Tuesday, October 27, 2026
Tuesday, October 27, 2026

ಹಂಪಿಯ ವೈಭವ

ರಾಜವೈಭವದ ಗತಕಾಲವನ್ನು ಕಲ್ಲು-ಕೆತ್ತನೆಗಳ ಮೂಲಕ ಕಣ್ಣೆದುರು ತೆರೆದಿಡುವ ಹಂಪಿ, ಪ್ರತಿಯೊಂದು ಹೆಜ್ಜೆಯಲ್ಲೂ ಇತಿಹಾಸದ ಕಥೆ ಹೇಳುವ ಅದ್ಭುತ ತಾಣ. ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಕುರುಹುಗಳ ನಡುವೆ ನಡೆದಾಡಿದ ಈ ಪ್ರವಾಸ ಲೇಖಕಿಯ ಪಾಲಿಗೆ ಮತ್ತಷ್ಟು ವಿಶೇಷವಾಗಿದ್ದು, ಇದು ಅವರ ಮೊದಲ ಸೋಲೋ ಟ್ರಿಪ್. ದೇವಾಲಯಗಳು, ಬಜಾರ್‌ಗಳು, ಬೆಟ್ಟಗಳು ಹಾಗೂ ರಾಮಾಯಣದ ನೆನಪುಗಳೊಂದಿಗೆ ಹಂಪಿ ನೀಡಿದ ಅನುಭವ ಮರೆಯಲಾಗದಂತದ್ದು.

  • ಸಿರಿ ಮೈಸೂರು

ಸಾಮಾನ್ಯವಾಗಿ ರಾಜವೈಭೋಗದ ಗತವೈಭವವನ್ನು ನೆನಪಿಸುವ ಸ್ಥಳಗಳೆಂದರೆ ಬಹಳ ಇಷ್ಟ. ನಮ್ಮ ಕರ್ನಾಟಕದಲ್ಲೇ ಇರುವಂಥ ಪ್ರಮುಖ ಸ್ಥಳ ಹಂಪಿ. ಇಲ್ಲಿ ಒಂದೊಂದು ಕಲ್ಲು, ಒಂದೊಂದು ಕೆತ್ತನೆ, ಒಂದೊಂದು ಸ್ಮಾರಕ, ಒಂದೊಂದು ತಿರುವೂ ಒಂದೊಂದು ಕಥೆಗಳನ್ನು ಹೇಳುತ್ತವೆ. ನೋಡಿದಲ್ಲೆಲ್ಲಾ ಕಾಣುವುದು ದೊಡ್ಡ ಬಂಡೆಗಳು ಮಾತ್ರವಲ್ಲ, ವಿಜಯನಗರ ಸಾಮ್ರಾಜ್ಯದ ವೈಭವದ ಕುರುಹುಗಳು, ಹಂಪಿಯ ಕಳೆದುಹೋದ ಭವ್ಯತೆಯ ಪಳೆಯುಳಿಕೆಗಳು. ದ್ವೇಷ, ಯುದ್ಧಕ್ಕೆ ನಾಶವಾದ ಅತ್ಯಂತ ಸುಂದರ ಕಲ್ಲಿನ ರಚನೆಗಳು. ನನಗೆ ಈ ಹಂಪಿ ಪ್ರವಾಸ ಇನ್ನೂ ವಿಶೇಷವಾಗುವುಕ್ಕೆ ಮತ್ತೊಂದು ಕಾರಣ ಇದು ನನ್ನ ಮೊದಲ ಸೋಲೋ‌ ಟ್ರಿಪ್!

ಇದನ್ನೂ ಓದಿ: ಹಾವೇರಿಯ ಕಲ್ಲುಗಳಲ್ಲೂ ಕಥೆಯಿದೆ, ಮಣ್ಣಿಗೂ ಘಮವಿದೆ!

16ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಹಂಪಿಯನ್ನು ಆಳುತ್ತಿದ್ದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಪೋರ್ಚುಗೀಸ್‌ ಪ್ರವಾಸಿ ಡಾಮಿಂಗೋ ಪೇಸ್‌ ಈ ಸ್ಥಳವನ್ನು ʼರಿಚರ್‌ ದೆನ್‌ ರೋಮ್‌ʼ ಎಂದು ಕರೆದಿದ್ದನಂತೆ. ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡುತ್ತಿದ್ದುದನ್ನು ನೋಡಿ ನಿಬ್ಬೆರಗಾದ ಆತ ಈ ರೀತಿ ಹೇಳಿದ್ದ. ವಾಸ್ತವದಲ್ಲಿ ಅದು ಸುಳ್ಳೇನೂ ಅಲ್ಲ. ಅಷ್ಟು ವೈಭವದಿಂದ ಕೂಡಿತ್ತು ಹಂಪಿ. ಅಷ್ಟು ವರ್ಷಗಳ ಕಾಲ ಆಸ್ಥೆಯಿಂದ ನಿರ್ಮಾಣವಾದ ಇಡೀ ನಗರ 1565ರ ತಾಳಿಕೋಟೆಯ ಯುದ್ಧದ ನಂತರ ನಾಶವಾಯಿತು. ಆಗ ಹಂಪಿಯ ಪ್ರಮುಖ ಭಾಗಗಳು ನಾಶವಾಗಿರದಿದ್ದರೆ ಇಂದು ನಾವು ಇನ್ನೆಷ್ಟು ವೈಭವವನ್ನು ಕಣ್ತುಂಬಿಕೊಳ್ಳಬಹುದಿತ್ತೋ ಎಂಬುದನ್ನು ಊಹೆ ಮಾಡಿಕೊಂಡರೆ ಮೈ ರೋಮಾಂಚನವಾಗುತ್ತದೆ. ನಾಶವಾಗದೆ ಉಳಿದ ಈ ನಗರದ ಭಾಗಗಳು ಈಗ ಯುನೆಸ್ಕೋ ವರ್ಲ್ಡ್‌ ಹೆರಿಟೇಜ್‌ ಸೈಟ್‌ಗಳು.

Untitled Design - 2026-10-27T131108.176

ಮೊದಲ ದಿನದ ಹಂಪಿ ದರ್ಶನ

ಹಂಪಿ ತಲುಪಿದಾಕ್ಷಣ ನಾನು ಎಡತಾಕಿದ್ದು ವಿರೂಪಾಕ್ಷ ದೇವಾಲಯಕ್ಕೆ. ದೂರದಿಂದಲೇ ಕೈಬೀಸಿ ಕರೆಯುವ ಈ ಬೃಹತ್‌ ಗೋಪುರದ ಒಳಗೆ ಹೋದರೆ ಮತ್ತಷ್ಟು ಗೋಪುರಗಳು ಕಾಣಿಸುತ್ತವೆ. ಒಳಗೆ ದೇವರ ದರ್ಶನ ಮಾಡುವ ಜತೆಗೆ ಪಿನ್‌ಹೋಲ್‌ ತಂತ್ರಜ್ಞಾನವನ್ನು ನೋಡಿ ನಿಬ್ಬೆರಗಾಗಿದ್ದಾಯ್ತು. ಒಂದು ಸಣ್ಣ ಕಿಂಡಿಯಿಂದ ದೇವಾಲಯದ ಗೋಪುರ ಕಾಣಿಸುತ್ತದೆ. ಆದರೆ, ಅದರ ಎದುರಿನ ಗೋಡೆಯ ಮೇಲೆ ಬೀಳುವ ನೆರಳು ಮಾತ್ರ ತಲೆಕೆಳಗಾಗಿ ಕಾಣುತ್ತದೆ. ಅಲ್ಲದೆ ಆ ನೆರಳು ನೆರಳಿನಂತಲ್ಲದೆ ವರ್ಣಚಿತ್ರದಂತೆ ಕಾಣುತ್ತದೆ! 1300 ವರ್ಷಗಳ ಹಿಂದೆ ಅದ್ಹೇಗೆ ಈ ತಂತ್ರಜ್ಞಾನ ಮಾಡಿದ್ದರೋ ತಿಳಿಯದು. ಗೋಪುರದ ತುತ್ತತುದಿಯನ್ನು ಮುಟ್ಟಲು ಸಾಧ್ಯವಾಗದ ಕಾರಣ ಇಲ್ಲಿನ ಪ್ರತಿಬಿಂಬದಲ್ಲಿ ಅದನ್ನು ಮುಟ್ಟಿ ನಮಸ್ಕರಿಸಿಕೊಳ್ಳಬಹುದು. ವಿಶಾಲವಾದ ದೇವಸ್ಥಾನದಲ್ಲೆಲ್ಲಾ ಪುರಾತನ ಕೆತ್ತನೆಗಳು, ಗೋಪುರಗಳೇ ಇವೆ. ದೇವಸ್ಥಾನದ ಮುಂದೆಯೇ ಆಗಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಹಂಪಿ ಬಜಾರ್‌ ನೋಡಬಹುದು. ಇಲ್ಲೇ ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳನ್ನೂ ಮಾರಾಟ ಮಾಡುತ್ತಿದ್ದುದು. ಇದೇ ರೀತಿ ಸುತ್ತಮುತ್ತಲೂ ನಾಲ್ಕೈದು ಬಜಾರ್‌ಗಳಿವೆ. ಇದಾದ ನಂತರ ವಿವಿಧ ವ್ಯಾಪಾರಿಗಳು ನಿರ್ಮಿಸಿರುವ ಸಾಸಿವೆಕಾಳು ಗಣೇಶ, ಕಡಲೆಕಾಳು ಗಣೇಶ ದೇವಸ್ಥಾನಗಳೂ ಬಂಡೆಗಳ ನಡುವೆ ವಿರಾಜಮಾನವಾಗಿವೆ. ಅದರಲ್ಲೂ ಸಾಸಿವೆಕಾಳು ಗಣೇಶನ ಸುತ್ತ ಇರುವ ಕಲ್ಲಿನ ಮಂಟಪವನ್ನು ನೋಡುವುದೇ ಖುಷಿ. ಅಲ್ಲೇ ಇರುವ ಕೃಷ್ಣ ದೇವಸ್ಥಾನ ಹಾಗೂ ಹಜಾ಼ರ ರಾಮ ದೇವಸ್ಥಾನದಲ್ಲಿನ ಕೆತ್ತನೆಗಳನ್ನು ನೋಡಲು ಎರಡು ಕಣ್ಣು ಸಾಲದು. ರಾಮನ ಗುಡಿಯಲ್ಲೆಲ್ಲಾ ಇಡೀ ರಾಮಾಯಣವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ ಎಂದರೆ ನೀವು ನಂಬಲೇಬೇಕು! ಅಲ್ಲೇ ಆನತಿ ದೂರದಲ್ಲಿ ಪ್ರಸಿದ್ಧ ಲಕ್ಷ್ಮೀ ನರಸಿಂಹ ಹಾಗೂ ಬಡವಿಲಿಂಗವನ್ನೂ ನೋಡಬಹುದು. ನರಸಿಂಹನ ತೊಡೆಯಮೇಲಿನ ಲಕ್ಷ್ಮೀಯನ್ನು ನಾಶ ಮಾಡಿರುವ ಕಾರಣ ಇದನ್ನು ಜನರು ಉಗ್ರನರಸಿಂಹ ಎಂದು ತಪ್ಪಾಗಿ ಭಾವಿಸುತ್ತಾರೆ.

ಹಂಪಿಯ ದೇವಾಲಯದ ಬಳಿಯಿಂದ ಸ್ವಲ್ಪ ದೂರ ಹೋದರೆ ಲೋಟಸ್‌ ಮಹಲ್‌, ಆನೆ ಲಾಯಗಳು, ಗಾರ್ಡ್‌ ಹೌಸ್‌ಗಳನ್ನು ನೋಡಬಹುದು. ಆಗಿನ ಕಾಲದಲ್ಲಿ ದಸರಾ ನೋಡಲು ನಿರ್ಮಿಸಿದ್ದ ಮಹಾನವಮಿ ದಿಬ್ಬ, ಅಪರೂಪದ ಕಪ್ಪು ಕಲ್ಲಿನಿಂದ ನಿರ್ಮಿಸಿರುವ ಪುಷ್ಕರಣಿ, ಭೂಮಟ್ಟದಿಂದ ಕೆಳಗಿರುವ ಪ್ರಸನ್ನ ವಿರೂಪಾಕ್ಷ ದೇವಾಲಯ, ಗೋದಾಮು, ಅರಮನೆ ಸೇರಿದಂತೆ ಇನ್ನೂ ಹಲವಾರು ಕಟ್ಟಡಗಳ ಉಳಿದಿರುವ ಪಾಯಗಳನ್ನು ನೋಡುತ್ತಿದ್ದರೆ ಆಗಿನ ಕಾಲದಲ್ಲಿ ವಿಜಯನಗರ ಅದೆಷ್ಟು ಸಮೃದ್ಧಿಯಾಗಿತ್ತು ಎಂದು ಅರಿವಾಗುತ್ತದೆ. ಪ್ರಸನ್ನ ವಿರೂಪಾಕ್ಷ ದೇವಾಲಯದ ಎದುರೆ ಇರುವ ಭೋಜನ ಶಾಲೆಯೂ ಇಲ್ಲಿನ ಪ್ರಮುಖ ಆಕರ್ಷಣೆ. ಎರಡು ಸಾಲಿನಲ್ಲಿ (ಒಂದರ ಮುಂದೆ ಇನ್ನೊಂದು) ಕಪ್ಪು ಕಲ್ಲಿನ ಸಾಲನ್ನಿಟ್ಟು ಅದರಲ್ಲಿ ಬಾಳೆ ಎಲೆ, ತಟ್ಟೆ, ಲೋಟಗಳನ್ನು ಇಡಲು ಅದೇ ಆಕಾರದಲ್ಲಿ ಗುಳಿಗಳನ್ನು ಮಾಡಲಾಗಿದೆ. ಅದನ್ನು ನೋಡಿ ಈಗಿನ ಡೈನಿಂಗ್‌ ಟೇಬಲ್‌ಗಳು ನೆನಪಾದವು. ಇನ್ನು ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋದರೆ ಅಲ್ಲಿ ಒಂದೊಂದು ಕಂಬದಲ್ಲಿ ಒಂದೊಂದು ಸಂಗೀತ. ಅದ್ಭುತವಾದ ಕಲ್ಲಿನ ರಥ (50 ರು. ನೋಟಿನ ಮೇಲಿರುವುದು), 150 ವರ್ಷಗಳ ಸಂಪಿಗೆ ಮರ, ಗೋಡೆಗಳ ಮೇಲೆಲ್ಲಾ ರಾಮಾಯಣದ ಕೆತ್ತನೆಗಳು, ಆಹಾ! ವರ್ಣಿಸಿದಷ್ಟೂ ಉಳಿಯುತ್ತದೆ ಈ ದೇವಸ್ಥಾನದ ವೈಭವ.

Untitled Design - 2026-10-27T131113.116

ಹಂಪಿ ಹಾಗೂ ರಾಮಾಯಣದ ನಂಟು

ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುವ ಪಯಣದಲ್ಲಿ ಮಧ್ಯೆ 4 ತಿಂಗಳುಗಳ ಕಾಲ ಹಂಪಿಯಲ್ಲಿ ಉಳಿದಿದ್ದರಂತೆ. ಆ ಕಾರಣಕ್ಕೆ ಇಲ್ಲಿ ರಾಮಾಯಣದ ಕುರುಹಾದ ಸಾಕಷ್ಟು ಸ್ಥಳಗಳಿವೆ. ರಾಮ, ಲಕ್ಷ್ಮಣ, ಹನುಮಂತ ಹಾಗೂ ಸುಗ್ರೀವರು ಮೊದಲ ಬಾರಿ ಭೇಟಿ ಮಾಡಿದ ಗುಹೆ, ರಾಮ ವಾಲಿಯನ್ನು ವಧಿಸಿದ ಸ್ಥಳ, ಪಂಪಾ ಸರೋವರದ ಬಳಿ ಶಬರಿಯ ಆಶ್ರಮ, ಹನುಮಂತ ಹುಟ್ಟಿದ ಅಂಜನಾದ್ರಿ ಬೆಟ್ಟ, ರಾಮ ಶಿವನನ್ನು ಪ್ರತಿಷ್ಠಾಪಿಸಿ ಲಕ್ಷ್ಮಣ ಬಾಣ ಬಿಟ್ಟು ನೀರು ತೆಗೆದ ಮಾಲ್ಯವಂತ ಪರ್ವತ (ಇಡೀ ಪ್ರಪಂಚದಲ್ಲಿ ಇಲ್ಲೊಂದೇ ಸ್ಥಳದಲ್ಲಿ ರಾಮ ಕುಳಿತಿರುವ ವಿಗ್ರಹ ಇರುವುದು). ಹೀಗೆ ರಾಮಾಯಣದ ಕುರುಹಾಗಿ ಸಾಕಷ್ಟು ಸ್ಥಳಗಳು ಇಲ್ಲಿವೆ.

ಹಂಪಿಯಲ್ಲಿ ಸೂರ್ಯೋದಯ, ಸೂರ್ಯಾಸ್ತ ನೋಡಬೇಕೆಂದರೆ ಮಾಲ್ಯವಂತ ಪರ್ವತ, ಮಾತಂಗ ಬೆಟ್ಟ, ಹೇಮಕೂಟ ಪರ್ವತ, ಅಂಜನಾದ್ರಿ ಪರ್ತಕ್ಕೆ ಹೋಗಬಹುದು. ನಾನು ಬೆಳಗ್ಗೆ ಬಿಸಿಲು ಶುರುವಾಗುವ ವೇಳೆಗೆ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರಿ ಆಗಿದ್ದ ಸುಸ್ತನ್ನು ಸಂಜೆ ಹೇಮಕೂಟದಲ್ಲಿ ಸೂರ್ಯಾಸ್ತ ನೋಡುವಾಗ ಪರಿಹರಿಸಿಕೊಂಡೆ. ಯಾವ ಪರ್ವತದಿಂದ ನೋಡಿದರೂ ಕೆಳಗೆ ಹಂಪಿ ಭವ್ಯವಾಗಿ ಕಾಣುತ್ತದೆ. ಬಂಡೆಗಳ ಮಧ್ಯೆ ಇರುವ ಮನುಕುಲ ಸೃಷ್ಟಿಸಿದ ಅದ್ಭುತ, ವಿಜಯನಗರ ಸಾಮ್ರಾಜ್ಯದ ಉತ್ಕೃಷ್ಟತೆಯ ಕುರುಹು ವಿಜಯನಗರ ಜಿಲ್ಲೆಯ ಹಂಪಿ. ನೀವೂ ಸೋಲೋ ಮಹಿಳಾ ಟ್ರಾವಲರ್‌ ಆಗಿದ್ದರೆ ಹೊಸಪೇಟೆಯಲ್ಲೇ ಉಳಿದು ಅಲ್ಲಿಂದ ಮೂವತ್ತು ನಿಮಿಷ ದೂರವಿರುವ ಹಂಪಿಗೆ ಓಡಾಡಬಹುದು. ಅಥವಾ ಹಾಸ್ಟೆಲ್‌, ಏರ್‌ ಬಿಎನ್‌ಬಿಗಳಲ್ಲಿ ಉಳಿಯುತ್ತೇನೆಂದರೆ ಅದಕ್ಕೆ ಹಂಪಿಯಲ್ಲೇ ಸಾಕಷ್ಟು ಅನುಕೂಲಗಳಿವೆ. ‌ಈ ನಗರದಲ್ಲಿ ಅದೆಷ್ಟು ನಡೆದಾಡಬೇಕೆಂದರೆ, ಬರುವ ಮೊದಲೇ ಮನಸನ್ನು ಅದಕ್ಕಾಗಿ ಸಜ್ಜುಗೊಳಿಸಿಕೊಳ್ಳಬೇಕು. ಒಟ್ಟಿನಲ್ಲಿ ಹಂಪಿಯ ಭೇಟಿ ನಿಮ್ಮ ಮನಸಿನಲ್ಲಿ ಸದಾ ಉಳಿಯುವುದು ಖಚಿತ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..