- ವಾಣಿ ಸುರೇಶ್ ಕಾಮತ್

An unexpected trip proves that the best things in life are unplanned!

ಥೈಲ್ಯಾಂಡ್‌ಗೆ ಹೋಗುವ ಬಗ್ಗೆ ನಾನು ಕನಸಿನಲ್ಲೂ ಯೋಚಿಸಿರಲಿಲ್ಲ! 2025ನೇ ವರ್ಷ ಮುಗಿಯುವ ಮೊದಲು ನಾಲ್ಕು ವಿದೇಶೀ ಪ್ರವಾಸಗಳನ್ನು ಮುಗಿಸುವವಳಿದ್ದೇನೆ ಅಂದುಕೊಂಡಾಗ, ನಾಲಕ್ಕು ಇದ್ದದ್ದನ್ನು ಐದಾಗಿ ಏಕೆ ಬದಲಾಯಿಸಬಾರದು ಎಂದು ಹೊಳೆಯಿತು. ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಿರುವ ನನಗೆ ಥೈಲೆಂಡಿನಂಥ ಸುಲಭವಾಗಿ ವೀಸಾ ಸಿಗುವಂಥ ದೇಶವೇ ಉತ್ತಮ ಆಯ್ಕೆ ಎನಿಸಿತು. ಹೀಗೆ ಆಯ್ಕೆ ಐದನೆಯದಾದರೂ, ಇದು ನಾನು ಈ ವರ್ಷ ಭೇಟಿ ನೀಡಿದ ನಾಲ್ಕನೆಯ ದೇಶವಾಯಿತು.

ಹೆಣ್ಣುಮಕ್ಕಳು ಒಂಟಿಯಾಗಿ ಸುತ್ತಲೂ ಥೈಲ್ಯಾಂಡ್‌ನ ಊರುಗಳು ಸುರಕ್ಷಿತವಾಗಿವೆ ಎಂದು ಓದಿದಾಗ ನಾನು ಏಕೆ ಪ್ರಯತ್ನಿಸಬಾರದು ಎನ್ನುವ ಹಂಬಲ ನನ್ನಲ್ಲಿ ಮೂಡಿತು. ‍ವರ್ಷಗಟ್ಟಲೆ ಕಂಫರ್ಟ್ ಝೋನಿನಲ್ಲಿ ಕೂತು ಜಡ್ಡುಗಟ್ಟಿದ ಮೈ-ಮನಸನ್ನು ನನಗೆ ಚುರುಕುಗೊಳಿಸಬೇಕಿತ್ತು. ಅಷ್ಟಲ್ಲದೆ ಕಾಲದ ಸುಳಿಯಲ್ಲಿ ಎಲ್ಲೋ ಕಳೆದುಹೋಗಿದ್ದ ನನ್ನ ಹಳೆಯ ರೂಪವನ್ನು ಮರಳಿ ಪಡೆಯಬೇಕಿತ್ತು. ನಮ್ಮ ಸಾಮರ್ಥ್ಯವನ್ನು ಅರಿಯುವ ಸಲುವಾಗಿ ಪ್ರವಾಸ ಎಷ್ಟು ಸಹಕಾರಿ ಎಂದು ಈಗಾಗಲೇ ನಾನು ತಿಳಿದಿದ್ದೆ.

ಇದನ್ನೂ ಓದಿ: ಸಂಸಾರಸ್ಥ ಹೆಣ್ಣುಮಕ್ಕಳು ಸೋಲೋ ಟ್ರಿಪ್‌ ಹೋಗಬಾರದಾ?!

ಅನ್ಯರ ಅನುಭವಗಳು ಏನೇ ಇದ್ದರೂ ನಾವು ಸ್ವತಃ ಫೀಲ್ಡಿಗೆ ಇಳಿದಾಗಲೇ ನಾವೆಂಥವರು ಎಂದು ತಿಳಿಯುವುದು. ಪಟ್ಟಾಯದ ರಸ್ತೆಗಳಲ್ಲಿ ಕಾರು ಚಲಿಸುತ್ತಿದ್ದಾಗ ಈ ಊರಲ್ಲಿ ನಾನೊಬ್ಬಳೇ ತಿರುಗಬಲ್ಲೆನೇ ಎಂದು ಅಳುಕಾಗತೊಡಗಿತು. ಆದರೆ ನನ್ನ ಆ ಸಂಶಯವನ್ನು ನಿವಾರಿಸಿ, ಧೈರ್ಯ ನೀಡಿದ್ದು ನಮಗೆ ಟೂರ್ ಗೈಡ್ ಆಗಿದ್ದ ಜಿಫ್ಫಿ. ಪೇಪರಿನಲ್ಲಿ ನೀಟಾಗಿ ರಸ್ತೆಗಳ ಮ್ಯಾಪ್ ರಚಿಸಿ ವಿವರಿಸಿ, ಭಯಪಡದೆ ಹೋಗೆಂದು ಹೇಳಿದ್ದು ಹತ್ತಾನೆ ಬಲ ನೀಡಿತ್ತು.‍ ಅದರ ಜತೆಗೆ, ಗೂಗಲ್ ಮ್ಯಾಪ್ ಕೂಡ ನಾನು ಹೋಗಲು ಬಯಸಿದ್ದ ಬೀಚ್ ರಸ್ತೆ ನಾವಿದ್ದ ಹೊಟೇಲಿನಿಂದ ಕೇವಲ ಏಳುನೂರು ಮೀಟರ್ ದೂರವಿದೆ ಎಂದು ತಿಳಿಸಿದಾಗ ನೆಮ್ಮದಿ ದೊರಕಿತ್ತು. ಹಾಗಾಗಿ ಹಗಲು ಹೊತ್ತು ನಾನು ಹೋಗಿದ್ದ ಗ್ರೂಪಿನೊಂದಿಗೆ ಸುತ್ತಾಡಿ, ಸಂಜೆಯ ನಂತರ ನನ್ನ ಪಾಡಿಗೆ ಸುತ್ತಾಡುವೆನೆಂದು ಟೂರ್ ಮ್ಯಾನೇಜರ್ ರಾಕೇಶ್‌ಗೂ ತಿಳಿಸಿಬಿಟ್ಟೆ.

One woman, one backpack, endless Thai memories

ದಾರಿ ತಪ್ಪಿದ್ದು ಕೂಡ ಒಳ್ಳೆಯದಕ್ಕೇ

ಸಂಜೆ ಆರೂವರೆಯ ಹೊತ್ತಿಗೆ ನಾನು ಹೊಟೇಲಿನ ಮೆಟ್ಟಲಿಳಿಯುವಷ್ಟರಲ್ಲೇ ಕತ್ತಲಾಗಿ, ಪಟ್ಟಾಯ ಜಗಮಗಿಸಲು ಶುರುವಾಗಿತ್ತು. ಕರೆನ್ಸಿ ಎಕ್ಸ್ಚೇಂಜ್ ಮಾಡಿ ನಾಲ್ಕು ರಸ್ತೆ ಕೂಡುವಲ್ಲಿ ನಿಂತಿದ್ದವಳಿಗೆ ಅದ್ಯಾವ ಮಾಯೆ ಆವರಿಸಿತ್ತೋ ಗೊತ್ತಿಲ್ಲ, ಎಡಕ್ಕೆ ತಿರುಗುವ ಬದಲು ನೇರವಾಗಿಯೇ ನಡೆದಿದ್ದೆ. ಐನೂರು ಮೀಟರ್ ನಡೆದರೂ, ನನ್ನ ಎಡಭಾಗದಲ್ಲಿ ಕಾಣಿಸಬೇಕಾಗಿದ್ದ ಬೀಚ್ ಕಾಣಿಸದೆ ಹೋದಾಗ ದಾರಿ ತಪ್ಪಿದ್ದು ನನಗೆ ಅರಿವಾಗಿತ್ತು. ಆದರೆ ಅಂದು ದಾರಿ ತಪ್ಪಿದ್ದು ಕೂಡ ಒಳ್ಳೆಯದಕ್ಕೇ ಎನ್ನುವುದು ನನಗೆ ಮರುದಿನ ಅರ್ಥವಾಗಿತ್ತು!

ಅಂದ ಹಾಗೆ ನಾನು ಹೋಗಿದ್ದ ‘ಸೆಕೆಂಡ್ ರೋಡ್’ ಹೆಸರಿನ ಆ ರಸ್ತೆಯೂ ಜನನಿಬಿಡವಾದದ್ದೇ. ರಸ್ತೆಯ ಇಕ್ಕೆಲಗಳಲ್ಲೂ ಮಸಾಜ್ ಸೆಂಟರುಗಳು, ಬಾರ್ ಮತ್ತು ರೆಸ್ಟೋರೆಂಟುಗಳು ವಿದೇಶೀಯರಿಂದಲೇ ತುಂಬಿಹೋಗಿದ್ದವು. 1960 ನೆಯ ಇಸವಿಯಿಂದಲೂ ಅಮೆರಿಕನ್ ಮತ್ತು ಯೂರೋಪಿಯನ್ ಹಿಪ್ಪಿಗಳು ಭಾರತ ಮತ್ತು ನೇಪಾಳದ ಮೂಲಕ ಥೈಲ್ಯಾಂಡ್ ಪ್ರವೇಶಿಸಿ ಅದನ್ನು ತಮ್ಮ ಸ್ವರ್ಗವನ್ನಾಗಿಸಿದ್ದರು. ಅದರ ಜತೆಗೆ ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕನ್ ಸೈನಿಕರಿಗೆ ವಿಶ್ರಾಂತಿ ಮತ್ತು ಪುನಶ್ಚೇತನದ ಕೇಂದ್ರಗಳನ್ನು ಕೂಡ ಅಲ್ಲಿ ನಿರ್ಮಿಸಲಾಗಿತ್ತು. ಹಾಗಾಗಿ ಮೋಜು ಮತ್ತು ನೈಟ್ ಲೈಫ್ ಎಂಬುದು ಅಲ್ಲಿ ಹೊಸದಲ್ಲ. ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭ್ರಾಜ್ ಬಗ್ಗೆ ಇರುವ ವೆಬ್ ಸೀರೀಸ್‌ಗಳಲ್ಲಿ ಎಪ್ಪತ್ತರ ದಶಕದ ಥೈಲ್ಯಾಂಡ್ ನೋಡಿ ನಾನು ಆಶ್ಚರ್ಯಗೊಂಡಿದ್ದೆ!

ಮೊಸಳೆ ಮಾಂಸವೇ ಇಲ್ಲಿ ಫೇಮಸ್

ಪಟ್ಟಾಯದ ಈ ‘ಸೆಕೆಂಡ್ ರೋಡ್’ ನನಗೆ ಮೋಡಿ ಮಾಡಿದ್ದಂತೂ ನಿಜ! ರಸ್ತೆಯಲ್ಲಿ ಒಬ್ಬಳೇ ನಡೆಯಲು ಬೋರಾಗದಷ್ಟು ಹಿನ್ನೆಲೆ ಸಂಗೀತ, ಜನರ ಮಾತು-ನಗು, ಅಲ್ಲಲ್ಲಿ ಕಣ್ಸೆಳೆಯುತ್ತಿದ್ದ ಭಾರತೀಯ ರೆಸ್ಟೋರೆಂಟುಗಳು, ಭಾರೀ ಪರಿಚಿತರಂತೆ ಮುಗುಳ್ನಗುತ್ತಿದ್ದ ಮಸಾಜ್ ಸೆಂಟರುಗಳ ಹುಡುಗ/ ಹುಡುಗಿಯರು, ಲೋಕಲ್ ಮಾರ್ಕೆಟ್‌ಗಳು ಎರಡು ಕಿಮೀನಷ್ಟು ದೂರವನ್ನು ನನ್ನಿಂದ ನಡೆಸಿಬಿಟ್ಟಿದ್ದವು. ಅಲ್ಲಿದ್ದ ಹಣ್ಣಿನಂಗಡಿಗಳಲ್ಲಿ ನೀಟಾಗಿ ಜೋಡಿಸಿಟ್ಟಿದ್ದ ಹಣ್ಣುಗಳ ನಡುವೆ ರಾಜನಂತೆ ಕುಳಿತಿದ್ದ ಮಾವಿನಹಣ್ಣುಗಳು ಕಣ್ಸೆಳೆದವು. ಮಾಂಸಾಹಾರವೇ ಪ್ರಧಾನವಾಗಿರುವ ಈ ದೇಶದ ಫುಡ್ ಸ್ಟಾಲುಗಳಲ್ಲಿ ಮರಿಮೊಸಳೆಗಳನ್ನು ಇಡಿಯಾಗಿ ಗ್ರಿಲ್ ಮಾಡುತ್ತಿರುವುದನ್ನು ನೋಡಿ ನಾನು ಬೆಚ್ಚಿಬಿದ್ದಿದ್ದೆ! ಇಬ್ಬರು ವಿದೇಶೀ ಮಹಿಳೆಯರು ತುಸು ಸಂಶಯದಿಂದಲೇ ಗಾಡಿಯವನಿತ್ತ ಮೊಸಳೆ ಮಾಂಸದ ತುಂಡನ್ನು ಬಾಯಿಗಿಟ್ಟಾಗ ನಾನು ಯೋಚನೆಗೆ ಬಿದ್ದಿದ್ದೆ. ಟ್ರಾವೆಲ್ ಮತ್ತು ಫುಡ್ ವ್ಲಾಗರ್‌ಗಳ ವೀಡಿಯೋಗಳನ್ನು ನೋಡಿ, ನಾನು ಕೂಡ ಹೋದ ದೇಶಗಳಲ್ಲೆಲ್ಲಾ ಅಲ್ಲಿಯ ಆಹಾರದ ರುಚಿಯನ್ನು ನೋಡಬೇಕು ಅಂದುಕೊಂಡಿದ್ದೇನೆ. ಈಗ ನನ್ನಿಂದ ಮೊಸಳೆ ಮಾಂಸವನ್ನು ತಿನ್ನಲು ಸಾಧ್ಯವೇ ಎಂದು ಯೋಚಿಸಿದಾಗ, ಒಂದು ಕೋಟಿ ರುಪಾಯಿ ಕೊಟ್ಟರೂ ತಿನ್ನಲಾರೆ ಎನ್ನಿಸಿ ಅಲ್ಲಿಂದ ಹೊಟೇಲಿನತ್ತ ಕಾಲ್ಕಿತ್ತಿದ್ದೆ!

ಮೀನು ಮತ್ತು ಚಿಕನ್ ತಿನ್ನುವ ನಾನು ಮಾಂಸಾಹಾರಿಯೇ. ಆದರೆ ಸಿಗಡಿ ಮೀನಿನ ವಿಪರೀತ ಅಲರ್ಜಿ ಇರುವ ನನಗೆ ಭಾರತ ಬಿಟ್ಟು ಇತರ ಏಷಿಯನ್ ದೇಶಗಳಲ್ಲಿ ಮೀನು ತಿನ್ನಲೂ ಭಯವೇ. ಥೈಲ್ಯಾಂಡ್ನಲ್ಲಂತೂ ನಮ್ಮಲ್ಲಿಯ ಈರುಳ್ಳಿ, ಟೊಮ್ಯಾಟೋದಂತೆ ಸಿಕ್ಕಸಿಕ್ಕ ಅಡುಗೆಗಳಲ್ಲಿ ಸಿಗಡಿ ಮೀನನ್ನು ಬಳಸುವುದನ್ನು ನೋಡಿ ಗಾಬರಿಗೊಂಡಿದ್ದೆ!

Jazz music festival in Thailand

ಜಾಜ಼್ ಮ್ಯೂಸಿಕ್ ಫೆಸ್ಟಿವಲ್

ಮರುರಾತ್ರಿಯಂತೂ ಬೀಚ್ ರಸ್ತೆಯಲ್ಲಿ ಜಾಜ಼್ ಮ್ಯೂಸಿಕ್ ಫೆಸ್ಟಿವಲ್ ಇದೆಯೆಂದೂ, ಅಲ್ಲಿಗೆ ಹೋಗುವುದನ್ನು ತಪ್ಪಿಸದಿರಿ ಎಂದೂ ಜಿಫ್ಫಿ ಹೇಳಿದ್ದರಿಂದ ರಾತ್ರಿ ಎಂಟೂವರೆಯಾದರೂ ಹೊರಟೆ. ಸುಮಾರು ಒಂದು ಕಿಮೀ ನಡೆದ ಮೇಲೆ ಜಾಜ಼್ ಫೆಸ್ಟಿವಲ್ ನಡೆಯುತ್ತಿದ್ದ ಜಾಗ ಸಿಕ್ಕಿತ್ತು. ಅಷ್ಟೊತ್ತಿಗಾಗಲೇ ಜಾಜ಼್ ಸಂಗೀತ ಕೊನೆಯ ಘಟ್ಟವನ್ನು ತಲುಪಿದ್ದು, ನಾನು ಕೂರಲು ಜಾಗ ಹುಡುಕುವಷ್ಟರಲ್ಲಿ ಗಾಯಕಿಯೊಬ್ಬರು ಹಾಡಲು ಶುರು ಮಾಡಿದ್ದರು. ಮುಂದೆ ನಡೆದದ್ದೆಲ್ಲವೂ ಒಂದು ಮ್ಯಾಜಿಕ್ಕೇ! ಹೈಪಿಚ್‌ನಲ್ಲಿ ಆಕೆ ಹಾಡುತ್ತಿದ್ದ ರಾಕ್ ಹಾಡುಗಳು ಜನರನ್ನು ಯಾವ ರೀತಿ ಮಂತ್ರಮುಗ್ಧರನ್ನಾಗಿ ಮಾಡಿತ್ತೆಂದರೆ, ಫುಟ್‌ಪಾತಿನಲ್ಲಿ ನಡೆದು ಹೋಗುತ್ತಿದ್ದವರೂ ನಿಂತುಬಿಟ್ಟು ಕೇಳತೊಡಗಿದರು. ಯಾವುದೋ ದೇಶದ ಸಮುದ್ರ ತೀರದಲ್ಲಿ, ಯಾವ್ಯಾವುದೋ ದೇಶದ ಅಪರಿಚಿತ ಜನರ ನಡುವೆ ಏಕಾಂಗಿಯಾಗಿ ಕುಳಿತು, ಮತ್ಯಾವುದೋ ದೇಶದ ಸಂಗೀತಕ್ಕೆ ಮರುಳಾಗಿ, ಅದರಲ್ಲೇ ಕಳೆದುಹೋಗುವುದಿದೆಯಲ್ಲಾ? ಇದಕ್ಕಿಂತ ಮಿಗಿಲಾದ ಅನುಭವ ನನಗೆ ಇಷ್ಟರವರೆಗೆ ಯಾವುದೇ ಪ್ರವಾಸದಲ್ಲಿ ಆಗಿಲ್ಲ!

ರಾತ್ರಿ ಹತ್ತುಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿದಾಗ ಅವತ್ತು ತಿನ್ನಬೇಕು ಅಂದುಕೊಂಡಿದ್ದ ‘ಮ್ಯಾಂಗೋ ಸ್ಟಿಕ್ಕಿ ರೈಸ್’ ನೆನಪಾಗಿತ್ತು. ಒಂದು ತಳಿಯ ಅಕ್ಕಿಯ ಅಂಟುಅಂಟಾಗಿರುವ ಅನ್ನವನ್ನು ತೆಂಗಿನಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಬೇಯಿಸುತ್ತಾರೆ. ಬಿಸಿಬಿಸಿಯಾಗಿರುವಾಗಲೇ ಇದರ ಮೇಲೆ ಕರಿದ ಹೆಸರುಬೇಳೆಯನ್ನು ಚಿಮುಕಿಸಿ, ಮಾವಿನಹಣ್ಣಿನ ತುಂಡುಗಳ ಜತೆಗೆ ತಿನ್ನುತ್ತಾರೆ. ಇದೇ ಮ್ಯಾಂಗೋ ಸ್ಟಿಕ್ಕಿ ರೈಸ್. ಜಾಸ್ತಿ ಸಿಹಿ ಅಲ್ಲದ, ಒಂದು ರೀತಿಯ ಘಮ ಹೊಂದಿರುವ ಇದು ತುಂಬಾ ರುಚಿ ಕೂಡ. ವಯಸ್ಸಾದ ಮಹಿಳೆಯೊಬ್ಬರ ಅಂಗಡಿಯಿಂದ ಕೊಂಡು, ಒಂದು ತುತ್ತು ಬಾಯಿಗಿಟ್ಟ ನಾನು ಅದರ ರುಚಿಗೆ ಮಾರುಹೋಗಿದ್ದೆ! ಅವರ ಕೈರುಚಿಯನ್ನು ಹೊಗಳಿ, ನಾಚಿಕೊಂಡು ನಿಂತಿದ್ದ ಅವರದೊಂದು ಫೊಟೋ ಕೂಡ ತೆಗೆದುಕೊಂಡೆ.

ಹರುಕುಮುರುಕು ಇಂಗ್ಲಿಷ್ ಸಹವಾಸ

ಥೈಲ್ಯಾಂಡ್‌ ಶಿಕ್ಷಣ ವ್ಯವಸ್ಥೆ ಬಹುಪಾಲು ನಡೆಯುವುದು ಥಾಯ್ ಭಾಷಾ ಮಾಧ್ಯಮದಲ್ಲಿ. ಅದರ ಜತೆಗೆ ಥೈಲ್ಯಾಂಡ್ ಬ್ರಿಟಿಷರ ವಸಾಹತು ಆಗಿಲ್ಲದ ಕಾರಣ ಇಂಗ್ಲಿಷಿಗೆ ಸಾಮಾನ್ಯ ಜನರು ಅಷ್ಟೊಂದು ಮಹತ್ವವನ್ನೂ ಕೊಡುತ್ತಿಲ್ಲ. ಸಣ್ಣಪುಟ್ಟ ಕೆಲಸಗಾರರಿಂದ ಹಿಡಿದು ಹೈ ಎಂಡ್ ಮಾಲ್‌ಗಳ ಸಿಬ್ಬಂದಿಗಳವರೆಗೆ ಎಲ್ಲರೂ ಮಾತನಾಡುವುದು ಹರುಕುಮುರುಕು ಇಂಗ್ಲಿಷಿನಲ್ಲಿಯೇ. ಅಷ್ಟೇಕೆ, VAT ರಿಫಂಡ್ ಕೇಳಲು ನಾನು ಏರ್ಪೋರ್ಟಿನ ಕೌಂಟರಿಗೆ ಹೋದಾಗ, ಅಲ್ಲಿದ್ದ ಅಧಿಕಾರಿಗೆ ಇಂಗ್ಲಿಷಿನಲ್ಲಿ ವಿವರಿಸಲು ಬಾರದೆ, ಓದಲು ಪ್ಯಾಂಪ್ಲೆಟ್ ಕೊಟ್ಟಿದ್ದರು. ಆದರೂ ಇಂಗ್ಲಿಷ್ ಬಾರದೆನ್ನುವ ಕೀಳರಿಮೆಯೇ ಇಲ್ಲದೆ, ಮುಗುಳ್ನಗುತ್ತಲೇ ತಮಗೆ ತೋಚಿದ ಮಟ್ಟಿಗೆ ಸಹಾಯ ಮಾಡುವ ಅಲ್ಲಿಯ ಜನರ ಬಗ್ಗೆ ನನಗೆ ಮೆಚ್ಚುಗೆಯಿದೆ.

ಮರುದಿನ ವಿಮಾನದ ಕಿಟಕಿಯಿಂದ ಜಗಮಗಿಸುತ್ತಿದ್ದ ಥೈಲ್ಯಾಂಡ್‌ ಅನ್ನು ನೋಡಿದಾಗ, ಇನ್ನೊಮ್ಮೆ ಅಲ್ಲಿಗೆ ಹೋಗಬೇಕು ಅಂದುಕೊಂಡೆ. ಅಲ್ಲಿಯ ಸಾಮಾನ್ಯ ಜನರೊಂದಿಗೆ ಬೆರೆತು ಅಲ್ಲಿಯ ಪ್ರಕೃತಿ, ಇತಿಹಾಸ, ಸಂಸ್ಕೃತಿಯ ಬಗ್ಗೆ ಅರಿಯುವುದಿನ್ನೂ ಬಾಕಿಯಿದೆ. ‘Visit every place twice, once as a tourist and once as a traveller’ ಎನ್ನುವಂತೆ ನನಗೆ ಮತ್ತೊಮ್ಮೆ ಹೋಗಬೇಕಿದೆ. ಮುಂದಿನ ಬಾರಿ ಗುಂಪಿನ ಜತೆ ಹೋಗದೆ, ಒಂಟಿಯಾಗಿ ಹೋಗುವಷ್ಟು ಧೈರ್ಯವನ್ನು ಈ ಬಾರಿಯ ಪ್ರವಾಸದಿಂದ ಕಲಿತಿದ್ದೇನಲ್ಲಾ?