ನಕ್ಷತ್ರಗಳಿಂದ ತುಂಬಿದ ಆಕಾಶವನ್ನು ನೋಡುವುದರಲ್ಲಿ ಕೆಲವರಿಗೆ ಒಂದು ರೀತಿಯ ಶಾಂತಿಯಾದರೆ ಕೆಲವರಿಗೆ ರೋಮ್ಯಾಂಟಿಕ್ ಭಾವನೆ! ರಾತ್ರಿ ಪ್ರವಾಸೋದ್ಯಮವು ಸುಂದರ ನೋಟವನ್ನು ನೀಡುವುದರ ಜತೆಗೆ ಮನಸ್ಸಿಗೆ ನೆಮ್ಮದಿ ಕೂಡ ನೀಡುತ್ತದೆ ಎಂದು ಹೇಳುತ್ತದೆ ವಿಜ್ಞಾನ.

ಪ್ರವಾಸೋದ್ಯಮದ ಪ್ರಮುಖ ಅಂಶಗಳಲ್ಲಿ 'ನಾಕ್ಟೋಟೂರಿಸಂ' (Noctotourism) ಕೂಡ ಒಂದು. ಇದು ನಕ್ಷತ್ರ ವೀಕ್ಷಣೆ ಮತ್ತು ಕಡಿಮೆ ಬೆಳಕಿರುವ ಪ್ರದೇಶಗಳಲ್ಲಿ ಉಳಿಯುವುದನ್ನು ಆಧರಿಸಿದ ರಾತ್ರಿ ಪ್ರವಾಸೋದ್ಯಮ. ವರದಿಗಳ ಪ್ರಕಾರ, ಸುಮಾರು 62% ಪ್ರವಾಸಿಗರು ಕಪ್ಪು ಆಕಾಶವನ್ನು ನೋಡಲು ಇಷ್ಟಪಡುತ್ತಾರೆ. 72 ಪ್ರತಿಶತ ಜನರಿಗ ಸ್ಟಾರ್‌ಬಾತಿಂಗ್‌, ಶೇ. 59ರಷ್ಟು ಪ್ರವಾಸಿಗರಿಗೆ ತಜ್ಞರೊಂದಿಗೆ ಮಾರ್ಗದರ್ಶಿತ ನಕ್ಷತ್ರ ವೀಕ್ಷಣೆ, ಶೇ.54ರಷ್ಟು ಪ್ರವಾಸಿಗರಿಗೆ ಜೀವಮಾನದಲ್ಲೊಮ್ಮೆ ಸಂಭವಿಸುವ ಅಪರೂಪದ ಖಗೋಳ ವಿದ್ಯಮಾನಗಳಿಗೆ ಸಾಕ್ಷಿಯಾಗುವುದು ಮತ್ತು 57 ಪ್ರತಿಶತ ಪ್ರವಾಸಿಗರಿಗೆ ನಕ್ಷತ್ರಪುಂಜಗಳ ಟ್ರ್ಯಾಕಿಂಗ್ ಮುಂತಾದ ಅನುಭವಗಳು ರಾತ್ರಿಯ ಪ್ರವಾಸದ ವಿಶ್‌ ಲಿಸ್ಟ್‌ ಅಲ್ಲಿದೆ. ಭಾರತದಲ್ಲಿ ಈ ಬದಲಾವಣೆಯು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಲಡಾಖ್‌ನ 'ಹಾನ್ಲೆ ಡಾರ್ಕ್ ಸ್ಕೈ ರಿಸರ್ವ್'ನಿಂದ ಹಿಡಿದು ದೇಶಾದ್ಯಂತ ನಡೆಯುವ ರಾತ್ರಿ ಸಫಾರಿಗಳು ಮತ್ತು ನಕ್ಷತ್ರ ವೀಕ್ಷಣೆಯ ಶಿಬಿರಗಳವರೆಗೆ, ನೈಟ್‌ ಟೂರಿಸಂನ ಈ ಅನುಭವಗಳು ಸದ್ದಿಲ್ಲದೆ ಜನಪ್ರಿಯತೆ ಪಡೆಯುತ್ತಿವೆ. ಭಾರತೀಯ ಪ್ರವಾಸಿಗರ ಬಗ್ಗೆ ಹೇಳುವುದಾದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ನಾಲ್ವರಲ್ಲಿ ಮೂವರು (78 ಪ್ರತಿಶತ) ಈ ವರ್ಷ 'ನಾಕ್ಟೋಟೂರಿಸಂ' ಅನುಭವಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಟ್ರಾವೆಲರ್ ಜೊತೆಗಿರಬೇಕಾದ 10 ವಸ್ತಗಳಿವು..

ರಾತ್ರಿ ಪ್ರವಾಸ ಮತ್ತು ಮಾನಸಿಕ ಆರೋಗ್ಯ:

ಕ್ಲಿನಿಕಲ್ ಸೈಕಾಲಜಿಸ್ಟ್ ಮೆಹೆಜೆಬಿನ್ ದೋರ್ಡಿ ಅವರ ಪ್ರಕಾರ, ರಾತ್ರಿಯ ಸಮಯದಲ್ಲಿ ಕಡಿಮೆ ಶಬ್ದ ಮತ್ತು ಕಡಿಮೆ ಬೆಳಕು ಇರುವುದರಿಂದ ಮೆದುಳಿನ ಮೇಲೆ ಹೆಚ್ಚಿನ ಒತ್ತಡ ಇರುವುದಿಲ್ಲ. ಇದು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಹಗಲಿನ ಓಟದ ಬದುಕಿನಿಂದ ದೂರವಾಗಿ, ರಾತ್ರಿಯ ಶಾಂತತೆ ನಮ್ಮನ್ನು ಹೆಚ್ಚು ಚಿಂತನಶೀಲರನ್ನಾಗಿ ಮತ್ತು ಭಾವನಾತ್ಮಕವಾಗಿ ಜಾಗೃತಗೊಳಿಸುತ್ತದೆ. ಇನ್ನೋರ್ವ ವೈದ್ಯೆಯ ಪ್ರಕಾರ, ರಾತ್ರಿ ಮಾರುಕಟ್ಟೆಗಳಲ್ಲಿ ನಡೆಯುವುದು ಅಥವಾ ಪ್ರಕೃತಿಯ ಶಬ್ದಗಳನ್ನು ಆಲಿಸುವುದು ಗಮನವನ್ನು ಹೊರಗಿನ ಪರಿಸರದತ್ತ ಸೆಳೆಯುತ್ತದೆ. ಇದು ಮೆದುಳಿಗೆ 'ರೀಸೆಟ್ ಬಟನ್'ನಂತೆ ಕೆಲಸ ಮಾಡುತ್ತದೆ. ಮನಸ್ಸಿನ ಗೊಂದಲಗಳನ್ನು ಕಡಿಮೆ ಮಾಡಿ ಭಾವನಾತ್ಮಕ ಸಮತೋಲನ ನೀಡುತ್ತದೆ.

ನಕ್ಷತ್ರ ವೀಕ್ಷಣೆಯ ಶಕ್ತಿ:

ಬೃಹತ್ ಆಕಾಶ ಮತ್ತು ನಕ್ಷತ್ರಗಳನ್ನು ನೋಡುವುದು ಒಂದು ರೀತಿಯ “ವಾವ್‌” ಎನಿಸುವ ಭಾವನೆಯನ್ನು ಮೂಡಿಸುತ್ತದೆ. ಈ ಭಾವನೆ ಆತಂಕವನ್ನು ಕಡಿಮೆ ಮಾಡಿ, “ನಾವು ಕೂಡ ಈ ಸುಂದರ ಬ್ರಹ್ಮಾಂಡದ ಒಂದು ಭಾಗ” ಎಂಬ ಭಾವನೆಯನ್ನು ಮೂಡಿಸುತ್ತದೆ. ಇದು ಕೃತಜ್ಞತಾ ಭಾವವನ್ನು ಹೆಚ್ಚಿಸುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ.

ಇದನ್ನೂ ಓದಿ: ನೋಡಿದವರು ಏನಾದ್ರೂ ಅನ್ನಲಿ ವಿದೇಶಿಗರಂತೆ ತಿಂಗಳುಗಟ್ಲೆ ಟ್ರಾವೆಲ್‌ ಮಾಡಿ : ನವೀನ್‌ ಶಂಕರ್‌

ಎಚ್ಚರಿಕೆ ಮುಖ್ಯ:

ರಾತ್ರಿ ಪ್ರವಾಸೋದ್ಯಮವು ಮನಸ್ಸಿಗೆ ಹಿತ ನೀಡಿದರೂ, ಇದು ನಿದ್ರೆಯ ಕ್ರಮಕ್ಕೆ ಅಡ್ಡಿಪಡಿಸದಂತೆ ಮತ್ತು ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಜವಾಬ್ದಾರಿಯುತವಾಗಿ ಮಾಡಿದಾಗ, ರಾತ್ರಿ ಪ್ರವಾಸವು ಒಂದು ರೀತಿಯ 'ಸೆನ್ಸರಿ ಥೆರಪಿ'ಯಂತೆ ಕೆಲಸ ಮಾಡುತ್ತದೆ.

ಒಟ್ಟಾರೆಯಾಗಿ, ರಾತ್ರಿ ಪ್ರವಾಸೋದ್ಯಮವು ಮೋಜು ಮಸ್ತಿಯ ಜತೆಗೆ ಇದು ಆಧುನಿಕ ಒತ್ತಡದ ಜೀವನಕ್ಕೆ ಒಂದು ಸುಂದರವಾದ ಮತ್ತು ವೈಜ್ಞಾನಿಕವಾದ ಪರಿಹಾರವಾಗಿ ಹೊರಹೊಮ್ಮುತ್ತಿದೆ.