ಗುಜರಾತಿಗಳ ಆಚರಣೆ,ಪದ್ಧತಿ ಮತ್ತು ಅಲ್ಲಿನ ಜನರ ವರ್ತನೆಗಳನ್ನು ಭೈರಪ್ಪ ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಮೂಲ ಲೇಖನವು ಕಸ್ತೂರಿ ಮಾಸ ಪತ್ರಿಕೆಯ 1967ರ ಮೇ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಕಸ್ತೂರಿ ಪತ್ರಿಕಾ ಬಳಗಕ್ಕೆ ನಮ್ಮ ಕೃತಜ್ಞತೆಗಳು.

--

ಗುಜರಾತಿಗಳ ನಿಜವಾದ ಬಂಡವಾಳವೆಂದರೆ ದುಡ್ಡು, ಲಲಿತ ಕಲೆ, ದರ್ಶನ ಶಾಸ್ತ್ರ ಮೊದಲಾದುವುಗಳಲ್ಲಿ ಹೇಗೆ ಅವರಿಗೆ ಅಭಿರುಚಿ ಕಡಿಮೆಯೋ ಹಾಗೆಯೇ ಶಾರೀರಿಕ ಶಕ್ತಿಯನ್ನು ಬೆಳೆಸುವುದರಲ್ಲಿಯೂ ಇಲ್ಲ. ನಮ್ಮ ಮೈಸೂರು, ದಾವಣಗೆರೆ, ಹುಬ್ಬಳ್ಳಿಗಳಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರ, ಜಳಗಾವ್ ಮೊದಲಾದ ಕಡೆಗಳಲ್ಲಿ ನಡೆಯುವ ಜಂಗೀಕುಸ್ತಿಗಳು ಗುಜರಾತಿನಲ್ಲಿ ನಡೆಯುವುದಿಲ್ಲ. ಹಳ್ಳಿಗರು ಎಲ್ಲೆಲ್ಲಿಯೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಜನಸಾಮಾನ್ಯರಲ್ಲಿ ಕುಸ್ತಿ, ವ್ಯಾಯಾಮ ಮೊದಲಾದವುಗಳಲ್ಲಿ ಅಭಿರುಚಿಯು ಸ್ವಲ್ಪವೂ ಇಲ್ಲ. ತಿನ್ನಲು ಪುಷ್ಟಿಯಾದ ಆಹಾರ, ಕುಡಿಯಲು ಹಾಲು, ತುಪ್ಪ ಮೊಸರುಗಳು ಸಾಕಷ್ಟು ಇವೆ. ಜನ ಚೆನ್ನಾಗಿ ತಿಂದೂ ತಿನ್ನುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಮಾಂಸಖಂಡಗಳನ್ನು ಶಕ್ತಿಯುತವಾಗಿ ಬೆಳೆಸಿಕೊಳ್ಳುವುದಿಲ್ಲ. ಪರಿಣಾಮವಾಗಿ ಮೂವತ್ತು ವರ್ಷವಾಗುವುದೇ ತಡ. ಜೋಲುಮೈ ತಾನಾಗಿ ಬರುತ್ತದೆ. ವಾಯು ಮೈ ತುಂಬಿಕೊಂಡು ಬಲೂನಿನಂತೆ ಊದಿ ಶರೀರವೆಂಬ ಭಾರೀ ಹೊರೆಯನ್ನು ನೂಕಿಕೊಂಡು ನಡೆಯುವ ಹೆಂಗಸರನ್ನು ಮೊದಲ ಬಾರಿಗೆ ಕಂಡಾಗ ಯಾರಿಗಾದರೂ ನಗುಬರುತ್ತದೆ. ಆದರೆ ಅವರ ಅವಸ್ಥೆಯನ್ನು ಅವಲೋಕಿಸಿದಾಗ ಮರುಕ ಹುಟ್ಟುತ್ತದೆ. ಮೈಯಲ್ಲಿ ಬೆವರು ಸುರಿಸದೆ ಜೀವನ ಮಾಡುವುದು ಮಾತ್ರವಲ್ಲದೆ ಅವರ ಆಹಾರ ಕ್ರಮವೂ ಇದಕ್ಕೆ ಕಾರಣವಾಗಿದೆ.

Untitled design (23)

ಆಲೂಗೆಡ್ಡೆ, ಎಣ್ಣೆ ಮತ್ತು ಕಡಲೆ ಹಿಟ್ಟು ಮತ್ತು ಬೆಲ್ಲಗಳಿಲ್ಲದೆ ಗುಜರಾತಿಗಳ ಅಡುಗೆಗೆ ತನ್ನತನ ಬರುವುದೇ ಇಲ್ಲ. ಎಣ್ಣೆಯಲ್ಲಿ ತರಕಾರಿಯನ್ನು ಮುಳುಗಿಸಿದಂತೆ ಪಲ್ಯ (ಶಾಕ್) ಮಾಡುತ್ತಾರೆ. ಆಲೂಗಡ್ಡೆಯ ಬಜಿಯೆಂದರೆ (ಮೈಸೂರಿ ನವರು ಹೇಳುವ ಬೊಂಬಾಯಿ ಬೋಂಡ) ಸಾಮಾನ್ಯವಾಗಿ ಎಲ್ಲರಿಗೂ ಪ್ರಾಣ. ಮನೆಯಲ್ಲಿ ಅದನ್ನು ಮಾಡುತ್ತಲೇ ಇರುತ್ತಾರೆ. ಯಾವ ಸ್ನೇಹಿತರು ಅಥವಾ ನೆಂಟರನ್ನು ಸತ್ಕರಿಸಬೇಕಾದರೂ ಈ ಗಣೇಶ ಇರಲೇಬೇಕು. ಅಲ್ಲದೆ ರಾತ್ರಿಯ ಊಟಕ್ಕೆ ಪ್ರತಿದಿನವೂ ಎಣ್ಣೆಯಲ್ಲಿ ಕರಿದ ಪೂರಿಯನ್ನು ತಿನ್ನುತ್ತಾರೆ. ಅಲ್ಲಿಯ ಹಾಲು ಸಹ ಕೊಬ್ಬಿನಿಂದ ಕೂಡಿರುತ್ತದೆ. ಯಥೇಚ್ಛವಾಗಿ ಹತ್ತಿ ಬೀಜ ಮತ್ತು ಕಡಲೆ ಹಿಂಡಿಗಳನ್ನು ಹಾಕುವುದರಿಂದ ಎಮ್ಮೆಗಳು ಎಂಟರಿಂದ ಹತ್ತು ಶತಾಂಶ ಕೊಬ್ಬು ಇರುವ ಹಾಲನ್ನು ಕರೆಯುತ್ತವೆ. ಇಷ್ಟೆಲ್ಲವನ್ನೂ ತಿಂದು ಮೈ ಬಗ್ಗಿಸದೆ ಇದ್ದರೆ ಯಾರಾದರೂ ಒಂದು ತಿಂಗಳಿನಲ್ಲಿಯೇ ಊದಲು ಶುರುವಾಗುತ್ತಾರೆ.

gujarat ladies

ಮೈಕಟ್ಟು, ಬಣ್ಣ ಮತ್ತು ಚಹರೆಗಳಲ್ಲಿ ಗುಜರಾತಿಗಳೆಲ್ಲರೂ ಒಂದೇ ಸಮನಾಗಿಲ್ಲ. ಹಾಗೆ ನೋಡಿದರೆ ಕಾಶ್ಮೀರ, ಪಹಾಡಿ ಮೊದಲಾದ ಕಡೆಗಳವರು ಮತ್ತು ತಮಿಳು ಕೇರಳೀಯರನ್ನು ಬಿಟ್ಟರೆ ಚಹರೆಗಳಿಂದಲೆ ಜನಗಳ ಪ್ರಾಂತ್ಯವನ್ನು ನಿರ್ಣಯಿಸುವುದು ಕಷ್ಟವೇ. ಹಳ್ಳಿಗರ ಮುಖ ಮೈಕಟ್ಟುಗಳು ನಮ್ಮ ಕರ್ನಾಟಕದವರಂತೆಯೇ ಇವೆ. ಪಟೇಲರಲ್ಲಿ ಗಂಡಸರು ಹೆಂಗಸರಿಗಿಂತ ಹೆಚ್ಚು ಲಕ್ಷಣವಾಗಿ ಕಾಣಿಸುತ್ತಾರೆ. ಹೆಂಗಸರು ಎಷ್ಟೇ ಲಕ್ಷಣವಾಗಿದ್ದರೂ ಮೈಬರದೆ ತೆಳುವಾಗಿರುವ ಹುಡುಗಿಯಾದರೂ ಮುಖದ ಮೇಲೆ ಒಂದು ತೆರನಾದ ಒರಟು ಕಾಣಿಸುತ್ತದೆ.

ಕರ್ನಾಟಕದ ಹೆಣ್ಣು ಮಕ್ಕಳ ಮುಖದ ಮೇಲೆ ಸಾಮಾನ್ಯವಾಗಿ ಕಾಣುವ ಸೌಮ್ಯವು ಅವರಲ್ಲಿ ಇಲ್ಲ. ಉಳಿದ ಜಾತಿಯ ಸ್ತ್ರೀ-ಪುರುಷರು ಮಾತ್ರ ನಮ್ಮಂತೆಯೇ ಇರುತ್ತಾರೆ. ಅವರಲ್ಲಿ ನಾಗರ ಎಂಬ ಒಳಪಂಗಡದ ಬ್ರಾಹ್ಮಣರಿದ್ದಾರೆ. ಇವರು ಹಿಂದೆ ಇಜಿಪ್ತಿನಿಂದ ಇಲ್ಲಿಗೆ ಬಂದು ನೆಲೆಸಿ ಮತಾಂತರ ಹೊಂದಿದವರಂತೆ. ಹೆಣ್ಣು ಕೊಟ್ಟು ತರುವುದರಲ್ಲಿ ಇತರ ಪಂಗಡಗಳೊಡನೆ ಸಂಬಂಧ ಮಾಡದೆ ಬಹಳ ಕಟ್ಟುನಿಟ್ಟಿನಿಂದ ಇರುವುದರಿಂದ ಅವರಲ್ಲಿ ಇಂದಿಗೂ ಇಜಿಪ್ತಿನ ಜನಗಳ ಲಕ್ಷಣಗಳನ್ನು ಕಾಣಬಹುದು. ಎತ್ತರವಾದ ನಿಲುವು, ಸ್ವಲ್ಪ ಮೊನಚಾದ ಮೂಗು, ತಿದ್ದಿದ ಹುಬ್ಬು ಮತ್ತು ಅಚ್ಚ ಬಿಳುಪಾದ ಬಣ್ಣಗಳ ಈ ಸ್ತ್ರೀ-ಪುರುಷರಿಬ್ಬರೂ ಸುಂದರವಾಗಿರುತ್ತಾರೆ. ಇನ್ನು ಸೌರಾಷ್ಟ್ರಕ್ಕೆ ಹೋದರೆ ಸಾಧಾರಣವಾಗಿ ಸ್ತ್ರೀ-ಪುರುಷರಿಬ್ಬರೂ ಲಕ್ಷಣವಾಗಿಯೇ ಇರುತ್ತಾರೆ. ಅಲ್ಲಿಯ ಹೆಂಗಸರ ಮುಖವು ಸೌಮ್ಯವಾಗಿಯೂ ಗಂಡಸರು ಹೆಂಗಸರಿಬ್ಬರ ದೇಹಾ ಕೃತಿಯು ಮಾಟವಾಗಿ ಬಣ್ಣ ಬಿಳುಪಾಗಿರುತ್ತದೆ.

ವ್ಯಾಪಾರ ವ್ಯವಹಾರಗಳಿಗೆ ಮೊದಲಿನಿಂದಲೂ ದೇಶದ ಮೂಲೆಮೂಲೆಗಳಿಗೆ ಮಾತ್ರವಲ್ಲದೆ ಸಮುದ್ರದ ಆಚೆಗೂ ಹೋಗಿ ಗಳಿಸಿದ ಸಂಪರ್ಕ, ಗಾಂಧೀ ಪಟೇಲರುಗಳ ಪ್ರಭಾವ ಇವುಗಳಿಂದ ಗುಜರಾತಿನ ಹೆಂಗಸರು ನಮ್ಮವರಿಗಿಂತ ಸ್ವಲ್ಪ ಹೆಚ್ಚು ಮಟ್ಟಿಗೆ ಸಂಕೋಚವನ್ನು ಬಿಟ್ಟಿದ್ದಾರೆ. ಮನೆಗೆ ಯಾವ ಅಪರಿಚಿತ ಗಂಡಸರು ಬಂದು ಗಂಡಸರೊಡನೆ ಮಾತನಾಡುತ್ತಿದ್ದರೂ ಮನೆಯಾಕೆ ಸಹ ಅದೇ ದಿವಾನಖಾನೆಯಲ್ಲಿ ಆ ಗಂಡಸಿನ ಎದುರಿನ ಕುರ್ಚಿಯ ಮೇಲೆಯೇ ಕೂಡುತ್ತಾಳೆ; ಅವರ ಮಾತುಕತೆಗಳಲ್ಲಿ ಬಾಯಿಹಾಕುತ್ತಾಳೆ. ತನ್ನ ಪಾಡಿಗೆ ತಾನು ಬೇರೆ ಕೋಣೆಗೆ ಹೋಗಿ ಕೂಡುವುದಿಲ್ಲ. ಈ ನಡವಳಿಕೆಯು ವಿದ್ಯಾವತಿಯರಲ್ಲಿ ಮಾತ್ರವಲ್ಲದೆ ಎಲ್ಲ ಹೆಂಗಸರಲ್ಲಿಯೂ ಸಮವಾಗಿದೆ. ರೈಲು ಬಸ್ಸುಗಳಲ್ಲಿಯೂ ನಿಸ್ಸಂಕೋಚವಾಗಿ ಯಾವ ವಿಷಯದ ಮೇಲಾದರೂ ಅಪರಿಚಿತ ಗಂಡಸರೊಡನೆ ಮಾತನಾಡಿ ಹರಟೆ ಕೊಚ್ಚುತ್ತಾರೆ. ಇದಕ್ಕೆ ಅಪವಾದವಾಗಿ ಒಬ್ಬೊಬ್ಬರು ಅಪರೂಪಕ್ಕೆ ಸಿಕ್ಕುತ್ತಾರೆ.

ಮನೆಯ ಹಣಕಾಸಿನ ವ್ಯವಹಾರದಲ್ಲಿ ಸಾಧಾರಣವಾಗಿ ಹೆಂಗಸಿನ ಕೈವಾಡವೇ ಮೇಲೆ. ಗಂಡ “ವ್ಯಾಪಾರಿ ಅಥವಾ ಉದ್ಯಮಿಯಾದರೆ ತನ್ನ ವ್ಯವಹಾರದ ಒಳಮರ್ಮವನ್ನು ಸಾಧಾರಣವಾಗಿ ತನ್ನ ಲ್ಲಿಯೇ ಇಟ್ಟುಕೊಂಡಿರುತ್ತಾನೆ. ಸಂಬಳದಾರ ಮಾತ್ರ ಹೆಂಡತಿಯ ಅನುಚರನೇ. ಸ್ನೇಹಿತರ ಜೊತೆ ಸಿನಿಮಾಕ್ಕೆ ಹೋಗ ಬೇಕಾದರೆ ದುಡ್ಡಿಗೆ ತನ್ನ ಹೆಂಡತಿಯನ್ನು ಕೇಳಿ ಬೇಡುವ ಗಂಡಂದಿರೇ ಹೆಚ್ಚು. ಮನೆಗೆ ಬೇಕಾದ ಸಾಮಾನುಗಳನ್ನು ಕೊಳ್ಳುವ ವ್ಯವಹಾರ ಹೆಂಗಸರದೇ. ಯಾವ ಅಂಗಡಿಯಲ್ಲಿ ಬೆಲೆಗಳ ಮಟ್ಟ ಹೇಗಿರುತ್ತದೆ, ಇದೇ ಪದಾರ್ಥವನ್ನು ಸಟ್ಟಾ (wholesale) ತೆಗೆದುಕೊಂಡರೆ ಧಾರಣೆ ಹೇಗೆ ಆಗುತ್ತದೆ ಮೊದಲಾದ ಲೆಕ್ಕಾಚಾರವನ್ನೆಲ್ಲ ಹೆಂಗಸರೇ ಮಾಡುತ್ತಾರೆ. ಒಂದು ಕಿಲೋಗೆ ಒಂದು ರೂಪಾಯಿ, ಕ್ವಿಂಟಲ್ ಆದರೆ ತೊಂಬತ್ತೇಳೂವರೆ. ಆದರೆ ತನಗೆ ಒಂದು ಕ್ವಿಂಟಲ್ ಬೇಡ, ಗುಜರಾತಿ ಹೆಂಗಸು ಅಕ್ಕಪಕ್ಕದ ನಾಲ್ಕು ಹೆಂಗಸರಿಗೆ ಹೇಳಿ ಒಪ್ಪಿಸುತ್ತಾಳೆ. ಒಟ್ಟಿ ನಲ್ಲಿ ಒಂದು ಕ್ವಿಂಟಲ್ ತೆಗೆದುಕೊಂಡು ಎಲ್ಲರೂ ಇಪ್ಪತ್ತು ಕಿಲೋದಂತೆ ಹಂಚಿಕೊಳ್ಳುತ್ತಾರೆ. ತಲಾ ಎಂಟಾಣೆ ಉಳಿಯಿತಲ್ಲವೆ! ಅಷ್ಟು ಮಾತ್ರವಲ್ಲ, ಒಟ್ಟಿನಲ್ಲಿ ಕೊಂಡಾಗ ಬಿಟ್ಟಿ ಬಂದ ಗೋಣಿಚೀಲಕ್ಕೆ ಒಂದೂಕಾಲು ರುಪಾಯಿ ಲೆಕ್ಕ ಹಾಕಿ ತಲಾ ಇಪ್ಪತ್ತೆರಡು ಪೈಸೆಯಂತೆ ಹಂಚಿಕೊಳ್ಳುತ್ತಾರೆ. ವ್ಯವಹಾರ ಕೊನೆಯತನಕ ಚೊಕ್ಕ!

ನೀವು 'ಟೈಮ್ಸ್ ಆಫ್ ಇಂಡಿಯಾ' ದ ವರ-ವಧು ಬೇಕಾಗಿದೆ ಕಾಲಮಿನಲ್ಲಿ ಗಮನಿಸಿ ನೋಡಿ, ಒಂದು ಸಂಗತಿ ತಿಳಿಯುತ್ತದೆ. ಅವನು ಗುಜರಾತಿ ಜೈನನಾಗಿರಬಹುದು, ದೇಸಾಯಿಯಾಗಿರಬಹುದು. ಪಟೇಲ, ಬ್ರಾಹ್ಮಣ ಅಥವಾ ಮತ್ತೆ ಯಾವುದೇ ಜಾತಿಯಾಗಿರಬಹುದು. ಮಗ ಮೆಡಿಕಲ್ ಕಾಲೇಜನ್ನು ಮುಗಿಸಿದ್ದಾನೆ ಅಥವಾ ಮುಗಿಸುವುದರಲ್ಲಿದ್ದಾನೆ, ಅವನಿಗೆ ಮೆಡಿಕಲ್ ಓದಿರುವ ಅಥವಾ ಓದುತ್ತಿರುವ ಹೆಣ್ಣೇ ಬೇಕು. ಸಾಕಷ್ಟು ವರದಕ್ಷಿಣೆಯಂತೂ ಇದ್ದದ್ದೇ. ವರದಕ್ಷಿಣೆ ಹಣದಲ್ಲಿ ಅವನು ಎರಡು ವರ್ಷ ಹೊರದೇಶಕ್ಕೆ ಹೋಗಿ ಉಚ್ಚ ವಿದ್ಯಾಭ್ಯಾಸ ಮಾಡುತ್ತಾನೆ. ಸಾಧ್ಯವಾದರೆ ಹೆಂಡತಿಯನ್ನು ಕರೆದುಕೊಂಡು ಹೋಗಿ ಓದಿಸುತ್ತಾನೆ. ಅನೇಕ ವೇಳೆ ಇಬ್ಬರೂ ಹೊರ ದೇಶದಲ್ಲಿಯೇ ನೌಕರಿಗೆ ಸೇರಿ ಅಲ್ಲಿಯೇ ನೆಲಸುತ್ತಾರೆ. ಏಕೆಂದರೆ ಅಲ್ಲಿ ದೊರೆಯುವಷ್ಟು ಸಂಬಳ ಹಿಂದುಸ್ಥಾನದಲ್ಲಿ ಸಿಕ್ಕುವುದಿಲ್ಲ ಅಥವಾ ಹಿಂದುಸ್ಥಾನಕ್ಕೆ ಬಂದರೆ ಇಬ್ಬರೂ ಕೂಡಿ ಸ್ವಂತ ದವಾಖಾನೆ ತೆರೆಯುತ್ತಾರೆ. ನಾಲ್ಕು ವರ್ಷದಲ್ಲಿ ಎರಡು ಲಕ್ಷ ಗಳಿಸುತ್ತಾರೆ. ಶ್ರೀಮಂತ ಗುಜರಾತಿನಲ್ಲಿ ವೈದ್ಯರಿಗೆ ಇರುವ ಸಂಪಾದನೆ ಮತ್ತೆಲ್ಲಿ ಇರಲು ಸಾಧ್ಯ?

ಪಾಕಿಸ್ತಾನದೊಡನೆ ಯುದ್ಧವಾದಾಗ ಯುದ್ಧ ನಿಧಿಗೆ ಕನಿಷ್ಟ ಮಟ್ಟದ ನಿಧಿಯನ್ನು ಕೊಟ್ಟ ರಾಜ್ಯವೆಂದರೆ ಈ ಶ್ರೀಮಂತ ಗುಜರಾತೇ. ಜಮ್ಮುವಿನ ಹತ್ತಿರಕ್ಕೆ ಪಾಕಿಸ್ತಾನೀ ಟ್ಯಾಂಕುಗಳು ನುಗ್ಗುತ್ತಿದ್ದಾಗಲೂ ಗುಜರಾತಿ ಜನಗಳು ತಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಮಟ್ಟಿಗೆ ಇದ್ದರು. ಆದರೆ ಭಾವ ನಗರದ ವಿಮಾನ ನಿಲ್ದಾಣಕ್ಕೆ ಬಾಂಬ್ ಬಿದ್ದ ನಿಮಿಷವೇ ಅವರು ಚುರುಕಾದರು.

Untitled design (25)

ಗಡಿಗೆ ಹತ್ತಿರವಾಗಿರುವ ಅಹಮದಾಬಾದಿನ ಗಿರಣಿಗಳ ಮೇಲೂ ಬಾಂಬ್ ಬೀಳಬಹುದು. ಗಿರಣಿಯ ಮಾಲೀಕರೆಲ್ಲ ಎಚ್ಚೆತ್ತರು; ದೇಶಭಕ್ತರಾದರು. ಯುದ್ಧನಿಧಿ ಸಂಗ್ರಹಣೆಯಲ್ಲಿ ತೊಡಗಿದರು. ಕೊನೆಗೆ ನಿಧಿಯನ್ನು ತಮ್ಮದೇ ರಾಜ್ಯದ ಎನ್.ಸಿ.ಸಿ ಚಟುವಟಿಕೆಗೆ ಹಂಚಲು ಮಾತ್ರ ಪ್ರತ್ಯೇಕವಾಗಿ ಕೊಟ್ಟರು. ದಿಲ್ಲಿಯ ಕೇಂದ್ರನಿಧಿಗೆ ಒಪ್ಪಿಸಲಿಲ್ಲ. ಮುಖ್ಯಮಂತ್ರಿ ಬಳವಂತ ರಾಯ್ ಮೆಹತಾ ಅವರು ಪತ್ನಿಸಮೇತ ವಿಮಾನದಲ್ಲಿ ಸ್ವಂತ ರಾಜಕೀಯ ಕೆಲಸಕ್ಕೆ ಹೋಗುವಾಗ ಪಾಕಿಸ್ತಾನೀ ಯುದ್ಧ ವಿಮಾನಕ್ಕೆ ಸಿಕ್ಕು ಸತ್ತರಲ್ಲ, ಅವರನ್ನು ದೇಶಕ್ಕಾಗಿ ಹೋರಾಡಿ ಮಡಿದ ಧೀರ ಯೋಧ ಹುತಾತ್ಮರನ್ನಾಗಿ ಮಾಡಿದರು. ಅದೇ ವಿಮಾನದಲ್ಲಿ ಪತಿಯೊಡನೆ ಇದ್ದ ಅವರ ಪತ್ನಿ ಸರೋಜ್ ಬೇನ್ ತಮ್ಮ ತೌರೂರಿನ ಒಂದು ಮಹಿಳಾ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಆಕೆ ವೀರ ಮಹಿಳೆಯಾದುದು ಮಾತ್ರವಲ್ಲ, ಧೀರ ಮಾತೆಯೂ ಆದಳು.

'ಯಾವಾಗ ಊರಿಗೆ ಬರಬೇಕಾದರೂ ನಾನು ಆನಂದದಿಂದ ರಾತ್ರಿಯ ಗಾಡಿಯನ್ನು ಹತ್ತಿ ಮಲಗುತ್ತಿದ್ದೆ. ಬೆಳಗಾಗುವ ವೇಳೆಗೆ ಬಾಂಬೆ ಸೆಂಟ್ರಲ್ ಬರುತ್ತದೆ. ಬಾಂಬೆ ಸೆಂಟ್ರಲ್ ಅಹಮದಾಬಾದಿನ ಒಂದು ಉಪ ಸ್ಟೇಶನ್ ಎಂದು ಗುಜರಾತಿಗಳೇ ಹೇಳುತ್ತಾರೆ. ಅಲ್ಲಿಯ ತನಕ ಪುಷ್ಟಿಯಾಗಿ ತಿಂದು, ಮುಖದ ಮೇಲೆ ಒಂದು ತೆರನಾದ ತೃಪ್ತಿ ತುಂಬಿ ಬೇರೆ ಯಾವ ಭಾವವೂ ಇಲ್ಲದ ಜನಗಳೇ ಕಣ್ಣಿಗೆ ಬೀಳುತ್ತಾರೆ. ಮುಂಬಯಿಯಿಂದ ಪೂನಾ ಕ್ಕೆ ಬಂದು ಅಲ್ಲಿಂದ ಬೆಂಗಳೂರು ಎಕ್ಸ್ ಪ್ರೆಸ್ ಹಿಡಿದರೆ ಮಿರಜ್ ತನಕ ಮಹಾರಾಷ್ಟ್ರೀಯರ ಕೊರತೆ ತುಂಬಿದ ಮುಖಗಳೇ ಕಾಣುತ್ತವೆ. ರಾತ್ರಿ ಕಳೆದು ಬೆಳಕು ಹರಿಯುವ ವೇಳೆಗಾಗಲೇ ರೈಲು ಕರ್ಣಾಟಕದ ಒಳಗೆ ನೂರಇಪ್ಪತ್ತು ಮೈಲಿಗೂ ಮೀರಿ ಬಂದಿರುತ್ತದೆ. ಈಗ ಕಣ್ಣಿ ಗೆ ಬೀಳುವ ಮುಖಗಳೇ ಬೇರೆ: ವ್ಯವಹಾರ ಹೀನ, ರಕ್ತಹೀನ, ಒಂದು ತೆರನಾದ ದೈನ್ಯ ತುಂಬಿದ ಮುಖಗಳು. ಆದರೆ ಈ ರಕ್ತಹೀನರೇ, ಗಾಡಿಯಲ್ಲಿ ಜಾಗವಿದ್ದರೂ ಜಗಳ ಕಾಯುತ್ತಾರೆ, ನಂತರ ಹಾಡು ಹೇಳುತ್ತಾರೆ. “ಹುಬ್ಬಳ್ಳಿಯಾಗ್ ನಾಟಕ ಹ್ಯಾಂಗಿತ್ತೋ ತಮ್ಮಾ?" ಎಂದು ಸಂಭಾಷಣೆಯನ್ನು ಶುರುಮಾಡುತ್ತಾರೆ. ಆಗ ಮುಖದ ಮೇಲೆ ಹೊಸ ಕಳೆಯೇ ಬಂದಿರುತ್ತದೆ.