- ಜ್ಯೋತಿ ಪ್ರಸಾದ್


ನಮ್ಮ ಭಾರತೀಯ ಸಂಪ್ರದಾಯಗಳಲ್ಲಿ ದೀಪ ಬೆಳಗುವುದು ಶುಭದ ಸಂಕೇತವೆಂದೂ, ದೀಪವು ಪ್ರತ್ಯಕ್ಷ ದೇವರೆಂದೂ ದೀಪ ಬೆಳಗುವುದರಿಂದ ಪಾಪ ಶಮನವಾಗುವುದೆಂದೂ ನಂಬಿಕೆಯಿದೆ. ಇನ್ನು ದೀಪಾವಳಿಯ ಸಮಯದಲ್ಲಿ ಎಲ್ಲೆಲ್ಲೂ ದೀಪಗಳ ಸಮೂಹಗಳನ್ನೇ ಕಾಣುತ್ತೇವೆ. ಕತ್ತಲನ್ನು ಕಳೆದು ಬೆಳಕನ್ನು ನೀಡುವ ದೀಪಾವಳಿ ಹಬ್ಬವು ದುಷ್ಟಸಂಹಾರವನ್ನು ಸಂಭ್ರಮಿಸುವ ಹಬ್ಬ. ಸಾಂಕೇತಿಕವಾಗಿ ಅಜ್ಞಾನದ ಕತ್ತಲನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಹಬ್ಬವೆಂದೂ ಹೇಳಲಾಗುತ್ತದೆ. ಸಾಮಾನ್ಯವಾಗಿ ಮೂರು ದಿನಗಳ ಕಾಲ ನಡೆಯುವ ಈ ಹಬ್ಬದ ಮೊದಲ ದಿನ ನರಕಚತುರ್ದಶಿಯು ದೀಪಾವಳಿಯ ಸಂಭ್ರಮಕ್ಕೆ ನಾಂದಿ ಹಾಡುತ್ತದೆ. ದುಷ್ಟ ನರಕಾಸುರನ ವಧೆಯ ದಿನವಾದ್ದರಿಂದ,ಮನೆಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ , ಸಿಹಿ ತಿಂದು, ಪಟಾಕಿ ಸಿಡಿಸುತ್ತಾ ವಿಜಯೋತ್ಸವವನ್ನು ಆಚರಿಸುತ್ತಾರೆ.

ಮಾರನೇ ದಿನ ಅಮಾವಾಸ್ಯೆಯಂದು ಸಂಪತ್ತು ಸಮೃದ್ಧಿಗಾಗಿ ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಮೂರನೇ ದಿನ ಬಲಿಪಾಡ್ಯಮಿಯಂದು ದಾನಶೂರ ಮತ್ತು ವಿಷ್ಣುಭಕ್ತ ಬಲಿಚಕ್ರವರ್ತಿಯು ಮನೆಗೆ ಬರುತ್ತಾನೆಂಬ ನಂಬಿಕೆಯಿಂದ ಬಲೀಂದ್ರ ಪೂಜೆ ಮಾಡುತ್ತಾರೆ. ಇದು ದಾನಶೀಲತೆ, ನಮ್ರತೆ ಮತ್ತು ಸದ್ಗುಣಗಳಿಗೆ ಒತ್ತು ನೀಡುವ ಹಬ್ಬವಾಗಿದೆ. ಹೀಗೆ ದೀಪಾವಳಿ ಹಬ್ಬವನ್ನು ಎಲ್ಲೆಲ್ಲೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.ಭಾರತದಾದ್ಯಂತವಲ್ಲದೇ ವಿದೇಶಗಳಲ್ಲೂ ಹಲವಾರು ಕಡೆ ದೀಪಾವಳಿಯನ್ನು ಉತ್ಸಾಹದಿಂದ ಆಚರಿಸುತ್ತಾರೆ.

Diwali

ಅಮೆರಿಕದಲ್ಲಿ ದೀಪಾವಳಿ ಹಬ್ಬವು ಅಲ್ಲಿ ನೆಲೆಸಿರುವ ಭಾರತೀಯರಿಗೆ ತಮ್ಮ ಮೂಲ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಮತ್ತು ಹೊಸ ಪೀಳಿಗೆಗೆ ಅದನ್ನು ಪರಿಚಯಿಸುವ ಒಂದು ಸುಂದರ ಆಚರಣೆಯಾಗಿದೆ. ಜನರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂತೋಷದಿಂದ ಬೆರೆತು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಜನರು ತಮ್ಮ ಮನೆಗಳನ್ನು ದೀಪಗಳು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ಬಂಧು, ಮಿತ್ರ ಕುಟುಂಬಗಳು ಒಟ್ಟಾಗಿ ಸೇರಿ ಪೂಜೆಯಲ್ಲಿ ಪಾಲ್ಗೊಂಡು ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ತಯಾರಿಸುತ್ತಾರೆ. ಸಾಂಪ್ರದಾಯಿಕ ಭಾರತೀಯ ಉಡುಗೆ ತೊಡುಗೆಗಳನ್ನು ಧರಿಸಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ಮತ್ತು ಅಚ್ಚುಕಟ್ಟಾದ ಪ್ರಸಾದ ಭೋಜನಗಳ ವ್ಯವಸ್ಥೆಯೂ ಇರುತ್ತದೆ.

ಆದರೆ ಅಲ್ಲಿ ಮನೆಗಳ ಸುತ್ತಮುತ್ತ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧಗಳಿರುವುದರಿಂದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿರುತ್ತದೆ. ಅದರ ಹೊರತಾಗಿ ಸಾರ್ವಜನಿಕವಾಗಿ ಆಯೋಜಿಸುವ ವರ್ಣರಂಜಿತ ಬೆಳಕಿನ ಪ್ರದರ್ಶನಗಳು ಅತ್ಯಂತ ಆಕರ್ಷಣೀಯವಾಗಿರುತ್ತದೆ.

diwali celebration by Trumph

ಭಾರತೀಯ ಜನಸಂಖ್ಯೆ ಹೆಚ್ಚಾಗಿರುವ ನ್ಯೂಯಾರ್ಕ್, ಹೂಸ್ಟನ್, ನ್ಯೂಜೆರ್ಸಿ, ಮತ್ತು ಕ್ಯಾಲಿಫೋರ್ನಿಯಾದಂತಹ ನಗರಗಳಲ್ಲಿ ಭಾರತೀಯ ಸಮುದಾಯಗಳು ಅಲ್ಲಿನ ಸಮುದಾಯ ಭವನಗಳಲ್ಲಿ ದೊಡ್ಡ ಮಟ್ಟದ ದೀಪಾವಳಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ನೃತ್ಯ, ಸಂಗೀತ, ನಾಟಕಗಳು ಮತ್ತು ಭಾರತೀಯ ಆಹಾರ ಮೇಳಗಳು ನಡೆಯುತ್ತವೆ. ಈ ಮೇಳಗಳು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗಿರುವುದಿಲ್ಲ.ಬದಲಿಗೆ ಸ್ಥಳೀಯ ಅಮೆರಿಕನ್ನರು ಕೂಡ ಇದರಲ್ಲಿ ಉತ್ಸಾಹದಿಂದ ಭಾಗವಹಿಸಿ, ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳುತ್ತಾರೆ. ಆ ದೇಶದ ಸಂಸ್ಕೃತಿಯ ಜತೆಗೆ ಅನೇಕ ಭಾರತೀಯ ಹಬ್ಬಗಳ ಆಚರಣೆಗಳು ಕೂಡ ಕ್ರಮೇಣ ಬೆರೆತು ಹೋಗುತ್ತಿದೆ. ಅವುಗಳಲ್ಲಿ ದೀಪಾವಳಿ ಹಬ್ಬವು ಪ್ರಮುಖ ಸ್ಥಾನ ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಿದೆ.

ಹಿಂದೆ ಕೇವಲ ಭಾರತೀಯರು ತಮ್ಮ ಮನೆಗಳಲ್ಲಿ ಆಚರಿಸುತ್ತಿದ್ದ ದೀಪಾವಳಿ, ಈಗ ಅಮೆರಿಕಾದ ಪ್ರಮುಖ ನಗರಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಮಟ್ಟದಲ್ಲೂ ಆಚರಿಸಲ್ಪಡುತ್ತಿದೆ. ಇದರಿಂದ ಅಲ್ಲಿಯ ಜನಗಳಿಗೂ ನಮ್ಮ ದೇಶದ ಶ್ರೀಮಂತ ಪರಂಪರೆ ಮತ್ತು ಸೌಹಾರ್ದತೆಯ ಪರಿಚಯವಾಗುತ್ತಿದೆ. ಈ ಮೂಲಕ ಅಲ್ಲಿ ದೀಪಾವಳಿ ಕೇವಲ ಧಾರ್ಮಿಕ ಹಬ್ಬವಾಗಿರದೆ, ಸಮುದಾಯವನ್ನು ಒಗ್ಗೂಡಿಸುವ ಒಂದು ಸಾಂಸ್ಕೃತಿಕ ಸಮ್ಮಿಲನದ ವೇದಿಕೆಯೂ ಆಗಿದೆ. ಹಾಗೆ ನೋಡಿದರೆ ಇತ್ತೀಚಿನ ವರ್ಷಗಳಲ್ಲಿ, ಅಮೆರಿಕದಲ್ಲಿ ದೀಪಾವಳಿಗೆ ಮಾನ್ಯತೆ ಹೆಚ್ಚುತ್ತಿದೆ. ಕೆಲವು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ದೀಪಾವಳಿಯ ದಿನ ರಜೆ ಘೋಷಿಸುತ್ತಿವೆ. ಅಲ್ಲದೆ, ಶ್ವೇತಭವನದಲ್ಲಿ ಪ್ರತಿ ವರ್ಷವೂ ದೀಪಾವಳಿ ಆಚರಣೆಗಳು ನಡೆಯುತ್ತಿದ್ದು, ಅದರಲ್ಲಿ ಅಮೆರಿಕದ ಅಧ್ಯಕ್ಷರೂ ಸಹ ಭಾಗವಹಿಸುತ್ತಾರೆ. ಇದು ಭಾರತೀಯ ಅಮೆರಿಕನ್ ಸಮುದಾಯಕ್ಕೆ ಮತ್ತು ಭಾರತೀಯ ಸಂಸ್ಕೃತಿಗೆ ದೊರೆತಿರುವ ಗೌರವ ಎನ್ನಬಹುದು.

diwali in America

ಒಟ್ಟಾರೆಯಾಗಿ ಅಮೆರಿಕಾದಲ್ಲಿ ದೀಪಾವಳಿ ಹಬ್ಬ ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ ಭಾರತೀಯರಿಗೆ ತಮ್ಮ ತಾಯ್ನಾಡಿನ ಸಂಸ್ಕೃತಿಯೊಂದಿಗೆ ಬೆಸೆದುಕೊಳ್ಳುವುದು ಮಾತ್ರವಲ್ಲದೇ, ಜತೆ ಜತೆಗೆ ಅಮೆರಿಕದ ಸಮಾಜದಲ್ಲಿ ತಮ್ಮ ಅಸ್ಮಿತೆಯನ್ನು ಸ್ಥಾಪಿಸಲು ಉತ್ತಮ ಮಾರ್ಗವಾಗಿ, ಸಂತಸ ಮತ್ತು ಸೌಹಾರ್ದತೆಯ ಬೆಳಕನ್ನು ಹರಡುವ ಹಬ್ಬವಾಗಿ ಎಲ್ಲರನ್ನೂ ಬೆಸೆಯುತ್ತಿದೆ.