-ವಿದ್ಯಾ ವಿ. ಹಾಲಭಾವಿ

ಅಮೆರಿಕದ ಒರೆಗಾನ್‌ನ ಸಿಲ್ವೆರ್ಟನ್ ನಗರದಲ್ಲಿ ಸೌಥ್ ವಾಟರ್ ಸ್ಟ್ರೀಟ್ ಎಂಬ ಹೆಸರಿನ ರಸ್ತೆ ಇದೆ. ಇದಂತೂ ಅತ್ಯಂತ ಜನನಿಬಿಡವಾದ ರಸ್ತೆ. ಈ ರಸ್ತೆಯ ಎದುರಿನ ಗೋಡೆಯ ಮೇಲೆ ಶ್ವಾನವೊಂದರ ಜೀವನಗಾಥೆಯನ್ನು ಚಿತ್ರಿಸಲಾಗಿದೆ. ಸುಮಾರು ಎಪ್ಪತ್ತು ಅಡಿಯ ಈ ಭಿತ್ತಿಯಲ್ಲಿ ಕಾಣುವ ಚಿತ್ರಗಳೆಲ್ಲಾ ‘ಬಾಬ್ಬಿ’ ಹೆಸರಿನ ನಾಯಿಯದ್ದು. ಗೋಡೆಯ ಒಂದು ಬದಿಯಲ್ಲಿ ಬಾಬ್ಬಿಯ ಪ್ರತಿಮೆ ಹಾಗೂ ಅದರ ಪಕ್ಕದಲ್ಲೇ ನಾಯಿಮನೆಯ ಪ್ರತಿಕೃತಿಯನ್ನು ಸಹ ನಿರ್ಮಿಸಲಾಗಿದೆ.ಇದರಲ್ಲೇನು ವಿಶೇಷ ಅನ್ನುತ್ತೀರಾ? ಇಡೀ ರಾಷ್ಟ್ರದಲ್ಲಿ ಸಂವೇದನೆಯನ್ನುಂಟು ಮಾಡಿದ ಬಾಬ್ಬಿ ಬರೀ ನಾಯಿಯಲ್ಲ! ಸಾಹಸದ ಸತ್ಯ ಕಥೆಯಲ್ಲಿನ ನಿಜವಾದ ಹೀರೊ!

ಬಾಬ್ಬಿಯು ಸ್ಕಾಚ್ ಕೋಲಿ ಮತ್ತು ಇಂಗ್ಲಿಷ್ ಶೆಫರ್ಡ್ ಮಿಶ್ರ ತಳಿಗೆ ಸೇರಿರುವ ಸಾಧಾರಣ ನಾಯಿಮರಿ. ಎರಡು ವರ್ಷದ ಈ ಗಂಡು ನಾಯಿಮರಿಯು ಆಗಸ್ಟ್ 1923ರಲ್ಲಿ ತನ್ನ ಒಡೆಯ ಫ್ರಾಂಕ್ ಬ್ರೆಂಜರ್‌ರ ಮನೆಯವರೊಂದಿಗೆ ಕಾರಿನಲ್ಲಿ ಪಯಣಿಸುತ್ತಿತ್ತು. ಬ್ರೈಜರ್ ಕುಟುಂಬದವರೆಲ್ಲ ಒರೆಗಾನ್‌ನ ಸಿಲ್ವೆರ್ಟನ್‌ನ ತಮ್ಮ ಮನೆಯಿಂದ ಇಂಡಿಯಾನಾದ ವೋಲ್ಕಟ್‌ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಮಾಡಲು ಕ್ರಾಸ್ ಕಂಟ್ರಿ ಸಮ್ಮರ್ ರೋಡ್ ಟ್ರಿಪ್ ಕೈಗೊಂಡಿದ್ದರು. ವೋಲ್ಕಾಟ್ ನ ನಿಲ್ದಾಣವೊಂದರಲ್ಲಿ ಕಾರಿಗೆ ಗ್ಯಾಸ್ ತುಂಬಿಸುವಾಗ ಬಾಬ್ಬಿಯನ್ನು ಕೆಲವು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಓಡಿಸಿದವು. ತಮ್ಮ ಮುದ್ದಿನ ಬಾಬ್ಬಿ ವಾಪಸ್ ಬರಬಹುದೆಂದು ಬ್ರೈಜರ್ ಕುಟುಂಬದವರೆಲ್ಲಾ ಕಾಯುತ್ತಿದ್ದರು. ಆದರೆ ಎಷ್ಟು ಹೊತ್ತಾದರೂ ಬಾಬ್ಬಿ ಮರಳಲೇ ಇಲ್ಲ. ಪತ್ರಿಕೆಗಳಲೆಲ್ಲಾ ಜಾಹೀರಾತು ನೀಡಿ, ಒಂದು ವಾರದವರೆಗೆ ತೀವ್ರ ಹುಡುಕಾಟ ನಡೆಸಿದರೂ ಸಹ ಬಾಬ್ಬಿ ಪತ್ತೆಯಾಗಲೇ ಇಲ್ಲ. ದುಃಖತಪ್ತರಾದ ಬ್ರೈಜರ್ ಕುಟುಂಬದವರು ಭಾರವಾದ ಹೃದಯದಿಂದ ತಮ್ಮ ಪ್ರಯಾಣವನ್ನು ಮುಂದುವರಿಸಿ ನಂತರ ಒರೆಗಾನ್‌ನ ತಮ್ಮ ಮನೆಗೆ ಹಿಂದಿರುಗಿದರು. ತಮ್ಮ ಮುದ್ದು ನಾಯಿಯನ್ನು ಇನ್ನೆಂದೂ ನೋಡಲಾರೆವು ಎಂಬುದೇ ಅವರ ನಿರೀಕ್ಷೆಯಾಗಿತ್ತು.

Bobby

ಅಚ್ಚರಿಯೇನೋ ಎನ್ನುವಂತೆ ಕಣ್ಮರೆಯಾಗಿ ಸುಮಾರು ಆರು ತಿಂಗಳಿನ ನಂತರ ಬಾಬ್ಬಿ ಮರಳಿ ಬಂದಿತು. ಮೈಯ್ಯೆಲ್ಲ ಕೊಳಕಾಗಿ ಅತೀವ ಬಳಲಿಕೆಯಿಂದ ನಿತ್ರಾಣವಾಗಿದ್ದ ಬಾಬ್ಬಿ 1924ರ ಫೆಬ್ರವರಿಯಂದು ಸಿಲ್ವೆರ್ಟನ್ ಮನೆಗೆ ಬಂದಿತು. ಬ್ರೈಜರ್ ಕುಟುಂಬದವರಿಗಂತೂ ಹೇಳಲಾರದಷ್ಟು ಸಂತೋಷವಾಯಿತು. ಯಾರಿಗೂ ನಂಬಲು ಅಸಾಧ್ಯವೆನ್ನಿಸುವಂತೆ ಬಾಬ್ಬಿಯು ಸುಮಾರು 2550ಮೈಲಿ (4105 ಕಿಮೀ)ಗಳಷ್ಟು ನಡೆದು ವಾಪಸ್ ಬಂದಿತ್ತು! ನದಿಗಳನ್ನು ಈಜಿಕೊಂಡು ಚಳಿಗಾಲದಲ್ಲಿ ಕಾಂಟಿನೆಂಟಲ್ ಡಿವೈಡ್ ಅನ್ನು ದಾಟುವುದೂ ಸೇರಿದಂತೆ ಸಂಪೂರ್ಣ ದೂರವನ್ನು ಕ್ರಮಿಸಿದ ಎಲ್ಲಾ ಲಕ್ಷಣಗಳೂ ಬಾಬ್ಬಿಯಲ್ಲಿತ್ತು.

ಆ ಸಂತೋಷದ ಪುನರ್ಮಿಲನದ ನಂತರ ಬಾಬ್ಬಿಯ ಜೀವನ ಬಹಳಷ್ಟು ಬದಲಾಯಿತು. ಅದರ ಸಾಹಸವು ಎಲ್ಲರ ಮನೆ ಮಾತಾಯಿತು. ಒರೆಗಾನ್ ಹ್ಯೂಮನ್ ಸೊಸೈಟಿ ಆಫ್ ಪೋರ್ಟ್ ಲ್ಯಾಂಡ್ ಅಧಿಕಾರಿಗಳು ಬಾಬ್ಬಿಯ ಮಹಾನ್ ಪ್ರಯಾಣವನ್ನು ಮೊದಲು ನಂಬಲೇ ಇಲ್ಲ ಮತ್ತು ಇದರ ಬಗ್ಗೆ ಕೂಲಂಕಷ ತನಿಖೆ ನಡೆಸಿದರು. ಅದು ಕ್ರಮಿಸಿದ ದಾರಿಯಲ್ಲಿ ಬಾಬ್ಬಿಗೆ ಆಹಾರ ಮತ್ತು ಆಶ್ರಯ ನೀಡಿದ ಜನರೆಲ್ಲರೂ ತಮ್ಮಲ್ಲಿಗೆ ಬಂದಿದ್ದ ಸಮಯವನ್ನು ಕುಟುಂಬದವರಿಗೆ ಬರೆದು ತಿಳಿಸಿದರು. ಹ್ಯೂಮನ್ ಸೊಸೈಟಿಯವರು ಬಾಬ್ಬಿ ಸಾಗಿದ ಮಾರ್ಗದ ಈ ಕಥೆಗಳನ್ನೆಲ್ಲಾ ತುಲನಾತ್ಮಕವಾಗಿ ಜೋಡಿಸಿ ಬಾಬ್ಬಿಯು ನಿಜವಾಗಿಯೂ 2550 ಮೈಲುಗಳಷ್ಟು ಪ್ರಯಾಣ ಬೆಳೆಸಿದೆ ಎನ್ನುವ ನಿಖರವಾದ ವಿವರಣೆ ನೀಡಿದರು.

Bobbie the wonder dog

ಬಾಬ್ಬಿಯು ರಿಪ್ಲೆಯ ‘ಬಿಲಿವ್ ಇಟ್ ನಾಟ್’ ಸೇರಿದಂತೆ ಅನೇಕ ಪತ್ರಿಕೆಗಳ ಲೇಖನಗಳ ವಿಷಯವಾಯಿತು. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಬಾಬ್ಬಿಯ ಅದ್ಭುತ ಸಾಧನೆಯನ್ನು ಕೊಂಡಾಡಿದ್ದೇ ಕೊಂಡಾಡಿದ್ದು! ಬ್ರೈಜರ್ ಮನೆಯವರಿಗಂತೂ ಬಾಬ್ಬಿ ಅಭಿಮಾನಿಗಳಿಂದ ರಾಶಿ ರಾಶಿ ಪತ್ರಗಳು ಹರಿದು ಬಂದವು. ಕೆಲವರಂತೂ ನೇರವಾಗಿ ಬಾಬ್ಬಿಗೇ ಪತ್ರ ಬರೆದಿದ್ದರು! ಅಷ್ಟೇ ಅಲ್ಲ ‘ದಿ ಕಾಲ್ ಆಫ್ ವೆಸ್ಟ್’ ಎಂಬ ಮೂಕಿ ಚಿತ್ರದಲ್ಲಿಯೂ ಈ ನಾಯಿ ನಟಿಸಿತು. ಪ್ರಪಂಚದಾದ್ಯಂತ ಜನರು ಬಾಬ್ಬಿಗೆ ಕಾಲರ್, ಬೆಲೆ ಬಾಳುವ ರಕ್ಷಾಕವಚ, ರಿಬ್ಬನ್, ಪದಕ ಮುಂತಾದ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಪೋರ್ಟ್ ಲ್ಯಾಂಡ್ ಹೋಮ್ ಶೋ ನಲ್ಲಿ ಗೌರವ ಅತಿಥಿಯಾಗಿದ್ದ ಬಾಬ್ಬಿಯನ್ನು ನೋಡಲೆಂದೇ ನಲವತ್ತು ಸಾವಿರಕ್ಕೂ ಹೆಚ್ಚು ಜನ ಬಂದಿದ್ದರಂತೆ! ಅಲ್ಲಿ ಬಾಬ್ಬಿಯ ಸ್ವಂತಕ್ಕೆ ನಾಯಿಮನೆ ಗಾತ್ರದ ಬಂಗಲೆಯನ್ನು ನೀಡಲಾಯಿತು.

Bobbie dog

ವಂಡರ್ ಡಾಗ್ ಎಂದೇ ಪ್ರಸಿದ್ಧಿಯಾಗಿದ್ದ ಬಾಬ್ಬಿಯು 1927ರಲ್ಲಿ ನಿಧನವಾಯಿತು. ಪೋರ್ಟ್ಲ್ಯಾಂಡ್‌ನಲ್ಲಿರುವ ಸಾಕು ಪ್ರಾಣಿಗಳ ಸ್ಮಶಾನದಲ್ಲಿ ಅದನ್ನು ಸಮಾಧಿ ಮಾಡಲಾಯಿತು. ನಂತರ ಹಾಲಿವುಡ್‌ನ ಜನಪ್ರಿಯ ತಾರೆ ‘ರಿನ್ ಟಿನ್ ಟಿನ್’ ರವರು ಆ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು.

ಪ್ರತಿ ವರ್ಷವೂ ಸಿಲ್ವೆರ್ಟನ್‌ನಲ್ಲಿ ನಡೆಯುವ ಮಕ್ಕಳ ಸಾಕು ಪ್ರಾಣಿಗಳ ಮೆರವಣಿಗೆಯಲ್ಲಿ ಬಾಬ್ಬಿಯ ನಿಷ್ಠೆಯ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಇದು ಜನರ ಜೀವನದಲ್ಲಿ ಸಾಕುಪ್ರಾಣಿಗಳು ಹೊಂದಿರುವ ವಿಶೇಷ ಸ್ಥಾನವನ್ನು ನೆನಪಿಸುತ್ತದೆ.