ರಾಶಿ ಕನಸುಗಳ ಸಾಹಸಿ ರಾಷಿದ್
ಮೂಡಿಗೆರೆಯ ಈ ಕನಸುಗಾರ ನವೆಂಬರ್ ಎರಡನೇ ತಾರೀಕು ಬೆಂಗಳೂರಿನ ವಿಧಾನ ಸೌಧದಿಂದ ತನ್ನ ಸೈಕಲ್ ಸವಾರಿ ಪ್ರಾರಂಭಿಸಿದ್ದಾರೆ. ಬೆಂಗಳೂರಿನಿಂದ ಗೋವಾ, ಗೋವಾದಿಂದ ಕೇರಳ, ಕೇರಳದಿಂದ ತಮಿಳುನಾಡು, ಅಲ್ಲಿಂದ ತೆಲಂಗಾಣ, ತೆಲಂಗಾಣದಿಂದ ಆಂಧ್ರ, ಆಂಧ್ರದಿಂದ ವಾಪಸ್ ಕರ್ನಾಟಕ! ಇದು ರಾಷಿದ್ ಅವರ ಪ್ರವಾಸದ ಪ್ಲಾನ್. ಎಲ್ಲ ಐದು ರಾಜ್ಯಗಳ ರಾಜಧಾನಿಯನ್ನು ಮುಟ್ಟಿ, ಆ ರಾಜ್ಯದ ಪ್ರಮುಖ ಸ್ಥಳಗಳಲ್ಲಿನ ವಿಶೇಷಗಳನ್ನೆಲ್ಲ ಅನುಭವಿಸಿ ವಾಪಸ್ ಮರಳಲಿದ್ದಾರೆ ರಾಷಿದ್.
ಫಿಟ್ ಇಂಡಿಯಾ ಪರಿಕಲ್ಪನೆ ಭಾರತಕ್ಕೆ ಭಾರತವನ್ನೇ ಬದಲಾಯಿಸಿದೆ ಅಂದರೆ ಉತ್ಪ್ರೇಕ್ಷೆ ಅಲ್ಲ. ಭಾರತದ ಕ್ರೀಡಾಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಹಿಂದೆಂದಿಗಿಂತ ಎತ್ತರಕ್ಕೇರಿದೆ. ಮಹಿಳಾ ಕ್ರೀಡಾಪಟುಗಳು ಹೆಚ್ಚು ಮಿಂಚುತ್ತಿದ್ದಾರೆ. ಫಿಟ್ ಇಂಡಿಯಾ ಎಂಬುದು ಕ್ರೀಡಾಕ್ಷೇತ್ರಕ್ಕೆ ಮಾತ್ರವೇ ಅಲ್ಲ ಜನಸಾಮಾನ್ಯರ ದೈನಂದಿನ ಬದುಕಿನಲ್ಲೂ ಬದಲಾವಣೆ ತಂದಿದೆ. ಕೋವಿಡ್ ಅವಧಿಯ ನಂತರ ಜನ ಹೆಚ್ಚು ಜಾಗೃತರಾಗಿ, ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಬಗ್ಗೆ ಗಮನ ನೀಡುತ್ತಿದ್ದಾರೆ. ಯುವಜನತೆಯಲ್ಲಿ ವಿಶೇಷ ಆಸಕ್ತಿ ಮೊಳಕೆ ಒಡೆದಿದೆ. ಮ್ಯಾರಥಾನ್, ಸ್ವಿಮ್ಮಿಂಗ್, ಸೈಕ್ಲಿಂಗ್ ಕಡೆಗೆ ಒಲವು ಹೆಚ್ಚಾಗುತ್ತಿದೆ. ಇದೇ ವೇಳೆ, ಯುವಸಮೂಹ ವಿಧವಿಧ ಪ್ರವಾಸಗಳತ್ತ ಮುಖ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಬೈಕ್ ಆಫ್ ರೋಡಿಂಗ್, ಚಾರಣ, ಹಿಮಾಲಯನ್ ಟ್ರೆಕ್ಕಿಂಗ್, ವಾಟರ್ ಸ್ಪೋರ್ಟ್ಸ್ ಇಂಥ ಸಾಹಸಮಯ ಪ್ರವಾಸ ಯುವಕಯುವತಿಯರನ್ನು ತೀವ್ರವಾಗಿ ಸೆಳೆಯುತ್ತಿದೆ.
ಸೈಕ್ಲಿಂಗ್ ಕೇವಲ ಫಿಟ್ನೆಸ್ ಗಾಗಿ ಮಾಡುತ್ತಿದ್ದ ಹುಡುಗರು ಈಗ ಒಂದು ಹೆಜ್ಜೆ ಮುಂದೆ ಹೋಗಿ ಸೈಕಲ್ ನಲ್ಲಿ ದೀರ್ಘಾವಧಿ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಸೈಕಲ್ ಪ್ರವಾಸ ಎಂಬುದು ಹೊಸ ಪರಿಕಲ್ಪನೆ ಏನಲ್ಲ. ಆದರೆ ಎಂದೆಂದಿಗೂ ಅದೊಂದು ರೋಚಕಪಯಣವೇ. ಹೀಗಿರುವಾಗ ಇಲ್ಲೊಬ್ಬ ನಿನ್ನೆಮೊನ್ನೆ ಕಾಲೇಜು ಮುಗಿಸಿದ ಯುವಕ ಸೈಕಲ್ ಹತ್ತಿ ಸೋಲೋ ಟ್ರಿಪ್ ಹೊರಟಿದ್ದಾನೆ. ಈ ಸೈಕಲ್ ಟ್ರಿಪ್ ಒಂದೆರಡು ದಿನದ್ದೂ ಅಲ್ಲ, ನೂರೋ ಇನ್ನೂರೋ ಕಿಮೀ ದೂ ಅಲ್ಲ. ಇದು ಸೌತ್ ಇಂಡಿಯನ್ ಸೋಲೋ ಸೈಕಲ್ ಟ್ರಿಪ್. ಬರೋಬ್ಬರಿ ಆರುಸಾವಿರ ಕಿಲೋಮೀಟರ್ ಗಳ ಪರಿಕ್ರಮಣ. ಐದು ರಾಜ್ಯಗಳ ಸುತ್ತಾಟ, ದಿನಕ್ಕೆ ನೂರಕ್ಕೂ ಹೆಚ್ಚು ಕಿಲೋಮೀಟರ್ ಸೈಕಲ್ ತುಳಿಯುವಿಕೆ. ಇಂಥ ಸಾಹಸ ಕೈಗೊಂಡಿರುವ ಚಿಗುರುಮೀಸೆಯ ಯುವಕ ರಾಶಿದ್.

ಮೂಡಿಗೆರೆಯ ಈ ಕನಸುಗಾರ ನವೆಂಬರ್ ಎರಡನೇ ತಾರೀಕು ಬೆಂಗಳೂರಿನ ವಿಧಾನ ಸೌಧದಿಂದ ತನ್ನ ಸೈಕಲ್ ಸವಾರಿ ಪ್ರಾರಂಭಿಸಿದ್ದಾರೆ. ಬೆಂಗಳೂರಿನಿಂದ ಗೋವಾ, ಗೋವಾದಿಂದ ಕೇರಳ, ಕೇರಳದಿಂದ ತಮಿಳುನಾಡು, ಅಲ್ಲಿಂದ ತೆಲಂಗಾಣ, ತೆಲಂಗಾಣದಿಂದ ಆಂಧ್ರ, ಆಂಧ್ರದಿಂದ ವಾಪಸ್ ಕರ್ನಾಟಕ! ಇದು ರಾಷಿದ್ ಅವರ ಪ್ರವಾಸದ ಪ್ಲಾನ್. ಎಲ್ಲ ಐದು ರಾಜ್ಯಗಳ ರಾಜಧಾನಿಯನ್ನು ಮುಟ್ಟಿ, ಆ ರಾಜ್ಯದ ಪ್ರಮುಖ ಸ್ಥಳಗಳಲ್ಲಿನ ವಿಶೇಷಗಳನ್ನೆಲ್ಲ ಅನುಭವಿಸಿ ವಾಪಸ್ ಮರಳಲಿದ್ದಾರೆ ರಾಷಿದ್.
ದಿನಕ್ಕೆ ನೂರು ಕಿಮೀ ನಂತೆ ಅರವತ್ತು ದಿನಗಳಲ್ಲಿ ಆರು ಸಾವಿರ ಕಿಮೀ ಕ್ರಮಿಸುವ ಯೋಜನೆ ಹಾಕಿಕೊಂಡಿರುವ ರಾಷಿದ್ ಈಗಾಗಲೇ ಹದಿಮೂರು ದಿನಗಳಲ್ಲಿ ಸಾವಿರ ಕಿಮೀ ಸುತ್ತಿದ್ದಾರೆ. ಸೈಕಲ್ ಇಳಿದಲ್ಲೆಲ್ಲ ಜನರ ಪ್ರೀತಿ ಸಿಕ್ಕಿದೆ. ಅಲ್ಲಿನ ಆಹಾರ ರುಚಿ ನೋಡಲು ದಕ್ಕಿದೆ. ಇನ್ ಸ್ಟಾಗ್ರಾಮ್, ಫೇಸ್ ಬುಕ್ ನ ಫಾಲೋವರ್ ಗಳು ತಮ್ಮತಮ್ಮ ಊರುಗಳಲ್ಲಿ ಭೇಟಿ ಮಾಡಿ ಆಲ್ ದ ಬೆಸ್ಟ್ ಹೇಳಿ ಕಳಿಸಿದ್ದಾರೆ. ತಮ್ಮೂರಿನ ವಿಶೇಷಗಳನ್ನು ಪರಿಚಯಿಸಿದ್ದಾರೆ. ರಾಷಿದ್ ತಾವು ಹೋಗುತ್ತಿರುವ ಮಾರ್ಗದುದ್ದಕ್ಕೂ ಫಿಟ್ ಇಂಡಿಯಾ ಪರಿಕಲ್ಪನೆಯನ್ನು ಬಿತ್ತುತ್ತಿದ್ದಾರೆ.
ವೆಕ್ಟರ್ 91 ಸೈಕಲ್, ಮಿನಿಮಮ್ ಲಗೇಜ್, ಡ್ರೈ ಫ್ರುಟ್ಸ್, ಫಸ್ಟ್ ಏಡ್ ಕಿಟ್, ಟೂಲ್ ಕಿಟ್, ಕ್ಯಾಮೆರಾ, ಫೋನ್ ಇವಿಷ್ಟೇ ರಾಷಿದ್ ನ ಸಂಗಾತಿಗಳು. ಸುದರ್ಶನ್ ಸಂಚಾರಿ ಎಂಬ ಪ್ರವಾಸಿಯೊಬ್ಬರಿಂದ ಪ್ರಭಾವಿತರಾಗಿ ತಾವೂ ಜೀವನದಲ್ಲಿ ಒಮ್ಮೆ ಸೋಲೋ ಸೈಕಲ್ ಟ್ರಿಪ್ ಮಾಡಬೇಕು ಎಂದು ಬಹಳ ದಿನಗಳಿಂದ ಕನಸು ಕಾಣ್ತಾ ಇದ್ರು ರಾಷಿದ್. ಪ್ರತಿದಿನ ಮೂವತ್ತು ಕಿಮೀ ಸೈಕಲ್ ಹೊಡೆದು, ದೇಹವನ್ನು ಮನಸನ್ನು ಸಿದ್ಧಗೊಳಿಸಿದ್ದರು. ಬಿಸಿಎ ಓದಿ ಕೆಲಸಕ್ಕೆ ಸೇರಿದ್ದ ರಾಷಿದ್ ತಮ್ಮ ಕನಸಿನ ಪ್ಲಾನ್ ಸಿದ್ಧವಾಗ್ತಾ ಇದ್ದ ಹಾಗೇ ಆಫೀಸಿನಲ್ಲಿ ಎರಡು ತಿಂಗಳು ರಜೆ ಪಡೆದು ಟ್ರಿಪ್ ಹೊರಟಿದ್ದಾರೆ.

dc_xplor ಹೆಸರಿನ ಯೂಟ್ಯೂಬ್ ಚಾನೆಲ್ ಮತ್ತು ಅದೇ ಹೆಸರಿನ ಇನ್ ಸ್ಟಾ ಖಾತೆ ಹೊಂದಿರುವ ರಾಷಿದ್ ಗೆ ಇದು ಮೊದಲ ಸೋಲೋ ಸೈಕಲ್ ಟ್ರಿಪ್. ತಮ್ಮ ಖಾತೆಯಲ್ಲಿ ಪ್ರತಿ ದಿನದ ಟೂರ್ ಡೈರಿ ಪಬ್ಲಿಷ್ ಮಾಡುತ್ತಿರುವ ಇವರಿಗೆ ಮುಂದಿನ ದಿನಗಳಲ್ಲಿ ಆಲ್ ಇಂಡಿಯಾ ಸೈಕಲ್ ಟ್ರಿಪ್ ಹಾಗೂ ವಿದೇಶಕ್ಕೆ ಸೈಕಲ್ ಟ್ರಿಪ್ ಮಾಡುವ ಕನಸೂ ಇದೆ.
ಬೆಂಗಳೂರಿನಿಂದ ಹೊರಟು ಆರುಸಾವಿರ ಕಿಲೋಮೀಟರ್ ಪಯಣದ ನಂತರ ಚಿಕ್ಕಮಗಳೂರಿನಲ್ಲಿ ಟ್ರಿಪ್ ಕೊನೆಗೊಳಿಸಲಿರುವ ಇವರು ಸೈಕಲ್ ಚಾಲನೆಯನ್ನಷ್ಟೇ ಎಂಜಾಯ್ ಮಾಡುತ್ತಿಲ್ಲ. ದಾರಿಯುದ್ದಕ್ಕೂ ಸಿಗುವ ಜನಜೀವನ, ಆಹಾರ, ಪ್ರವಾಸಿತಾಣ ಎಲ್ಲವನ್ನೂ ಎಕ್ಸ್ ಪ್ಲೋರ್ ಮಾಡುತ್ತಾ, ತಮ್ಮ ವ್ಲಾಗ್ ಮೂಲಕ ಅದನ್ನು ಜನರಿಗೆ ತಿಳಿಸುತ್ತಾ ಸಾಗುತ್ತಿದ್ದಾರೆ.
ಈ ಯುವಸಾಹಸಿ ದಕ್ಷಿಣಭಾರತ ಸೋಲೋ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಪ್ರವಾಸಿ ಪ್ರಪಂಚ ಹಾರೈಸುತ್ತದೆ.