ಚೆಕಿಂಗ್ ನಂತರ ಕೈತೊಳೆಯಲು ಮರೆಯಬೇಡಿ
ವಿಮಾನ ಪ್ರಯಾಣದಲ್ಲಿ ನಾವು ಸಾಮಾನ್ಯವಾಗಿ ವಿಮಾನದ ಸುರಕ್ಷತೆ, ಸಮಯ ಮತ್ತು ವಸ್ತುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಆರೋಗ್ಯದ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಭದ್ರತಾ ತಪಾಸಣೆಯ ನಂತರ ಸಮಯವನ್ನು ಕಾಯ್ದಿರಿಸಿ ಕೈಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸೋಂಕಿನ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ.
- ಕೆ.ಎಂ. ಪವಿತ್ರಾ
ಇಂದಿನ ವೇಗದ ಜೀವನದಲ್ಲಿ ವಿಮಾನ ಪ್ರಯಾಣವು ಸಾಮಾನ್ಯವಾಗಿದೆ. ದೇಶ-ವಿದೇಶಗಳಿಗೆ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ತಲುಪಿದ ಕ್ಷಣದಿಂದಲೇ ಪ್ರಯಾಣಿಕರು ಚೆಕ್-ಇನ್, ವಸ್ತುಗಳ ಪರಿಶೀಲನೆ ಮತ್ತು ಭದ್ರತಾ ತಪಾಸಣೆಯಂಥ ಪ್ರಕ್ರಿಯೆಗಳಲ್ಲಿ ನಿರತರಾಗಿರುತ್ತಾರೆ. ಈ ಆತುರದಲ್ಲಿ ಬಹುತೇಕ ಎಲ್ಲರೂ ಕಡೆಗಣಿಸುವ ಒಂದು ಮಹತ್ವದ ಸಂಗತಿಯೆಂದರೆ ಭದ್ರತಾ ತಪಾಸಣೆಯ ನಂತರ ತಮ್ಮ ಕೈಗಳು, ಮೊಬೈಲ್ ಫೋನ್ ಮತ್ತು ಪಾಸ್ಪೋರ್ಟ್ ಅನ್ನು ಸ್ಯಾನಿಟೈಸ್ ಮಾಡುವುದು.
ಭದ್ರತಾ ತಪಾಸಣೆಯ ವೇಳೆ ಮೊಬೈಲ್ ಫೋನ್, ಪಾಸ್ಪೋರ್ಟ್, ಲ್ಯಾಪ್ಟಾಪ್, ಬೆಲ್ಟ್, ಗಡಿಯಾರ, ಬ್ಯಾಗ್ ಮುಂತಾದ ವಸ್ತುಗಳನ್ನು ಪ್ಲಾಸ್ಟಿಕ್ ಟ್ರೇಗಳಲ್ಲಿ ಇಡಲಾಗುತ್ತದೆ. ಈ ಟ್ರೇಗಳನ್ನು ದಿನವಿಡೀ ಸಾವಿರಾರು ಪ್ರಯಾಣಿಕರು ಬಳಸುತ್ತಾರೆ. ಅವುಗಳನ್ನು ಪ್ರತಿಯೊಂದು ಬಳಕೆಯ ನಂತರ ಸ್ವಚ್ಛಗೊಳಿಸುವುದು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಶೂಗಳನ್ನು ಇಟ್ಟ ಟ್ರೇಯಲ್ಲೇ ಕೆಲವೇ ಕ್ಷಣಗಳಲ್ಲಿ ಮತ್ತೊಬ್ಬರು ತಮ್ಮ ಮೊಬೈಲ್ ಅಥವಾ ಪಾಸ್ಪೋರ್ಟ್ ಅನ್ನು ಇಡಬಹುದು. ಕೆಲವರ ಬ್ಯಾಗ್ಗಳು ಶೌಚಾಲಯದ ನೆಲವನ್ನು ಸ್ಪರ್ಶಿಸಿರಬಹುದು. ಇಂಥ ಪರಿಸ್ಥಿತಿಯಲ್ಲಿ ಟ್ರೇಗಳ ಮೇಲೆ ವಿವಿಧ ರೀತಿಯ ಬ್ಯಾಕ್ಟೀರಿಯಾ, ವೈರಸ್ ಹಾಗೂ ಇತರ ಸೂಕ್ಷ್ಮಜೀವಿಗಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಫೋನ್ ಮತ್ತು ಪಾಸ್ಪೋರ್ಟ್ ಏಕೆ ಹೆಚ್ಚು ಅಪಾಯದಲ್ಲಿವೆ?
- ಫೋನ್ ನಮ್ಮ ಕೈಯಿಂದ ಮುಖ, ಕಿವಿ ಮತ್ತು ಬಾಯಿಯವರೆಗೆ ನಿರಂತರವಾಗಿ ತಲುಪುತ್ತದೆ. ಭದ್ರತಾ ಟ್ರೇಯಲ್ಲಿ ಇಟ್ಟ ನಂತರ ಅದನ್ನು ಸ್ವಚ್ಛಗೊಳಿಸದೆ ಬಳಸಿದರೆ, ಅದರ ಮೇಲಿರುವ ಸೂಕ್ಷ್ಮಜೀವಿಗಳು ನೇರವಾಗಿ ನಮ್ಮ ದೇಹಕ್ಕೆ ತಲುಪುವ ಸಾಧ್ಯತೆ ಇರುತ್ತದೆ.
- ಅದೇ ರೀತಿ ಪಾಸ್ಪೋರ್ಟ್ ಕೂಡ ಅನೇಕ ಅಧಿಕಾರಿಗಳ ಕೈಗಳಲ್ಲಿ ಓಡಾಡುತ್ತದೆ. ಭದ್ರತಾ ಸಿಬ್ಬಂದಿ, ವಲಸೆ ಅಧಿಕಾರಿಗಳು ಮತ್ತು ವಿಮಾನಯಾನ ಸಿಬ್ಬಂದಿ ಅದನ್ನು ಪರಿಶೀಲಿಸುತ್ತಾರೆ. ಹೀಗಾಗಿ ಅದರ ಮೇಲೂ ವಿವಿಧ ರೀತಿಯ ರೋಗಾಣುಗಳು ಅಂಟಿಕೊಳ್ಳುವ ಸಾಧ್ಯತೆ ಇದೆ.
ಅದೇ ರೀತಿ ವಿಮಾನ ನಿಲ್ದಾಣದಲ್ಲಿರುವ ಭದ್ರತಾ ಟ್ರೇಗಳು ಮಾತ್ರವಲ್ಲ ಬದಲಾಗಿ ಹಲವಾರು ಸಾರ್ವಜನಿಕ ಸ್ಥಳಗಳು ಸೂಕ್ಷ್ಮಜೀವಿಗಳ ತಾಣಗಳಾಗಿರಬಹುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸ್ವಯಂ ಚೆಕ್-ಇನ್ ಕಿಯೋಸ್ಕ್ಗಳ ಟಚ್ ಸ್ಕ್ರೀನ್ಗಳು, ಪಾವತಿ ಯಂತ್ರಗಳು, ಎಸ್ಕಲೇಟರ್ ಮತ್ತು ಮೆಟ್ಟಿಲುಗಳ ರೇಲಿಂಗ್ಗಳು, ಪಾಸ್ಪೋರ್ಟ್ ನಿಯಂತ್ರಣ ಕೌಂಟರ್ಗಳು, ಮಕ್ಕಳ ಆಟದ ಪ್ರದೇಶಗಳು ಮತ್ತು ನಿರೀಕ್ಷಣಾ ಆಸನಗಳ ಕೈದಂಡಗಳು ಈ ಎಲ್ಲ ಸ್ಥಳಗಳನ್ನು ಸಾವಿರಾರು ಜನರು ಪ್ರತಿದಿನ ಸ್ಪರ್ಶಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಕುರಿತು ಕೆಲವು ಸಂಶೋಧನೆಗಳು ನಡೆದಿದೆ
ಸಂಶೋಧನೆ ಏನು ಹೇಳುತ್ತದೆ?
ಫಿನ್ಲ್ಯಾಂಡ್ನ ಹೆಲ್ಸಿಂಕಿ-ವಾಂಟಾ ವಿಮಾನ ನಿಲ್ದಾಣದಲ್ಲಿ ನಡೆದ ಅಧ್ಯಯನದಲ್ಲಿ ಭದ್ರತಾ ಟ್ರೇಗಳು ವಿಮಾನ ನಿಲ್ದಾಣದ ಅತ್ಯಂತ ಕಲುಷಿತ ಮೇಲ್ಮೈಗಳಲ್ಲಿ ಒಂದಾಗಿವೆ ಎಂದು ತಿಳಿದುಬಂದಿದೆ. ಪರೀಕ್ಷಿಸಿದ ಮೇಲ್ಮೈಗಳಲ್ಲಿ ಸುಮಾರು 10% ರಷ್ಟು ವೈರಸ್ಗಳ ಕುರುಹುಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಸಾಮಾನ್ಯ ನೆಗಡಿಗೆ ಕಾರಣವಾಗುವ ರೈನೋವೈರಸ್ ಮತ್ತು ಇನ್ಫ್ಲುಯೆನ್ಸ ವೈರಸ್ ಕೂಡ ಸೇರಿವೆ.
2019ರಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಸ್ವಯಂ ಚೆಕ್-ಇನ್ ಕಿಯೋಸ್ಕ್ಗಳ ಟಚ್ಸ್ಕ್ರೀನ್ಗಳಲ್ಲಿ ಮನೆಯ ಶೌಚಾಲಯದ ಆಸನಕ್ಕಿಂತಲೂ ಅನೇಕ ಪಟ್ಟು ಹೆಚ್ಚು ಸೂಕ್ಷ್ಮಜೀವಿಗಳು ಕಂಡುಬಂದಿವೆ ಎಂಬುದು ಬಹಿರಂಗವಾಯಿತು. ಇದರಿಂದ ವಿಮಾನ ನಿಲ್ದಾಣದಲ್ಲಿ ಸ್ಪರ್ಶಿಸುವ ಪ್ರತಿಯೊಂದು ಸಾರ್ವಜನಿಕ ಮೇಲ್ಮೈ ಬಗ್ಗೆ ಎಚ್ಚರಿಕೆ ಅಗತ್ಯ ಎಂಬುದು ಸ್ಪಷ್ಟವಾಗುತ್ತದೆ..
ಈ ಅಭ್ಯಾಸಗಳನ್ನು ಪಾಲಿಸಿ:
- ಭದ್ರತಾ ತಪಾಸಣೆಯ ನಂತರ ತಕ್ಷಣವೇ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು.
- ನಿಮ್ಮ ಮೊಬೈಲ್ ಫೋನ್, ಪಾಸ್ಪೋರ್ಟ್, ಬೋರ್ಡಿಂಗ್ ಪಾಸ್ ಮತ್ತು ಲ್ಯಾಪ್ಟಾಪ್ ಅನ್ನು ಆಲ್ಕೋಹಾಲ್ ಆಧಾರಿತ ವೈಪ್ನಿಂದ ಸ್ವಚ್ಛಗೊಳಿಸುವುದು.
- ಸಾಧ್ಯವಾದರೆ ಟ್ರೇ ಬಳಸುವ ಮೊದಲು ಅದನ್ನು ಒರೆಸುವುದು.
- ಅನಗತ್ಯವಾಗಿ ಮುಖ, ಕಣ್ಣು ಮತ್ತು ಮೂಗನ್ನು ಮುಟ್ಟುವುದನ್ನು ತಪ್ಪಿಸುವುದು.
- ಆಹಾರವನ್ನು ಸೇವಿಸುವ ಮೊದಲು ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು.
- ಇವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಸೋಂಕಿನಿಂದ ದೂರವಿರಬಹುದು..
ಪ್ರಯಾಣವು ಸಂತೋಷ ಮತ್ತು ಹೊಸ ಅನುಭವಗಳನ್ನು ನೀಡಬೇಕು, ಅನಾರೋಗ್ಯವನ್ನಲ್ಲ. ಆದ್ದರಿಂದ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ನಂತರ ನಿಮ್ಮ ಫೋನ್, ಪಾಸ್ಪೋರ್ಟ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡುವುದು ಒಂದು ಉತ್ತಮ ಆರೋಗ್ಯ ಅಭ್ಯಾಸ. ಈ ಚಿಕ್ಕ ಕ್ರಮವು ನಿಮ್ಮನ್ನು ಮಾತ್ರವಲ್ಲ, ನಿಮ್ಮ ಕುಟುಂಬ ಮತ್ತು ಸಮಾಜವನ್ನೂ ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗುತ್ತದೆ.