-ಪುಷ್ಪಾ ಜೆ ಕೆ

ಗರ್ಭಾವಸ್ಥೆ, ಬಸಿರು ಎನ್ನುವುದು ಪ್ರತಿಯೊಂದು ಹೆಣ್ಣಿನ ಜೀವನದ ಅತ್ಯಂತ ಅದ್ಭುತ ಮತ್ತು ಅಮೂಲ್ಯ ಘಟ್ಟ. ಈ ಅವಧಿ ಪ್ರತಿ ಹೆಣ್ಣಿಗೂ ವಿಭಿನ್ನ ಅನುಭವ ನೀಡುತ್ತದೆ. ಗರ್ಭಧಾರಣೆಯ ಸಂದರ್ಭದಲ್ಲಿ ಕೆಲವೊಂದು ಬಯಕೆಗಳು ಮೂಡುವುದು ಸಹಜ. ಸಾಮಾನ್ಯವಾಗಿ ತಿನ್ನುವ ಬಯಕೆಗಳಿರುತ್ತವೆ. ಇದರ ಜತೆಗೆ ಕೆಲವೊಂದು ಮಹಿಳೆಯರಲ್ಲಿ ಸುಂದರ ತಾಣಗಳಿಗೆ ಹೋಗುವ ಆಸೆಗಳಿರುತ್ತದೆ. ಸಾಮಾನ್ಯವಾಗಿ ಪ್ರವಾಸ ಅಂದರೆ ಬ್ಯಾಕ್ ಪ್ಯಾಕ್ ಬೆನ್ನಿಗೇರುತ್ತದೆ. ಆದರೆ ಗರ್ಭಿಣಿಯರು ಮಾಡುವ ಪ್ರವಾಸ ಫ್ರಂಟ್ ಪ್ಯಾಕ್ ಪ್ರವಾಸ. ಇನ್ನೂ ಜನ್ಮತಾಳದ ಮಗುವಿಗೆ ಜಗತ್ತು ಸುತ್ತಿಸುವ ಸಂತಸದ ಘಳಿಗೆ ಅದು. ಪ್ರೆಗ್ನೆನ್ಸಿ ಸಮಯದಲ್ಲಿ ಪ್ರಯಾಣ ಮಾಡುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಯಾವ ತಿಂಗಳಲ್ಲಿ, ಎಷ್ಟು ದೂರ ಹಾಗೂ ಎಲ್ಲಿಗೆ/ಯಾವ ರೀತಿಯ ಸ್ಥಳಗಳಿಗೆ ಪ್ರಯಾಣ ಮಾಡುತ್ತೀರಿ ಎಂಬುದು ಮುಖ್ಯ.

ಗರ್ಭಾವಸ್ಥೆಯು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುವುದರಿಂದ ನೀವು ದೂರ ಪ್ರಯಾಣಿಸುವ ಯೋಚನೆಯಲ್ಲಿದ್ದರೆ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ಸಾಮಾನ್ಯವಾಗಿ ಗರ್ಭವತಿಯಾದ 4ರಿಂದ 6ನೇ ತಿಂಗಳ ನಡುವೆ ಪ್ರಯಾಣ ಮಾಡುವುದು ಹೆಚ್ಚು ಸುರಕ್ಷಿತ. ಎರಡನೇ ತ್ರೈಮಾಸಿಕದಲ್ಲಿ ನೀವು ಯಾವುದೇ ತೊಂದರೆಗಳನ್ನು ಅನುಭವಿಸದಿದ್ದರೆ ನೀವು ಪ್ರಯಾಣ ಮಾಡಬಹುದು. ತುಂಬಾ ವರ್ಷಗಳ ಬಳಿಕ ನೀವು ಗರ್ಭ ಧರಿಸಿದ್ದರೆ ಅಥವಾ ನಿಮ್ಮ ಗರ್ಭಧಾರಣೆಯು ಹೆಚ್ಚಿನ ಅಪಾಯದಲ್ಲಿದ್ದರೆ, ಮುಖ್ಯವಾಗಿ ಈ ಹಿಂದೆ ಗರ್ಭಪಾತ ಅಥವಾ ರಕ್ತಸ್ರಾವವಾಗಿದ್ದರೆ, ನೀವು ದೂರ ಪ್ರಯಾಣ ಮಾಡುವ ಸಾಹಸವನ್ನು ತೆಗೆದುಕೊಳ್ಳದಿರಿ. ನಿಮ್ಮ ಜತೆಗೆ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಸುರಕ್ಷತೆಯನ್ನು ಪರಿಗಣಿಸಿ ಪ್ರಯಾಣವನ್ನು ಕೈ ಬಿಡುವುದು ಒಳ್ಳೆಯದು.

Pregnancy Tourism (1)


ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೆ ಪ್ರಯಾಣದ ವೇಳೆ ಈ ಸಲಹೆ ಅನುಸರಿಸಿ:

ಆರಾಮದಾಯಕ ಆಸನವನ್ನು ಆರಿಸಿ:

ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡುವಾಗ ಆರಾಮದಾಯಕವಾದ ಆಸನವನ್ನು ಆರಿಸುವುದು ಅತ್ಯಂತ ಅಗತ್ಯ. ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ. ಸರಿಯಾದ ಚಪ್ಪಲಿ ಧರಿಸಿ. ಹೀಲ್ಸ್‌ಗಳು ಬೇಡ. ಸೀಟ್ ಬೆಲ್ಟ್ ಧರಿಸಲು ಮರೆಯದಿರಿ. ನಿಮ್ಮ ಸ್ವಂತ ವಾಹನದಲ್ಲಿ ಹೋಗುತ್ತಿದ್ದರೆ ಅರ್ಧ ಗಂಟೆಗಳಿಗೊಮ್ಮೆ ಕಾರು ನಿಲ್ಲಿಸಿ ಸ್ವಲ್ಪ ವಾಕ್ ಮಾಡಿ. ಏಕೆಂದರೆ ಗರ್ಭಾವಸ್ಥೆಯಲ್ಲಿ ದೀರ್ಘಕಾಲ ಪ್ರಯಾಣ ಮಾಡುವುದರಿಂದ ಕಾಲಿನ ಆಳವಾದ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಊತ, ಸೆಳೆತ ಅಥವಾ ನೋವಿಗೆ ಕಾರಣವಾಗಬಹುದು. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ವಾಶ್‌ರೂಮ್ ಬಳಿ ಇರುವ ಸೀಟ್ ಬುಕ್ ಮಾಡಿ. ಏಕೆಂದರೆ ಈ ಸಮಯದಲ್ಲಿ ನೀವು ಅನೇಕ ಬಾರಿ ವಾಶ್‌ರೂಮ್‌ಗೆ ಹೋಗಬೇಕಾಗಬಹುದು.

ಸ್ಥಳದ ಆಯ್ಕೆ

ನೀವು ಪ್ರಯಾಣಿಸಲು ಬಯಸುವ ಸ್ಥಳದ ಹವಾಮಾನ, ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಮೊದಲೇ ತಿಳಿದುಕೊಳ್ಳಿ. ವಿಶೇಷವಾಗಿ ಆಸ್ಪತ್ರೆ ಹತ್ತಿರವಿರುವ ತಾಣವನ್ನು ಆಯ್ಕೆ ಮಾಡಿ. ಗರ್ಭಾವಸ್ಥೆಯಲ್ಲಿ ಗುಡ್ಡಗಾಡುಗಳಂಥ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಯಾವುದೇ ರೀತಿಯ ಸಮಸ್ಯೆ ಎದುರಾದರೆ, ನೀವು ತಡಮಾಡದೆ ವೈದ್ಯರನ್ನು ಸಂಪರ್ಕಿಸಬಹುದಾದಂಥ ಸ್ಥಳವನ್ನು ಆಯ್ಕೆ ಮಾಡಿ.

Pregnancy tourism for women


ಆಹಾರದ ಬಗ್ಗೆ ಕಾಳಜಿ

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ತಿನ್ನುವ ಬಯಕೆಗಳಿರುತ್ತವೆ. ಆದರೆ ಎಂದಿಗೂ ಪ್ರಯಾಣ ಮಾಡುವಾಗ ಜಂಕ್ ಫುಡ್, ಕರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ನಿಮ್ಮ ಆಹಾರವು ಸಂಪೂರ್ಣವಾಗಿ ಆರೋಗ್ಯಕರವಾಗಿರಲಿ. ವಿಶೇಷವಾಗಿ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದರೆ ಮನೆಯಿಂದಲೇ ಕುಡಿಯುವ ನೀರು ಮತ್ತು ಆಹಾರವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಆಯಾ ಋತುವಿಗೆ ಸೂಕ್ತವಾದ ಆಹಾರ ಪದಾರ್ಥಗಳನ್ನು ಸೇವಿಸಿ.

ಒಟ್ಟಾರೆಯಾಗಿ ಗರ್ಭಧಾರಣೆ ಸಮಯದಲ್ಲಿ ನೀವು ದೂರ ಪ್ರಯಾಣ ಮಾಡಲು ಯೋಚಿಸುತ್ತಿದ್ದರೆ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ನಂತರ ಪ್ರಯಾಣದ ಬಗ್ಗೆ ಯೋಚಿಸಬಹುದು. ಅವಶ್ಯಕತೆ ಇದ್ದರೆ ಮಾತ್ರ ಸೂಕ್ತ ಮುಂಜಾಗ್ರತೆ ತೆಗೆದುಕೊಂಡು ಪ್ರಯಾಣಿಸಿ.