ಕದಂಬೇಶ್ವರನ ಆಲಯದ ಕಂಬಗಳಲ್ಲೂ ಕನ್ನಡಾಂಬೆ
ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ ಮತ್ತು ಮಹಿಷ ಮರ್ಧಿನಿಯ ಉಬ್ಬು ಶಿಲ್ಪಗಳು ಇಲ್ಲಿದ್ದು, ಪಂಚಲಿಂಗಗಳನ್ನು ಸ್ಥಾಪಿಸಿರುವುದು ಇಲ್ಲಿನ ವಿಶೇಷ. ಇಲ್ಲಿನ ನವರಂಗದಲ್ಲಿನ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಹೊತ್ತಿವೆ.ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ ಮತ್ತು ಮಹಿಷ ಮರ್ಧಿನಿಯ ಉಬ್ಬು ಶಿಲ್ಪಗಳು ಇಲ್ಲಿದ್ದು, ಪಂಚಲಿಂಗಗಳನ್ನು ಸ್ಥಾಪಿಸಿರುವುದು ಇಲ್ಲಿನ ವಿಶೇಷ. ಇಲ್ಲಿನ ನವರಂಗದಲ್ಲಿನ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಹೊತ್ತಿವೆ.
- ಮಲ್ಲೇಶ ಓಲೇಕಾರ
ನೂರಾರು ವರ್ಷಗಳ ಹಿಂದೆ ರಟ್ಟಪಳ್ಳಿ ಅಥವಾ ರಟ್ಟಿಹಳ್ಳಿ ನೂರು ಹಳ್ಳಿಗಳ ಕೇಂದ್ರಸ್ಥಾನವಾಗಿತ್ತು. ರಟ್ಟರು, ಕದಂಬರು, ಚಾಲುಕ್ಯರು ಮುಂತಾದ ರಾಜಮನೆತನಗಳ ಆಡಳಿತ ಕಂಡ ಪ್ರದೇಶವಾಗಿತ್ತು. ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿದೆ.
ಕುಮದ್ವತಿ ನದಿ ತೀರ ಹಾಗು ಪ್ರಾಚೀನ ಇತಿಹಾಸ ಸಾರುವ ಕದಂಬೇಶ್ವರ ದೇವಸ್ಥಾನದ ಹಿನ್ನಲೆಯುಳ್ಳ ರಟ್ಟಿಹಳ್ಳಿ ಒಂದು ವಿಶಿಷ್ಟ ಸ್ಥಳವಾಗಿದೆ. ಇಲ್ಲಿನ ಕೋಟೆ ಪ್ರದೇಶದಲ್ಲಿ 11 ಮತ್ತು 12ನೇ ಶತಮಾನದಲ್ಲಿ ನಿರ್ಮಿಸಲಾದ ಶ್ರೀ ಕದಂಬೇಶ್ವರ ದೇವಸ್ಥಾನವಿದ್ದು ಇದು ಕಲ್ಯಾಣ ಚಾಲುಕ್ಯರ ನಿರ್ಮಾಣ ಶೈಲಿಯಲ್ಲಿದೆ. ಮೂರು ಗರ್ಭ ಗೃಹಗಳು, ಮೂರು ಅಂತರಾಳ, ಒಂದು ನವರಂಗ ಮತ್ತು ಸಭಾ ಮಂಟಪಗಳಿಂದ ಕೂಡಿದ ದೇವಾಲಯವಾಗಿದೆ.

ಪೂರ್ವಾಭಿಮುಖವಾಗಿರುವ ಗರ್ಭಗೃಹವಿದ್ದು, ಇದರ ಮುಂದಿರುವ ಅಂತರಾಳದ ಬಾಗಿಲು ವಾಡದ ದ್ವಾರ ಬಂಧದಲ್ಲಿ ಮಕರ ತೋರಣಗಳಿವೆ. ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ ಮತ್ತು ಮಹಿಷ ಮರ್ಧಿನಿಯ ಉಬ್ಬು ಶಿಲ್ಪಗಳಿವೆ. ಇಲ್ಲಿ ಪಂಚಲಿಂಗಗಳನ್ನು ಸ್ಥಾಪಿಸಿರುವುದು ವಿಶೇಷವಾಗಿದೆ. ನವರಂಗದಲ್ಲಿನ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಹೊತ್ತಿವೆ. ಮಂದಿರವಿರುವ ಸಭಾ ಮಂಟಪದಲ್ಲಿ ಹತ್ತು ಕಂಬಗಳಿವೆ. ದ್ವಾರದ ಇಕ್ಕೆಲಗಳಲ್ಲಿ ಹತ್ತು ಅಡಿ ಎತ್ತರದ ದ್ವಾರಪಾಲಕರ ಸುಂದರ ಮೂರ್ತಿಗಳಿವೆ.

ದೇವಾಲಯದ ಮುಖ್ಯ ಗರ್ಭ ಗೃಹದ ಮೇಲೆ ಸುಕನಾಸಿ ಶಿಖರ ಮತ್ತು ತ್ರಿತಲ ಶಿಖರಗಳಿವೆ. ದಕ್ಷಿಣದ ಗರ್ಭ ಗೃಹದ ಮೇಲೆಯೂ ತ್ರಿತಲ ಶೀಖರವಿದ್ದು ಭಾಗಶಃ ನಶಿಸಿ ಹೋಗಿದೆ. ಪೂರ್ವಾಭಿಮುಖವಾಗಿರುವ ಗರ್ಭಗೃಹದ ಮೇಲಿನ ಸುಕನಾಸಿ ಭಾಗದಲ್ಲಿ ಸಳನು ಸಿಂಹವನ್ನು ಕೊಲ್ಲುತ್ತಿರುವ ದೃಶ್ಯದ ಶಿಲ್ಪವಿದೆ. ಹೊರಭಿತ್ತಿಯಲ್ಲಿ ದೇವ ಕೋಷ್ಠಕಗಳಿವೆ. ಮೂರು ಗರ್ಭಗೃಹಗಳಲ್ಲಿ ಲಿಂಗಗಳಿದ್ದು ನವರಂಗದಲ್ಲಿ ದೊಡ್ಡ ನಂದಿಯ ವಿಗ್ರಹವಿದೆ. ದೇವಾಲಯದ ಮುಂದೆ ಜಿನ ವಿಗ್ರಹ ಮತ್ತು ಬರವಣಿಗೆಗಳಿರುವ ವೀರಗಲ್ಲುಗಳಿವೆ.
ಇಲ್ಲಿನ ಶಾಸಗಳ ಸಾಲಿನಲ್ಲಿ ಕಲ್ಯಾಣಿ ಚಾಲುಕ್ಯರ ಎರಡನೇ ಜಗದೇಕ ಮಲ್ಲನ ಕಾಲದ ಶಾಸನ ಒಂದರಲ್ಲಿ, ಬೊಮ್ಮದೇವನಿಗೆ ಬನವಾಸಿ ನಾಡಿನ ಆಡಳಿತವನ್ನು ಕೊಟ್ಟ ಉಲ್ಲೇಖವಿದೆ.
ಕಲಚೂರಿನ ಅರಸ ಸೋಮದೇವನ ಕ್ರಿಶ 1174ರ ಶಾಸನವು, ಮಹಾಮಂಡಲೇಶ್ವರ ಪಾಂಡ್ಯ ದೇವನು ಕದಂಬೇಶ್ವರ ದೇವರಿಗೆ ದಾನ ನೀಡಿದ ಉಲ್ಲೇಖಗಳಿವೆ.

ರಟ್ಟೀಹಳ್ಳಿಯ 1238ರ ಶಾಸನ ಪಾಂಡ್ಯನಿಗೆ ಗರುಡ ಪಾಂಡ್ಯನೆಂಬ ಸೋದರನಿದ್ದನೆಂದು ಹೇಳಿದ್ದು, ಪಟ್ಟವೇರಿದ ಅವನು ಸೇವಣರ ಸಿಂಘನ ಮಾಂಡಲೀಕನಾಗಿದ್ದನು ಮತ್ತು ಹೊನ್ನಬೊಮ್ಮಿ ಸೆಟ್ಟಿ ಎಂಬುವವರು ಕದಂಬೇಶ್ವರ ದೇವಾಲಯದಲ್ಲಿ ಮಲ್ಲೇಶ್ವರ, ರಾಜೇಶ್ವರ, ಲಿಂಗಗಳನ್ನು ಪ್ರತಿಷ್ಠಾಪಿಸಿ ಪಂಚಲಿಂಗ ಕ್ಷೇತ್ರವನ್ನಾಗಿ ಮಾಡಿದನು. ಅವುಗಳ ಪೂಜೆಗಾಗಿ ಕಾಡವೂರು (ಇಂದಿನ ಕಡೂರ) ಎಂಬ ಗ್ರಾಮವನ್ನು ಕಾಳಾಮುಖ ಪಂಥದ ರಾಜಗುರುಗಳಿಗೆ ಒಪ್ಪಿಸಿದ್ದನ್ನು ಎಂದು ಹೇಳಲಾಗಿದೆ.
ಸುಂದರವಾದ ಈ ಶಿಲ್ಪ ಕಲೆಯ ಸೊಬಗನ್ನು ಹೊಂದಿರುವ ದೇವಸ್ಥಾನದ ಅಧ್ಯಯನಕ್ಕಾಗಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದು, ಇತಿಹಾಸ ಪ್ರಸಿದ್ಧ ತಾಣವಾಗಿ ಹೊರ ಹೊಮ್ಮಿದೆ. ಸಮಯ ಸಿಕ್ಕಾಗ ನೀವು ಒಮ್ಮೆ ಇಲ್ಲಿಗೆ ಭೇಟಿಕೊಡಿ.