ಮಹೇಶ್ವರ, ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ಹರಿಯುವ ನರ್ಮದಾ ನದಿಯ ದಡದಲ್ಲಿದೆ. ಇದು ಪ್ರಾಚೀನ ಕಾಲದಿಂದ ಇಂದಿನವರೆಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವದ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇದು ಹೋಳ್ಕರ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅದಕ್ಕಾಗಿ "ಹೋಳ್ಕರ್ ಸಾಮ್ರಾಜ್ಯದ ವೈಭವದ ಪ್ರತೀಕ" ಎಂದು ಈ ಪ್ರದೇಶವನ್ನು ಪರಿಗಣಿಸಲಾಗಿದೆ. ಈ ಪಟ್ಟಣ ಹಿಂದೂ ಧರ್ಮದ ಪವಿತ್ರ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ.

ಪ್ರಾಚೀನ ಇತಿಹಾಸ

ಮಹಿಷ್ಮತಿ ಎಂಬ ಹೆಸರಿನಿಂದ ಈ ಪ್ರದೇಶವನ್ನು ಮಹಾಭಾರತ ಹಾಗೂ ರಾಮಾಯಣ ಕಥನಗಳಲ್ಲಿ ಉಲ್ಲೇಖಿಸಲಾಗಿದೆ. ಪೌರಾಣಿಕ ಕಥೆಗಳ ಪ್ರಕಾರ, ಈ ನಗರವು ಹೈಹಯ ವಂಶದ ರಾಜ ಕಾರ್ತವೀರ್ಯ ಅರ್ಜುನನ ಆಡಳಿತ ಕೇಂದ್ರವಾಗಿತ್ತಂತೆ. ಹಾಗಾಗಿ ಇದನ್ನು ನರ್ಮದಾ ದಡದಲ್ಲಿರುವ ಅತ್ಯಂತ ಪುರಾತನ ನಗರಗಳಲ್ಲಿ ಒಂದು ಎನ್ನಲಾಗಿದೆ.

maheshwara

ಬೌದ್ಧ ಮತ್ತು ಜೈನ ಹಿನ್ನೆಲೆ

ಇಲ್ಲಿ ಬೌದ್ಧ ಮತ್ತು ಜೈನ ಧರ್ಮಗಳ ಪ್ರಭಾವವೂ ಇತ್ತು ಎನ್ನುವುದಕ್ಕೆ ಸಾಕ್ಷಿಯಂತೆ ಹಲವಾರು ಸ್ಮಾರಕ, ಶಿಲಾಶಾಸನಗಳು ಮತ್ತು ಗೋಪುರಗಳು ದೊರೆತಿವೆ.

ಮಧ್ಯಯುಗದ ಇತಿಹಾಸ

ಚಾಲುಕ್ಯರು, ಪರಮಾರರು ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶಗಳು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿವೆ. ಈ ಎಲ್ಲ ರಾಜವಂಶಗಳ ಕಾಲದಲ್ಲಿ ಮಹೇಶ್ವರವು ಧಾರ್ಮಿಕ, ಶೈಕ್ಷಣಿಕ ಹಾಗೂ ವ್ಯಾಪಾರ ಕೇಂದ್ರವಾಗಿ, ನರ್ಮದಾ ನದಿಯ ದಡದಲ್ಲಿ ಇರುವುದರಿಂದ ಪ್ರಮುಖ ಜಲ ಮಾರ್ಗವೂ ಆಗಿತ್ತು ಎನ್ನಲಾಗಿದೆ.

maheshwara tourist  place

ಹೋಳ್ಕರ್ ಯುಗ

18ನೇ ಶತಮಾನದಲ್ಲಿ ಮಹೇಶ್ವರವು ಮಹತ್ವದ ತಿರುವು ಪಡೆದಿತು. ಮರಾಠ ಸಾಮ್ರಾಜ್ಯದ ಶಕ್ತಿಶಾಲಿ ಮಹಿಳಾ ಆಡಳಿತಗಾರ್ತಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಈ ಪ್ರದೇಶವನ್ನು ತನ್ನ ರಾಜಧಾನಿಯನ್ನಾಗಿಸಿ ಆಡಳಿತ ನಡೆಸಿದ್ದರು. ಜತೆಗೆ ಈ ಸಮಯದಲ್ಲಿ ಇಲ್ಲಿ ಹಲವಾರು ದೇವಸ್ಥಾನ, ಘಾಟ್, ಧರ್ಮಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದರಂತೆ. ಅಹಲ್ಯಾಬಾಯಿ ನಿರ್ಮಿಸಿದ್ದ ಮಹೇಶ್ವರ ಕೋಟೆ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿನ ನರ್ಮದಾ ಘಾಟ್ ಅತ್ಯಂತ ಸುಂದರವಾಗಿದೆ. ಪ್ರತಿವರ್ಷ ನರ್ಮದಾ ಜಯಂತಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇಲ್ಲಿನ ಸಿಲ್ಕ್ ಸೀರೆ ಸಿಕ್ಕಾಪಟ್ಟೆ ಫೇಮಸ್

ಮಹೇಶ್ವರದಲ್ಲಿ ತಯಾರಾಗುವ ಮಾಹೇಶ್ವರಿ ಸಿಲ್ಕ್ ಸೀರೆಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಇವು ಹೋಳ್ಕರ್ ಕಾಲದಲ್ಲಿ ಆರಂಭವಾಗಿದ್ದು, ಅಹಲ್ಯಾಬಾಯಿ ಅವರೇ ಇವುಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದರಂತೆ. ಇಂದು ಈ ಸಿಲ್ಕ್‌ ಸೀರೆಗಳು ಜಗತ್ತಿನಾದ್ಯಂತ ವ್ಯಾಪಕವಾಗಿ ಪರಿಚಿತವಾಗಿವೆ.

Narmada Ghat

ಧಾರ್ಮಿಕ ಮಹತ್ವ

ಮಹೇಶ್ವರದಲ್ಲಿನ ಅಹಲ್ಯಾಬಾಯಿ ಹೋಳ್ಕರ್ ದೇವಸ್ಥಾನ, ರೇವಾ ಘಾಟ್, ಪಂಚಲಿಂಗೇಶ್ವರ ಮತ್ತು ರಾಜರಾಜೇಶ್ವರ ದೇವಸ್ಥಾನಗಳು ಪ್ರವಾಸಿಗರ ಹಾಗೂ ಹಿಂದೂ ಧಾರ್ಮಿಕ ಆಕರ್ಷಣೆಯ ಕೇಂದ್ರವಾಗಿವೆ. ನರ್ಮದಾ ತೀರದಲ್ಲಿ ದಿನನಿತ್ಯ ಆರತಿ ದರ್ಶನ ಜರುಗುತ್ತದೆ. ಇದನ್ನು ಕಣ್ತುಂಬಿಕೊಂಡರೆ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.

ಹೀಗೆ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಕಟ್ಟಡಗಳು ಮತ್ತು ನದಿಯ ದಡದ ಘಾಟ್‌ಗಳು ಈ ಸ್ಥಳವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿವೆ.

ಇತ್ತೀಚಿನ ದಿನಗಳಲ್ಲಿ ಮಹೇಶ್ವರವು ಪ್ರವಾಸೋದ್ಯಮ ಹಾಗೂ ಜವಳಿ ಉದ್ಯಮ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದೆ. ಹಲವಾರು ಚಲನಚಿತ್ರಗಳು, ಧಾರಾವಾಹಿಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಅಚ್ಚಳಿಯದ ಇತಿಹಾಸದೊಂದಿಗೆ ಸಂಸ್ಕೃತಿ ಮತ್ತು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೆಸರುವಾಸಿಯಾಗಿದೆ ಈ ಮಹೇಶ್ವರ. ಪುರಾತನ ಪರಂಪರೆ, ಹೋಳ್ಕರ್ ವೈಭವ, ನರ್ಮದಾ ನದಿಯ ಪವಿತ್ರತೆ ಹಾಗೂ ಶ್ರೇಷ್ಠ ಹಸ್ತಶಿಲ್ಪ ಇವುಗಳು ಮಹೇಶ್ವರವನ್ನು ಭಾರತದ ಅನರ್ಘ್ಯ ರತ್ನವಾಗಿ ರೂಪಿಸಿವೆ. ನೀವು ಇಲ್ಲಿಗೆ ಹೋಗಿ ತಿರುಗಾಡುತ್ತಿದ್ದರೆ ಇತಿಹಾಸ ಮೆಲುಕು ಹಾಕುತ್ತಲೇ ಪ್ರವಾಸದ ಹಸಿವು ನೀಗಿಸಿಕೊಳ್ಳಬಹುದು.