- ಡಾ. ಶಾಲಿನಿ ಬಸವರಾಜ್

ಪ್ರಯಾಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೈನಂದಿನ ಬದುಕಿನಿಂದ ಸ್ವಲ್ಪ ವಿರಾಮ ಮಾಡಿಕೊಂಡು ಎಲ್ಲಾದರು ಸುತ್ತಾಡಿ ಬರುವುದೆಂದರೆ ಅದು ಕಲಿಯುಗದ ಸುಖವೇ ಸರಿ. ಆದರೆ ಸಣ್ಣ ಮಕ್ಕಳಿರುವ ಪೋಷಕರಿಗೆ ಏನೋ ಒಂದು ರೀತಿಯ ಅಳುಕು, ಭಯ. ಮಕ್ಕಳಿಗೆ ಏನು ಆಗುವುದಿಲ್ಲ ತಾನೇ ಎಲ್ಲದಕ್ಕೂ ಹೊಂದಿಕೊಳ್ಳುತ್ತಾರೆ ತಾನೆ? ಎಂಬ ಕಾಳಜಿ. ಮಕ್ಕಳ ತಜ್ಙೆಯಾದ ನಾನು ಕೆಲವು ಸರಳ ಮತ್ತು ಸುಲಭ ಸಲಹೆ ಕೊಡಲು ಇಚ್ಛಿಸುತ್ತೇನೆ. ಈ ಪುಟ್ಟ ಸಲಹೆಗಳಿಂದ ಪುಟಾಣಿಗಳ ಜತೆ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆಂದು ಆಶಿಸುತ್ತೇನೆ.

ಸಲಹೆಗಳು

  • ಗಾಬರಿಗೊಳ್ಳಬೇಡಿ-ಗಮನ ಹರಿಸಿ

ಮಗುವಿಗೆ ಬೇಕಾಗಿರುವ ಕೆಲವು ಮುಖ್ಯ ಔಷಧಿಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ.

ಜ್ವರದ ಸಿರಪ್, ವಾಂತಿ ಸಿರಪ್, ಮಕ್ಕಳಿಗೆ ಹಚ್ಚುವ ಲೋಷನ್, ಸೊಳ್ಳೆಯ ರೋಲ್-ಅನ್ ಗಳು, ORS, ಶೀತ ಹಾಗೂ ಕೆಮ್ಮಿನ ಔಷಧಿಗಳನ್ನು ಪ್ರಯಾಣದ ಮುನ್ನ ನಿಮ್ಮ ಮಕ್ಕಳ ತಜ್ಞರನ್ನು ಭೇಟಿಮಾಡಿ ಸರಿಯಾದ ಪ್ರಮಾಣ (ಡೋಸ್) ತಿಳಿದುಕೊಂಡೇ ಮುಂದುವರಿಯಿರಿ.

Children tonic

  • ಪ್ರಯಾಣ ಮಾಡುವಾಗ ಊಟದ ವ್ಯವಸ್ಥೆ ಹೇಗೆ ಮಾಡಿಕೊಳ್ಳುವುದು?

6 ತಿಂಗಳ ಒಳಗಿನ ಮಕ್ಕಳಿಗೆ ತಾಯಿ ಹಾಲು ಮಾತ್ರ ಸೂಕ್ತ. ಅದನ್ನು ಬಿಟ್ಟು ಏನನ್ನು ಸಹ ಕೊಡಬೇಡಿ.

6 ರಿಂದ 2 ವರ್ಷದ ಒಳಗಿನ ಮಕ್ಕಳಿಗೆ ಯಾವಾಗಲು ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಪೌಡರ್ ಗಳನ್ನು ನಿಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗುವುದು ನಿಮಗೆ ದೊಡ್ಡ ವರವೇ ಸರಿ.

ನೀವು ತಂಗುವ ಹೊಟೇಲ್/ರೆಸಾರ್ಟ್‌ಗಳಲ್ಲಿ ನೀವೇ ತಯಾರಿಸಲು ಕೂಡ ಅನುಕೂಲವಿರುತ್ತದೆ.ಅದನ್ನು ತಪ್ಪದೇ ವಿಚಾರಿಸಿ.

- ಮಕ್ಕಳು ಸಾಮಾನ್ಯವಾಗಿ ಘನ ಆಹಾರಗಳನ್ನು ತ್ಯಜಿಸುವುದು ಈ ವಯಸ್ಸಿನಲ್ಲಿ ಬಹಳ ಸಾಮಾನ್ಯ. ಹಾಗಾಗಿ ಆದಷ್ಟು ಹಣ್ಣಿನ ಜ್ಯೂಸ್‌ಗಳು, ನೀರಿನ ಅಂಶವಿರುವ ಹಣ್ಣುಗಳನ್ನು ಹೆಚ್ಚಾಗಿಯೆ ನೀಡಿ. ಎದೆ ಹಾಲು ಕುಡಿಸುತ್ತಿರುವ ತಾಯಂದಿರು ಆದಷ್ಟು ಆಗಾಗ್ಗೆ ಕೊಡುತ್ತಾ ಬನ್ನಿ.

ಇನ್ನು ದೊಡ್ಡ ಮಕ್ಕಳ ವಿಷಯಕ್ಕೆ ಬಂದರೆ ಊಟ ತಿನ್ನುತ್ತಾರಾದರೂ ಜಂಕ್ ಆಹಾರಗಳನ್ನು ಕೇಳುತ್ತಾರೆ. ಆದಷ್ಟು ಜಂಕ್ ಆಹಾರ ಸೇವನೆ ಕಡಿಮೆ ಮಾಡಿಸಿ. ಮನೆಯಿಂದಲೇ ಕುರುಕಲು ತಿಂಡಿಗಳನ್ನು ತೆಗೆದುಕೊಂಡು ಹೊಗುವುದು ಬಹಳ ಉತ್ತಮ.

Children trip


  • ಮಕ್ಕಳ ಆರೋಗ್ಯದ ನಿಟ್ಟಿನಲ್ಲಿ ಚರ್ಮ ಆರೋಗ್ಯ ಕೂಡ ಬಹಳ ಮುಖ್ಯ.

6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನಿಯಮಿತವಾಗಿ ಸನ್ ಸ್ಕ್ರೀನ್ ಗಳನ್ನು ಬಳಸುವುದು ಮಕ್ಕಳ ತ್ಚಚೆಯನ್ನು ಬಿಸಿಲು ಮತ್ತು ಧೂಳಿಗೆ ಹಾಳಾಗದಂತೆ ರಕ್ಷಿಸುತ್ತದೆ.

ಈ ಮೇಲಿನ ಸಲಹೆಗಳು ಎಲ್ಲಾ ಮಕ್ಕಳಿಗೂ ಅನ್ವಯವಾಗುತ್ತದೆ. ಆದರೆ ಕೆಲವು ಮಕ್ಕಳಿಗೆ ಚಲನೆಯ ಕಾಯಿಲೆ (ಮೋಷನ್ ಸಿಕ್ನೆಸ್) ಮತ್ತು ಇನ್ನಿತರ ಬೇರೆ ಸಮಸ್ಯೆಗಳಿದ್ದರೆ ನಿಮ್ಮ ಮಕ್ಕಳ ತಜ್ಞರನ್ನು ಸಂರ್ಪಕಿಸಿ ಅದಕ್ಕೆ ಸೂಕ್ತವಾದ ಔಷಧಿಗಳನ್ನು ಪಡೆಯುವುದು ಒಳ್ಳೆಯದು.

ಈ ಮೇಲಿನ ಸಲಹೆಗಳು ಸರಳವಾಗಿದ್ದರೂ ನಿಮ್ಮ ಪುಟಾಣಿಗಳೊಂದಿಗೆ ಒಳ್ಳೆಯ ಸಮಯ ಕಳೆಯಲು ಅನುಕೂಲಕರವಾಗಿವೆ.