಳೀಯ ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಹಂತ ಹಂತವಾಗಿ ಜಾರಿಗೆ ತರುವ ಯೋಜನೆ ಇದಾಗಿದೆ. ಮಂಗಳೂರು ಸೇರಿದಂತೆ ರಾಜ್ಯದ ಬಂದರುಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಕ್ರೂಸ್ ಹಡಗುಗಳನ್ನು ಆಕರ್ಷಿಸಲು ಸಮಗ್ರ ಕಾರ್ಯತಂತ್ರ ರೂಪಿಸಲು ಅವರು ಸೂಚಿಸಿದ್ದಾರೆ. ಕ್ಯಾಸಿನೊ ಸಂಸ್ಕೃತಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ, ಕರ್ನಾಟಕದ ಸಂಸ್ಕೃತಿಗೆ ಪೂರಕವಾದ ಕುಟುಂಬ ಸ್ನೇಹಿ ಪ್ರವಾಸೋದ್ಯಮಕ್ಕೆ ಅವರು ಒತ್ತು ನೀಡಿದ್ದಾರೆ.

ಆಕಾಶದತ್ತ ಕರ್ನಾಟಕ - 13 ರೋಪ್‌ವೇ ಯೋಜನೆಗಳಿಗೆ ಚುರುಕು
ಪ್ರವಾಸಿಗರಿಗೆ ದುರ್ಗಮ ತಾಣಗಳನ್ನು ಸುಲಭವಾಗಿ ತಲುಪುವಂತೆ ಮಾಡಲು ಸಚಿವರು 13 ರೋಪ್‌ವೇ ಯೋಜನೆಗಳ ಅನುಷ್ಠಾನಕ್ಕೆ ಮುನ್ನುಡಿ ಬರೆದಿದ್ದಾರೆ. ಅಂಜನಾದ್ರಿ ಬೆಟ್ಟ, ಗೋಕಾಕ್ ಫಾಲ್ಸ್, ಮುಳ್ಳಯ್ಯನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ರೋಪ್‌ವೇ ನಿರ್ಮಾಣಕ್ಕೆ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಈ ಯೋಜನೆಗಳು ವಿಳಂಬವಾಗುತ್ತಿರುವುದನ್ನು ಗಮನಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿ.
ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಮರುಜೀವ
ರಾಜಧಾನಿ ಬೆಂಗಳೂರಿನ ಪ್ರವಾಸಿ ಮೂಲಸೌಕರ್ಯವನ್ನು ಬಲಪಡಿಸುವಲ್ಲಿಯೂ ಜಾರ್ಜ್ ಅವರು ಮುಂದಿದ್ದಾರೆ. ಕೆಎಸ್‌ಟಿಡಿಸಿ ಮಯೂರ ಹೊಟೇಲ್ ನವೀಕರಣದ ಸಲುವಾಗಿ 2 ಕೋಟಿ ರುಪಾಯಿ ಅನುದಾನಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಸರಕಾರಿ ವಸ್ತುಸಂಗ್ರಹಾಲಯದ ನವೀಕರಣವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು, ಬಾಲಭವನ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಹೆಚ್ಚು ಆಕರ್ಷಕ ಮತ್ತು ಕುಟುಂಬ ಸ್ನೇಹಿಯಾಗಿ ಮಾಡಲು ಸೂಚಿಸಿದ್ದಾರೆ. ಕೆಎಸ್‌ಟಿಡಿಸಿ ಮತ್ತು ಜಂಗಲ್ ಲಾಡ್ಜ್ & ರೆಸಾರ್ಟ್ಸ್ ನಿರ್ವಹಿಸುವ ತಾಣಗಳಲ್ಲಿ ವಸತಿ, ನೈರ್ಮಲ್ಯ ಮತ್ತು ಪ್ರವಾಸಿ ಸ್ನೇಹಿ ಸೇವೆಗಳನ್ನು ಸುಧಾರಿಸಲು ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಹೋಮ್‌ಸ್ಟೇ ಮತ್ತು ಬಿ&ಬಿ - ಪಾರದರ್ಶಕತೆಗೆ ಹೊಸ ಮಾನದಂಡ
ಮಲೆನಾಡು ಮತ್ತು ಕರಾವಳಿಯ ಜೀವಾಳವಾಗಿರುವ ಹೋಮ್‌ಸ್ಟೇ ಕ್ಷೇತ್ರದಲ್ಲಿ ಸಚಿವರು ತಂದಿರುವ ಸುಧಾರಣೆ ಕ್ರಾಂತಿಕಾರಿ. ಸುರಕ್ಷತಾ ದೃಷ್ಟಿಯಿಂದ ಎಲ್ಲ ಹೋಮ್‌ಸ್ಟೇಗಳಿಗೆ ನೋಂದಣಿ ಕಡ್ಡಾಯಗೊಳಿಸಿ, 2025ರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಮಾಲೀಕರು ನೋಂದಣಿ ಮಾಡಿಕೊಂಡಿದ್ದು, ಇದು ಉದ್ಯಮದ ವಿಶ್ವಾಸವನ್ನು ತೋರಿಸುತ್ತಿದೆ.
ಇದಲ್ಲದೆ, ವೃತ್ತಿಪರವಾಗಿ ನಿರ್ವಹಿಸುವ ವಸತಿ ಸೌಕರ್ಯಗಳನ್ನು ಪ್ರತ್ಯೇಕಿಸಲು 'ಬೆಡ್ & ಬ್ರೇಕ್‌ಫಾಸ್ಟ್' (B&B) ಎಂಬ ಹೊಸ ವರ್ಗವನ್ನು ಪರಿಚಯಿಸಿದ್ದಾರೆ. ’ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ, ನಮ್ಮ ವಸತಿ ವ್ಯವಸ್ಥೆಯೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಈ ಸುಧಾರಣೆ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿ ಪ್ರವಾಸಿ ಅನುಭವವನ್ನು ಉತ್ತಮಗೊಳಿಸುತ್ತದೆ’ ಎಂಬ ಅವರ ಮಾತಿನಲ್ಲಿ ವಾಸ್ತವವಿದೆ. ಇದು ಪ್ರವಾಸಿಗರಿಗೆ ಸುರಕ್ಷತೆ ಮತ್ತು ಸ್ಥಳೀಯರಿಗೆ ಆದಾಯ ಎರಡನ್ನೂ ಖಚಿತಪಡಿಸುವ ದೂರದೃಷ್ಟಿಯ ಹೆಜ್ಜೆ ಎನ್ನಬಹುದು.

ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗೆ ಮುನ್ನುಡಿ!
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳು, ಉದ್ಯಮಿಗಳು ಮತ್ತು ವ್ಯಕ್ತಿಗಳನ್ನು ಗುರುತಿಸಲು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'ಯನ್ನು ಸಚಿವರು ಘೋಷಿಸಿದ್ದಾರೆ. 31 ಜಿಲ್ಲೆಗಳಲ್ಲಿಯೂ ಸಾಧಕರನ್ನು ಗುರುತಿಸುವ ಈ ಪ್ರಶಸ್ತಿ, ಕ್ಷೇತ್ರದಲ್ಲಿ ಹೊಸ ಉತ್ಸಾಹ ತುಂಬುವುದರಲ್ಲಿ ಅನುಮಾನವೇ ಇಲ್ಲ.
ಜಾರ್ಜ್ ಅವರ ಕೆಲಸದ ಗುಣಮಟ್ಟಕ್ಕೆ ಮತ್ತೊಂದು ನಿದರ್ಶನವೆಂದರೆ, ಜಾರ್ಖಂಡ್ ರಾಜ್ಯದ ನಿಯೋಗವೇ ಕರ್ನಾಟಕದ ಪರಿಸರ ಪ್ರವಾಸೋದ್ಯಮ ಮಾದರಿಯನ್ನು ಅಧ್ಯಯನ ಮಾಡಲು ಬಂದಿರುವುದು. ಕರ್ನಾಟಕದ ಸುಸ್ಥಿರ ಪ್ರವಾಸೋದ್ಯಮ ಮಾದರಿ ಈಗ ರಾಷ್ಟ್ರಮಟ್ಟದಲ್ಲಿ ಮಾದರಿಯಾಗುತ್ತಿದೆ.
ಜಾಗತಿಕ ವೇದಿಕೆಯಲ್ಲಿ ಬ್ರ್ಯಾಂಡ್ ಕರ್ನಾಟಕ
ಸಚಿವರ ಇತ್ತೀಚಿನ ಅತ್ಯಂತ ಮಹತ್ವದ ಹೆಜ್ಜೆ ಎಂದರೆ ದುಬೈನಲ್ಲಿ ನಡೆದ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ (ATM Dubai 2026) ನಲ್ಲಿ ಕರ್ನಾಟಕದ ಬೃಹತ್ ಪೆವಿಲಿಯನ್ ಉದ್ಘಾಟನೆ. ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಹಂಪಿಯ ಕಲ್ಲಿನ ರಥ, ಪಟ್ಟದಕಲ್ಲು ದೇವಾಲಯಗಳು, ನಾಗರಹೊಳೆಯ ವನ್ಯಜೀವಿಗಳ ಡಿಜಿಟಲ್ ಪ್ರದರ್ಶನದೊಂದಿಗೆ ಕರ್ನಾಟಕದ ಮಳಿಗೆ ಗಮನ ಸೆಳೆದಿದೆ. ಈ ವೇದಿಕೆಯಲ್ಲಿ ಅವರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರಿದಂತೆ ಜಾಗತಿಕ ಹೂಡಿಕೆದಾರರು ಮತ್ತು ಪ್ರವಾಸೋದ್ಯಮ ತಜ್ಞರೊಂದಿಗೆ ಮಾತುಕತೆ ನಡೆಸಿ, ಕರ್ನಾಟಕವನ್ನು ಪ್ರೀಮಿಯಂ ಡೆಸ್ಟಿನೇಷನ್ ಆಗಿ ಬಿಂಬಿಸಿದ್ದಾರೆ.
ಇದೇ ಪ್ರವಾಸದ ಸಂದರ್ಭದಲ್ಲಿ ಅವರು ಶಾರ್ಜಾದಲ್ಲಿ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್ / ಎಲಿವೇಟೆಡ್ ಪಾಡ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಅನ್ನು ಅಧ್ಯಯನ ಮಾಡಿರುವುದು ಅವರ ಭವಿಷ್ಯದ ದೃಷ್ಟಿಕೋನಕ್ಕೆ ಸಾಕ್ಷಿ. ಸಾಂಪ್ರದಾಯಿಕ ರಸ್ತೆ ವಿಸ್ತರಣೆ ಅಥವಾ ಭೂಸ್ವಾಧೀನ ಕಷ್ಟಕರವಾಗಿರುವ ಪ್ರವಾಸಿ ತಾಣಗಳಲ್ಲಿ, ಕಡಿಮೆ ಭೂ ಬಳಕೆಯ ಈ ಎಲಿವೇಟೆಡ್ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆಯನ್ನು ಅವರ ನಿಯೋಗ ಪರಿಶೀಲಿಸಿದೆ. ಇದು ಪರಿಸರಕ್ಕೆ ಹಾನಿಯಾಗದಂತೆ ಸಂಪರ್ಕವನ್ನು ಹೆಚ್ಚಿಸುವ ಕ್ರಾಂತಿಕಾರಿ ಯೋಚನೆ. ದುಬೈನಲ್ಲಿಯೇ ನಡೆದ 'Invest in Karnataka - NRI Business Community Meet' ನಲ್ಲಿ 20ಕ್ಕೂ ಹೆಚ್ಚು ಉದ್ಯಮಗಳ 65 ಕನ್ನಡಿಗ ಉದ್ಯಮಿಗಳೊಂದಿಗೆ ಅವರು ಸಂವಾದ ನಡೆಸಿದ್ದಾರೆ. ಹೂಡಿಕೆ, ಪ್ರವಾಸೋದ್ಯಮ, ವ್ಯಾಪಾರ ಎಂಬ ಮೂರು ಆಯಾಮಗಳಲ್ಲಿ ಜಾಗತಿಕ ಕನ್ನಡಿಗರನ್ನು ರಾಜ್ಯದ ಬೆಳವಣಿಗೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಕರಾವಳಿಯ ಮರುಶೋಧ
ಕರ್ನಾಟಕದ ಕರಾವಳಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಚಿವರು ಸೆಪ್ಟೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಸತತ 4 ದಿನಗಳ ಕಾಲ ಬೀಡುಬಿಟ್ಟಿದ್ದು ವಿಶೇಷ.
ಸಸಿಹಿತ್ಲು ಬೀಚ್: ಸರ್ಫರ್ಸ್ ಸ್ವರ್ಗ ಎಂದೇ ಖ್ಯಾತವಾದ, ಶಾಂಭವಿ ಮತ್ತು ನಂದಿನಿ ನದಿಗಳು ಅರಬ್ಬಿ ಸಮುದ್ರ ಸೇರುವ ಈ ಅತ್ಯಂತ ಸ್ವಚ್ಛ ಬೀಚ್‌ಗೆ ಅವರು ಮುಂಜಾನೆ ಭೇಟಿ ನೀಡಿ, ಸರ್ಫಿಂಗ್ ಸೌಲಭ್ಯ ಮತ್ತು ರೆಸಾರ್ಟ್ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ದೇಶನ ನೀಡಿದ್ದಾರೆ.
ಫಾಲ್ಗುಣಿ ರಿವರ್ ರೆಸಾರ್ಟ್: ಕೆಎಸ್‌ಟಿಡಿಸಿ ಹೊಟೇಲ್ ಮಯೂರ ಫಾಲ್ಗುಣಿ ರೆಸಾರ್ಟ್‌ಗೆ ಭೇಟಿ ನೀಡಿ, ಅದರ ನವೀಕರಣ ಮತ್ತು ಅತಿಥಿ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.
ಸ್ಟೇಕ್‌ಹೋಲ್ಡರ್ ಸಭೆ: ಕೆಎಸ್‌ಟಿಡಿಸಿ ರೆಸಾರ್ಟ್‌ನಲ್ಲಿ NRAI, ಕರಾವಳಿ ಚೇಂಬರ್ ಆಫ್ ಕಾಮರ್ಸ್, TiE ಮಂಗಳೂರು ಸೇರಿದಂತೆ ಪ್ರವಾಸೋದ್ಯಮ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಸಿಹಿತ್ಲು, ಮೂಡುಬಿದಿರೆ, ಕಾರ್ಕಳದಲ್ಲಿ ಮೆಗಾ ಪ್ರವಾಸೋದ್ಯಮ ಯೋಜನೆಗಳು, ಕ್ರೂಸ್ ಸಂಪರ್ಕದ ಬಗ್ಗೆ ಚರ್ಚಿಸಿದ್ದಾರೆ.
ಪಾರಂಪರಿಕ ಸಂರಕ್ಷಣೆ: ಮಂಗಳೂರಿನ ಐತಿಹಾಸಿಕ ಸೇಂಟ್ ಅಲೋಶಿಯಸ್ ಚಾಪೆಲ್‌ನಲ್ಲಿನ ಫ್ರೆಸ್ಕೊ ವರ್ಣಚಿತ್ರಗಳನ್ನು ವೀಕ್ಷಿಸಿ, ಅದರ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಚರ್ಚೆ ನಡೆಸಿದ್ದಾರೆ. ಇದು ಕೇವಲ ಬೀಚ್ ಅಲ್ಲ, ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನೂ ಪ್ರವಾಸೋದ್ಯಮದ ಭಾಗವಾಗಿಸುವ ಅವರ ದೃಷ್ಟಿಯನ್ನು ತೋರಿಸುತ್ತಿದೆ.
ಶ್ರೀ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಮತ್ತು ಸಂತ ಲಾರೆನ್ಸ್ ಚರ್ಚ್‌ಗೆ ಭೇಟಿ ನೀಡಿ, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸೌಹಾರ್ದದ ಸಂದೇಶವನ್ನು ಅವರು ನೀಡಿದ್ದಾರೆ. ಇದಲ್ಲದೆ, ಅವರು ನದಿ ಪ್ರವಾಸದ ಭಾಗವಾಗಿ 'ಶ್ರೀ ಹರಿವರ' ಪ್ಯಾಸೆಂಜರ್ ಫೆರ್ರಿಯಲ್ಲಿ ಪ್ರಯಾಣಿಸಿ, ನದಿ ಮತ್ತು ಕ್ರೂಸ್ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಖುದ್ದು ಪರಿಶೀಲಿಸಿದ್ದಾರೆ.

ಸವಾಲುಗಳು ಮತ್ತು ಸಚಿವರ ದೃಷ್ಟಿಕೋನ
ಹಾಗಂತ ನೂತನ ಸಚಿವರ ಮುಂದೆ ಸವಾಲುಗಳು ಇಲ್ಲದಿಲ್ಲ. ಮೂಲಸೌಕರ್ಯದ ಕೊರತೆ, ಸ್ವಚ್ಛತೆ, ಸುರಕ್ಷತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡಿಂಗ್ ಕೊರತೆ ಮತ್ತು ಸ್ಥಳೀಯ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲುಗಳಾಗಿವೆ. ಆದರೆ, ಕೆ.ಜೆ. ಜಾರ್ಜ್ ಅವರ ಅನುಭವ ಮತ್ತು ಆಡಳಿತದ ಮೇಲಿನ ಹಿಡಿತ ಈ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ. ಇಂಧನ ಸಚಿವರಾಗಿಯೂ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ, ಪ್ರವಾಸೋದ್ಯಮಕ್ಕೂ ಅದೇ ಶಿಸ್ತು ಮತ್ತು ದೂರದೃಷ್ಟಿಯನ್ನು ತರುತ್ತದೆ ಎಂಬ ವಿಶ್ವಾಸವಿದೆ.
ಒಟ್ಟಿನಲ್ಲಿ, ಕೆ.ಜೆ. ಜಾರ್ಜ್ ಅವರು ಪ್ರವಾಸೋದ್ಯಮವನ್ನು ಕೇವಲ ಇಲಾಖೆಯಾಗಿ ನೋಡದೆ, ಕರ್ನಾಟಕದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿ ನೋಡುತ್ತಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನದಂದು ಅವರ ಈ ಪ್ರಯತ್ನಗಳು 'ಒಂದು ರಾಜ್ಯ, ಹಲವು ಜಗತ್ತುಗಳು' ಎಂಬ ಕರ್ನಾಟಕದ ಘೋಷವಾಕ್ಯವನ್ನು ನಿಜವಾಗಿಯೂ ಜಗತ್ತಿನ ಮುಂದೆ ತೆರೆದಿಡಲಿವೆ ಎಂಬುದು ನಿಸ್ಸಂದೇಹ.