- ಡಾ. ಯಮುನಾ ಬಿ ರಾಜ್

ಹೇಗಿದ್ರು ಮನೆ ಆಫೀಸ್ ಅಂತ ಗೂಡು ಒಳಗೆ ಇದ್ದಂಗೆ ಇದ್ದೇವೆ.. ಹೊರ ಜಗತ್ತನ್ನು ನೋಡುವ ರೀತಿ ಪ್ಲಾನ್ ಮಾಡಿ ಎಂದು ಹಲವರು ಹೇಳುತ್ತಿರುತ್ತಾರೆ. ನಮಗೂ ಒಂದು ಸಣ್ಣ ಬ್ರೇಕ್ ಬೇಕಿತ್ತು. ಆಗ ತಟ್ಟನೇ ನೆನಪಿಗೆ ಬಂದಿದ್ದು ಕುಂತಿಬೆಟ್ಟದ ಚಾರಣ..

ಮೈಸೂರು, ಮಂಡ್ಯ ಜಿಲ್ಲೆಯ ಸುತ್ತಮುತ್ತ ಜನರಿಗೆ ಈ ಕುಂತಿಬೆಟ್ಟದ ಸೊಬಗು ಗೊತ್ತಿದ್ದರೂ ಸಹ ಒತ್ತಡದ ಕೆಲಸದ ಮಧ್ಯೆ ಈ ಸೊಬಗನ್ನು ಕಣ್ತುಂಬಿಕೊಳ್ಳಲು ಮರೆತಿರುತ್ತಾರೆ.. ಇನ್ನೂ ಕೆಲವರಿಗಂತೂ ಅಷ್ಟಾಗಿ ತಿಳಿದಿಲ್ಲ.. ನನ್ನ ಸಹಪಾಠಿಗಳಿಗೆ ನಾವು ತೆರಳಿದ್ದ ಭಾವಚಿತ್ರಗಳನ್ನು ತೋರಿಸಿದ ನಂತರ ಅವರಿಗೂ ಹೋಗುವ ಮನಸ್ಸಾಗುತ್ತಿದೆ ಎಂದು ನನ್ನ ಬಳಿ ಹೇಳಿದ್ದುಂಟು..

ಕುಂತಿಬೆಟ್ಟವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆಂಚೇನಹಳ್ಳಿಯಲ್ಲಿದೆ. ಈ ತಾಣವನ್ನು ಚಾರಣಿಗರ ಸ್ವರ್ಗ ಅಂತಲೇ ಕರೆಯುತ್ತಾರೆ.. ಟ್ರೆಕ್ಕಿಂಗ್‌ ಹೋಗೋದು ಹಲವರ ನೆಚ್ಚಿನ ಹವ್ಯಾಸ. ಕೆಲವರಿಗೆ ದೇಹಕ್ಕೆ ಕಷ್ಟ ಅನಿಸಿದರೂ ಮನಸಿಗೆ ಖುಷಿ ನೀಡುತ್ತದೆ. ಹೀಗೆ ನಮ್ಮ ಟೀಂ ಕೂಡ ಒಂದು ಕಾರ್ ರೆಡಿ ಮಾಡಿಕೊಂಡು ಎಲ್ಲರೂ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆಯೇ ಮನೆ ಬಿಟ್ಟೆವು.. ನಿದ್ದೆಗಣ್ಣಿನಲ್ಲೇ ನಮ್ಮ ಟೀಮ್ ಕುಂತಿ ಬೆಟ್ಟಕ್ಕೆ ಹೊರಟು ರಸ್ತೆಯಲ್ಲಿ ಹಾಸ್ಯ, ಹಾಡು ಹಾಡುತ್ತಾ ಚಿಯರ್ ಅಪ್ ಆದೆವು.. ಕುಂತಿಸ್ಥಳ ತಲುಪಿದ ನಮಗೆ ಮನೋಲ್ಲಾಸ ಕಾದಿತ್ತು.. ಆ ತಂಪಾದ ಗಾಳಿ ಎಲ್ಲರ ಮುಖದಲ್ಲೂ ಉತ್ಸಾಹ ತುಂಬಿತು. ಬಹಳ ಹುಮ್ಮಸ್ಸಿನಿಂದ ಎಲ್ಲರೂ ಒಂದೊಂದು ಊರುಗೋಲು ಹಿಡಿದುಕೊಂಡು ಬೆಟ್ಟ ಏರಲು ಶುರು ಮಾಡಿದೆವು.. ದಾರಿಯಲ್ಲಿ ನಮ್ಮ ತರಾನೇ ಇನ್ನು ಹಲವಾರು ಹಿರಿಯರು ಮತ್ತು ಕಿರಿಯರು ಮಂದಹಾಸದಿಂದ ಬೆಟ್ಟ ಏರುತ್ತಿದ್ದರು..

Kunti betta Mandya

ಕುಂತಿಬೆಟ್ಟಕ್ಕಿದೆ ಪೌರಾಣಿಕ ನಂಟು

ಪಾಂಡವರು ವನವಾಸದ ಸಮಯದಲ್ಲಿ ತಮ್ಮ ತಾಯಿ ಕುಂತಿಯೊಂದಿಗೆ ಕೆಲವು ದಿನಗಳ ಕಾಲ ಇಲ್ಲಿ ವಾಸವಿದ್ದರು. ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭವನ್ನು ಕುಂತಿ ಬಳಸುತ್ತಿದ್ದರು ಎಂಬ ನಂಬಿಕೆ ಇದೆ. ಇಲ್ಲಿರುವ ದೇವಾಲಯವೂ ಕುಂತಿಯೊಂದಿಗೆ ಸಂಬಂಧ ಹೊಂದಿದೆ. ಬೆಟ್ಟಗಳ ಕೆಳಗೆ ಹರಿಯುವ ಮಳೆನೀರಿನಿಂದ ರೂಪುಗೊಂಡ ಕೊಳವನ್ನು 'ಕುಂತಿ ಕುಂಡ' ಎಂದು ಕರೆಯಲಾಗುತ್ತದೆ.

ಭೀಮ ಹಾಗೂ ಬಕಾಸುರನಿಗೆ ಸಂಬಂಧಿಸಿದ ದಂತಕಥೆಗಳೂ ಈ ಬೆಟ್ಟದ ಜತೆಗೆ ತಳುಕು ಹಾಕಿಕೊಂಡಿವೆ. ರಾಕ್ಷಸ ಬಕಾಸುರನನ್ನು ಇಲ್ಲಿ ಕೊಲ್ಲಲಾಯಿತು.. ಈ ಬೆಟ್ಟದ ಮೇಲೆ ದೈತ್ಯ ಹೆಜ್ಜೆ ಗುರುತುಗಳಿದ್ದು ಇದನ್ನು ಭೀಮನ ಪಾದ ಎಂದು ಕರೆಯಲಾಗುತ್ತದೆ. ಈ ಕುಂತಿ ಬೆಟ್ಟದಲ್ಲಿ ಮಲ್ಲಿಕಾರ್ಜುನ ಹಾಗೂ ಶ್ರೀರಾಮ ದೇವಾಲಯಗಳೂ ಇವೆ. ಅಲ್ಲದೆ ಇತರ ಸಣ್ಣ ದೇವಾಲಯಗಳನ್ನೂ ನೋಡಬಹುದಾಗಿದೆ.. ಊರಿನ ಹಿರಿಯರೊಬ್ಬರು ವಿಸ್ಮಯವೆನಿಸುವಂಥ ಕತೆ ಹೇಳುತ್ತಾ ಹೋದರು. ಜತೆಗೆ ಪಾಂಡವರು ಇಲ್ಲಿ ನೆಲೆಸಿದ್ದರು ಎಂಬುದನ್ನು ಕೇಳಿ ನಮಗೆ ಬಹಳ ಆಶ್ವರ್ಯವೆನಿಸಿತು. ಇನ್ನೂ ಅನೇಕ ವಿಷಯಗಳು ನಮ್ಮ ಕಿವಿಗೆ ಬಿದ್ದವು.. ಆ ಊರಿನ ಹಿರಿಯರೊಬ್ಬರ ಪೌರಾಣಿಕ ಕಥೆ ಕೇಳಿ ಒಂದೊಳ್ಳೆ ಅನುಭವವಾಯಿತು. ಪೌರಾಣಿಕ ಕಥೆ ಹೇಳಿಕೊಂಡು ಚರ್ಚೆ ಮಾಡಿಕೊಂಡು ಬೆಟ್ಟ ಏರುತ್ತಿದ್ದ ನಮಗೆ, ಅರ್ಧ ದಾರಿಗೆ ಬಂದದ್ದೇ ಗೊತ್ತಾಗಲಿಲ್ಲ .. ಹಿರಿಯರು ಇಲ್ಲಿ ಕಡಿದಾದ ದಾರಿ ಇರುವ ಕಾರಣಕ್ಕೆ ನಮಗೆ ಜೋಪಾನವಾಗಿ ಹೋಗಿ ಬನ್ನಿ ಎಂದು ಸಲಹೆ ನೀಡಿದ್ದರು. ಅವರ ಅಣತಿಯಂತೆ ನಾವು ನಮ್ಮ ದಾರಿ ಮುಂದುವರಿಸಿದ್ದೆವು. ಬೆಟ್ಟದ ದಾರಿಯಲ್ಲಿ ಬಂಡೆ ಕಲ್ಲುಗಳ ಮೇಲೆ ಕೈಕಾಲು ಬಳಸಿ ಹತ್ತುತ್ತಿದ್ದೆವು. ಹೋಗುತ್ತಾ ಹೋಗುತ್ತಾ ದಾರಿಯುದ್ದಕ್ಕೂ ಇರುವ ಹುಲ್ಲುಗಾವಲು.. ಬಂಡೆಕಲ್ಲುಗಳನ್ನು ಏರುತ್ತಾ, ಕಷ್ಟ ಅನಿಸಿದರೂ ಅಲ್ಲಲ್ಲಿ ನಿಲ್ಲುವುದು ಬೆವರು ಒರೆಸುವುದು, ಗಾಳಿ ಸೆಳೆಯೋದು,ಇವೆಲ್ಲ ನಮಗೆ ಅಷ್ಟು ಸುಸ್ತು ಅನಿಸುತ್ತಿರಲಿಲ್ಲ.. ಇನ್ನೂ ಕೆಂಚನಹಳ್ಳಿಯ ಎರಡು ಬೆಟ್ಟಗಳ ನಡುವೆ ನೆಲೆಸಿರುವ ಈ ಬೆಟ್ಟ ಸಮುದ್ರದ ಮಟ್ಟದಿಂದ 2,882 ಅಡಿ, 878 ಮೀಟರ್ ಎತ್ತರದಲ್ಲಿದೆ.. ಇದರ ನೈಸರ್ಗಿಕ ಸೌಂದರ್ಯ ಮತ್ತು ಮಾನಮೋಹಕ ಪರಿಸರ ಆಕರ್ಷಣೀಯ ಸ್ಥಳವಾಗಿದೆ.

Kunti betta Pandavapura

ಬೆಟ್ಟದ ಸೊಬಗು ರಮ್ಯ ರಮಣೀಯ

ಜೀವನವೇ ಒಂದು ದೊಡ್ಡ ಪರ್ವತ, ಎಷ್ಟೋ ಕಷ್ಟಗಳನ್ನು ನಾವು ಎದುರಿಸಿದ್ದೇವೆ.. ಇದು ಯಾವ ಮಹಾ ಎಂದು ಉಸ್ಸೋ, ಬಿಸ್ಸೋ ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ತಮಾಷೆ ಮಾಡುತ್ತಾ ಧೈರ್ಯದಿಂದ ಬೆಟ್ಟದ ತುದಿಯನ್ನು ತಲುಪಿಯೇ ಬಿಟ್ಟೆವು.. ಬೆಟ್ಟದ ತುದಿಯನ್ನು ಏರಿದ ಮೇಲೆ ಕಾಣುವ ಅದ್ಭುತ ನೋಟವು ನಮ್ಮ ಆಯಾಸವನ್ನು ಮರೆಸಿತು.. ಅದರಲ್ಲೂ ಸೂರ್ಯೋದಯ ಆಗುವ ಆ ನೋಟ ಎಷ್ಟು ಸುಂದರವಾಗಿತ್ತು ಎಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.. ಅದನ್ನು ಕಣ್ತುಂಬಿಕೊಂಡರಷ್ಟೇ ಪುಣ್ಯ.. ಆಕಾಶದಲ್ಲಿ ಪ್ರತಿದಿನ ಹುಟ್ಟುವ ಆ ಸೂರ್ಯ ಕೆಂಪು ಮತ್ತು ಕಿತ್ತಳೆ ಬಣ್ಣಗಳಲ್ಲಿ ಹೊಳೆಯುತ್ತಿದ್ದ.. ಸುತ್ತಮುತ್ತ ಹಸಿರು ವನ ತಂಪಾದ ಗಾಳಿ ಬೀಸುತ್ತಿತ್ತು. ಪ್ರಾಣಿ ಪಕ್ಷಿಗಳ ಚಿಲಿಪಿಲಿ ಗಾನ ಬೆಟ್ಟದ ಮೇಲೆ ನಿಂತ ನಮಗೆ ಹೊಸ ಲೋಕವೇ ಸೃಷ್ಠಿಯಾಗಿತ್ತು.. ಎಲ್ಲೆಡೆ ಹಸಿರ ಕಾನನ.. ಹೊಳೆ ಜತೆಗೆ ಭತ್ತದ ಗದ್ದೆಗಳು ಕಬ್ಬಿನ ಗದ್ದೆಗಳು ಹಾಗೂ ತೆಂಗಿನ ಮರಗಳಿಂದ ಕೂಡಿದ್ದು ಕಣ್ಣಿಗೆ ಹಬ್ಬವೆನಿಸಿತು..

ಜೀವನದ ಜಂಜಡದಿಂದ ದೂರ ಸರಿದು ನೆಮ್ಮದಿಯ ಕಂಡೆವು.. ಹೊಸ ಲೋಕದ ಜತೆ ನಾವು ತಂದಿದ್ದ ಹಣ್ಣು ಜ್ಯೂಸ್ ಮತ್ತು ನೀರನ್ನು ಕುಡಿದು ದೇಹಕ್ಕೆ ತಂಪಾಗಿ ಮತ್ತು ವಿಶ್ರಾಂತಿ ಪಡೆದವು.. ಆ ಕ್ಷಣವನ್ನು ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ಅಲ್ಲೇ ಫೋನಾಯಿಸಿ ಸಂಭ್ರಮಿಸಿದೆವು.

ಮೈಸೂರಿನವಳಾದ ನನಗೆ ಇದು ಮೊದಲ ಟ್ರೆಕ್ಕಿಂಗ್. ಕೇವಲ ಪಯಣವಾಗಿರಲಿಲ್ಲ; ನನ್ನ ಜೀವನದ ಒಂದು ಮರೆಯಲಾಗದ ಸವಿ ನೆನಪು.. ಟ್ರೆಕ್ಕಿಂಗ್ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಮಾನಸಿಕ ಧೈರ್ಯವನ್ನು ಬೆಳೆಸುವ ಅನುಭವವನ್ನು ನೀಡಿತ್ತು.. ಜತೆಗೆ ಹೊಸ ಗೆಳೆತನ, ಪರಸ್ಪರ ಹೊಂದಾಣಿಕೆ ಸಹನಾಶೀಲತೆ ಮತ್ತು ನಂಬಿಕೆ ಇನ್ನೂ ಹೆಚ್ಚು ಸ್ನೇಹಿತರೊಡನೆ ಬೆರೆಯುವ ಹೊಸ ಹುಮ್ಮಸ್ಸನ್ನು ಈ ಟ್ರೆಕ್ಕಿಂಗ್ ನೀಡಿತು.. ಬಹಳ ವರ್ಷಗಳಿಂದ ನನಗೆ ಒಂದೇ ಕುತೂಹಲ ಕಾಡುತ್ತಿತ್ತು.. ಟ್ರೆಕ್ಕಿಂಗ್ ಹೋಗೋದು ಹಲವರ ನೆಚ್ಚಿನ ಹವ್ಯಾಸ ಯಾಕೆ? ಏನಿರಬಹುದು ಈ ಟ್ರೆಕ್ಕಿಂಗ್ ಇಷ್ಟು ಟ್ರೆಂಡಿಂಗ್ ಆಗಿದೆಯಲ್ಲ.. ಜನ ಯಾಕೆ ಇಷ್ಟು ಉಲ್ಲಾಸ ಮತ್ತು ಉತ್ಸಾಹದಿಂದ ಪ್ರತಿ ಭಾನುವಾರ ಅಥವಾ ತಿಂಗಳಲ್ಲಿ ಎರಡು ಬಾರಿ ಸಹ ಟ್ರೆಕ್ಕಿಂಗ್‌ಗೆ ಹೋಗುತ್ತಾರೆ ಅಂತ...! ಈಗ ನನಗೆ ಸ್ವತಃ ಅನುಭವವಾಗಿದ್ದರಿಂದ ಕುಂತಿಬೆಟ್ಟದ ಸೊಬಗು ನನ್ನನ್ನು ನಿಬ್ಬೆರಗಾಗಿಸಿತು.. ಈ ಬೆಟ್ಟಕ್ಕೆ ರಾತ್ರಿ ವೇಳೆ ಕೂಡ ಟ್ರೆಕ್ಕಿಂಗ್‌ ಮಾಡಬಹುದಾಗಿದೆ.. ಜತೆಗೆ ಇಲ್ಲಿ ಫೈರ್‌ ಕ್ಯಾಂಪ್‌ ಕೂಡ ಮಾಡುತ್ತಾರೆ.. ಒನ್‌ ಡೇ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ.. ಪಯಣಕ್ಕೆ ತಕ್ಕಂತೆ ಸೂಕ್ತವಾದ ಟ್ರೆಕ್ ಉಡುಪು ಮತ್ತು ಉತ್ತಮ ಶೂ ಹಾಕಿಕೊಂಡು ಹೋಗುವುದು ಒಳ್ಳೆಯದು.. ಅಗತ್ಯ ವಸ್ತುಗಳಾದ ನೀರು, ಹಣ್ಣು ಜ್ಯೂಸು ಸನ್ ಗ್ಲಾಸ್ ಮತ್ತು ಪೂರಕ ವೈದ್ಯಕೀಯ ಕಿಟ್‌ಗಳನ್ನು ತೆಗೆದುಕೊಂಡು ಹೋದರೆ ಒಳ್ಳೆಯದು ಎಂದು ಹೇಳುತ್ತೇನೆ.‌ ಇನ್ನೂ ಯಾರು ಯಾರು ಹೋಗಿಲ್ಲ ಅವರು ಒಮ್ಮೆಯಾದರೂ ಭೇಟಿ ಕೊಡಿ.. ಆ ಸುಂದರ ಕ್ಷಣವನ್ನು ಅನುಭವಿಸಿ..