ಆಧುನಿಕ ಶ್ರವಣ ಕುಮಾರ - 04

- ಅನಿಲ್ ಎಚ್.ಟಿ.

( ಕಳೆದ ಸಂಚಿಕೆಯಿಂದ)

ಅದು ಭಾರತದ ಕಟ್ಟಕಡೆ ಗ್ರಾಮ. ಲಿಂಗ್ಸೆ ಎಂದು ಆ ಗ್ರಾಮದ ಹೆಸರು. ಬಹಳ ಚಂದದ ಗ್ರಾಮವದು. ಲಿಂಗ್ಸೆ ಸುತ್ತಲೂ ದೂರದಲ್ಲಿ ಹಿಮಾಲಯ ಆವರಿಸಿಕೊಂಡಿದ್ದು, ಶ್ವೇತವರ್ಣದ ಶಿಖರವನ್ನು ಕಣ್ತುಂಬಿಕೊಳ್ಳುವುದೇ ಮಹಾದಾನಂದ. ಲಿಂಗ್ಸೇ ಭಾರತ ಮತ್ತು ಭೂತಾನ್ ಗಡಿಯಲ್ಲಿದ್ದು ಗ್ರಾಮಸ್ಥರು ಶುಚಿತ್ವದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗಾಗಿ ಲಿಂಗ್ಸೆಯಲ್ಲಿ ಎಲ್ಲಿಯೂ ತ್ಯಾಜ್ಯ ಕಾಣಲು ಸಿಕ್ಕುವುದಿಲ್ಲ. ಊರ ಪುಟ್ಟ ಹಾದಿಗಳು ಬಹಳ ಶುಚಿಯಾಗಿ ನೋಡಲು ಸುಂದರವಾಗಿ ಕಂಗೊಳಿಸುತ್ತವೆ.

ಇದನ್ನೂ ಓದಿ: ಆಧುನಿಕ ಶ್ರವಣಕುಮಾರನ ಸಾಹಸಗಾಥೆ!

ದೇಶ ಸುತ್ತಬೇಕು ಎಂಬ ಅಮ್ಮ ಚೂಡಾರತ್ಮಮ್ಮ ಆಸೆ ಈಡೇರಿಸಲು ಸ್ಕೂಟರ್ ನಲ್ಲಿಯೇ ಆಕೆಯನ್ನು ಭಾರತ ಪರ್ಯಟನೆಗೆ ಕರೆದೊಯ್ದ ಆಧುನಿಕ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಕೃಷ್ಣಕುಮಾರ್ ದೇಶದ ಕಟ್ಟಕಡೆಯ ಗ್ರಾಮದಲ್ಲಿ ತನಗಾದ ಅಪೂರ್ವ ಅನುಭವ ಹಂಚಿಕೊಳ್ಳತೊಡಗಿದ್ದರು.

ಓವರ್ ಟು ಕೃಷ್ಣಕುಮಾರ್-
ಅಮ್ಮ ಮತ್ತು ನನಗೆ ಲಿಂಗ್ಸೆ ಗ್ರಾಮದಲ್ಲಿ ಉಳಿಯಲು ರಾಮಕೃಷ್ಣ ಶರ್ಮ ಅನ್ನುವವರ ಮನೆಯಲ್ಲಿ ವ್ಯವಸ್ಥೆ ಮಾಡಿದ್ದರು. ನೂರಾರು ಸಜ್ಜನರು ಸತ್ಸಂಗ ಪ್ರಿಯರು ನಾವು ಅಲ್ಲಿಗೆ ಬಂದಿರುವುದು ಗೊತ್ತಾಗಿ ನಮ್ಮನ್ನು ನೋಡಲು ನಾವಿದ್ದ ಮನೆಗೆ ಬರತೊಡಗಿದ್ದರು

ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ’ಅಣ್ಣ ನಿಮ್ಮ ಸೌತ್ ಇಂಡಿಯನ್ ದೋಸೆ ಸಾಂಬಾರ್ ನಮಗೆ ತುಂಬಾ ಇಷ್ಟ ಆದರೆ ನಮಗೆ ನಿಮ್ಮ ರೀತಿ ರುಚಿಯಾಗಿ ಅದನ್ನು ಮಾಡಲು ಬರುವುದಿಲ್ಲ’ ಎಂದು ಬೇಸರದಿಂದ ಹೇಳಿದರು. ಇನ್ನು ಕೆಲವರು ನನ್ನ ಉದ್ದನೆಯ ಗಡ್ಡ ನೋಡಿ ಯಾರೋ ವೈದ್ಯನಿರಬೇಕೆಂದು ಭಾವಿಸಿ ಅವರ ವೈಯಕ್ತಿಕ ಆರೋಗ್ಯದ ಸಂಬಂಧಿತ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಈ ಸಮಸ್ಯೆಗಳಲ್ಲಿ ಹೊಟ್ಟೆಯ ಸಮಸ್ಯೆ, ಹೊಟ್ಟೆ ಉಬ್ಬರ, ಹುಳಿತೇಗು, ಮಲಬದ್ಧತೆ ಮುಂತಾದ ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳೇ ಹೆಚ್ಚಿದ್ದವು. ಸಮಸ್ಯೆಗೆ ನಾನು ಪರಿಹಾರ ಕೊಡುತ್ತೇನೆ ಎಂದು ಸಮಾಧಾನ ಹೇಳಿ, ನಾನು ಕೈಯಾರೆ ಮಾಡಿ ಕೊಡುವ ಊಟ ಸೇವಿಸಿ ನಿಮ್ಮ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಗಡ್ಡ ನೇವರಿಸಿಕೊಳ್ತಾ ಹೇಳಿಬಿಟ್ಟೆ.

Untitled design (47)

ಅದರಂತೆ, ಅದೊಂದು ಸಂಜೆ ಅವರ ಮನೆಯ ಪುಟ್ಟ ಪಾಕ ಶಾಲೆಯಲ್ಲಿ ನನ್ನ ನಳಪಾಕ ಶುರುವಾಯಿತು. ಸೌತ್ ಇಂಡಿಯನ್ ಹುಳಿ ಪುಡಿಯನ್ನು ಹುರಿದುಕೊಂಡು ಮಿಕ್ಸಿಲಿ ಅದನ್ನು ಪೌಡರ್ ಮಾಡಿಕೊಂಡೆವು.. ಗ್ರಾಮಸ್ಥರು ಕೇವಲ ಧಾಲ್ ಮತ್ತು ಡ್ರೈ ಚಪಾತಿ ಬಳಸುತ್ತಿದ್ದುದೇ ಅವರ ಆರೋಗ್ಯ ಸಮಸ್ಯೆಗೆ ಮೂಲ ಕಾರಣ ಅನಿಸಿತು.

ಅದಕ್ಕೆ ಅವರ ಹೊಟ್ಟೆಯ ಗ್ಯಾಸ್ ಅಥವಾ ಕಾಲು ಊತ ಸರಿ ಹೋಗುವ ಹಾಗೆ ಸ್ಟ್ರಾಂಗ್ ಆಗಿ ಸಾಂಬಾರ್ ಮಾಡೋಣ ಅನಿಸಿತು. ಎಲ್ಲವೂ ನಮ್ಮ ಸೌತ್ ಇಂಡಿಯನ್ ಪ್ರಕಾರ ಮಾಡೋಣ ಎಂಂದುಕೊಂಡು ನಾನು ಅಮ್ಮ ಇಬ್ಬರೂ ಸೇರಿಕೊಂಡು ಸಾಂಬಾರು ತಯಾರು ಮಾಡಲು ಪಾತ್ರೆ ಕೇಳಿದೆ. ಕೆಲವೊಂದು ಪಾತ್ರೆ ನಮ್ಮ ಮುಂದಿಟ್ಟರು. ಅದರಲ್ಲಿ ನಾನು ಸ್ವಲ್ಪ ದೊಡ್ಡ ಪಾತ್ರೆಯನ್ನೇ ಆಯ್ದುಕೊಂಡೆ. ಆದರೆ ಗ್ರಾಮಸ್ಥರು ದೊಡ್ಡ ಪಾತ್ರೆ ಕಂಡು ವರಾತ ಶುರು ಮಾಡಿದರು. ಪಂಡಿತ್ ಜೀ ಇದು ಸ್ವಲ್ಪ ಜಾಸ್ತಿಯಾಗುತ್ತದೆ. ನಾವು ಅಷ್ಟು ತಿನ್ನುವುದಿಲ್ಲ ರುಚಿಗೆ ಮಾತ್ರ ಸೇವಿಸುತ್ತೇವೆ ಅಷ್ಟೇ. ವೇಸ್ಟ್ ಮಾಡೋದು ಬೇಡ ಎಂದೆಲ್ಲಾ ಹೇಳತೊಡಗಿದರು.

ನಾನು ಅದಕ್ಕೆಲ್ಲಾ ಗಮನಕೊಡದೆ ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ಸಾಂಬಾರ್ ತಯಾರಿ ಶುರು ಮಾಡಿದೆ. ಅದರ ರುಚಿ ನೋಡಿ ಇವರು ಖಂಡಿತ ಎಲ್ಲವನ್ನೂ ಖಾಲಿ ಮಾಡುತ್ತಾರೆ ಎಂದು ನನಗೆ ನಂಬಿಕೆಯಿತ್ತು.

ತರಕಾರಿ ಸಾಂಬಾರು, ಸ್ವಲ್ಪ ಖಾರ, ಕಾಯಿ, ಕಡ್ಲೆ, ಟೊಮೆಟೊ, ಇವೆಲ್ಲವನ್ನೂ ರುಬ್ಬಿ ತಯಾರಿ ಮಾಡಿಟ್ಟುಕೊಂಡಿದ್ದ ಮೆಣಸಿನ ಪುಡಿಯನ್ನು ಹಾಕಿ ಸಾಂಬಾರ್ ತಯಾರಿಸಲಾಯಿತು. ಒಲೆಯ ಮೇಲೆ ಬಿಸಿ ಇದ್ದಾಗಲೇ ಆ ಎದುರಿನಲ್ಲಿ ಕೂತಿದ್ದ ಒಂದಿಬ್ಬರಿಗೆ ಎರಡು ಕಪ್ ನಲ್ಲಿ ಒಂದು ಸ್ಪೂನ್ ಇಟ್ಟು ಕಾಲು ಸೌಟು ಸಾಂಬಾರ್ ಹಾಕಿ ಕೊಟ್ಟೆ. ಸ್ವಲ್ಪ ಕುಡಿದರು. ಬಾಯಿಗೆ ರುಚಿ ಕಂಡಿತು. ಪಂಡಿತ್ ಜೀ ಇನ್ನೂ ಸ್ವಲ್ಪ ಕೊಡಬಹುದೇ ಎಂದು ಕೇಳಿದರು. ಹಾಗೆ ಐದಾರು ಬಾರಿ ಮುಂದುವರಿಯಿತು. ದಕ್ಷಿಣ ಭಾರತದ ಸಾಂಬಾರ್ ನ ರುಚಿ ಅವರ ಬಾಯಿಗೆ ತಗುಲಿತ್ತು.
ಕೊನೆಗೆ ಅದು ಬಾಯಿಂದ ಬಾಯಿಗೆ ತಲುಪಿ ಇಡೀ ಲಿಂಗ್ಸೆ ಗ್ರಾಮಕ್ಕೇ ಹರಡಿತು. ಸೌತ್ ಇಂಡಿಯಾದ ಪಂಡಿತ್ ಜೀ ಘಮಘಮ ಸಾಂಬಾರು ಮಾಡಿದ್ದಾರೆ, ತುಂಬಾ ರುಚಿಯಾಗಿದೆ ಎಂಬ ಸುದ್ದಿ ಹರಡಿತು.

ನೋಡನೋಡುತ್ತಿದ್ದಂತೆಯೇ ಗ್ರಾಮದ ಹೆಂಗಳೆಯರು ಸಣ್ಣ ತಪ್ಪಲೆಗಳನ್ನು ತೆಗೆದುಕೊಂಡು ಬಂದು ಸಾಂಬಾರು ತೆಗೆದುಕೊಂಡು ಹೋದರು. ಕೇವಲ ಅರ್ಧ ಗಂಟೆಯಲ್ಲಿ ನಾವು ಮಾಡಿದ್ದ ದೊಡ್ಡ ತಪ್ಪಲೆಯ ಸಾಂಬಾರು ಖಾಲಿಯಾಯಿತು. ಸಾಂಬಾರು ರುಚಿಯ ಬಗ್ಗೆ ಊರಲ್ಲೆಲ್ಲಾ ಪ್ರಚಾರವೋ ಪ್ರಚಾರ. ನಮಗೆ ಗೌರವವೋ ಗೌರವ.

ಯಾಕೆಂದರೆ, ಈ ಸಾಂಬಾರ್ ಕುಡಿದ ತಕ್ಷಣ ಹೊಟ್ಟೆಯ ಗ್ಯಾಸ್ ಎಲ್ಲ ರಿಲೀಸ್ ಆಗಿ ಹೊಟ್ಟೆ ಹಗುರವಾಯಿತು. ಚಕ್ಕೆ ಲವಂಗ ಕಾಳುಮೆಣಸು ಇದನ್ನೆಲ್ಲ ಬಳಸಿ ಖಾರದಪುಡಿ ತಯಾರು ಮಾಡಿದ್ದುದರಿಂದ ಬಹಿರ್ದೆಸೆ ಸುಲಭವಾಯಿತು. ಮರುದಿನ ಕೂಡ ಬಂದು ಬಹಳ ಒತ್ತಾಯ ಮಾಡಿದ್ದರಿಂದ ಸೌತ್ ಇಂಡಿಯಾದ ಬಹಳ ಪ್ರಖ್ಯಾತ ಬಿಸಿಬೇಳೆ ಬಾತ್ ತಯಾರು ಮಾಡಿದೆ. ಅದನ್ನು ಊರಿನವರೆಲ್ಲಾ ಖುಷಿಪಟ್ಟು ತಿಂದು ಸಂಭ್ರಮಿಸಿದರು.

ಕೊನೆಗೆ ನಾವು ಲಾಕ್ ಡೌನ್ ನಿಂದ ಊರಿಗೆ ಮರಳುವ ವಿಷಯ ತಿಳಿದ ಲಿಂಗ್ಸೆ ಗ್ರಾಮಸ್ಥರು, ಆ ಪಂಡಿತರನ್ನು ಇಲ್ಲಿಂದ ಹೋಗಬೇಡಿ, ನಮ್ಮ ಊರಿಗೆ ಬಂದು ಉಪದೇಶ ಉಪಚಾರ ಮಾಡಿದ್ದರಿಂದಾಗಿ ಬಹಳ ದಿನಗಳಿಂದ ಕಾಡಿದ್ದ ಹೊಟ್ಟೆಯ ಎಷ್ಟೋ ಸಮಸ್ಯೆಗಳು ನಿವಾರಣೆಯಾಗಿವೆ. ಹಾಗಾಗಿ ನೀವು ಇಲ್ಲೇ ಇದ್ದುಬಿಡಿ ನಾವೇ ಸಲಹುತ್ತೇವೆ ಎಂದು ಪರಿಪರಿಯಾಗಿ ಬೇಡತೊಡಗಿದರು. ಅಮ್ಮನಿಗೂ ಕೂಡ ಲಿಂಗ್ಸೆಯಲ್ಲಿ ಆಕೆಯ ವಯಸ್ಸಿನ ಅನೇಕ ಗೆಳತಿಯರು ಸಿಕ್ಕಿದ್ದರು. ಅವರೊಂದಿಗೆ ಮಕ್ಕಳಂತೆ ಅಮ್ಮ ಸಂಭ್ರಮಿಸುತ್ತಾ ಊರು ಸುತ್ತುತ್ತಿದ್ದದ್ದು ನನ್ನ ಮನಸಿಗೂ ಸಮಾಧಾನ ಕೊಟ್ಟಿತ್ತು.

Untitled design (48)

ಭಾರತದ ಗಡಿಗ್ರಾಮದಲ್ಲಿ ದೊರಕಿದ ಇಂಥ ಪ್ರೀತಿಗೆ ಏನು ಹೇಳುವುದು? ನನಗೆ ನನ್ನ ತಾಯಿಯನ್ನು ಸುರಕ್ಷಿತವಾಗಿ ನಮ್ಮ ಕನ್ನಡದ ನೆಲಕ್ಕೆ ನಮ್ಮ ಜನಗಳ ಬಳಿ ನನ್ನೂರಿಗೆ ಬರುವ ಚಿಂತೆ. ಕೋವಿಡ್ ಸಮಯದಲ್ಲಿ ಲಿಂಗ್ಸೆ ಗ್ರಾಮಸ್ಥರು ತೋರಿಸಿದ ಪ್ರೀತಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂದು ಇಂದಿಗೂ ನನ್ನ ಮನಸನಲ್ಲಿ ಬೇಸರವಿದೆ.

ಉತ್ತರ ಭಾರತೀಯರಿಗೆ ನಮ್ಮ ಸೌತ್ ಇಂಡಿಯನ್ ಸಾಂಬಾರು, ದೋಸೆ, ಇಡ್ಲಿ, ಚಟ್ನಿ, ಬಿಸಿಬೇಳೆಭಾತ್, ತುಂಬಾ ಇಷ್ಟ ಅನ್ನುವುದು ನಮ್ಮ ಅನುಭವಕ್ಕೆ ಪರ್ಯಟನೆ ಕಾಲದಲ್ಲಿ ಹಲವು ಬಾರಿ ಬಂದಿದೆ.

ಹೀಗಾಗಿಯೇ ಉತ್ತರ ಭಾರತದಲ್ಲಿ, ಅನೇಕ ಮನೆಗಳಲ್ಲಿ ದಕ್ಷಿಣ ಭಾರತದ ಸಿಹಿತಿಂಡಿ ಸೇರಿದಂತೆ ಇಲ್ಲಿನ ವಿಶೇಷ ತಿಂಡಿಗಳನ್ನು ತಯಾರಿಸಿ ಮನೆಯವರಿಗೆ ನೀಡಿದ್ದೇನೆ. ಪರ್ಯಟನೆ ಕಾಲದಲ್ಲಿ ಇಂಥ ಅನೇಕ ಅನುಭವ ಆಗಿದೆ. ಗಡಿಗ್ರಾಮದಲ್ಲಿ ಸಿಕ್ಕಿದ ಜನರ ಪ್ರೀತಿ, ಮಮಕಾರ ಸದಾ ಸ್ಮರಣೀಯ. ದೇಶಸುತ್ತು ಕೋಶ ಓದು ಎಂಬ ಗಾದೆ ಮಾತು ನಮ್ಮ ಪಾಲಿಗೆ ದೇಶ ಸುತ್ತು, ಊಟ ನೀಡು. ಪ್ರೀತಿ ಸಂಪಾದಿಸು ಎಂದೂ ಹೇಳುವಂತಾಯಿತು.

( ಪಯಣ ಮುಂದುವರಿಯುತ್ತದೆ..)