ಕಜಾಕ್ ಜನರ ಖತರ್ನಾಕ್ ಬಾಡು
ಕಜಾಕ್ ಜನರು ವಿಶೇಷ ಹಬ್ಬಗಳು, ಮದುವೆಗಳು, ಸಾಂಪ್ರದಾಯಿಕ ಸಮಾರಂಭಗಳಲ್ಲಿ horse meat dishes ಬಳಸುತ್ತಾರೆ. ಕುದುರೆ ಮಾಂಸ ಇವರ ಸಾಂಪ್ರದಾಯಿಕ ಮತ್ತು ಸಾಮಾನ್ಯವಾಗಿ ಉಪಯೋಗಿಸುವ ಆಹಾರವಾಗಿದೆ. ಸಂಜೆ ಸ್ಥಳೀಯ ಶೈಲಿಯ ಟೀ ಹಾಗೂ ಆಹಾರ ಸವಿಯಲು ಕೆಫೆಗಳು ಬಹಳಷ್ಟಿವೆ. ನಮಗೆ ಸೀ ಬುಕ್ಟ್ರೋನ್ ಟೀ ಬಹಳ ಇಷ್ಟವಾಯಿತು. ನೀವು ಒಮ್ಮೆ ಮರೆಯದೆ ಟ್ರೈ ಮಾಡಿ.
- ಶಶಿಧರ್
ನಾನು ಮತ್ತು ನಮ್ಮವಳು ಹೋಗಬೇಕೆಂದುಕೊಂಡ ಪಟ್ಟಿಯಲ್ಲಿ ಕಜಾಕಿಸ್ತಾನದ ಅಲ್ಮಾಟಿ ಬಹು ದಿನಗಳಿಂದ ಮುಂದೂಡಲ್ಪಟ್ಟಿತ್ತು. ನವೆಂಬರ್ ಕೊನೆ ವಾರದಲ್ಲಿ ಬರಿ ಒಂದು ವಾರ ಮುಂಚೆ ನಿರ್ಧರಿಸಿ ಅನ್‌ಪ್ಲಾನ್ಡ್ ಟ್ರಿಪ್‌ಗೆ ಹೊರಟೇಬಿಟ್ಟವು.
ಅಲ್ಮಾಟಿ ನಾಮ ಕಾರಣ
ಜಗತ್ತಿನ 9ನೆಯ ದೊಡ್ಡ ರಾಷ್ಟ್ರ ಕಝಾಕಿಸ್ತಾನ. ಅದರ ಮೊದಲ ರಾಜಧಾನಿ ಹಾಗೂ ಅತಿ ದೊಡ್ಡ ನಗರವೇ ಅಲ್ಮಾಟಿ. ಹಿಮಾವೃತ ಪರ್ವತಗಳು ಅಲ್ಮಾಟಿಯ ಆಕರ್ಷಣೆ. ಇದು ವ್ಯಾಪಾರ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ʻಅಲ್ಮಾ-Ataʼ ಎಂದರೆ ʻಸೇಬಿನ ತಂದೆʼ. ಇದು ಇಲ್ಲಿ ದೊರೆಯುವ ಪ್ರಸಿದ್ಧ ಸೇಬು.
ಸೋವಿಯತ್ ಒಕ್ಕೂಟದಿಂದ ಹೊರಬಂದರೂ ಅದರ ಪ್ರಭಾವ ಇಂದಿಗೂ ನಗರದಲ್ಲಿದೆ. ಅಲ್ಮಾಟಿಯಲ್ಲಿ ಕಜಾಕ್ ಜತೆಗೆ ರಷ್ಯನ್ ಭಾಷೆಯೂ ವ್ಯಾಪಕವಾಗಿ ಬಳಕೆಯಲ್ಲಿದೆ. ಇಂಗ್ಲಿಷ್ ಭಾಷೆ ಬಳಸುವ ಅಭ್ಯಾಸವಿಲ್ಲ. ಇಲ್ಲಿನ ಕಟ್ಟಡಗಳು, ವಿಶಾಲ ರಸ್ತೆ, ಸ್ಮಾರಕಗಳು ಮತ್ತು ಸಾರ್ವಜನಿಕ ಸಾರಿಗೆ ವಿನ್ಯಾಸ ಇವೆಲ್ಲವೂ ರಷ್ಯನ್ ಶೈಲಿಯೊಂದಿಗೆ ತಳುಕು ಹಾಕಿಕೊಂಡಿವೆ. ವಿಶೇಷವೆಂದರೆ ಇದರ ಪ್ರಗತಿಶೀಲ ವಾತಾವರಣ. ಇಲ್ಲಿ ಹಲವು ಸಂಸ್ಕೃತಿಗಳ ಜನರಿದ್ದಾರೆ. ಕಝಾಕ್, ರಷ್ಯನ್, ತುರ್ಕಿ, ಕೊರಿಯನ್ ಜನರೂ ಹೊಂದಿಕೊಂಡು ವೃತ್ತಿ ಹಾಗು ವ್ಯಾಪಾರ ಮಾಡುತ್ತಿದ್ದಾರೆ.

ಕೊಕ್ ಟೋಬೇ
ಅಲ್ಮಾಟಿ ನಗರ ಕಣ್ತುಂಬಿಕೊಳ್ಳಲು ಕೇಬಲ್ ಕಾರ್/ಗೊಂಡಾಲಾ ಮೂಲಕ 6-8ನಿಮಿಷಗಳ ಪ್ರಯಾಣ. ಮಕ್ಕಳಿಗಾಗಿ ಗೇಮ್ಸ್ ಹಾಗೂ ಮಿನಿ ಜಾಯಿಂಟ್ ಇದೆ. ಸೂರ್ಯಾಸ್ತದ ಸಮಯದಲ್ಲಿ ಹೋದರೆ ಇಡೀ ನಗರವೇ ನೋಡಲು ಬಲು ಸುಂದರವಾಗಿರುತ್ತದೆ.
ಷಿಂಬುಲಿಕ್ ಸ್ಕೀ ರೆಸಾರ್ಟ್
ಟಿಯನ್-ಶಾನ್ ಪರ್ವತದಲ್ಲಿ ಇರುವ ಇದು ಹಿಮಕ್ರೀಡೆ ಪ್ರಿಯರಿಗೆ ಸ್ವರ್ಗ. ಇಲ್ಲಿ ಕೇಬಲ್ ಕಾರ್ ಪ್ರಯಾಣ ಅತಿ ರೋಮಾಂಚನಕಾರಿ. ಸ್ಕೀಯಿಂಗ್ ಮತ್ತು ಐಸ್ ಸ್ಕೇಟಿಂಗ್ ಮಾಡಲು ಸೂಕ್ತ ಸ್ಥಳ.

ಜೆನಿಕೋವ್ ಕ್ಯಾಥಡ್ರಿಲ್ - ಮರದಿಂದ ನಿರ್ಮಿಸಿದ ಚರ್ಚ್
ಇದು ಒಂದು ಮೊಳೆಯನ್ನೂ ಬಳಸದೆ ಮರದಿಂದ ನಿರ್ಮಿಸಲ್ಪಟ್ಟಿರುವ ವಿಶ್ವದ ಅಪರೂಪದ ಕಟ್ಟಡ. 20ನೆಯ ಶತಮಾನದ ಆರಂಭದಿಂದಲೂ ಭೂಕಂಪಗಳಿಗೂ ಜಗ್ಗದೆ ನಿಂತಿರುವುದು ಇದರ ವಿಶೇಷ.
ಸೆಂಟ್ರಲ್ ಸ್ಟೇಟ್ ಮ್ಯೂಸಿಯಂ
ಇತಿಹಾಸದಲ್ಲಿ ಆಸಕ್ತಿ ಇರುವವರು ಕಜಾಕಿಸ್ತಾನದ ಇತಿಹಾಸ, ಸಂಸ್ಕೃತಿ ಮತ್ತು ಪಾರಂಪರಿಕ ಜೀವನ ಶೈಲಿಯ ವೈಭವವನ್ನು ಇಲ್ಲಿ ಕಾಣಬಹುದು.
ಅಲ್ಮಾಟಿಯ ಸುತ್ತಲಿನ ಪ್ರೇಕ್ಷಣೀಯ ತಾಣಗಳು-
ಚೇರಿಯನ್ ಕ್ಯಾನಿಯನ್: ವ್ಯಾಲಿ ಆಫ್ ಕ್ಯಾಸಲ್ಸ್, ಮೂನ್ ಕ್ಯಾನಿಯನ್, ಬ್ಲಾಕ್ ಕ್ಯಾನಿಯನ್
ಕಾರಿನಲ್ಲಿ 3-4 ಗಂಟೆ ಪ್ರಯಾಣದ ನಂತರ 2-3 ಕಿಮೀ ಟ್ರೆಕ್ಕಿ೦ಗ್ ಮಾಡಿ ಮುಂದೆ ಹೋದರೆ ಕೆಂಪು -ಕಿತ್ತಳೆ ಪ್ರಪಂಚ ನಮ್ಮ ಕಣ್ಮುಂದೆ ಬರುತ್ತದೆ. ಸುಮಾರು 12 ಮಿಲಿಯನ್ ವರ್ಷಗಳ ಹಳೆಯದಾಗಿರುವ ಈ ಕಣಿವೆ ನೋಡಲು ಬಲು ಸೊಗಸು.
ಕೈಂಡಿ ಲೇಕ್
2-4 ಕಿಮೀ ಕಾಲ್ನಡಿಗೆ/ಟ್ರೆಕ್ಕಿ೦ಗ್ ಅಥವಾ ಕುದುರೆ ಸವಾರಿ ಮಾಡಿದರೆ ಪ್ರಕೃತಿಯ ಸುಂದರ ಅನುಭವ, 1911ರ ಭೂಕಂಪದಿಂದ ರೂಪುಗೊಂಡ ಕೈಂಡಿ ಸರೋವರ ಶತಮಾನಗಳ ಹಳೆಯ ಅರಣ್ಯವನ್ನೇ ಮುಳುಗಿಸಿತು. ಇನ್ನು ನೀರಿನೊಳಗೆ ಒಣ ಮರದ ತುಂಡುಗಳು ಸರೋವರಕ್ಕೆ ಒಂದು ವಿಚಿತ್ರ ಸೌಂದರ್ಯವನ್ನು ನೀಡಿವೆ.
ಕೊಲ್ಸಯ್ ಲೇಕ್
1 ಕಿಮೀ ನಡೆದರೆ ಸಿಗುವ ಈ ಸರೋವರಕ್ಕೆ ʻಟಿಯಾನ್ ಶಾನ್ ಪರ್ವತಗಳ ನೀಲಿ ಹಾರʼ ಎನ್ನುವ ಹೆಸರೂ ಇದೆ. ನೋಡಲು ಬಲು ಸೊಗಸಾಗಿದ್ದು, ದೋಣಿ ವಿಹಾರಕ್ಕೂ ಅವಕಾಶವಿದೆ.

ಶಾಪಿಂಗ್ ಪ್ರಿಯರಿಗೆ…
ಆರ್ಬರ್ಟ್ ಸ್ಟ್ರೀಟ್
ಸಂಜೆ ವಿಹಾರಕ್ಕೆ ಹಾಗೂ ಶಾಪಿಂಗ್‌ಗೆ ಹೇಳಿ ಮಾಡಿಸಿದ ಸ್ಥಳವಿದು. ಈ ರಸ್ತೆಯಲ್ಲಿ ವಾಹನ ಸಂಚಾರವಿಲ್ಲ. ಬೀದಿಬದಿಯಲ್ಲಿ ಹಲವು ಮಿನಿ ಆರ್ಕೆಸ್ಟ್ರಾಗಳಿರುತ್ತವೆ.
ಗ್ರೀನ್ ಬಜಾರ್
ಇದು ಸ್ಥಳೀಯರ ಜೀವನವನ್ನು ಅರ್ಥೈಸಿಕೊಳ್ಳಲು ಉತ್ತಮ ಸ್ಥಳ. ಬಟ್ಟೆ, ಡ್ರೈಫ್ರೂಟ್ ಇತರೆ ವಸ್ತುಗಳನ್ನು ಚೌಕಾಸಿ ಮಾಡಿ ಖರೀದಿಸಬಹುದು.
ನಗರದೊಳಗೆ ಸಂಚರಿಸಲು ಟ್ಯಾಕ್ಸಿ (ಯಾಂಡೇಕ್ಸ್ ಗೋ) ಮೆಟ್ರೋ ಹಾಗೂ ಬಸ್ ಮಾರ್ಗಗಳೇ ಸುಲಭವಾಗಿವೆ. ಗ್ಲೋವೋ ಫುಡ್ ಆಪ್ ಮೂಲಕ ನೀವಿರುವಲ್ಲಿಗೆ ಆಹಾರ ತರಿಸಿಕೊಳ್ಳಬಹುದು. ಕೆಲವು ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಭಾರತೀಯ ಆಹಾರ ಲಭ್ಯವಿದೆ. ಸಸ್ಯಾಹಾರಿಗಳಿಗೆ ಇಲ್ಲಿನ ಸ್ಥಳೀಯ ಮೆನು ಸ್ವಲ್ಪ ಕಷ್ಟ. ಸಸ್ಯಾಹಾರಿಗಳು ಪಿರೊಶ್ಕಿ, ಪಟೇಟೊ ಸಂಸ, ಲಗ್ಮನ್ ಟ್ರೈ ಮಾಡಬಹುದು, ಆದರೂ ಒಮ್ಮೆ ನೀವು ಅವರಿಗೆ ಸಸ್ಯಾಹಾರಿ ಎಂದು ಹೇಳಿ ಆರ್ಡರ್ ಮಾಡಿದರೆ ಒಳಿತು.
ಕಜಾಕ್ ಜನರು ವಿಶೇಷ ಹಬ್ಬಗಳು, ಮದುವೆಗಳು, ಸಾಂಪ್ರದಾಯಿಕ ಸಮಾರಂಭಗಳಲ್ಲಿ horse meat dishes ಬಳಸುತ್ತಾರೆ. ಕುದುರೆ ಮಾಂಸ ಇವರ ಸಾಂಪ್ರದಾಯಿಕ ಮತ್ತು ಸಾಮಾನ್ಯವಾಗಿ ಉಪಯೋಗಿಸುವ ಆಹಾರವಾಗಿದೆ.
ಸಂಜೆ ಸ್ಥಳೀಯ ಶೈಲಿಯ ಟೀ ಹಾಗೂ ಆಹಾರ ಸವಿಯಲು ಕೆಫೆಗಳು ಬಹಳಷ್ಟಿವೆ. ನಮಗೆ ಸೀ ಬುಕ್ಟ್ರೋನ್ ಟೀ ಬಹಳ ಇಷ್ಟವಾಯಿತು. ನೀವು ಒಮ್ಮೆ ಮರೆಯದೆ ಟ್ರೈ ಮಾಡಿ. ಭಾರತೀಯ ಪ್ರವಾಸಿಗರಿಗೆ 14 ದಿನಗಳ ವೀಸಾ ಫ್ರೀ ಆಗಿರುತ್ತದೆ. ಆದರೆ ಪಾಸ್‌ಪೋರ್ಟ್ ಕಡ್ಡಾಯ.
ಕಜಾಕ್ ಸ್ಥಳೀಯ ಕರೆನ್ಸಿ ಟೆಂಗೆ (KZT). ಬಹಳ ಕಡೆಗಳಲ್ಲಿ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಬಹುದು. ಆದರೂ, ಸ್ಥಳೀಯ ಕರೆನ್ಸಿ ಕೈಲಿದ್ದರೆ ಉತ್ತಮ. ಬೆಂಗಳೂರಿನಲ್ಲಿ ಟೆಂಗೆ ಸಿಗುವುದು ಕಡಿಮೆಯಾದರೂ, ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ವಿನಿಮಯ ಮಾಡಿ ಇಟ್ಟು ಕೊಳ್ಳಬಹುದು.
ನವೆಂಬರ್ – ಮಾರ್ಚ್ ಅಲ್ಮಾಟಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದ್ದು, ಸ್ಕೀಯಿಂಗ್ ಮತ್ತು ಹಿಮ ಕ್ರೀಡೆಗಳನ್ನೂ ಆನಂದಿಸಬಹುದು. ಬೆಂಗಳೂರಿನಿಂದ ವಿಮಾನ ಸಂಪರ್ಕವಿದೆ.