ಅಂತಾರಾಷ್ಟ್ರೀಯ ಸಮುದ್ರ ಯಾನ, ಹೆಸರು ಕೇಳಿದಾಗಲೇ ಮೈಮನ ರೋಚಕತೆಗೆ ಶರಣಾಗುತ್ತದೆ. ತೀರದಿಂದ ಆಳದ ಸಮುದ್ರದ ಮಧ್ಯಕ್ಕೆ ಹಾಯುವ ಹಡಗು, ತಾ ಮುಂದು ನಾ ಮುಂದು ಎಂಬಂತೆ ಮುನ್ನುಗ್ಗುವ ರಕ್ಕಸ ಅಲೆಗಳು, ʻಟೈಟಾನಿಕ್ʼ ಮೂವಿಯ ದೃಶ್ಯಗಳೂ ಮನಃಪಟಲದಲ್ಲಿ ಮೂಡುತ್ತವೆ. ತಾತ್ಕಾಲಿಕ ಆತಂಕ ಹುಟ್ಟಿಕೊಳ್ಳುವುದೂ ಸಹಜ. ಅಲೆಗಳಿಗೆ ಅಂಜದೆಯೇ ಸಮುದ್ರ ಯಾನ ಮಾಡಬೇಕು ಎಂದರೆ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಕಡಲ ಕಾನೂನುಗಳು ಜಾರಿಯಲ್ಲಿವೆ. ಅವುಗಳಿಂದ ಸಮುದ್ರ ಯಾನವು ಈಗ ಸುಲಭ ಮತ್ತು ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ:ಕನಸಿನ ಲೋಕಕ್ಕೆ ಕಡಲ ಹಾದಿ: ಕ್ರೂಸ್ ಶಿಪ್ ಟೂರಿಸಂ..!

ಸೋಲಾಸ್ ನಿಯಮಗಳು

ಅಂತಾರಾಷ್ಟ್ರೀಯ ಸಮುದ್ರ ಯಾನದಲ್ಲಿ ಪ್ರಯಾಣಿಕರ ಜೀವ ರಕ್ಷಣೆಗಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆ ʻಇಂಟರ್‌ನ್ಯಾಷನಲ್ ಮಾರಿಟೈಮ್ ಆರ್ಗನೈಸೇಷನ್ʼ ಕಾರ್ಯ ನಿರ್ವಹಿಸುತ್ತಿದೆ. ಇದು ಅಂತಾರಾಷ್ಟ್ರೀಯ ಸಮುದ್ರ ಕಾನೂನು. ಟೈಟಾನಿಕ್ ದುರಂತದ ಬೆನ್ನಲ್ಲೇ ಈ ಸಂಸ್ಥೆ ತನ್ನ ಕಾರ್ಯ ಆರಂಭಿಸಿತು. ಆ ದುರಂತಕ್ಕೆ ಕಾರಣವಾಗಿದ್ದ ಜೀವ ರಕ್ಷಕ ಮೂಲ ಸೌಕರ್ಯಗಳ ಕೊರತೆಯನ್ನು ಗಮನದಲ್ಲಿರಿಸಿಕೊಂಡು ಐಎಮ್ಒ ಸೋಲಾಸ್ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಹಡಗಿನ ವಿನ್ಯಾಸ, ತುರ್ತು ಸುರಕ್ಷತಾ ವ್ಯವಸ್ಥೆಗಳೂ ಇದ್ದು, ಮಾಸ್ಟರ್ ಡ್ರಿಲ್ ಸಹ ಒಂದು.

Untitled design (30)

ಮಾಸ್ಟರ್ ಡ್ರಿಲ್

ಪ್ರತಿ ಅಂತಾರಾಷ್ಟ್ರೀಯ ಸಮುದ್ರ ಪ್ರಯಾಣಿಕನೂ ಮಾಸ್ಟರ್ ಡ್ರಿಲ್‌ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇದು ಸಮುದ್ರ ಯಾನದ ನಡುವೆ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗೆ ಪ್ರಯಾಣಿಕರನ್ನು ಸಿದ್ಧಪಡಿಸುವ ಡ್ರಿಲ್. ತುರ್ತು ಸಮಯದಲ್ಲಿ ಜೀವ ರಕ್ಷಕ ಬೋಟ್‌ಗಳನ್ನು ಬಳಸಬೇಕಾಗುತ್ತದೆ. ಈ ಬೋಟ್‌ಗಳು ಇರುವ ಸ್ಥಳವೇ ಮಾಸ್ಟರ್ ಸ್ಟೇಷನ್. ತುರ್ತು ಸಮಯದಲ್ಲಿ ಇಲ್ಲಿಗೆ ತಲುಪಲು ವಹಿಸಬೇಕಾದ ಕ್ರಮಗಳನ್ನು ಪರಿಚಯಿಸುವುದೇ ʻಮಾಸ್ಟರ್ ಡ್ರಿಲ್ʼ. ಪ್ರಯಾಣಿಕರಿಗೆ ಲೈಫ್ ಜಾಕೆಟ್, ಸಿಗ್ನಲ್ ಟಾರ್ಚ್‌ಗಳನ್ನು ಬಳಸುವುದು ಹೇಗೆ? ತುರ್ತು ಸಂದರ್ಭದ ಎಚ್ಚರಿಕೆಗಾಗಿ ಹಡಗಿನಲ್ಲಿ ಆರೇಳು ಥರದ ತುರ್ತು ಕರೆಯ ಸೈರನ್‌ಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಯಾವ ಸೈರನ್ ಶಬ್ದಕ್ಕೆ ಅರ್ಥವೇನು? ಜೀವರಕ್ಷಕ ಬೋಟ್‌ಗಳತ್ತ ತಲುಪುವುದು ಹೇಗೆ? ಸ್ಯಾಟೆಲೈಟ್ ಅಥವಾ ರೇಡಿಯೋ ದೂರವಾಣಿಯನ್ನು ಬಳಸುವುದು ಹೇಗೆ? ಹೀಗೆ ಎಲ್ಲದರ ಕುರಿತು ಮಾಹಿತಿ ನೀಡಲಾಗುತ್ತದೆ. ಪ್ರಯಾಣ ಶುರುವಾದ 24 ಗಂಟೆಯೊಳಗೆ ಈ ಡ್ರಿಲ್ ಅನ್ನು ನಡೆಸುವುದನ್ನು ಸೋಲಾಸ್ ಕಡ್ಡಾಯಗೊಳಿಸಿದೆ. ಈ ಸಮಯದಲ್ಲಿ ಹಡಗಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಅಲ್ಲಿ ನೆರೆಯುತ್ತಾರೆ. ಕೆಲವು ಹಡಗು ಕಂಪೆನಿಗಳು ಇದನ್ನು ಯಾನಕ್ಕೂ ಮೊದಲು ಜೆಟ್ಟಿಯಲ್ಲೇ ಮಾಡಿಸುತ್ತಾರೆ.

Untitled design (28)

ಮಾಡ್ರೆನ್ ಮಾಸ್ಟರ್ ಡ್ರಿಲ್

ಆಧುನಿಕತೆ ಎಲ್ಲೆಡೆಯೂ ಹಬ್ಬಿದೆ. ಅದಕ್ಕೆ ಈ ಮಾಸ್ಟರ್ ಡ್ರಿಲ್ ಸಹ ಹೊರತಾಗಿಲ್ಲ. ಮಾಡ್ರೆನ್ ಮಾಸ್ಟರ್ ಡ್ರಿಲ್ ಈಗ ಇ-ವ್ಯವಸ್ಥೆಯಲ್ಲೂ ಲಭ್ಯವಿದೆ. ನೀವು ಹಡಗಿನಲ್ಲಿ ನಿಮಗಾಗಿ ಬುಕ್ ಮಾಡಿದ ಕೊಠಡಿಯಲ್ಲಿಯೂ ಮಾಸ್ಟರ್ ಡ್ರಿಲ್ ನೋಡಬಹುದು. ನಿಮ್ಮದೇ ಮೊಬೈಲ್‌ನಲ್ಲಿ ಕ್ರೂಸ್ ಲೈನ್ ಆಪ್ ಬಳಸಬಹುದು. ಆ ಆಪ್‌ನಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಯ ಐದಾರು ನಿಮಿಷಗಳ ವಿಡಿಯೋ ತುಣುಕನ್ನು ವೀಕ್ಷಿಸಬಹುದು. ಆದರೆ ಈ ವಿಡಿಯೋ ವೀಕ್ಷಣೆಯ ನಂತರ ಅದರಲ್ಲೇ ತೋರಿಸಲಾದ ಮಾಸ್ಟರ್ ಸ್ಟೇಷನ್‌ನಲ್ಲಿ ನಿಮ್ಮ ಐಡಿಯನ್ನು ತಪಾಸಣೆಗೆ ಒಳಪಡಿಸುವುದು ಕಡ್ಡಾಯ. ಈ ಇ-ಮಾಸ್ಟರ್ ಡ್ರಿಲ್ ಆರಂಭವಾಗಿದ್ದು ಕೋವಿಡ್ ಸಮಯದಲ್ಲಿ. ಇಂದಿಗೂ ಹಲವು ಕ್ರೂಸ್‌ಗಳಲ್ಲಿ ಚಾಲ್ತಿಯಲ್ಲಿದೆ.

ಈ ಡ್ರಿಲ್ ತುರ್ತು ಸಂದರ್ಭದಲ್ಲಿ ಜೀವ ರಕ್ಷಕ. ಹಾಗಾಗಿ ಇ-ವ್ಯವಸ್ಥೆಗಿಂತ, ಖುದ್ದು ಭಾಗಿಯಾಗಿ ಅದರ ಅನುಭವ ಪಡೆಯುವುದು ಉತ್ತಮ. ಇನ್ನೂ ಪ್ರವಾಸಿ ದೃಷ್ಟಿಯಲ್ಲಿ ಎಷ್ಟೋ ಜನರಿಗೆ ಅಂತಾರಾಷ್ಟ್ರೀಯ ಸಮುದ್ರ ಯಾನ ಮೊದಲದ್ದಾಗಿರುತ್ತದೆ. ವಿಡಿಯೋಗಳನ್ನು ಯೂಟ್ಯೂಬ್ ಅಥವಾ ಇನ್ಯಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಬೇಕೆಂದಾಗ ನೋಡಬಹುದು. ಆದರೆ ಅದನ್ನು ಸ್ವತಃ ಅನುಭವಿಸುವ ಅವಕಾಶ ಸಿಗುವುದು ಇಂಥ ಯಾನಗಳಲ್ಲಿ ಮಾತ್ರ. ಹಾಗಾಗಿ ನೀವು ಯಾನದಲ್ಲಿ ಇದನ್ನು ಅನುಭವಿಸಿ.