• ಕೆ.ಎಂ. ಪವಿತ್ರಾ

ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶ ಪ್ರವಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಸ್ಥಳಗಳನ್ನು ನೋಡಬೇಕು, ವಿಭಿನ್ನ ಸಂಸ್ಕೃತಿಯನ್ನು ಅನುಭವಿಸಬೇಕು ಎಂಬ ಆಸೆಯಿಂದ ಜನರು ಪ್ರವಾಸಕ್ಕೆ ತೆರಳುತ್ತಾರೆ. ಆದರೆ ಪ್ರವಾಸದ ಸಮಯದಲ್ಲಿ ಹೆಚ್ಚಾಗಿ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ ಭಾಷೆಯ ಅಡಚಣೆ. ಇಂಥ ಸಂದರ್ಭಗಳಲ್ಲಿ ಹಲವಾರು ಜನರು ಗೊಂದಲಕ್ಕೀಡಾಗಿ ಪ್ರಯಾಣದ ಸಂತೋಷವನ್ನೇ ಕಳೆದುಕೊಳ್ಳುತ್ತಾರೆ. ಆದರೆ, ಕೆಲವು ಮುನ್ನೆಚ್ಚರಿಕೆ ಮತ್ತು ಸರಿಯಾದ ಯೋಜನೆಯಿಂದ ಈ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು.

ಇದನ್ನೂ ಓದಿ: ವಿದೇಶ ಪ್ರವಾಸ ಸಸ್ಯಾಹಾರಿಗಳಿಗೆ ಸಾಹಸ

ಈ ರೀತಿಯ ಸಮಸ್ಯೆಗಳು ಎದುರಾದಾಗ ಮೊದಲು ನೆನಪಾಗುವುದೇ ಗೂಗಲ್ ಬ್ರಹ್ಮ. ಹೌದು ಇಂಥ ಸಮಯದಲ್ಲಿ ಹೆಚ್ಚಾಗಿ ಟ್ರಾನ್ಸ್‌ಲೇಷನ್ ಆಪ್‌ಗಳನ್ನು ಬಳಸಬಹುದು. ಮೊಬೈಲ್‌ನಲ್ಲಿ ಟ್ರಾನ್ಸ್‌ಲೇಷನ್ ಆಪ್‌ಗಳನ್ನು ಇಟ್ಟುಕೊಂಡರೆ ಮಾತುಗಳನ್ನು ತಕ್ಷಣ ಭಾಷಾಂತರ ಮಾಡಿಕೊಳ್ಳಬಹುದು. ಆಫ್‌ಲೈನ್ ಭಾಷಾ ಪ್ಯಾಕ್‌ಗಳನ್ನೂ ಡೌನ್‌ಲೋಡ್ ಮಾಡಿಕೊಂಡರೆ ಇಂಟರ್‌ನೆಟ್‌ ಇಲ್ಲದಿದ್ದರೂ ಉಪಯೋಗವಾಗುತ್ತದೆ.

Untitled design (13)

ಯಾವೆಲ್ಲಾ ಆಪ್‌ಗಳಿವೆ?

  • ಗೂಗಲ್ ಟ್ರಾನ್ಸ್ಲೇಟ್: ಇದು ಅತ್ಯಂತ ಜನಪ್ರಿಯ ಆಪ್ ಆಗಿದ್ದು, ಸಂದೇಶ , ವಾಯ್ಸ್ , ಕ್ಯಾಮೆರಾ ಟ್ರಾನ್ಸ್ಲೇಷನ್ ಎಲ್ಲ ರೀತಿಯ ಲಕ್ಷಣಗಳನ್ನು ಒಳಗೊಂಡಿದೆ.
  • ಮೈಕ್ರೋಸಾಫ್ಟ್ ಟ್ರಾನ್ಸ್ಲೇಟರ್: ಮಾತುಕತೆಗಳನ್ನು ಅನುವಾದ ಮಾಡಲು ಉತ್ತಮ ಮಾರ್ಗಸೂಚಿಯಾಗಿದೆ. ಈ ಆಪ್ ಆಫ್‌ಲೈನ್‌ ಕೂಡ ಸಹಾಯ ಮಾಡುತ್ತದೆ. ಗುಂಪು ಮಾತುಕತೆಗೆ ಸಹಾಯವಾಗುವ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಪ್ರವಾಸ ಸಮಯದಲ್ಲಿ ಸಹಾಯಕಾರಿ...
  • ಡೀಪ್‌ಎಲ್‌ (DeepL): ಈ ಆಪ್ ಪ್ರೊಫೆಷನಲ್‌ ಅನುವಾದಕ್ಕೆ ಉತ್ತಮ. ಸಂದೇಶ ಕಳುಹಿಸಲು ಮತ್ತು ಡಾಕ್ಯುಮೆಂಟ್‌ಗಳನ್ನು ಅನುವಾದ ಮಾಡಲು ಹೆಚ್ಚು ಅನುಕೂಲಕಾರಿ.
  • ನವೆರ್‌ ಪಪಗೊ (Naver Papago): ಕೊರಿಯನ್, ಜಪಾನೀಸ್, ಚೈನೀಸ್ ಮುಂತಾದ ಏಷ್ಯನ್ ಭಾಷೆಗಳ ಅನುವಾದಕ್ಕೆ ತುಂಬಾ ಸಹಾಯಕರಿಯಾಗಿದೆ.
  • ಐಟ್ರಾನ್ಸ್‌ಲೇಟ್‌ (iTranslate): ಧ್ವನಿ ಅನುವಾದ ಮತ್ತು ದಿನನಿತ್ಯದ ಮಾತುಕತೆಗೆ ಉತ್ತಮ ಆಪ್. ಆಫ್‌ಲೈನ್‌ನಲ್ಲಿ ಪ್ರೀಮಿಯಂ ತಗೆದುಕೊಂಡರೆ ಪ್ರವಾಸಕ್ಕೆ ಸಹಕಾರಿ.

Untitled design (14)

ಭಾಷೆ ಕಲಿತರೆ ಉತ್ತಮ

ಇಷ್ಟೇ ಅಲ್ಲದೆ, ಪ್ರವಾಸಕ್ಕೆ ತೆರಳುವ ಮೊದಲು ಕೆಲವು ಸಾಮಾನ್ಯ ಪದಗಳು ಮತ್ತು ವಾಕ್ಯಗಳನ್ನು ಕಲಿತುಕೊಳ್ಳುವುದು ಸಹ ಬಹಳ ಉಪಯುಕ್ತವಾಗುತ್ತದೆ. ಭಾಷೆ ಗೊತ್ತಿಲ್ಲದ ಊರಿಗೆ ಹೋದಾಗ ದಾರಿ ಕೇಳುವುದು, ಊಟ ಆರ್ಡರ್ ಮಾಡುವುದು, ವಾಹನ ಮಾಹಿತಿ ಪಡೆಯುವುದು ಎಲ್ಲವೂ ಕಷ್ಟವಾಗಬಹುದು. ಆದ್ದರಿಂದ ಪ್ರಯಾಣಕ್ಕೆ ಹೋಗುವ ಮೊದಲು ಅಲ್ಲಿನ ಸಾಮಾನ್ಯ ಪದಗಳನ್ನು ಕಲಿಯುವುದು ಉತ್ತಮ. ನಮಸ್ಕಾರ, ಧನ್ಯವಾದ, ಸಹಾಯ ಬೇಕು, ಎಲ್ಲಿ- ಎಂಬ ಕೆಲವು ಮೂಲಭೂತ ಪದಗಳು ಕೂಡ ಅನೇಕ ಸಂದರ್ಭಗಳಲ್ಲಿ ನೆರವಾಗುತ್ತವೆ. ಸ್ಥಳೀಯ ಭಾಷೆಯ ಬಗ್ಗೆ ಸ್ವಲ್ಪ ತಿಳಿವಳಿಕೆ ಇದ್ದರೆ ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗುತ್ತದೆ.

ಕೆಲವೊಮ್ಮೆ ಭಾಷೆಯ ಜತೆಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೂ ಎದುರಾಗುತ್ತದೆ. ವಿಶೇಷವಾಗಿ ಬೆಟ್ಟ ಪ್ರದೇಶಗಳು, ಅರಣ್ಯ ಪ್ರದೇಶಗಳು ಅಥವಾ ದೂರದ ಪ್ರವಾಸ ತಾಣಗಳಲ್ಲಿ ಇಂಟರ್‌ನೆಟ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂಥ ಸಂದರ್ಭಗಳಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದು ಉತ್ತಮ, ಜತೆಗೆ ಪ್ರಮುಖ ಮಾಹಿತಿಯನ್ನು ಬರೆದಿಟ್ಟುಕೊಳ್ಳುವುದು, ಹೊಟೇಲ್ ವಿಳಾಸ, ಸಂಪರ್ಕ ಸಂಖ್ಯೆ, ಹೋಗಬೇಕಾದ ಸ್ಥಳಗಳ ಹೆಸರುಗಳನ್ನು ಸ್ಥಳೀಯ ಭಾಷೆಯಲ್ಲಿ ನೋಟ್ ಮಾಡಿಕೊಂಡರೆ ದಾರಿ ಕೇಳುವಾಗ ಸಹಾಯವಾಗುತ್ತದೆ.

Untitled design (15)

ಚಿತ್ರಗಳು ಮತ್ತು ಮ್ಯಾಪ್‌ಗಳು

ತಿನ್ನುವ ಪದಾರ್ಥ, ಸ್ಥಳ ಅಥವಾ ಸೇವೆಗಳನ್ನು ವಿವರಿಸಲು ಫೊಟೋ ಅಥವಾ ಮ್ಯಾಪ್ ತೋರಿಸಿದರೆ ಭಾಷೆ ಬಾರದಿದ್ದರೂ ಅರ್ಥವಾಗುತ್ತದೆ. ಅದೇ ರೀತಿಯಾಗಿ ಸ್ಥಳೀಯ ಗೈಡ್ ಅಥವಾ ಟೂರ್ ಸೇವೆ ಪಡೆಯುವುದು ಕೂಡ ಒಳ್ಳೆಯದು. ಪ್ರವಾಸ ಸ್ಥಳದ ಬಗ್ಗೆ ತಿಳಿದಿರುವ ಗೈಡ್ ಇದ್ದರೆ ಭಾಷಾ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಕೂಡ ಸಿಗುತ್ತದೆ.

ಜಾಗ್ರತೆ ಇರಲಿ

ಸ್ಥಳೀಯರ ಸಹಾಯ ಪಡೆಯುವುದೂ ಕೂಡ ಪ್ರಯಾಣದ ಒಂದು ಭಾಗವೇ ಆಗಿದೆ. ಭಾಷೆ ಬಾರದಿದ್ದರೂ ನಗುಮುಖ ಮತ್ತು ಗೌರವಯುತ ವರ್ತನೆಯ ಮೂಲಕ ನಮ್ಮ ಅಗತ್ಯವನ್ನು ಅವರಿಗೆ ತಿಳಿಸಿ ನಮಗೆ ಬೇಕಾದ ಮಾಹಿತಿಯನ್ನು ನಾವು ಪಡೆದುಕೊಳ್ಳಬಹುದಾಗಿದೆ. ಇಂದಿನ ತಂತ್ರಜ್ಞಾನ ಪ್ರಯಾಣವನ್ನು ಸುಲಭಗೊಳಿಸಿದರೂ, ಮುನ್ನೆಚ್ಚರಿಕೆ ಮತ್ತು ಪೂರ್ವಸಿದ್ಧತೆ ಅತ್ಯಂತ ಮುಖ್ಯವಾಗಿರುತ್ತದೆ . ಸರಿಯಾದ ಯೋಜನೆ, ತಂತ್ರಜ್ಞಾನದ ಬಳಕೆ ಮತ್ತು ಆತ್ಮವಿಶ್ವಾಸ ಇದ್ದರೆ ಭಾಷೆ ಅಥವಾ ನೆಟ್ವರ್ಕ್ ಸಮಸ್ಯೆಗಳು ಪ್ರವಾಸದ ಸಂತೋಷವನ್ನು ಕಡಿಮೆ ಮಾಡಲಾರವು. ಹೊಸ ಸ್ಥಳಗಳನ್ನು ನೋಡುವ ಉತ್ಸಾಹದ ಜೊತೆ ಸವಾಲುಗಳನ್ನು ಎದುರಿಸುವ ಧೈರ್ಯವೂ ನಮ್ಮಲ್ಲಿ ಇರಬೇಕು. ಆಗ ಮಾತ್ರ ಪ್ರವಾಸ ಒಂದು ಸುಂದರ ಅನುಭವವಾಗಿ ಉಳಿಯುತ್ತದೆ.