ಸಮ್ಮರ್ ಜತೆ ಸಮರ ಬೇಡ!
ಪ್ರಾಣಿಗಳ ಜೀವನಶೈಲಿಯನ್ನು ಮೂರು ರೀತಿಯಲ್ಲಿ ವಿಭಾಗಿಸಲಾಗಿದೆ. ರಾತ್ರಿ ಮಲಗಿ ಹಗಲು ಎದ್ದಿರುವ, ಹಗಲು ಮಲಗಿ ರಾತ್ರಿ ಎದ್ದಿರುವ ಮತ್ತು ಆಹಾರ, ತಾಪಮಾನ ಇತ್ಯಾದಿಗೆ ಅನುಗುಣವಾಗಿ ತಮ್ಮ ನಿದ್ದೆಯ ಸಮಯವನ್ನು 4-6 ವಿಭಾಗಗಳಲ್ಲಿ ಹಂಚಿಕೊಂಡಿರುವ ಪ್ರಾಣಿ-ಪಕ್ಷಿಗಳಿವೆ. ನಾವು ರಾತ್ರಿ ಮಲಗಿ, ಸೂರ್ಯನ ಬೆಳಕಿಗೆ ಆಕ್ಟಿವ್ ಆಗಿರುವವರು.
- ಬಡೆಕ್ಕಿಲ ಪ್ರದೀಪ
ತಂಪು ತಂಗಾಳೀ ತಂದಾನ ಹಾಡಿದಾಗ…
ಬಿರು ಬೇಸಗೆಗೆ ಒಂದೆರಡು ಹನಿ ಮಳೆಯೇ ಮನಸನ್ನು ಮುದಗೊಳಿಸುತ್ತದೆ. ಆದರೆ ಅದೇ ನಾಲ್ಕು ಹನಿಗಳು ಆಗ ತಂಪೆನಿಸಿದರೂ, ನಂತರ, ಕಾದ ಕಾವಲಿಗೆ ಬಿದ್ದ ನೀರಿನ ಹಾಗೆ ಮಾಯವಾಗಿ, ತಂಪೂ ಮಾಯವಾಗಿ, ಬಿರುಬಿಸಿಲಿನ ಝಳ ನಮ್ಮನ್ನು ಮತ್ತೆ ಸುಡತೊಡಗುತ್ತದೆ. ಮತ್ತೆ ತಂಪೂಡಿಸುವ ಊರುಗಳನ್ನು ಕಾಣುವ, ಬಿಸಿಲನ ಝಳವನ್ನು ಮರೆಯುವ ಹಾದಿಯನ್ನು ತವಕಿಸುತ್ತವೆ.
ಈ ಬಾರಿ ನಾವು ಬಿಸಿಲ ಬೇಗುದಿಗೆ ಮನವೊಡ್ಡುವ ಬದಲು, ಹೇಗೆ ಈ ಸಲದ ಬೇಸಗೆಯನ್ನು ಕೂಲ್ ಆಗಿರೋ ಟ್ರಿಪ್ ಮೂಲಕ ರಿಫ್ರೆಶ್ ಮಾಡಿಕೊಳ್ಳೋದು ಅನ್ನೋದನ್ನು ನೋಡೋಣ ಅನ್ನುವ ಆಶಯ ನನ್ನದು.
ಇದನ್ನೂ ಓದಿ: ಟ್ರಾವೆಲ್ ತಪಸ್ಸಿನಂತೆ...
ಮೊದಲು ನಾವು ಪ್ರಾಣಿಗಳಿಂದ ಕಲಿಯೋಣ, ನಾವೆಲ್ಲಾ ಕಾಂಕ್ರೀಟ್ ಕಾಡಲ್ಲಿ ಕಾಲ ಕಳೆಯೋದರಿದ ಪ್ರಾಣಿಗಳ ಜೀವನಶೈಲಿಯನ್ನು ತಿಳಿದರೆ ನಮ್ಮ ಈ ಟ್ರಿಪ್ ಪ್ಲಾನನ್ನು ನಿಜವಾಗಿ ಸುಲಭ ಮಾಡಿಕೊಳ್ಳಬಹುದು. ಪ್ರಾಣಿಗಳ ಜೀವನಶೈಲಿಯನ್ನು ಮೂರು ರೀತಿಯಲ್ಲಿ ವಿಭಾಗಿಸಲಾಗಿದೆ. ರಾತ್ರಿ ಮಲಗಿ ಹಗಲು ಎದ್ದಿರುವ, ಹಗಲು ಮಲಗಿ ರಾತ್ರಿ ಎದ್ದಿರುವ ಮತ್ತು ಆಹಾರ, ತಾಪಮಾನ ಇತ್ಯಾದಿಗೆ ಅನುಗುಣವಾಗಿ ತಮ್ಮ ನಿದ್ದೆಯ ಸಮಯವನ್ನು 4-6 ವಿಭಾಗಗಳಲ್ಲಿ ಹಂಚಿಕೊಂಡಿರುವ ಪ್ರಾಣಿ-ಪಕ್ಷಿಗಳಿವೆ. ನಾವು ರಾತ್ರಿ ಮಲಗಿ, ಸೂರ್ಯನ ಬೆಳಕಿಗೆ ಆಕ್ಟಿವ್ ಆಗಿರುವವರು. ಆದರೆ ಮಧ್ಯಾಹ್ನದ ಬಿಸಿಲ ಝಳಕ್ಕೆ ನಾವು ಮತ್ತೆ ಗೂಡು ಸೇರಿಕೊಂಡರೆ ಸೇಫ್ ಅನ್ನುವುದನ್ನು ಅರಿತು ನಮ್ಮ ಈ ಬಾರಿಯ ಟ್ರಿಪ್ ಅನ್ನು ಪ್ಲಾನ್ ಮಾಡಿಕೊಳ್ಳೋಣ.
ನಿಮ್ಮ ಡೆಸ್ಟಿನೇಶನ್ ಯಾವುದೇ ನೇಶನ್ನಿಗೇ ಆಗಲಿ, ನಿಮ್ಮ ಪ್ಲಾನಿಂಗ್ ಅಲ್ಲಿನ ಹವಾಮಾನಕ್ಕೆ ತಕ್ಕಹಾಗೆ ಇರಲೇಬೇಕು ಅನ್ನುವುದನ್ನು ಮೊದಲು ತಿಳಿದುಕೊಳ್ಳಿ. ನಾವು ಬಿಸಿಲಕಾಲಕ್ಕೆ ಪ್ಲಾನ್ ಮಾಡುತ್ತಿರುವುದರಿಂದ ಈ ಮುಂದಿನ ವಿಚಾರಗಳ ಬಗ್ಗೆ ಗಮನವಿಟ್ಟುಕೊಳ್ಳೋಣ.

ಇಡೀ ದಿನ ಸುತ್ತಬೇಕಿಲ್ಲ…
ನಿಮ್ಮ ಟ್ರಿಪ್ ಪೂರ್ತಿಯಾಗಬೇಕು ಅಂದರೆ ಇಡೀ ದಿನವನ್ನು ಹೊರಗಡೆ ಸುತ್ತುವುದರಲ್ಲೇ ಕಳೆಯಬೇಕು ಅನ್ನುವ ರೂಲ್ ಇಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಿ. ಯಾಕಂದರೆ, ನೀವು ಪ್ರಯಾಣ ಮುಗಿಸಿ ಬಂದಮೇಲೆ ಸುಸ್ತಿನಿಂದ ಒಂದಿಷ್ಟು ದಿನ ಮನೆಯಲ್ಲಿ ರೆಸ್ಟ್ ಮಾಡಿಕೊಂಡೋ, ಬೇಸಗೆಯ ಬಿಸಿಯ ಝಳದಿಂದಾಗುವ ತೊಂದರೆಯನ್ನು ನಿವಾರಿಸಿಕೊಳ್ಳುವುದರಲ್ಲೋ ಕಳೆದರೆ, ಟ್ರಿಪ್ ಹೋದ ಮಜಾ ಎಲ್ಲಿ ಬಂತು ಹೇಳಿ?
ಟ್ರಿಪ್ ಅನ್ನು ಹೊರನೋಟ ಮತ್ತು ಒಳನೋಟ ಎನ್ನುವ ಎರಡು ಥೀಮ್‌ಗಳಲ್ಲಿ ವಿಭಾಗಿಸಿಕೊಳ್ಳೋಣ.
ಬೆಳಗಿನ ಜಾವ 5ರಿಂದಲೇ ನಿಮ್ಮ ಹೊರನೋಟದ ಅವಧಿ ಶುರುವಾಗಿ, ಬೆಳಗ್ಗೆ 10ರ ವೇಳೆಗೆ, ಸೂರ್ಯನ ಝಳ ಏರುವ ಮುನ್ನವೇ ನಿಮ್ಮ ಕೋಣೆಗಳಿಗೋ, ತಂಪು ಜಾಗಗಳಿಗೋ ಹೋಗುವುದನ್ನು ಪ್ಲಾನ್ ಮಾಡಿಕೊಳ್ಳಿ. ಸಂಜೆ 5ರಿಂದ ರಾತ್ರಿಯವರೆಗೆ ಮುಂದಿನ ಹೊರನೋಟದ ಸಮಯವಿರಲಿ.
ಇನ್ನು ಮಧ್ಯಾಹ್ನದ ಸಮಯ, ಮೌನದಲ್ಲೋ, ವಿರಾಮದಲ್ಲೋ, ಇಲ್ಲಾ ಒಂದಿಷ್ಟು ಹೊತ್ತು ಓದುವುದರಲ್ಲೋ ಕಳೆದರೆ ಹೇಗೆ ಅನ್ನೋದನ್ನು ಯೋಚನೆ ಮಾಡೋಣ. ಇದು ನಿಮ್ಮೊಳಗೆ ನೀವು ಹೊಕ್ಕುವುದಕ್ಕೆ ನಿಮಗೆ ದಾರಿ ಮಾಡಿಕೊಡುತ್ತದೆ.
ಏಸಿ ರೂಮಿಗಿಂತ ಯಾವುದು ಲೇಸು ನೋಡಿ?
ಸಿಟಿ ಲೈಫಲ್ಲಿ ಕೂಲ್ ಆಗಿರೋದಕ್ಕೆ ಏಸಿ ರೂಮುಗಳೇ ದಾರಿ. ಹಾಗಂತ ಈ ರೀತಿಯ ವೆಕೇಶನ್ನಲ್ಲಿ ಮತ್ತೆ ಏಸಿ ರೂಮುಗಳ ಮೊರೆ ಹೋಗುವ ಬದಲು, ನಮ್ಮನ್ನು ಸಹಜವಾಗಿಯೇ ತಂಪಾಗಿರಿಸುವ ಮನೆಗಳೋ, ಹೊಟೇಲ್ಲುಗಳೋ ನಮ್ಮ ಆಯ್ಕೆಯಾದರೆ ಹೇಗೆ? ಮಂಗಳೂರು ಕೆಂಪು ಹೆಂಚಿನ ಮನೆ, ಎತ್ತರದ ಚಾವಣಿಯ ಕೋಣೆಗಳು ಕಾಂಕ್ರೀಟ್ ಕೋಣೆಗಳಿಗಿಂತ ಹೆಚ್ಚು ತಂಪನ್ನು ನೀಡುತ್ತವೆ. ಸ್ಟಾರ್ ರೇಟಿಂಗ್‌ಗಿಂತ ಹೆಚ್ಚು ಈ ರೀತಿಯ ಸ್ಥಳಗಳು ಆಯ್ಕೆಗಳಾಗಲಿ.

ಹೊಟ್ಟೆಗೇನ್ ಕೊಡ್ತೀರಿ ಅನ್ನೋದೂ ಮುಖ್ಯ!
ಕೂಡಲೇ ತಂಪಾಗುತ್ತೆ ಅನ್ನುವ ಭರದಲ್ಲಿ ನಿಂಬು ಸೋಡಾ, ಇಲ್ಲಾ ಯಾವುದೋ ಕೋಲಾ ಕುಡಿಯುವ ಬದಲು, ಮಜ್ಜಿಗೆ, ಶಕ್ತಿ ನೀಡಲು ಬಾಳೆಯಹಣ್ಣಿನ ರೀತಿಯ ಎನರ್ಜೈಸರ್, ರಾಗಿ ಅಂಬಲಿ ನಮ್ಮ ಆಯ್ಕೆಯಾದರೆ ಹೇಗೆ ಅನ್ನುವುದರ ಬಗ್ಗೆ ಗಮನವಿಡೋಣ.
ಏನುಟ್ಟರೆ ಬೆಸ್ಟು?
ಬಿಸಿಯನ್ನು ಹಿಡಿದಿಟ್ಟು, ಬೆವರನ್ನು ಸುರಿಸುವುದಕ್ಕೆ ದಾರಿ ಮಾಡಿಕೊಡುವ ಬಟ್ಟೆಗಳನ್ನು ತೊಡದೇ, ಖಾದಿ, ಲಿನೆನ್, ಶುದ್ಧ ಹತ್ತಿಯ ಬಟ್ಟೆಗಳಿದ್ದರೆ ಒಳ್ಳೇದು ಅನ್ನೋದು ನಮಗೆ ಗೊತ್ತಿದ್ದೂ ನಾವು ಅದನ್ನು ಬಳಸುವುದನ್ನು ಮರೆತಿರುತ್ತೇವೆ. ಇದು ನಮ್ಮ ನಿತ್ಯ ಜೀವನದ ಬಳಕೆಯಲ್ಲಿನ ಆಯ್ಕೆಯಾದರೆ ಇನ್ನೂ ಉತ್ತಮ ಅನ್ನುವುದನ್ನು ನೆನಪಿಟ್ಟುಕೊಳ್ಳೋಣ.
ದೇಹ ಮನಸಿನ ಮಾತನ್ನು ಕೇಳತ್ತೆ
ಹೊರಗಡೆಯ ಬಿಸಿಯನ್ನು ದೇಹ ಅನುಭವಿಸುವುದಕ್ಕೆ, ಒಳಗಿನ ಮನಸು ದಾರಿ ಮಾಡಿಕೊಡುತ್ತದೆ ಅನ್ನುವುದು ಇನ್ನೊಂದು ಇಂಟರೆಸ್ಟಿಂಗ್ ವಿಚಾರ. ಹೊರಗೆ ಸೆಕೆ ಇದೆ ಅನ್ನೋ ಟೆನ್ಶನ್ನೇ ನಮ್ಮ ಮೈಯಲ್ಲಿ ಹೆಚ್ಚು ಬೆವರಿಳಿಸುತ್ತದೆ ಅಂದ್ರೆ ಅದನ್ನ ನಂಬಲೇಬೇಕು. ಹಾಗಾಗಿ, ನಿಮಗೆ ತಂಪು ನೀಡುವ ವಿಚಾರಗಳ ಬಗ್ಗೆ ಮನಸನ್ನು ನೆಡಿ.
ಬೇಸಗೆ ಅಂದರೆ ಮಕ್ಕಳಿಗೆ ರಜೆ, ನಮಗೂ ಬಿಸಿಬಿಸಿ ಶೆಡ್ಯೂಲುಗಳಿಂದ ದೂರ ಇರುವ ತವಕ, ಜೊತೆಗೆ ಮಳೆಗಾಲದ ಮುನ್ನ ಒಂದಿಷ್ಟು ಸ್ಥಳಗಳನ್ನು ನೋಡುವ ಕಾತರ, ಹಾಗಾಗಿ ಹೋಗೋದು ಹೋಗಿ, ಪರವಾಗಿಲ್ಲ, ಹೋಗಿದ್ದಾಗ, ಹೋಗಿ ಬಂದ ಮೇಲೆ ನಿಮ್ಮ ಆರೋಗ್ಯವೂ ನಿಮ್ಮ ಹತೋಟಿಯಲ್ಲಿರುವುದು ಮುಖ್ಯ ಅನ್ನುವುದನ್ನು ಮರೆಯಬೇಡಿ, ಅಷ್ಟೇ!
ಪಂಚ್-ರ್ ಶಾಪ್
ಈ ಸ್ಮಾರ್ಟ್ ಕೂಲಿಂಗ್ ವ್ಯವಸ್ಥೆ ನೂರಾರು ವರ್ಷಗಳ ಹಿಂದೇಯೇ ಇತ್ತು. ಅದಕ್ಕೆ ಕಿಟಕಿಗಳು, ಗಾಳಿ ಬೀಸೋ ಮರಗಳು ಅಂತ ಹೆಸರು.
ಆದರೆ ರಿಮೋಟ್ ಮಾತ್ರ ಇಲ್ಲ ಅನ್ನೋದೇ ಈಗಿನ ನಮ್ಮ ಪ್ರಾಬ್ಲಮ್ಮು!