Tuesday, October 27, 2026
Tuesday, October 27, 2026

ಪರಿಸರಕ್ಕೆ ಹಾನಿಯಾಗದ, ಜೇಬಿಗೂ ಹೊರೆಯಾಗದ ಐದು ದೇಶಗಳು

ವಿಯೆಟ್ನಾಂ, ಕಡಿಮೆ ಬಜೆಟ್‌ನಲ್ಲಿ ಅದ್ಭುತ ಪರಿಸರ ಪ್ರವಾಸದ ಅನುಭವ ನೀಡುತ್ತದೆ. ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರೈಲು ಪ್ರಯಾಣ ಮತ್ತು ಸೈಕ್ಲಿಂಗ್ ಅತ್ಯಂತ ಜನಪ್ರಿಯ ಹಾಗೂ ಪರಿಸರ ಸ್ನೇಹಿ ಆಯ್ಕೆಗಳು. ಉತ್ತರ ವಿಯೆಟ್ನಾಂನ ಸಾಪಾ ಕಣಿವೆಯ ಭತ್ತದ ಮೆಟ್ಟಿಲು ಗದ್ದೆಗಳಲ್ಲಿ ನಡೆಯುವ ಟ್ರೆಕ್ಕಿಂಗ್ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳ ಜತೆಗಿನ ಹೋಮ್‌ಸ್ಟೇ ವಾಸ್ತವ್ಯಗಳು ಸ್ಥಳೀಯ ಸಂಸ್ಕೃತಿಯನ್ನು ಹತ್ತಿರದಿಂದ ಪರಿಚಯಿಸುತ್ತವೆ.

ತಿರುಗಿ ಕೆಟ್ಟವರಿಲ್ಲವೋ

ಪರಿಸರಕ್ಕೆ ಹಾನಿಯಾಗದ, ಜೇಬಿಗೂ ಹೊರೆಯಾಗದ ಐದು ದೇಶಗಳು

'ಪ್ರವಾಸಿ ಪ್ರಪಂಚ'ದ ಓದುಗರಾದ ಮೇಘನಾ ನಾರಾಯಣ ಅವರು ಇತ್ತೀಚೆಗೆ 'ಪರಿಸರಕ್ಕೆ ಹಾನಿಯಾಗದಂತೆ, ನಿಸರ್ಗದ ಮಡಿಲಲ್ಲೇ ಕಳೆದುಹೋಗುತ್ತಾ, ಜೇಬಿಗೂ ಹೊರೆಯಾಗದಂತೆ ಪ್ರವಾಸ ಮಾಡಬಹುದಾದ ಐದು ದೇಶಗಳನ್ನು ಸೂಚಿಸುವುದಾದರೆ ನಿಮ್ಮ ಆಯ್ಕೆ ಯಾವುದು?' ಎಂದು ಕೇಳಿದರು.

ಅಂಥ ಮಿತವ್ಯಯದ ಹಾಗೂ ಸುಸ್ಥಿರ ‘ಗ್ರೀನ್‌ ಟ್ರಾವೆಲ್‌’ಗೆ ಹೇಳಿಮಾಡಿಸಿದ, ನಾನು ಭೇಟಿ ನೀಡಿದ, ಜಗತ್ತಿನ ಪ್ರಮುಖ ಆ ಐದು ದೇಶಗಳ ಬಗ್ಗೆ ಸಣ್ಣ ಟಿಪ್ಪಣಿ ಕೊಡುತ್ತೇನೆ.

ಮೊದಲನೆಯದು, ನೆರೆಯ ನೇಪಾಳ. ನೇಪಾಳವು ಕಡಿಮೆ ಖರ್ಚಿನಲ್ಲಿ ಸುಸ್ಥಿರ ಪ್ರವಾಸ ಕೈಗೊಳ್ಳಲು ವಿಶ್ವದಲ್ಲೇ ಅತ್ಯುತ್ತಮ ತಾಣ. ಇಲ್ಲಿನ ಪ್ರಮುಖ ಆಕರ್ಷಣೆಯಾದ ಟ್ರೆಕ್ಕಿಂಗ್‌ಗೆ ವಿಮಾನ ಅಥವಾ ವಾಹನಗಳ ಬದಲಿಗೆ ಕಾಲ್ನಡಿಗೆಯೇ ಮುಖ್ಯ ಮಾಧ್ಯಮವಾಗಿರುವುದರಿಂದ ಇಂಗಾಲದ ಹೊರಸೂಸುವಿಕೆ ತೀರಾ ಕಡಿಮೆ. ಅನ್ನಪೂರ್ಣ ಅಥವಾ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಮಾರ್ಗಗಳಲ್ಲಿ ಸ್ಥಳೀಯರೇ ನಡೆಸುವ ಸಾಂಪ್ರದಾಯಿಕ 'ಟೀ-ಹೌಸ್‌'ಗಳು ಲಭ್ಯವಿದ್ದು, ಇವು ಸ್ಥಳೀಯ ಆರ್ಥಿಕತೆಗೆ ನೇರ ನೆರವು ನೀಡುತ್ತವೆ. ಸ್ಥಳೀಯ ಸಾವಯವ ದಾಲ್-ಭಾತ್ ಊಟ, ಸಮುದಾಯ ಆಧಾರಿತ ಹೋಮ್‌ಸ್ಟೇಗಳು ಮತ್ತು ಪ್ಲಾಸ್ಟಿಕ್ ಮುಕ್ತ ನಡಿಗೆಯನ್ನು ಪ್ರೋತ್ಸಾಹಿಸುವ ನಿಯಮಗಳು ನೇಪಾಳವನ್ನು ಅಪ್ಪಟ ಪರಿಸರ ಸ್ನೇಹಿ ಹಾಗೂ ಬಜೆಟ್ ಸ್ನೇಹಿ ತಾಣವನ್ನಾಗಿಸಿವೆ.

ಇದನ್ನೂ ಓದಿ: ಬರುವವರಿಗಿಂತ ಹೋಗುವವರೇ ಹೆಚ್ಚು: ಭಾರತೀಯ ಪ್ರವಾಸೋದ್ಯಮಕ್ಕೇನಾಗಿದೆ?

ಎರಡನೆಯದಾಗಿ, ವಿಯೆಟ್ನಾಂ. ಇದು ಕಡಿಮೆ ಬಜೆಟ್‌ನಲ್ಲಿ ಅದ್ಭುತ ಪರಿಸರ ಪ್ರವಾಸದ ಅನುಭವ ನೀಡುತ್ತದೆ. ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರೈಲು ಪ್ರಯಾಣ ಮತ್ತು ಸೈಕ್ಲಿಂಗ್ ಅತ್ಯಂತ ಜನಪ್ರಿಯ ಹಾಗೂ ಪರಿಸರ ಸ್ನೇಹಿ ಆಯ್ಕೆಗಳು. ಉತ್ತರ ವಿಯೆಟ್ನಾಂನ ಸಾಪಾ ಕಣಿವೆಯ ಭತ್ತದ ಮೆಟ್ಟಿಲು ಗದ್ದೆಗಳಲ್ಲಿ ನಡೆಯುವ ಟ್ರೆಕ್ಕಿಂಗ್ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳ ಜತೆಗಿನ ಹೋಮ್‌ಸ್ಟೇ ವಾಸ್ತವ್ಯಗಳು ಸ್ಥಳೀಯ ಸಂಸ್ಕೃತಿಯನ್ನು ಹತ್ತಿರದಿಂದ ಪರಿಚಯಿಸುತ್ತವೆ. ಇಲ್ಲಿನ ಪ್ರಸಿದ್ಧ ಸ್ಟ್ರೀಟ್ ಫುಡ್ ಸಂಪೂರ್ಣವಾಗಿ ತಾಜಾ ಕೃಷಿ ಉತ್ಪನ್ನಗಳಿಂದ ಕೂಡಿರುತ್ತದೆ. ಕಡಿಮೆ ವೆಚ್ಚದ ಬಿದಿರಿನ ಪರಿಸರ-ರೆಸಾರ್ಟ್‌ಗಳು ಮತ್ತು ಸಮುದಾಯ ಪ್ರವಾಸೋದ್ಯಮ ಇಲ್ಲಿನ ಹಸಿರು ಪ್ರವಾಸವನ್ನು ಇನ್ನಷ್ಟು ಆಕರ್ಷಕವಾಗಿಸಿವೆ.

Untitled Design - 2026-10-27T115134.137

ಮೂರನೆಯದಾಗಿ, ಜಾರ್ಜಿಯಾ. ಪಶ್ಚಿಮ ದೇಶಗಳಿಗೆ ಹೋಲಿಸಿದರೆ ಇದು, ಅತ್ಯಂತ ಕಡಿಮೆ ಖರ್ಚಿನ ಹಾಗೂ ಅದ್ಭುತ ಪರಿಸರ ಸ್ನೇಹಿ ದೇಶ. ಕಾಕಸ್ ಪರ್ವತ ಶ್ರೇಣಿಗಳ ಪ್ರಾಕೃತಿಕ ಸೊಬಗು, ಸ್ವಚ್ಛ ನೀರಿನ ನದಿಗಳು ಮತ್ತು ಕಾಡುಗಳು ಪ್ರಕೃತಿ ಪ್ರಿಯರಿಗೆ ಸ್ವರ್ಗ. ಕಜ್ಬೆಗಿ ಮತ್ತು ಸ್ವೆನೆಟಿಯಂಥ ಪರ್ವತ ಪ್ರದೇಶಗಳಲ್ಲಿ ಹಳ್ಳಿಗಳಿಂದ ಹಳ್ಳಿಗಳಿಗೆ ನಡೆದುಕೊಂಡು ಹೋಗುವ ಹೈಕಿಂಗ್ ಸಂಸ್ಕೃತಿ ಇಲ್ಲಿ ಪ್ರಸಿದ್ಧ. ಜಾರ್ಜಿಯಾದ ಪ್ರಾಚೀನ ‘ಕ್ವೆವ್ರಿ’ (ಮಣ್ಣಿನ ಮಡಕೆ) ಪದ್ಧತಿಯ ನೈಸರ್ಗಿಕ ಸಾವಯವ ವೈನ್ ತಯಾರಿಕೆ ಮತ್ತು ಸಾಂಪ್ರದಾಯಿಕ ಕೃಷಿ ಜೀವನಶೈಲಿ ಪ್ರವಾಸಿಗರಿಗೆ ಪರಿಸರಕ್ಕೆ ಪೂರಕವಾದ, ನೈಸರ್ಗಿಕ ಬದುಕಿನ ಅನುಭವವನ್ನು ಅತ್ಯಂತ ಮಿತವ್ಯಯದಲ್ಲಿ ಒದಗಿಸುತ್ತದೆ.

ನಾಲ್ಕನೆಯದಾಗಿ, ಲಾವೋಸ್. ಆಡಂಬರವಿಲ್ಲದ, ಪ್ರಶಾಂತ ಹಾಗೂ ನೈಸರ್ಗಿಕ ಬದುಕನ್ನು ಪ್ರೀತಿಸುವ ಪರಿಸರ ಪ್ರವಾಸಿಗರಿಗೆ ಲಾವೋಸ್ ಅತ್ಯುತ್ತಮ ಆಯ್ಕೆ. ಮೆಕಾಂಗ್ ನದಿಯ ತೀರದಲ್ಲಿರುವ ಈ ದೇಶವು ಸಮುದಾಯ ಆಧಾರಿತ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ನಾಮ್ ಹಾ ರಾಷ್ಟ್ರೀಯ ಸಂರಕ್ಷಿತ ಪ್ರದೇಶದಲ್ಲಿ ಸ್ಥಳೀಯ ಮಾರ್ಗದರ್ಶಿಗಳೊಂದಿಗೆ ಕಾಡಿನ ನಡಿಗೆ, ನದಿಗಳಲ್ಲಿ ಕಯಾಕಿಂಗ್ ಮತ್ತು ಪರಿಸರ ಸ್ನೇಹಿ ಮರದ ಮನೆಗಳ ವಾಸ್ತವ್ಯಗಳು ಇಲ್ಲಿ ಕೈಗೆಟುಕುವ ದರದಲ್ಲಿ ಲಭ್ಯ. ಪ್ರವಾಸಿಗರು ಸ್ಥಳೀಯ ಹಳ್ಳಿಗಳಲ್ಲೇ ಉಳಿದು, ಅವರು ಬೆಳೆದ ಸಾವಯವ ಆಹಾರ ಸೇವಿಸುವುದರಿಂದ ಪರಿಸರದ ಮೇಲಿನ ಹೊರೆ ಕಡಿಮೆಯಾಗುವುದರ ಜತೆಗೆ ಬುಡಕಟ್ಟು ಜನರ ಜೀವನಕ್ಕೆ ಆಸರೆಯಾಗುತ್ತದೆ.

ಐದನೆಯದಾಗಿ, ಎಸ್ತೋನಿಯಾ. ಉತ್ತರ ಯುರೋಪಿನಲ್ಲೇ ಅತ್ಯಂತ ಸ್ವಚ್ಛ ಹಾಗೂ ಸುಸ್ಥಿರ ‘ಗ್ರೀನ್ ಟ್ರಾವೆಲ್’ಗೆ ಹೇಳಿಮಾಡಿಸಿದ ತಾಣ. ಈ ದೇಶದ ಅರ್ಧಕ್ಕಿಂತ ಹೆಚ್ಚು ಭಾಗವು ದಟ್ಟ ಕಾಡುಗಳು ಮತ್ತು ಪ್ರಾಚೀನ ಜೌಗು ಪ್ರದೇಶಗಳಿಂದ ಆವೃತವಾಗಿದ್ದು, ಯುರೋಪ್‌ನಲ್ಲೇ ಅತ್ಯಂತ ಶುದ್ಧ ಗಾಳಿಯನ್ನು ಹೊಂದಿದೆ. ಇಲ್ಲಿನ ಸೋಮಾ ರಾಷ್ಟ್ರೀಯ ಉದ್ಯಾನವನದ ಜೌಗು ಪ್ರದೇಶಗಳಲ್ಲಿ ಮರದ ಹಲಗೆಯ ಹಾದಿಗಳಲ್ಲಿ ನಡೆಯುವುದು ಹಾಗೂ ಜೌಗು ಬೂಟುಗಳನ್ನು ಧರಿಸಿ ಸಾಗುವುದು ಅದ್ಭುತ ಪರಿಸರ ಸ್ನೇಹಿ ಅನುಭವ. ಪ್ರಕೃತಿ ಪ್ರಿಯರಿಗಾಗಿ ಕಾಡುಗಳಲ್ಲಿ ಉಚಿತ ಕ್ಯಾಂಪಿಂಗ್ ತಾಣಗಳು ಮತ್ತು ಪರಿಸರ ಕುಟೀರ ವ್ಯವಸ್ಥೆಗಳಿವೆ. ಇದು ಪ್ರವಾಸದ ಬಜೆಟ್ ಅನ್ನು ಗಣನೀಯವಾಗಿ ತಗ್ಗಿಸುತ್ತದೆ. ಇಲ್ಲಿನ ಜನರು ಕಾಡುಗಳಲ್ಲಿ ನೈಸರ್ಗಿಕವಾಗಿ ಸಿಗುವ ಹಣ್ಣು-ಅಣಬೆಗಳನ್ನು ಆರಿಸಿ ತಿನ್ನುವ ‘ಫೋರೇಜಿಂಗ್’ ಸಂಸ್ಕೃತಿಯನ್ನು ಪಾಲಿಸುತ್ತಾರೆ. ಅತ್ಯುತ್ತಮ ಸಾರ್ವಜನಿಕ ಸಾರಿಗೆ ಜಾಲ, ಸೈಕ್ಲಿಂಗ್ ಹಾದಿಗಳು ಮತ್ತು ಸ್ಥಳೀಯ ಸಾವಯವ ಆಹಾರ ಪದ್ಧತಿಯಿಂದಾಗಿ, ಎಸ್ತೋನಿಯಾ ಕಡಿಮೆ ವೆಚ್ಚದಲ್ಲಿ ಅಪ್ಪಟ ನಿಸರ್ಗದ ಸಾಮಿಪ್ಯ ನೀಡುವ ಪರಿಸರ ತಾಣವಾಗಿದೆ.

**

‘ವಾಲಂಟೂರಿಸಂ’ ಲಕ್ಷಣಗಳೇನು ?

ರೈಲಿನ ಕಿಟಕಿಯಂಚಿನಲ್ಲಿ ಕುಳಿತು ದೂರದ ಊರುಗಳಿಗೆ ಹೊರಡುವಾಗ ನಮ್ಮ ಬೆನ್ನುಚೀಲದಲ್ಲಿ ಬಟ್ಟೆಬರೆಗಳಿಗಿಂತ ಹೆಚ್ಚಾಗಿ ‘ಉದ್ಧಾರಕ’ನಾಗುವ ಒಂದು ನಿಶ್ಶಬ್ದ ಗತ್ತು ಅಡಗಿರುತ್ತದೆಯೇನೋ. ಇತ್ತೀಚಿನ ದಿನಗಳಲ್ಲಿ ನಗರದ ಸಂಜೆಗಳ ಹಳಹಳಿಕೆಯಿಂದ ತಪ್ಪಿಸಿಕೊಳ್ಳಲು ಜನ ಕಂಡುಕೊಂಡ ಹೊಸ ಕಸರತ್ತು ಈ ‘ವಾಲಂಟೂರಿಸಂ’ (Voluntourism) – ಅಂದರೆ, ಸೇವೆಯ ಸೋಗಿನಲ್ಲಿ ಸುತ್ತಾಡುವ ಪ್ರವಾಸ.

Untitled Design - 2026-10-27T115122.487

ಕಣ್ಣುಗಳಲ್ಲಿ ನಿಸರ್ಗದ ಸೌಂದರ್ಯವನ್ನು ತುಂಬಿಕೊಳ್ಳುವುದರ ಜತೆಗೆ, ತನ್ನ ಬೆವರ ಹನಿಯೊಂದು ಎಲ್ಲೋ ಬೀಳದ ಮಳೆಗೆ ಪರ್ಯಾಯವಾಗಲಿ ಎಂಬ ನಿಷ್ಕಲ್ಮಷ ಅಥವಾ ಮುಗ್ಧ ಹಂಬಲ ಇದರಲ್ಲಿ ಮೊಳಕೆಯೊಡೆಯುತ್ತದೆ. ಹೊಸ ಊರೊಂದರ ಮಣ್ಣನ್ನು ಸ್ಪರ್ಶಿಸುತ್ತಲೇ ಅಲ್ಲಿನ ಜನರಿಗೆ ತಾನು ನೆರವಾಗುತ್ತಿದ್ದೇನೆ ಎಂಬ ಒಂದು ಸೂಕ್ಷ್ಮ ಸಮಾಧಾನ ಒಳಗೊಳಗೇ ಹಿತವಾದ ತಂಗಾಳಿಯಂತೆ ಬೀಸತೊಡಗುತ್ತದೆ.

ಆದರೆ, ಈ ಪ್ರವಾಸದ ಒಳಹೊರಗುಗಳನ್ನು ಬಿಡಿಸಿ ನೋಡಿದರೆ, ಅಲ್ಲಿ ಪ್ರೀತಿಗಿಂತ ಹೆಚ್ಚಾಗಿ ಒಂದು ಬಗೆಯ ಅನುಕೂಲಸಿಂಧು ಕಾರುಣ್ಯ ಎದ್ದು ಕಾಣುತ್ತದೆ. ಎಷ್ಟೋ ಸಲ ನಮ್ಮ ಬ್ಯಾಗುಗಳನ್ನು ಇಳಿಸಿಕೊಳ್ಳುವ ಊರಿನ ಬಡತನವೇ ನಮಗೊಂದು ಆಕರ್ಷಕ ‘ಹಿನ್ನೆಲೆ ದೃಶ್ಯ’ವಾಗಿಬಿಡುತ್ತದೆ. ನಾವಲ್ಲಿ ಹೋಗಿ ನಾಲ್ಕು ದಿನ ಬಣ್ಣ ಬಳಿಯುವ ಶಾಲೆಯ ಗೋಡೆಗಳು ಅಥವಾ ಎರಡು ತಾಸು ಇಂಗ್ಲಿಷ್ ಕಲಿಸುವ ಹಳ್ಳಿ ಮಕ್ಕಳು… ಇವೆಲ್ಲವೂ ನಮ್ಮೊಳಗಿನ ಸಣ್ಣ ಅಪರಾಧಪ್ರಜ್ಞೆಯನ್ನು ಮರೆಸಲು ನಾವೇ ಆಡಿಕೊಳ್ಳುವ ನಾಟಕದಂತೆ ತೋರುತ್ತವೆ. ನಾವು ಮರಳಿ ಬಂದು ಕೆಫೆಗಳ ಹೊಗೆಯಾಡುವ ಕಾಫಿ ಕಪ್‌ಗಳ ನಡುವೆ, ‘ನಾನು ಅಲ್ಲಿ ಹೋಗಿ ಒಂದು ಬದಲಾವಣೆ ತಂದೆ’ ಎಂದು ಕಣ್ಣರಳಿಸಿ ಹೇಳುವಾಗ, ಆ ಊರಿನ ನೈಜ ಸಂಕಟಗಳು ಮಾತ್ರ ಅದೇ ನಿಶ್ಶಬ್ದದಲ್ಲಿ ಉಳಿದುಬಿಟ್ಟಿರುತ್ತವೆ.

ವಾಸ್ತವದಲ್ಲಿ, ಈ ‘ವಾಲಂಟೂರಿಸಂ’ ಎಂಬುದು ಕೇವಲ ಭಾವನಾತ್ಮಕ ಹುಡುಕಾಟವಾಗಿ ಉಳಿಯದೇ, ಒಂದು ದೊಡ್ಡ ವಾಣಿಜ್ಯ ಮಾರುಕಟ್ಟೆಯಾಗಿ ರೂಪಾಂತರಗೊಂಡಿದೆ. ಬಡತನವನ್ನು ಪ್ರದರ್ಶನದ ವಸ್ತುವನ್ನಾಗಿಸಿ, ಶ್ರೀಮಂತ ಅಥವಾ ನಗರದ ಯುವಕರ ನೈತಿಕ ತೃಪ್ತಿಗಾಗಿ ಅದನ್ನು ಪ್ಯಾಕ್ ಮಾಡಿ ಮಾರುವ ದೊಡ್ಡ ಏಜೆನ್ಸಿಗಳು ಹುಟ್ಟಿಕೊಂಡಿವೆ. ಸ್ಥಳೀಯ ಕುಶಲಕರ್ಮಿಗಳಿಗೆ ಸಿಗಬೇಕಾದ ಕೂಲಿ ಕೆಲಸವನ್ನು, ಯಾವುದೋ ದೂರದ ಊರಿನಿಂದ ‘ಅನುಭವ’ಕ್ಕಾಗಿ ಬಂದ ಅಪ್ರಬುದ್ಧ ಕೈಗಳು ಕಿತ್ತುಕೊಳ್ಳುತ್ತವೆ. ಸ್ಥಳೀಯರಿಗೆ ಶಾಶ್ವತ ಪರಿಹಾರ, ನೀರು ಅಥವಾ ಶಿಕ್ಷಣವನ್ನು ಕಟ್ಟಿಕೊಡುವ ಬದಲು, ಪ್ರತಿ ತಿಂಗಳು ಹೊಸ ಮುಖಗಳು ಬಂದು ಫೊಟೋ ತೆಗೆಸಿಕೊಂಡು ಹೋಗುವ ಒಂದು ಜೀವಂತ ಸಂಗ್ರಹಾಲಯವಾಗಿ ಆ ಊರುಗಳು ಪಲ್ಲಟಗೊಳ್ಳುವುದು ಅತ್ಯಂತ ವಿಷಾದನೀಯ ಸಂಗತಿ.

ಕ್ಯಾಮೆರಾದ ಕ್ಲಿಕ್ ಶಬ್ದಗಳಲ್ಲಿ ಮತ್ತು ಇನ್‌ಸ್ಟಾಗ್ರಾಮ್‌ನ ಬಣ್ಣಬಣ್ಣದ ಚೌಕಟ್ಟುಗಳಲ್ಲಿ ಅಸಲಿ ಮನುಷ್ಯ ಸಂಬಂಧಗಳು ಕರಗಿಹೋಗುತ್ತವೆ. ನಗುಮೊಗದ ಹಳ್ಳಿಯ ಮಗುವಿನ ಕೆನ್ನೆ ಸವರುತ್ತಾ ತೆಗೆಸಿಕೊಳ್ಳುವ ಸೆಲ್ಫೀ, ಆ ಮಗುವಿನ ಕಣ್ಣಿನ ಹಸಿವಿಗಿಂತ ನಮ್ಮ ಸಾಮಾಜಿಕ ಜಾಲತಾಣದ ‘ಲೈಕ್’ಗಳಿಗೆ ಇಂಬು ನೀಡುವ ಸಾಧನವಾಗಿಬಿಡುತ್ತದೆ. ನಾವಲ್ಲಿ ಕೊಟ್ಟುಬಂದಿದ್ದಕ್ಕಿಂತ ಹೆಚ್ಚಾಗಿ ನಮ್ಮ ಚೀಲದಲ್ಲಿ ತುಂಬಿಕೊಂಡು ಬಂದ ಸ್ವಪ್ರತಿಷ್ಠೆಯೇ ದೊಡ್ಡದಾಗಿರುತ್ತದೆ. ಯಾರೋ ಅಪರಿಚಿತರು ಬಂದು ತಮ್ಮ ಬದುಕಿನ ಮೇಲೆ ತಾತ್ಕಾಲಿಕ ಸಹಾನುಭೂತಿ ಸುರಿದು, ರಜೆ ಮುಗಿದಾಕ್ಷಣ ಕೈಬೀಸಿ ಮಾಯವಾಗುವಾಗ ಆ ಅಮಾಯಕ ಮನಸುಗಳಲ್ಲಿ ಉಳಿಯುವ ಶೂನ್ಯತೆಯನ್ನು ಯಾವ ಅಂತಾರಾಷ್ಟ್ರೀಯ ಡಾಲರುಗಳೂ ತುಂಬಲಾರವು.

ಬದಲಾವಣೆ ಎಂಬುದು ರಜಾದಿನಗಳ ಕ್ಯಾಲೆಂಡರ್ ನೋಡಿ ಬರುವ ಅತಿಥಿಯಲ್ಲ. ಅದಕ್ಕೆ ಆ ಮಣ್ಣಿನ ತೇವದೊಂದಿಗೆ ಒಂದಾಗುವ ಆಳವಾದ ಬದ್ಧತೆ ಬೇಕು. ನಾವು ನಿಜವಾಗಿಯೂ ಜಗತ್ತನ್ನು ಬೆಸೆಯಲು ಬಯಸಿದರೆ, ಸೇವೆಯ ಪೋಸ್ ಕೊಡುವ ‘ಉದ್ಧಾರಕ’ನ ಅಂಗಿಯನ್ನು ಮೊದಲು ಕಳಚಿಡಬೇಕು. ಸುಮ್ಮನೆ ಅಲ್ಲಿನ ಜನರ ಬದುಕಿನ ಸುಖ-ದುಃಖಗಳನ್ನು ಕಿಂಚಿತ್ತೂ ಅಹಂಕಾರವಿಲ್ಲದೆ ಆಲಿಸುವ ಮೌನ ನಮಗಿರಬೇಕು. ಊರೊಂದನ್ನು ಬದಲಾಯಿಸುವ ಉಮೇದಿಗಿಂತ, ಆ ಊರಿನ ಮಣ್ಣು, ಅಲ್ಲಿನ ಜನರ ಕಣ್ಣುಗಳು ನಮ್ಮೊಳಗಿನ ಜಡತೆಯನ್ನು ಬದಲಾಯಿಸಲು ಬಿಟ್ಟುಕೊಡುವುದಿದೆಯಲ್ಲ… ಅಲ್ಲಿಂದಲೇ ನಿಜವಾದ, ನಿಸ್ವಾರ್ಥವಾದ ಪ್ರವಾಸದ ಹೆಜ್ಜೆಗಳು ನಿಧಾನವಾಗಿ ಆರಂಭವಾಗುತ್ತವೆ.

**

ರೌಂಡ್ ಐರ್ಲೆಂಡ್ ವಿತ್ ಎ ಫ್ರಿಡ್ಜ್

ಬ್ರಿಟಿಷ್ ಹಾಸ್ಯನಟ ಮತ್ತು ಲೇಖಕ ಟೋನಿ ಹಾಕ್ಸ್ ಅವರ ‘Round Ireland with a Fridge’ ಕೇವಲ ಒಂದು ಪ್ರಯಾಣ ಕಥನವಲ್ಲ. ಅದು ಮಾನವೀಯ ಮುಗ್ಧತೆ, ಅದ್ಭುತ ಹಾಸ್ಯಪ್ರಜ್ಞೆ ಮತ್ತು ಅಪ್ಪಟ ಐರಿಶ್ ಜನರ ಆತಿಥ್ಯದ ಒಂದು ಸುಂದರ ಅಚ್ಚುನೋಟ. ಮನುಷ್ಯ ಬದುಕಿನಲ್ಲಿ ಮಾಡುವ ಎಷ್ಟೋ ಹುಚ್ಚಾಟಗಳು ಕೇವಲ ಮುಜುಗರ ತರಬಹುದು, ಆದರೆ ಟೋನಿ ಹಾಕ್ಸ್ ಮಾಡಿದ ಹುಚ್ಚಾಟವೊಂದು ಪ್ರಪಂಚದಾದ್ಯಂತ ಲಕ್ಷಾಂತರ ಓದುಗರ ಮುಖದಲ್ಲಿ ಮಂದಹಾಸ ಮೂಡಿಸಿದ ಪುಸ್ತಕವಾಗಿ ಬದಲಾಯಿತು. ಒಂದು ಸಣ್ಣ ಬಾಜಿಯಿಂದ ಶುರುವಾದ ಈ ಸಾಹಸವು ಆಧುನಿಕ ಕಾಲದ ಅತ್ಯಂತ ವಿಶಿಷ್ಟ ಹಾಗೂ ಆಪ್ಯಾಯಮಾನವಾದ ಪ್ರವಾಸ ಕಥನಗಳಲ್ಲಿ ಒಂದಾಗಿ ನಿಲ್ಲುತ್ತದೆ.

ಈ ಸಾಹಸದ ಮೂಲ ಇರುವುದು ಲಂಡನ್ನಿನ ಒಂದು ಪಬ್‌ನಲ್ಲಿ ಕಳೆದ ಮದ್ಯದ ನಶೆಯ ರಾತ್ರಿಯಲ್ಲಿ. ಟೋನಿ ಮತ್ತು ಅವನ ಗೆಳೆಯ ಕೆವಿನ್ ಕುಡಿಯುತ್ತಾ ಕುಳಿತಾಗ, ನಾಲಿಗೆಯ ಮೇಲೆ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಮಾತಿಗೆ ಮಾತು ಬೆಳೆದು, ‘ನೀನು ಕೇವಲ ಹಿಚ್‌ಹೈಕಿಂಗ್ (ವಾಹನ ಸವಾರರಿಂದ ಲಿಫ್ಟ್ ಕೇಳುತ್ತಾ) ಮೂಲಕ, ಒಂದು ಸಣ್ಣ ಫ್ರಿಜ್ ಜತೆಗೆ ಇಡೀ ಐರ್ಲೆಂಡ್ ದೇಶವನ್ನು ಒಂದು ತಿಂಗಳಲ್ಲಿ ಸುತ್ತಿ ಬರಲು ಸಾಧ್ಯವೇ ಇಲ್ಲ’ ಎಂದು ಗೆಳೆಯ ಸವಾಲು ಹಾಕಿದ. ಕುಡಿದ ಮತ್ತಿನ ಅಹಂಕಾರ ಮತ್ತು ಸಾಹಸದ ಛಲದಿಂದ ಟೋನಿ ನೂರು ಪೌಂಡ್‌ಗಳ ಆ ಬಾಜಿಯನ್ನು ಒಪ್ಪಿಕೊಂಡರು.

ಮರುದಿನ ಬೆಳಗ್ಗೆ ಎದ್ದಾಗ ತಲೆನೋವಿನ ಜತೆಗೆ ತಾನು ಕಟ್ಟಿದ ಹುಚ್ಚು ಬಾಜಿಯ ನೆನಪಾಯಿತು. ಹೆಚ್ಚಿನವರು ಇಂಥ ಮಾತುಗಳನ್ನು ಹ್ಯಾಂಗೋವರ್ ಜತೆಯಲ್ಲೇ ಮರೆತುಬಿಡುತ್ತಿದ್ದರು, ಆದರೆ ಟೋನಿ ಮಾತು ತಪ್ಪಲಿಲ್ಲ.

Untitled Design - 2026-10-27T115128.050

ತಕ್ಷಣವೇ ಅಂಗಡಿಗೆ ಹೋಗಿ ಒಂದು ಸಣ್ಣ, ಬಿಳಿ ಬಣ್ಣದ ಸಿಂಗಲ್-ಡೋರ್ ರೆಫ್ರಿಜರೇಟರ್ ಖರೀದಿಸಿ, ಅದಕ್ಕೊಂದು ಪುಟ್ಟ ಚಕ್ರಗಳಿರುವ ಟ್ರಾಲಿ ಕಟ್ಟಿ ಐರ್ಲೆಂಡ್‌ಗೆ ಹಾರಿದ. ಅಲ್ಲಿಂದ ಶುರುವಾಯಿತು ಇತಿಹಾಸದ ಅತ್ಯಂತ ವಿಚಿತ್ರ ಪ್ರವಾಸ! ರಸ್ತೆಯ ಬದಿಯಲ್ಲಿ ನಿಂತು ಕೈ ತೋರಿಸಿ ಲಿಫ್ಟ್ ಕೇಳುವ ಒಬ್ಬ ಮನುಷ್ಯ, ಅವನ ಪಕ್ಕದಲ್ಲಿ ಒಂದು ಅನಾಮಧೇಯ ಫ್ರಿಜ್‌. ಪ್ರಪಂಚದ ಬೇರೆ ಯಾವುದೇ ದೇಶದಲ್ಲಾಗಿದ್ದರೆ ಜನ ಇವನನ್ನು ಹುಚ್ಚಾಸ್ಪತ್ರೆಗೆ ಕಳುಹಿಸುತ್ತಿದ್ದರೇನೋ. ಆದರೆ ಅದು ಐರ್ಲೆಂಡ್! ಅಲ್ಲಿನ ಜನರಿಗೆ ವಿಚಿತ್ರತೆಗಳೆಂದರೆ ಎಲ್ಲಿಲ್ಲದ ಪ್ರೀತಿ.

ಮೊದಲಿಗೆ ಕಾರ್ ಚಾಲಕರು ಅಚ್ಚರಿಯಿಂದ ನಿಧಾನಿಸಿ ನೋಡುತ್ತಿದ್ದರು. ನಂತರ ‘ಅರೇ, ಇವನೇನೋ ತಮಾಷೆಯ ಮನುಷ್ಯನಂತೆ ಕಾಣುತ್ತಿದ್ದಾನೆ’ ಎಂದು ಗಾಡಿ ನಿಲ್ಲಿಸಿ ನಗುತ್ತಲೇ ಇಬ್ಬರನ್ನೂ ಒಳಗೆ ಕೂರಿಸಿಕೊಳ್ಳುತ್ತಿದ್ದರು.

ಪುಸ್ತಕದಲ್ಲಿ ಬರುವ ಅತ್ಯಂತ ಮಜವಾದ ಸ್ವಾರಸ್ಯವೆಂದರೆ ಫ್ರಿಜ್‌ನ ವ್ಯಕ್ತಿತ್ವ ವಿಕಸನ. ಆರಂಭದಲ್ಲಿ ಕೇವಲ ತಣ್ಣಗಿನ, ನಿರ್ಜೀವ ಲೋಹದ ಡಬ್ಬಿಯಾಗಿದ್ದ ಆ ರೆಫ್ರಿಜರೇಟರ್‌ಗೆ ಜನ ಕೇವಲ ವಸ್ತುವಾಗಿ ನೋಡಲಿಲ್ಲ. ಒಬ್ಬ ಕಾರು ಚಾಲಕ, ‘ಪ್ರಯಾಣದಲ್ಲಿ ಜತೆಗಿರುವ ಸಂಗಾತಿಗೆ ಒಂದು ಹೆಸರಿಲ್ಲದಿದ್ದರೆ ಹೇಗೆ?’ ಎಂದು ಕೇಳಿದಾಗ, ಅದಕ್ಕೆ ಪ್ರೀತಿಯಿಂದ ಸಂಸ್ಕಾರ ನಡೆಸಿ ನಾಮಕರಣ ಮಾಡಲಾಯಿತು. ಅಷ್ಟೇ ಅಲ್ಲ, ರಸ್ತೆಯಲ್ಲಿ ಮಳೆ ಸುರಿದಾಗ ಜನ ‘ಅಯ್ಯೋ, ಫ್ರಿಜ್‌ಗೆ ಚಳಿಯಾಗುತ್ತಿದೆ’ ಎಂದು ಅದಕ್ಕೊಂದು ಓವರ್‌ಕೋಟ್, ಸ್ಕಾರ್ಫ್ ಮತ್ತು ಕನ್ನಡಕವನ್ನು ತೊಡಿಸಿದರು! ನೋಡನೋಡುತ್ತಿದ್ದಂತೆ ಈ ನಿರ್ಜೀವ ಸಾಧನವು ಟೋನಿಯ ಮೂಕ, ಆದರೆ ಅತ್ಯಂತ ನಿಷ್ಠಾವಂತ ಪ್ರವಾಸ ಸಂಗಾತಿಯಾಗಿ ಮಾರ್ಪಟ್ಟಿತು.

ಐರಿಶ್ ಜನರ ಹಾಸ್ಯಪ್ರಜ್ಞೆ ಮತ್ತು ಆತಿಥ್ಯ ಈ ಕಥೆಗೆ ಜೀವ ತುಂಬುತ್ತದೆ. ಟೋನಿ ಒಂದು ಪಬ್‌ಗೆ ಹೋದಾಗ, ಬಾರ್‌ಮ್ಯಾನ್ ಕೇವಲ ಟೋನಿಗೆ ಮಾತ್ರವಲ್ಲ, ‘ನಿನ್ನ ಸಂಗಾತಿಗೆ ಏನು ಬೇಕು?’ ಎಂದು ಫ್ರಿಜ್‌ ಮುಂದೆಯೂ ಒಂದು ಗಿನ್ನೆಸ್ ಬಿಯರ್ ಲೋಟವನ್ನು ತಂದಿಡುತ್ತಾನೆ! ಒಂದು ರಾತ್ರಿ ಅವರು ಉಳಿದುಕೊಂಡ ಬಿ & ಬಿ (Bed and Breakfast) ಮಾಲೀಕರು ಫ್ರಿಜ್‌ಗೆ ಯಾವುದೇ ಬಾಡಿಗೆ ತೆಗೆದುಕೊಳ್ಳದೆ, ‘ಅವನು ಸದ್ದಿಲ್ಲದ ಅತಿಥಿ, ಇಂಥ ಒಳ್ಳೆಯ ಗೆಳೆಯ ನನ್ನ ರೂಮಿನಲ್ಲಿ ಉಳಿದುಕೊಂಡಿದ್ದಕ್ಕೆ ನನಗೆ ಸಂತೋಷ’ ಎಂದು ನಕ್ಕರು. ಜನ ಅದಕ್ಕೆ ಜೀವವಿದೆ ಎಂದೇ ಭಾವಿಸಿ ಮುದ್ದಿಸುತ್ತಿದ್ದರು, ಹರಟುತ್ತಿದ್ದರು, ಅದರ ಎದುರು ನಿಂತು ಫೊಟೋ ತೆಗೆಸಿಕೊಳ್ಳುತ್ತಿದ್ದರು.

ಪ್ರವಾಸ ಮುಂದುವರಿಯುತ್ತಿದ್ದಂತೆ, ರೇಡಿಯೋ ಆರ್‌.ಟಿ.ಇ (RTE) ಯ ಪ್ರಸಿದ್ಧ ಆರ್‌ಜೆ ಜೆರ್ರಿ ರಿಯಾನ್ ಅವರ ಗಮನಕ್ಕೆ ಈ ಸುದ್ದಿ ಬಿತ್ತು. ಅವರು ಪ್ರತಿದಿನ ಬೆಳಗ್ಗೆ ಟೋನಿಗೆ ಕರೆ ಮಾಡಿ, ‘ಇವತ್ತು ನೀನು ಮತ್ತು ನಿನ್ನ ಫ್ರಿಜ್‌ ಎಲ್ಲಿದ್ದೀರಿ?’ ಎಂದು ಲೈವ್ ರೇಡಿಯೋದಲ್ಲಿ ಕೇಳಲು ಶುರುಮಾಡಿದರು.

ಇದರಿಂದಾಗಿ ಇಡೀ ಐರ್ಲೆಂಡ್ ದೇಶದಲ್ಲೇ ಈ ಜೋಡಿ ಸೆಲೆಬ್ರಿಟಿಗಳಾದರು. ರಸ್ತೆಯಲ್ಲಿ ಹೋಗುವಾಗ ಕಾರುಗಳು ಹಾರ್ನ್‌ ಹಾಕಿ ಹರ್ಷ ವ್ಯಕ್ತಪಡಿಸುತ್ತಿದ್ದವು, ಅಪರಿಚಿತರು ಓಡಿಬಂದು ಕೇಕೆ ಹಾಕಿ ಶೇಕ್‌ಹ್ಯಾಂಡ್ ಮಾಡುತ್ತಿದ್ದರು. ಒಮ್ಮೆ ಸಣ್ಣ ಊರೊಂದರಲ್ಲಿ ಟೋನಿ ನಡೆಯುತ್ತಿದ್ದಾಗ, ಇಡೀ ಹಳ್ಳಿಯ ಜನ ರಸ್ತೆಯ ಎರಡೂ ಬದಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಅವರನ್ನು ಮೆರವಣಿಗೆಯಂತೆ ಸ್ವಾಗತಿಸಿದರು!

ಈ ಯಾನದಲ್ಲಿ ನಡೆದ ಮಗದೊಂದು ಪರಾಕಾಷ್ಠೆಯ ಪ್ರಸಂಗವೆಂದರೆ ಡೊನೆಗಲ್ ಕಡಲತೀರದಲ್ಲಿ ಫ್ರಿಜ್‌ ಸರ್ಫಿಂಗ್ ಮಾಡಿದ್ದು! ಸಮುದ್ರದ ದಡದಲ್ಲಿ ಸರ್ಫಿಂಗ್ ಕಲಿಯುತ್ತಿದ್ದ ಹುಡುಗರು, ‘ನಿನ್ನ ಫ್ರಿಡ್ಜ್ ಸಮುದ್ರದ ಅಲೆಗಳನ್ನು ಸವಾರಿ ಮಾಡಬಲ್ಲದೇ?’ ಎಂದು ರೇಗಿಸಿದರು. ಸವಾಲುಗಳನ್ನು ಎಂದಿಗೂ ಬಿಡದ ಟೋನಿ, ಫ್ರಿಜ್‌ ಅನ್ನು ಸರ್ಫ್ ಬೋರ್ಡ್ ಮೇಲೆ ಹಗ್ಗಗಳಿಂದ ಕಟ್ಟಿ, ಸ್ವತಃ ತಾನೇ ಅಲೆಗಳ ಮೇಲೆ ತೇಲಿಸಿದ. ಅಲೆಗಳ ಹೊಡೆತಕ್ಕೆ ಸಿಲುಕಿ ಫ್ರಿಜ್‌ ಮುಳುಗದೆ ತೇಲುತ್ತಾ ದಡ ಮುಟ್ಟಿದಾಗ ಅಲ್ಲಿ ನೆರೆದಿದ್ದ ನೂರಾರು ಜನ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಒಂದು ದೇಶೀಯ ಉಪಕರಣ ಅಟ್ಲಾಂಟಿಕ್ ಸಾಗರದ ಅಲೆಗಳ ಮೇಲೆ ಸರ್ಫಿಂಗ್ ಮಾಡಿದ ಮೊದಲ ಮತ್ತು ಕೊನೆಯ ದಾಖಲೆ ಬಹುಶಃ ಇದೇ ಇರಬೇಕು!

ಇದನ್ನೂ ಓದಿ: ಐಸ್ ಲ್ಯಾಂಡಿನ ನೈಸರ್ಗಿಕ ಇತಿಹಾಸ ಸಂಸ್ಥೆಯಲ್ಲಿದೆ ಆ ಒಂದು ಸೊಳ್ಳೆ!

ಕೇವಲ ಹಾಸ್ಯವಷ್ಟೇ ಅಲ್ಲ, ಈ ಪ್ರವಾಸದಲ್ಲಿ ಅದ್ಭುತ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ತಿರುವುಗಳೂ ಬರುತ್ತವೆ. ಐರ್ಲೆಂಡ್‌ನ ಧಾರ್ಮಿಕ ಕೇಂದ್ರವಾದ 'ಲೋಫ್ ಡೆರ್ಗ್' (Lough Derg) ಎಂಬ ಪವಿತ್ರ ಸ್ಥಳಕ್ಕೆ ಹೋದಾಗ, ಅಲ್ಲಿನ ಸಂಪ್ರದಾಯದಂತೆ ಫ್ರಿಜ್‌ ಅನ್ನು ಪವಿತ್ರ ನೀರಿನಿಂದ ಆಶೀರ್ವದಿಸಿ, ಬ್ಯಾಪ್ಟೈಸ್ (ಜ್ಞಾನಸ್ನಾನ) ಮಾಡಿಸಲಾಯಿತು! ಒಬ್ಬ ತಮಾಷೆಯ ಯುವಕ ಬಾಜಿಯೊಂದನ್ನು ಗೆಲ್ಲಲು ಆರಂಭಿಸಿದ ಈ ಸಾಹಸ, ಕ್ರಮೇಣ ಜನರ ಪ್ರೀತಿ, ಪರಸ್ಪರ ನಂಬಿಕೆ ಮತ್ತು ಜೀವನದ ಸಣ್ಣ ಸಣ್ಣ ಸುಖಗಳನ್ನು ಆಸ್ವಾದಿಸುವ ತತ್ತ್ವಜ್ಞಾನವಾಗಿ ಬೆಳೆಯಿತು. ರಸ್ತೆಯಲ್ಲಿ ಸಿಕ್ಕ ಅಪರಿಚಿತರೆಲ್ಲರೂ ತಮ್ಮ ಕಷ್ಟ-ಸುಖಗಳನ್ನು ಟೋನಿ ಮತ್ತು ಆ ಫ್ರಿಜ್‌ ಮುಂದೆ ನಿಂತು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು.

ಒಂದು ತಿಂಗಳ ಕಠಿಣ ಹಿಚ್‌ಹೈಕಿಂಗ್ ನಂತರ, ನಿಗದಿತ ದಿನಾಂಕದಂದು ಟೋನಿ ತನ್ನ ನಂಬಿಕಸ್ಥ ಫ್ರಿಜ್‌ ಜತೆಗೆ ಡಬ್ಲಿನ್ ನಗರವನ್ನು ತಲುಪಿ ಆರಂಭಿಸಿದ ಸ್ಥಳಕ್ಕೇ ಮರಳಿದರು. ಸ್ನೇಹಿತ ಕೆವಿನ್ ಸೋಲನ್ನೊಪ್ಪಿಕೊಂಡು ನೂರು ಪೌಂಡ್‌ಗಳ ನೋಟನ್ನು ಟೋನಿ ಕೈಗಿಟ್ಟಾಗ, ಅಲ್ಲಿ ಗೆದ್ದಿದ್ದು ಕೇವಲ ಹಣವಲ್ಲ, ಮನುಷ್ಯರ ನಡುವಿನ ಕರುಣೆ ಮತ್ತು ಐರ್ಲೆಂಡ್ ದೇಶದ ಹೃದಯವಂತಿಕೆ. ತನ್ನನ್ನು ಹಗಲಿರುಳು ಕಾಯ್ದ, ಲಕ್ಷಾಂತರ ಜನರ ಮುಖದಲ್ಲಿ ನಗು ತರಿಸಿದ ಆ ಫ್ರಿಜ್‌ ಅನ್ನು ಟೋನಿ ಕೇವಲ ವಸ್ತು ಎಂದು ಎಸೆಯಲಿಲ್ಲ. ಬದಲಿಗೆ ಅದಕ್ಕೊಂದು ಗೌರವಯುತ ವಿದಾಯವನ್ನು ಹೇಳಿದರು.

‘ರೌಂಡ್ ಐರ್ಲೆಂಡ್ ವಿತ್ ಎ ಫ್ರಿಜ್‌’ ಒಂದು ಅದ್ಭುತ, ಹಿತವಾದ ಹಾಗೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಪ್ರವಾಸ ಕಥನ. ಜಗತ್ತು ಎಷ್ಟೇ ಸಂಕೀರ್ಣ ಮತ್ತು ಸ್ವಾರ್ಥಮಯವಾಗಿದ್ದರೂ, ನಾವು ಮುಕ್ತ ಮನಸಿನಿಂದ ಒಂದು ಹೆಜ್ಜೆ ಮುಂದಿಟ್ಟರೆ ಈ ಭೂಮಿಯ ಮೇಲೆ ಪ್ರೀತಿ ಮತ್ತು ಕರುಣೆಗೆ ಕೊರತೆಯಿಲ್ಲ ಎಂಬ ಸಂದೇಶವನ್ನು ಈ ಪುಸ್ತಕ ನಮಗೆ ದಾಟಿಸುತ್ತದೆ. ತಲೆಯ ಮೇಲೆ ಯಾವುದೇ ಹೊರೆಯಿಲ್ಲದೆ, ಮನಸಿಗೆ ಮುದ ನೀಡುವ ಒಂದು ಅದ್ಭುತ ಹಾಸ್ಯ ಪುಸ್ತಕವನ್ನು ಓದಬಯಸುವ ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಕೃತಿಯಿದು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?