ತೇಜಸ್‌ ಎಕ್ಸ್‌ಪ್ರೆಸ್‌ ಭಾರತೀಯ ರೈಲು ಇತಿಹಾಸದಲ್ಲಿ ವಿನೂತನ ಅಧ್ಯಾಯವನ್ನು ಬರೆದಿದೆ. IRCTC ಯ ಈ ರೈಲು, ದೇಶದ ಮೊದಲ ಖಾಸಗಿ ನಿರ್ವಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಖನೌ–ದೆಹಲಿ ಮಾರ್ಗದಲ್ಲಿ ಸಂಚರಿಸುವ ಈ ತೇಜಸ್ ರೈಲು, ಸೌಕರ್ಯ, ವೇಗ ಮತ್ತು ಸೇವೆಗಳ ನಿಟ್ಟಿನಲ್ಲಿ ವಿಮಾನ ದರ್ಜೆಯ ಸೇವೆಯ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ.

ತೇಜಸ್ ಎಕ್ಸ್‌ಪ್ರೆಸ್‌ ಪ್ರತಿ ದಿನ ಲಖನೌ ಮತ್ತು ನವದೆಹಲಿಯ ನಡುವೆ ಸಂಚರಿಸುತ್ತಿದ್ದು, ಸುಮಾರು 511 ಕಿಲಮೀ ದೂರವನ್ನು ಕೇವಲ 6 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ರೈಲಿನ ಗರಿಷ್ಠ ವೇಗ 200 ಕಿಮೀ/ಗಂ, ಆದರೆ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಇದು ಸುಮಾರು 160 ಕಿಮೀ/ಗಂ ವೇಗದಲ್ಲಿ ಚಲಿಸುತ್ತದೆ. ಇದರ ಸೊಗಸಾದ ಕಿತ್ತಳೆ ಬಣ್ಣದ ಬೋಗಿಗಳು ಮತ್ತು ಒಳಾಂಗಣ ವಿನ್ಯಾಸ ಪ್ರಯಾಣಿಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತವೆ.

Tejas train

ಭಾರತೀಯ ರೈಲ್ವೆಯ ಪರಂಪರೆಯಲ್ಲಿ ಮೊದಲ ಬಾರಿಗೆ ಸಂಪೂರ್ಣ ಖಾಸಗಿ ನಿರ್ವಹಣೆಯ ಮಾದರಿಯನ್ನು ಅನುಸರಿಸಿರುವ ತೇಜಸ್, ಸಮಯಪಾಲನೆಗೆ ಹೆಚ್ಚು ಒತ್ತು ನೀಡುತ್ತದೆ. ಪ್ರಯಾಣ ವಿಳಂಬವಾದರೆ IRCTC ಪ್ರಯಾಣಿಕರಿಗೆ ಪರಿಹಾರ ಮೊತ್ತವನ್ನು ಸಹ ನೀಡುತ್ತದೆ ಎಂಬುದು ಇದರ ವಿಶಿಷ್ಟತೆ. ರೈಲಿನಲ್ಲಿ ವಿಮಾನ ಶೈಲಿಯ ಆಸನ ವ್ಯವಸ್ಥೆ, ವೈ-ಫೈ ಸೌಲಭ್ಯ, ಇನ್‌ಫೋಟೇನ್‌ಮೆಂಟ್ ವ್ಯವಸ್ಥೆ, ಆನ್‌ಬೋರ್ಡ್ ಕೇಟರಿಂಗ್‌ನಂಥ ವಿಶಿಷ್ಟ ಸೇವೆಗಳು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ.

Tejas express


ಪ್ರಯಾಣ ದರದ ವಿಷಯದಲ್ಲಿ, ಈ ರೈಲು ಪ್ರೀಮಿಯಂ ವರ್ಗಕ್ಕೆ ಸೇರಿದೆ. ಎಸಿ ಚೇರ್ ಕಾರ್ ವರ್ಗದ ಟಿಕೆಟ್ ಸುಮಾರು 1,679 ರು., ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ವರ್ಗದ ಟಿಕೆಟ್ ಸುಮಾರು 2,457 ರು. ಎಂದು ನಿಗದಿಪಡಿಸಲಾಗಿದೆ. ದರ ಹೆಚ್ಚಿದ್ದರೂ ದರಕ್ಕೆ ತಕ್ಕಂಥ ಸೌಲಭ್ಯಗಳು ಮತ್ತು ಆರಾಮದಾಯಕ ಪ್ರಯಾಣ ಪ್ರಯಾಣಿಕರಿಗೆ ತೃಪ್ತಿ ನೀಡುತ್ತದೆ.

ತೇಜಸ್ ಎಕ್ಸ್‌ಪ್ರೆಸ್‌ನ ಯಶಸ್ವಿ ನಿರ್ವಹಣೆ, ಖಾಸಗಿ ಹೂಡಿಕೆದಾರರನ್ನು ರೈಲು ಸೇವಾ ಕ್ಷೇತ್ರದತ್ತ ಆಕರ್ಷಿಸಲು ಸಹಕಾರಿಯಾಗಿದೆ. ಭಾರತದ ಸಾರಿಗೆ ಕ್ಷೇತ್ರದಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು ಒಂದು ಕ್ರಾಂತಿಕಾರಿ ಹೆಜ್ಜೆ ಎಂದೇ ವಿಶ್ಲೇಷಿಸಬಹುದು.