• ಹೊಸ್ಮನೆ ಮುತ್ತು

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಇಲ್ಲಿನ ಪ್ರತಿಯೊಂದು ಪ್ರದೇಶವು ತನ್ನದೇ ಆದ ವಿಶಿಷ್ಟ ಆಹಾರ ಪದ್ಧತಿ, ಹಬ್ಬಗಳು ಮತ್ತು ಜೀವನಶೈಲಿಯಿಂದ ಗುರುತಿಸಿಕೊಂಡಿದೆ. ಅದರಲ್ಲೂ ಕರ್ನಾಟಕದ ಗ್ರಾಮೀಣ ಭಾಗದ ವಿಶಿಷ್ಟ ಆಚರಣೆಗಳಲ್ಲಿ ‘ಹೊಳೆ ಊಟ’ ಪ್ರಮುಖ ಸ್ಥಾನ ಹೊಂದಿದೆ. ಹೊಳೆಯೂಟ ಒಂದು ಸರಳ ಪ್ರವಾಸ.(Travel is not just about places, it’s about flavours too!) ಇದು ಪ್ರಕೃತಿಯೊಡನೆ ಬೆರೆಯುವ, ಸಮುದಾಯವನ್ನು ಬೆಸೆಯುವ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ವಿಶಿಷ್ಟ ಆಚರಣೆಯಾಗಿದೆ.

ಗ್ರಾಮೀಣ ಜೀವನಶೈಲಿಯಲ್ಲಿ ಊಟವು ಕೇವಲ ಹಸಿವು ನೀಗಿಸಿಕೊಳ್ಳುವ ಕ್ರಿಯೆಯಲ್ಲ. ಅದು ಒಂದು ಸಂಸ್ಕೃತಿ; ಅದು ಮನಸ್ಸಿಗೆ ಸಂತೋಷ ನೀಡುವ, ಆತ್ಮಕ್ಕೆ ಶಾಂತಿ ತರುವ ಅಪರೂಪದ ಅನುಭೂತಿ. ಇದನ್ನು ಮತ್ತಷ್ಟು ವಿಶೇಷವಾಗಿಸುವುದು ‘ಹೊಳೆ ಊಟ’. ವರ್ಷದ ಯಾವುದೇ ನಿರ್ದಿಷ್ಟ ಸಮಯದಲ್ಲಿ, ಕುಟುಂಬದ ಸದಸ್ಯರು, ಬಂಧು-ಬಳಗದವರು ಅಥವಾ ನೆರೆಹೊರೆಯವರು ಒಟ್ಟಾಗಿ, ತಮ್ಮ ಊರಿನ ಸಮೀಪದ ನದಿ ಅಥವಾ ಹಳ್ಳದ ದಡಕ್ಕೆ ತೆರಳಿ, ಅಲ್ಲಿಯೇ ಅಡುಗೆ ಮಾಡಿಕೊಂಡು ಜೊತೆಯಾಗಿ ಊಟ ಮಾಡುವ ಒಂದು ಪ್ರಕ್ರಿಯೆ.

ಈ ಸಂಪ್ರದಾಯ ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಮತ್ತು ‘ಕೂಡಿ ಉಣ್ಣು, ಕೂಡಿ ಬಾಳು’ ಎಂಬ ತತ್ವದೊಂದಿಗೆ ಸಾಮಾಜಿಕ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಮತ್ತೊಂದು ಅರ್ಥದಲ್ಲಿ, ಇದು ಒಗ್ಗಟ್ಟಿನಿಂದ ದುಡಿಯುವುದು, ಹಂಚಿಕೊಂಡು ತಿನ್ನುವುದು ಮತ್ತು ಸಹಬಾಳ್ವೆಯೊಂದಿಗೆ ಸಮಾನತೆಯಿಂದ ಬದುಕುವುದು ಎಂಬ ಸಂದೇಶ.

ಎಲ್ಲರೂ ನೆಲದ ಮೇಲೆ ಕುಳಿತು, ಜಾತಿ–ಧರ್ಮ–ಲಿಂಗ–ವಯಸ್ಸು ಅಥವಾ ಅಂತಸ್ಥಿನ ಭೇದವಿಲ್ಲದೆ, ಎಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಊಟ ಮಾಡುವುದೇ ಇದರ ವಿಶೇಷತೆ. ಹಾಸ್ಯ–ಚಟಾಕಿಗಳು, ಹಳೆಯ ನೆನಪುಗಳ ಮೆಲುಕು, ನಗು–ನಲಿವುಗಳ ನಡುವೆ ಹಂಚಿಕೊಂಡು ಮಾಡುವ ಊಟ, ಸಂತೋಷವನ್ನು ವ್ಯಕ್ತಿಯಿಂದ ಸಮಷ್ಟಿಗೆ ವಿಸ್ತರಿಸುವ ಅನನ್ಯ ಅನುಭವವಾಗುತ್ತದೆ.

holeyuta 1

ಹೊಳೆಯೂಟವು ಪ್ರಕೃತಿಯೊಂದಿಗೆ ಸ್ನೇಹ ಬೆಳೆಸುವ, ಸರಳ ಬದುಕಿನ ಮೌಲ್ಯವನ್ನು ಅರಿಯುವ, ನಿಸರ್ಗದೊಂದಿಗೆ ಸಾಮರಸ್ಯದಿಂದ ಬದುಕುವ ಪಾಠ ಕಲಿಸುತ್ತದೆ. ಇದು ನದಿಗಳ ಸಂರಕ್ಷಣೆಯ ಅಗತ್ಯತೆಯನ್ನು ನೆನಪಿಸುವುದರ ಜೊತೆಗೆ, ನದಿಗಳು ನಮ್ಮ ಜೀವನಾಡಿ. ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. 'ನಾವು ಪ್ರಕೃತಿಯ ಭಾಗ' ಎಂಬ ಅರಿವನ್ನು ಮೂಡಿಸಿ, ಪರಿಸರ ಪ್ರಜ್ಞೆ ಬೆಳೆಸುತ್ತದೆ.

ಬೇರೆ ಬೇರೆ ಕುಟುಂಬಗಳ ಜನರು ಒಂದೆಡೆ ಸೇರಿ ಅಡುಗೆ ಮಾಡುವುದು, ಹಂಚಿಕೊಳ್ಳುವುದು ಮತ್ತು ಒಂದಾಗಿ ಕುಳಿತು ಊಟ ಮಾಡುವುದು ಹೃದಯಗಳನ್ನು ಹತ್ತಿರ ತರುತ್ತದೆ. ಹೊಟ್ಟೆ ತುಂಬುವ ಅಡುಗೆಗಿಂತಲೂ ಒಟ್ಟಿಗೆ ತಯಾರಿಸುವ ಖುಷಿ, ಸ್ವಾಭಾವಿಕ ವಾತಾವರಣದಲ್ಲಿ ಸಹಪಂಕ್ತಿ ಭೋಜನ ಹೆಚ್ಚು ಮೌಲ್ಯಯುತವಾದದ್ದು. ನಿಸರ್ಗದೊಂದಿಗೆ ಕಾಲ ಕಳೆಯುವ ಈ ಬಗೆಯ ‘ಕ್ಯಾಂಪಿಂಗ್ ಕಲ್ಚರ್’ ಅನೇಕ ರಾಷ್ಟ್ರಗಳಲ್ಲಿ ರೂಢಿಯಲ್ಲಿದ್ದು, ಇದು ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಊಟದಲ್ಲಿ ಹಳ್ಳಿ ಶೈಲಿಯ ಸಾಂಪ್ರದಾಯಿಕ, ಸರಳವಾದ ಹಾಗೂ ರುಚಿಕರವಾದ ಅಡುಗೆಯನ್ನು ತಯಾರಿಸಲಾಗುತ್ತದೆ. ಹೊಳೆಯೂಟದ ಮೆನು ಸರಳವಾಗಿದ್ದರೂ, ನಂಬಲಾಗದಷ್ಟು ರುಚಿಯಾಗಿರುತ್ತದೆ. ಕಟ್ಟಿಗೆಯ ಒಲೆಯ ಮೇಲೆ ನಿಧಾನವಾಗಿ ಬೇಯಿಸಿದ ಪದಾರ್ಥಗಳು ಇನ್ನಷ್ಟು ರುಚಿ ಮತ್ತು ಆರೋಗ್ಯಕರವಾಗಿರುತ್ತವೆ. ಯಾವುದೇ ರೆಸ್ಟೋರೆಂಟ್‌ನಲ್ಲಿ ಸಿಗದ ವಿಶೇಷ ರುಚಿ ಇಲ್ಲಿಯದು. ತರಕಾರಿ ಕತ್ತರಿಸುವುದು, ಒಲೆ ಹಚ್ಚುವುದು, ಊಟ ಬಡಿಸುವುದು - ಹೀಗೆ ಪ್ರತಿಯೊಂದು ಕೆಲಸದಲ್ಲೂ ಎಲ್ಲರೂ ಪಾಲ್ಗೊಳ್ಳುತ್ತಾರೆ. “ಅಡುಗೆಗೆ ಸೇರಿಕೊಂಡ ಕೈಗಳು, ಹೃದಯಗಳನ್ನು ಕೂಡ ಹತ್ತಿರ ಮಾಡುತ್ತವೆ.” ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗುತ್ತದೆ. ಸ್ವತಃ ಅಡುಗೆ ಮಾಡುವುದು, ಒಲೆ ಉರಿಸುವುದು, ಹಸಿರು ಎಲೆಯಲ್ಲಿ ಉಣುವುದು, all these make the trip memorable.

ಊಟದ ನಂತರದ ಸಮಯವೇ ಅತ್ಯಂತ ಮಧುರ. ಎಲ್ಲರೂ ಸೇರಿ ಹರಟೆಯಲ್ಲಿ ತೊಡಗುತ್ತಾರೆ. ಹಿರಿಯರು ತಮ್ಮ ಬಾಲ್ಯದ ಕಥೆಗಳನ್ನು, ಜಾನಪದ ಹಾಡುಗಳನ್ನು ಹಾಡಿದರೆ, ಇನ್ನು ಕೆಲವರು ಹಳೆಯ ಕಥೆ, ಪುರಾಣಗಳನ್ನು ಮೆಲುಕು ಹಾಕುತ್ತಾರೆ. ಪುಟಾಣಿಗಳು ಹೊಳೆಯ ತಣ್ಣನೆಯ ನೀರಿನಲ್ಲಿ ಆಟವಾಡಿದರೆ, ಹಿರಿಯರೂ ಅವರ ಜೊತೆ ಸೇರಿ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇದು ನಗರ ಜೀವನದ ಜಂಜಾಟದಿಂದ ದೂರವಾಗುವ ‘ಪಿಕ್ನಿಕ್‌’ನ ಅನುಭವ ನೀಡುತ್ತದೆ. ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರ ಇಡುವುದರ ಜೊತೆಗೆ, ಅವರು ಸುತ್ತಲಿನ ಜಗತ್ತನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಸೃಜನಾತ್ಮಕವಾಗಿ ಯೋಚಿಸಲೂ ಒಂದು ಅವಕಾಶ.

ವಿಶ್ವದ ಹಲವು ಸಂಸ್ಕೃತಿಗಳಲ್ಲಿ ಸಾಮೂಹಿಕ ಊಟದ ಪದ್ಧತಿಯಿದೆ. ರಾಜಸ್ಥಾನದ ಕೆಲವು ಸಾಂಪ್ರದಾಯಿಕ ಗ್ರಾಮೀಣ ಸಮುದಾಯಗಳಲ್ಲಿ ಹಿಂದಿನಿಂದಲೂ ಕುಟುಂಬದ ಸದಸ್ಯರು ಒಂದೇ ತಟ್ಟೆಯಲ್ಲಿ ಊಟ ಮಾಡುವ ಆಚರಣೆ ಇದೆ. ಇದು ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಮತ್ತು ಏಕತೆಯನ್ನು ಬೆಸೆಯುವ ಒಂದು ಸಾಂಸ್ಕೃತಿಕ ವಿಧಾನವಾಗಿದೆ.

ಇಸ್ರೇಲ್‌ನ ‘ಕಿಬೂತ್’ (Kibbutz) ಎಂಬುದು ಸಮುದಾಯದ ಸಹಕಾರ ಮತ್ತು ಸಮಾನತೆಯ ತತ್ವಗಳ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಜೀವನ ಪದ್ಧತಿ. ಇಲ್ಲಿ ಸದಸ್ಯರು ಒಟ್ಟಾಗಿ ಜೀವನ ನಡೆಸುತ್ತಾರೆ, ಒಟ್ಟಾಗಿ ಅಡುಗೆ ಮಾಡಿ, ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡುತ್ತಾರೆ. ಇಸ್ರೇಲ್‌ನ ಮೊದಲ ಪ್ರಧಾನಿ ಡೇವಿಡ್ ಬೆನ್-ಗುರಿಯನ್ ಕೂಡಾ ತಮ್ಮ ನಿವೃತ್ತಿ ಜೀವನವನ್ನು ಈ ಕಿಬೂತ್‌ಗಳಲ್ಲಿ ಕಳೆದಿದ್ದರೆಂಬುದು ಗಮನಾರ್ಹ.

ಪ್ರಾಕೃತಿಕ ಮತ್ತು ಅನನ್ಯ ಸಾಂಸ್ಕೃತಿಕ ಅನುಭವ (Unique Cultural Experience):

ಇಂದಿನ ಪ್ರವಾಸಿಗರು ಕೇವಲ ಸ್ಥಳಗಳನ್ನು ನೋಡಲು ಮಾತ್ರವಲ್ಲ, ಆ ಸ್ಥಳದ ಸಂಸ್ಕೃತಿ, ಜೀವನಶೈಲಿ ಮತ್ತು ಪಾರಂಪರಿಕ ಆಹಾರವನ್ನು ಸವಿಯಲು ಬಯಸುತ್ತಾರೆ. ಹೊಳೆ ಊಟವು ನದಿ ತಟದ ನೈಸರ್ಗಿಕ ವಾತಾವರಣ, ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ಸ್ಥಳೀಯ ವಿಶೇಷ ಪದಾರ್ಥಗಳು ಮತ್ತು ಒಗ್ಗಟ್ಟಿನ ಭೋಜನದ ಅನುಭವವನ್ನು ಒದಗಿಸುತ್ತದೆ. ಇದು ಪ್ರವಾಸಿಗರಿಗೆ ಹಳ್ಳಿಗಳ ನೈಜ ಜೀವನವನ್ನು ನೇರವಾಗಿ ಅನುಭವಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ, ಸುಸ್ಥಿರ ಪ್ರವಾಸೋದ್ಯಮವನ್ನು ಬೆಳೆಸುತ್ತದೆ. ಪ್ರವಾಸಿಗರು ಹಳ್ಳಿಯ ಜನರೊಂದಿಗೆ ಬೆರೆತು ಇಂತಹ ಪದ್ಧತಿಗಳನ್ನು ಅನುಭವಿಸುವುದು ಕೇವಲ ಪ್ರವಾಸವಲ್ಲ, ನಿಜವಾದ ಸಾಂಸ್ಕೃತಿಕ ಪಯಣವಾಗುತ್ತದೆ.

ಹೊಳೆ ಊಟವು ಪ್ರವಾಸಿಗರಿಗೆ ನದಿಯ ಹರಿವು, ಹಸಿರು ಪರಿಸರ ಮತ್ತು ಸ್ಥಳೀಯ ಆಹಾರದ ಸಂಯೋಜನೆಯನ್ನು ನೀಡುತ್ತದೆ. ಇದು ಆಧುನಿಕ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಪರಿಸರ ಸ್ನೇಹಿ ಮತ್ತು ಸುಸ್ಥಿರ ಪ್ರವಾಸ (Eco-tourism) ತತ್ವಗಳಿಗೆ ಹೊಂದಿಕೆಯಾಗುತ್ತದೆ.

ಆಧುನಿಕ ಜೀವನಶೈಲಿಯ ಒತ್ತಡದಲ್ಲಿ, ಊಟ ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆಯಾಗಿ ಮಾರ್ಪಟ್ಟಿದೆ. ಕೆಲಸದೊತ್ತಡ, ಸಂಪಾದನೆಯ ಹಿಂದೆ ನಾಗಾಲೋಟ ಇವುಗಳ ಮಧ್ಯೆ ನಾವು ಜೀವನ ಕಲೆಯ ಸೊಬಗನ್ನು ಅನುಭವಿಸುತ್ತಿಲ್ಲ. ಎಲ್ಲಾ ಕೂಡಿ ಊಟ ಮಾಡುವ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲಸಿರುತ್ತದೆ. ಕುಟುಂಬದ ವಿಘಟನೆಯನ್ನು ತಡೆಯುವಲ್ಲಿ ಈ ಪದ್ಧತಿ ಮಹತ್ವದ್ದಾಗಿದೆ. ಒಮ್ಮೆ ಡಿಜಿಟಲ್ ಪ್ರಪಂಚದ ಸಂಪರ್ಕ ಕಡಿದುಕೊಂಡು ಪ್ರೀತಿಪಾತ್ರರೊಂದಿಗೆ ಬೆರೆತು ಹೊಳೆಯೂಟದ ವಿಶಿಷ್ಟ ಅನುಭವವನ್ನು ಪಡೆಯಿರಿ. ಇದು ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ. ಇಂತಹ ಆಚರಣೆಗಳನ್ನು ಉಳಿಸಿ ಬೆಳೆಸುವ ಮೂಲಕ ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡಬಹುದು.