Tuesday, October 27, 2026
Tuesday, October 27, 2026

ಮಳೆಗಾಲದಲ್ಲಿ ವೈಭವ ಮೆರೆಯುವ ನೆರೆರಾಜ್ಯಗಳ ಜಲಪಾತಗಳು!

ಮಳೆಗಾಲ ಬಂತೆಂದರೆ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತವೆ. ಕರ್ನಾಟಕದಾಚೆಗೂ ಮಹಾರಾಷ್ಟ್ರ, ಗೋವಾ ಮತ್ತು ಕೇರಳಂಗಳಲ್ಲಿ ಪ್ರಕೃತಿಯ ವೈವಿಧ್ಯವನ್ನು ಹೊತ್ತ ಅಪರೂಪದ ಜಲಧಾರೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಈ ಜಲಪಾತಗಳು ಮಳೆಗಾಲದಲ್ಲಿ ನಿಸರ್ಗದ ವೈಭವವನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ಒದಗಿಸುತ್ತವೆ.

  • ರಮಣ್ ಶೆಟ್ಟಿ ರೆಂಜಾಳ

ಮಳೆಗಾಲ ಬಂತೆಂದರೆ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಅಡಗಿರುವ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತವೆ. ಧುಮ್ಮಿಕ್ಕುವ ಜಲಧಾರೆ, ಹಚ್ಚಹಸಿರಿನ ಕಾನನ, ಮಂಜು ಮುಸುಕಿದ ಬೆಟ್ಟಗಳು ಸೇರಿ ಸೃಷ್ಟಿಸುವ ನಿಸರ್ಗದ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಚೇತೋಹಾರಿ ಅನುಭವ. ಕರ್ನಾಟಕದ ಜೋಗ್‌, ಶಿವನಸಮುದ್ರ, ಗೋಕಾಕದಂಥ ಪ್ರಸಿದ್ಧ ಜಲಪಾತಗಳಾಚೆಗೂ ನೆರೆಯ ಮಹಾರಾಷ್ಟ್ರ, ಗೋವಾ ಮತ್ತು ಕೇರಳಂಗಳಲ್ಲಿ ಒಂದೆರಡು ದಿನಗಳ ಪ್ರವಾಸಕ್ಕೆ ಸೂಕ್ತವಾದ ಅನೇಕ ಅಪರೂಪದ ಜಲಧಾರೆಗಳಿವೆ.

ಇದನ್ನೂ ಓದಿ: ಹಂಪಿಯ ವೈಭವ

ಹಾಲಿನಂತೆ ಧುಮ್ಮಿಕ್ಕುವ ದೂಧ್ ಸಾಗರ್

ಗೋವಾ ಮತ್ತು ಕರ್ನಾಟಕದ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಭಾರತದ ಪ್ರಸಿದ್ಧ ಜಲಪಾತಗಳಲ್ಲೊಂದು. ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಈ ಜಲಪಾತ ಮಾಂಡವಿ ನದಿಯಿಂದ ರೂಪುಗೊಂಡಿದ್ದು, ಸುಮಾರು 310 ಮೀಟರ್ ಎತ್ತರದಿಂದ ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ನೀರು ನೊರೆನೊರೆಯಾಗಿ ಹಾಲಿನಂತೆ ಬಿಳಿಯಾಗಿ ಕಾಣುವುದರಿಂದಲೇ ‘ದೂಧ್ ಸಾಗರ್’ ಎಂಬ ಹೆಸರು ಬಂದಿದೆ.

ಜಲಪಾತದ ಪಕ್ಕದಲ್ಲೇ ಸಾಗುವ ರೈಲುಮಾರ್ಗ ಮತ್ತು ಸೇತುವೆ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಜಲಧಾರೆಯ ಹಿನ್ನೆಲೆಯೊಂದಿಗೆ ಸೇತುವೆಯ ಮೇಲೆ ಸಾಗುವ ರೈಲಿನ ದೃಶ್ಯ ಛಾಯಾಗ್ರಾಹಕರಿಗೆ ವಿಶೇಷ ಆಕರ್ಷಣೆ. ಮಳೆಗಾಲದಲ್ಲಿ ಜಲಪಾತದ ವೈಭವ ಉತ್ತುಂಗದಲ್ಲಿರುತ್ತದೆ. ಮಳೆಗಾಲದ ಬಳಿಕದ ಅಕ್ಟೋಬರ್‌ನಿಂದ ಫೆಬ್ರವರಿವರೆಗೂ ಭೇಟಿ ನೀಡಲು ಸೂಕ್ತ ಸಮಯ.

Untitled Design - 2026-10-27T143624.488

ಗಾಜಿನ ಸೇತುವೆಯ ನಾಪ್ನೆ

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೈಭವವಾಡಿ ತಾಲೂಕಿನ ನಾಪ್ನೆ ಜಲಪಾತ ಪ್ರಕೃತಿ ಮತ್ತು ಆಧುನಿಕ ಪ್ರವಾಸೋದ್ಯಮದ ವಿಶಿಷ್ಟ ಸಂಗಮ. ಜಲಪಾತದ ಮೇಲೆ ನಿರ್ಮಿಸಲಾಗಿರುವ ರಾಜ್ಯದ ಮೊದಲ ಗಾಜಿನ ಸೇತುವೆ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತಿದೆ. 2025ರಿಂದ ಪ್ರವಾಸಿಗರಿಗೆ ಮುಕ್ತವಾಗಿರುವ ಈ ಸ್ಕೈವಾಕ್‌ನಿಂದ ಹಚ್ಚಹಸಿರಿನ ಕಾನನದ ನಡುವೆ ಧುಮ್ಮಿಕ್ಕುವ ಜಲಧಾರೆಯನ್ನು ಸುರಕ್ಷಿತವಾಗಿ ವೀಕ್ಷಿಸಬಹುದು.

ಮಳೆಗಾಲದಲ್ಲಿ ಜಲಪಾತದ ರೌದ್ರ ಸೌಂದರ್ಯ ಹೆಚ್ಚಾಗುತ್ತದೆ. ಸೇತುವೆಯ ವಿಶಿಷ್ಟ ವಿನ್ಯಾಸ, ಬಣ್ಣದ ಕಮಾನುಗಳು ಮತ್ತು ಸುತ್ತಮುತ್ತಲಿನ ಹಸಿರು ಪರಿಸರ ಪ್ರವಾಸಿಗರಿಗೆ ಉತ್ತಮ ಛಾಯಾಚಿತ್ರ ತಾಣವಾಗಿಯೂ ರೂಪುಗೊಂಡಿದೆ.

ರುದ್ರ ರಮಣೀಯ ನಾನೆಮಾಚಿ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ತಾಲೂಕಿನ ಗುಗುಲ್ಷಿ ಗ್ರಾಮದ ದಟ್ಟ ಕಾಡಿನ ನಡುವೆ ನಾನೆಮಾಚಿ ಜಲಪಾತ ಸದ್ದಿಲ್ಲದೆ ಧುಮ್ಮಿಕ್ಕುತ್ತದೆ. ಸುಮಾರು 410 ಅಡಿ ಎತ್ತರದಿಂದ ಒಂದೇ ಧಾರೆಯಾಗಿ ಬೀಳುವ ಬಿಳಿನೊರೆಯ ಜಲಧಾರೆ ಇದರ ಪ್ರಮುಖ ಆಕರ್ಷಣೆ. ಜಲಪಾತದ ಕೆಳಗೆ ರೂಪುಗೊಂಡಿರುವ ನೀರಿನ ಕೊಳವು ವಿವಿಧ ವರ್ಣಗಳಲ್ಲಿ ಹೊಳೆಯುವ ನೋಟ ನೀಡುತ್ತದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಮಹಾಡ್‌ನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಮೂಲಗ್ರಾಮ ತಲುಪಿದ ಬಳಿಕ ಸುಮಾರು 3 ಕಿಮೀ. ಚಾರಣ ಮಾಡಬೇಕು. ಜಾರುವ ಕಾಡುದಾರಿಯಾಗಿರುವುದರಿಂದ ಎಚ್ಚರಿಕೆಯಿಂದ ಸಾಗುವುದು ಅಗತ್ಯ.

Untitled Design - 2026-10-27T143519.029

ಭಂಡಾರ್ದಾರಾದ ರಿವರ್ಸ್ ಜಲಪಾತ

ಮಹಾರಾಷ್ಟ್ರದ ಭಂಡಾರ್ದಾರಾ ಸಮೀಪದ ಸಂಧನ್ ಕಣಿವೆ ಮಳೆಗಾಲದಲ್ಲಿ ಜಲಧಾರೆಗಳ ತಾಣವಾಗುತ್ತದೆ. ಇಲ್ಲಿನ ಸಂಧನ್ ಜಲಪಾತ ‘ರಿವರ್ಸ್ ಜಲಪಾತ’ ಎಂದೇ ಪ್ರಸಿದ್ಧ. ಕಣಿವೆಯೊಳಗಿಂದ ಬೀಸುವ ಬಲವಾದ ಗಾಳಿಯಿಂದ ಕೆಲವೊಮ್ಮೆ ಕೆಳಕ್ಕೆ ಧುಮ್ಮಿಕ್ಕುವ ನೀರು ಮೇಲಕ್ಕೆ ಹಾರುವಂತೆ ಕಾಣುವುದು ಈ ಜಲಪಾತದ ವಿಶಿಷ್ಟತೆ.

ಮುಂಬಯಿಂದ ಸುಮಾರು 200 ಕಿಮೀ. ದೂರದಲ್ಲಿರುವ ಈ ಪ್ರದೇಶ ಎರಡು ದಿನಗಳ ಪ್ರವಾಸಕ್ಕೆ ಸೂಕ್ತ. ಸಮೀಪದ ಸಮೃದ್ ಗ್ರಾಮದಲ್ಲಿ ಹೋಮ್‌ಸ್ಟೇ ಸೌಲಭ್ಯಗಳಿದ್ದು, ಭಂಡಾರ್ದಾರಾದಲ್ಲಿ ಹೊಟೇಲ್ ಮತ್ತು ರೆಸಾರ್ಟ್‌ಗಳೂ ದೊರೆಯುತ್ತವೆ.

ಮಹಾರಾಷ್ಟ್ರದ ‘ಚಿರಾಪುಂಜಿ’ ಅಂಬೋಲಿ

ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಘಾಟ್ ಮಹಾರಾಷ್ಟ್ರದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಹೀಗಾಗಿ ಇದನ್ನು ‘ಮಹಾರಾಷ್ಟ್ರದ ಚಿರಾಪುಂಜಿ’ ಎಂದೂ ಕರೆಯುತ್ತಾರೆ. ನಿಪ್ಪಾಣಿ–ಸಾವಂತವಾಡಿ ರಸ್ತೆಯಲ್ಲಿರುವ ಅಂಬೋಲಿ ಜಲಪಾತ ಸುಮಾರು 400 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ.

ಮಳೆಗಾಲದಲ್ಲಿ ಹಸಿರಿನ ನಡುವೆ ಧುಮ್ಮಿಕ್ಕುವ ಶ್ವೇತ ಜಲಧಾರೆ ಕಣ್ಮನ ಸೆಳೆಯುತ್ತದೆ. ಜಲಪಾತದ ಬುಡದವರೆಗೆ ಸಾಗಲು ಮೆಟ್ಟಿಲುಗಳ ವ್ಯವಸ್ಥೆಯಿದ್ದು, ಸುತ್ತಮುತ್ತಲಿನ ನಿಸರ್ಗವನ್ನು ಸವಿಯಲು ಕುಟುಂಬ ಸಮೇತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಗೋವಾದಿಂದ ಅಂಬೋಲಿಗೆ ಸುಮಾರು ಎರಡು ಗಂಟೆಗಳ ಪ್ರಯಾಣ.

Untitled Design - 2026-10-27T143223.020

ಒಂಟಿ ಧಾರೆಯ ಭೀರಾ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಭೀರಾ ಗ್ರಾಮದಲ್ಲಿರುವ ಭೀರಾ ಜಲಪಾತವನ್ನು ಸ್ಥಳೀಯರು ದೇವಕುಂಡ ಜಲಪಾತ ಎಂದೂ ಕರೆಯುತ್ತಾರೆ. ಸಹ್ಯಾದ್ರಿಯ ಕಾಡಿನ ನಡುವೆ ಒಂದೇ ಧಾರೆಯಾಗಿ ಧುಮ್ಮಿಕ್ಕುವ ಬಿಳಿನೊರೆಯ ಜಲಧಾರೆ ಇದರ ವಿಶೇಷತೆ. ಜಲಪಾತದ ಕೆಳಗೆ ರೂಪುಗೊಂಡಿರುವ ಹಸಿರು-ನೀಲಿ ನೀರಿನ ಕೊಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ತಮ್ಹಿನಿ ಘಾಟ್ ಸಮೀಪವಿರುವ ಈ ಪ್ರದೇಶ ಚಾರಣ ಮತ್ತು ಛಾಯಾಗ್ರಹಣ ಪ್ರಿಯರಿಗೆ ಇಷ್ಟವಾದ ತಾಣ. ಮಳೆಗಾಲದ ತೀವ್ರ ಹರಿವಿನ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯವಾಗಿರುವುದರಿಂದ ಮಳೆ ಕಡಿಮೆಯಾದ ಬಳಿಕ ಭೇಟಿ ನೀಡುವುದು ಸೂಕ್ತ. ಮುಂಬಯಿಂದ ಸುಮಾರು 120 ಕಿಮೀ. ದೂರದಲ್ಲಿದೆ.

ಮುತ್ತಿನ ಹನಿಗಳ ಆನಯಾಡಿಕುತ್ತು

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಆನಯಾಡಿಕುತ್ತು ಜಲಪಾತ ಬಂಡೆಗಳ ನಡುವೆ ಸುಮಾರು 30 ಮೀಟರ್ ಕೆಳಗೆ ಮುತ್ತಿನ ಹನಿಗಳಂತೆ ಧುಮ್ಮಿಕ್ಕುತ್ತದೆ. ಥೋಮ್ಮನ್‌ಕುತ್ತು ಪರಿಸರ ಪ್ರವಾಸೋದ್ಯಮ ಕೇಂದ್ರದ ಮಾರ್ಗದಲ್ಲಿರುವ ಈ ಜಲಪಾತದ ಸುತ್ತಲೂ ದಟ್ಟ ಕಾನನವಿದೆ. ಬಂಡೆಗಳ ನಡುವೆ ರೂಪುಗೊಂಡಿರುವ ಆಳವಿಲ್ಲದ ನೀರಿನ ಕೊಳಗಳು ಕುಟುಂಬ ಪ್ರವಾಸಿಗರನ್ನು ಸೆಳೆಯುತ್ತವೆ.

Untitled Design - 2026-10-27T143228.063

ಸ್ಥಳೀಯ ನಂಬಿಕೆಯ ಪ್ರಕಾರ, ಹಿಂದೆ ಆನೆಗಳು ಇಲ್ಲಿ ನೀರು ಕುಡಿಯಲು ಬರುತ್ತಿದ್ದವು. ಎರಡು ಆನೆಗಳ ನಡುವಿನ ಕಾದಾಟದಲ್ಲಿ ಒಂದು ಆನೆ ಜಲಪಾತಕ್ಕೆ ಬಿದ್ದು ಮೃತಪಟ್ಟ ಬಳಿಕ ಇದಕ್ಕೆ ‘ಆನಯಾಡಿಕುತ್ತು’ ಎಂಬ ಹೆಸರು ಬಂತಂತೆ. ತೊಡುಪುಳದಿಂದ ಸುಮಾರು 20 ಕಿಮೀ. ದೂರದಲ್ಲಿರುವ ಈ ತಾಣವನ್ನು ಟ್ಯಾಕ್ಸಿ, ಆಟೋ ಅಥವಾ ಸ್ವಂತ ವಾಹನದಲ್ಲಿ ತಲುಪಬಹುದು.

ಮಳೆಗಾಲದ ಈ ಜಲಧಾರೆಗಳು ಕೇವಲ ನೀರು ಧುಮ್ಮಿಕ್ಕುವ ತಾಣಗಳಲ್ಲ. ಹಸಿರು ಬೆಟ್ಟ, ಮಂಜು, ಕಾನನ ಮತ್ತು ಜಲಧಾರೆಯ ಸಂಗಮದಲ್ಲಿ ಪ್ರಕೃತಿ ತನ್ನ ವೈಭವವನ್ನು ಅನಾವರಣಗೊಳಿಸುವ ತಾಣಗಳು. ಆದರೆ, ಮಳೆಗಾಲದ ಪ್ರವಾಸದಲ್ಲಿ ಜಾರುವ ದಾರಿ, ಪ್ರವಾಹ ಮತ್ತು ನೀರಿನ ರಭಸವನ್ನು ಗಮನಿಸಿ ಸ್ಥಳೀಯರ ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ