ಗುಹೆಯೊಳಗೆ ನರಸಿಂಹನ ಗುಡಿ
ನರಸಿಂಹನ ದೇವಾಲಯದ ಕುರಿತಾದ ಪುರಾಣ ಕಥೆಯೊಂದು ಹೃದಯ ಸ್ಪರ್ಶಿಸುತ್ತದೆ. ಶಿವನ ತಪಸ್ಸಿಗೆ ಅಡ್ಡಿಯಾದ ಜಲಾಸುರನನ್ನು ಲಕ್ಷ್ಮೀ ನರಸಿಂಹನು ಸಂಹರಿಸಿದ. ನಂತರ ಜಲಾಸುರನ ವಿನಂತಿಗೆ ಸ್ಪಂದಿಸಿ ತನ್ನ ಪಾದದಲ್ಲಿ ನೀರಾಗಿ ನೆಲೆಸಲು ಅನುಗ್ರಹಿಸಿದನು. ಆ ದಯೆಯೇ ಇಂದು ಈ ಪವಿತ್ರ ಜಲವಾಗಿ ಹರಿಯುತ್ತಿದ್ದು, ಭಕ್ತರನ್ನು ಆಶೀರ್ವಾದಿಸುತ್ತಿದೆ. ಇಲ್ಲಿ ನರಸಿಂಹನ ಜತೆಗೆ ಶಿವಲಿಂಗವೂ ಪೂಜೆಗೊಳ್ಳುತ್ತದೆ. ಹರಿ-ಹರರು ಒಂದೇ ಸ್ಥಳದಲ್ಲಿ ಇರುವ ಅಪರೂಪದ ಸಂಗಮ ತಾಣವಿದು.
- ಎಸ್.ಸುರೇಶ್ ವತ್ಸ
ಬೀದರ್, ಇತಿಹಾಸದ ವೈಭವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಜೀವಂತ ರೂಪ. ಮಧ್ಯಕಾಲೀನ ಭವ್ಯ ಕೋಟೆಗಳು, ಶಿಲ್ಪ ಸೌಂದರ್ಯಗಳಿಂದ ತುಂಬಿದ ಗೋರಿಗಳು ಮತ್ತು ಪರಂಪರೆಯ ನೆನಪುಗಳನ್ನು ಹೊತ್ತ ಎತ್ತರದ ಗೋಡೆಗಳು ಈ ನಗರವನ್ನು ವೈಶಿಷ್ಟ್ಯಪೂರ್ಣಗೊಳಿಸಿವೆ. ಬೀದರ್ ಕೇವಲ ಒಂದು ನಗರವಲ್ಲ; ಅನೇಕ ರಾಜವಂಶಗಳ ಆಳ್ವಿಕೆಯನ್ನು ಕಂಡು ಬೆಳೆದ ಐತಿಹಾಸಿಕ ನಗರಿ. ಹಿಂದೂ, ತುರ್ಕಿ ಮತ್ತು ಪರ್ಷಿಯನ್ ವಾಸ್ತುಶಿಲ್ಪ ಶೈಲಿಗಳ ಅಪೂರ್ವ ಸಂಗಮ ಇಲ್ಲಿ ಕಾಣಸಿಗುತ್ತದೆ. ಪ್ರತಿ ಗೋಡೆ, ಪ್ರತಿ ಗುಂಬಜ್, ಪ್ರತಿ ಶಿಲ್ಪವೂ ಒಂದು ಕಥೆಯನ್ನು ಹೇಳುತ್ತದೆ. ಭೂತಕಾಲದ ವೈಭವ, ಆಡಳಿತ ಪರಂಪರೆ, ಕಲಾತ್ಮಕ ನೈಪುಣ್ಯದ ಜತೆಗೆ ಇತಿಹಾಸವನ್ನು ಮೆಲುಕುಹಾಕುವ ಅನುಭವ ಈ ನೆಲದಲ್ಲಿ ಆಗುತ್ತದೆ. ಅಂಥ ವಿಶಿಷ್ಟ ಕ್ಷೇತ್ರಗಳಲ್ಲಿ ಒಂದು ಬೀದರ್‌ನ ಶ್ರೀ ಝರಣಿ ನರಸಿಂಹ ಸ್ವಾಮಿ ಗುಡಿ.
ಇದನ್ನೂ ಓದಿ: ಪಾಪ-ಪುಣ್ಯದ ಕೆರೆ.. ನರಸಿಂಹ ಪರ್ವತದ ಕರೆ!
ಗುಹೆಯೊಳಗೆ ಸಾಗಬೇಕು
ಮಣಿಚೂಲ ಬೆಟ್ಟದ ಗುಹೆಯೊಳಗೆ ಈ ದೇವಾಲಯವಿದೆ. ಒಳಗೆ ಕಾಲಿಟ್ಟ ಕ್ಷಣದಿಂದಲೇ ಭಕ್ತರ ಮನಸು ತುಂಬಿಬರುತ್ತದೆ. ಎದೆಮಟ್ಟದ ತಣ್ಣೀರಿನಲ್ಲಿ ಸುಮಾರು 300 ಮೀ. ನಡೆದು ಸಾಗಬೇಕು. ಆ ದಾರಿಯಲ್ಲಿ ಪ್ರತಿಯೊಂದು ಹೆಜ್ಜೆಯೂ ಒಂದು ಪರೀಕ್ಷೆಯಂತೆ, ಪ್ರತಿಯೊಂದು ಕ್ಷಣವೂ ದೇವರತ್ತ ಹತ್ತಿರವಾಗುವ ಅನುಭವದಂತೆ ಭಾಸವಾಗುತ್ತದೆ. ಗುಹೆಯೊಳಗೆ ಶ್ರೀ ನರಸಿಂಹ ಸ್ವಾಮಿಯ ಉದ್ಭವ ಮೂರ್ತಿ ಇದೆ. ಅದರ ಪಾದದಿಂದ ನಿರಂತರವಾಗಿ ನೀರು ಹರಿದುಬರುತ್ತಿರುತ್ತದೆ. ಭಕ್ತರಿಗೆ ಅದು ಕೇವಲ ನೀರಲ್ಲ; ಭಕ್ತಿಯ ಹರಿವು, ಶ್ರದ್ಧೆಯ ಸಾಕ್ಷಿ.
ಕಥೆಯ ಪ್ರಕಾರ
ನರಸಿಂಹನ ದೇವಾಲಯದ ಕುರಿತಾದ ಪುರಾಣ ಕಥೆಯೊಂದು ಹೃದಯ ಸ್ಪರ್ಶಿಸುತ್ತದೆ. ಶಿವನ ತಪಸ್ಸಿಗೆ ಅಡ್ಡಿಯಾದ ಜಲಾಸುರನನ್ನು ಲಕ್ಷ್ಮೀ ನರಸಿಂಹನು ಸಂಹರಿಸಿದ. ನಂತರ ಜಲಾಸುರನ ವಿನಂತಿಗೆ ಸ್ಪಂದಿಸಿ ತನ್ನ ಪಾದದಲ್ಲಿ ನೀರಾಗಿ ನೆಲೆಸಲು ಅನುಗ್ರಹಿಸಿದನು. ಆ ದಯೆಯೇ ಇಂದು ಈ ಪವಿತ್ರ ಜಲವಾಗಿ ಹರಿಯುತ್ತಿದ್ದು, ಭಕ್ತರನ್ನು ಆಶೀರ್ವಾದಿಸುತ್ತಿದೆ. ಇಲ್ಲಿ ನರಸಿಂಹನ ಜತೆಗೆ ಶಿವಲಿಂಗವೂ ಪೂಜೆಗೊಳ್ಳುತ್ತದೆ. ಹರಿ-ಹರರು ಒಂದೇ ಸ್ಥಳದಲ್ಲಿ ಇರುವ ಅಪರೂಪದ ಸಂಗಮ ತಾಣವಿದು. ಈ ಅನುಭವ ಭಕ್ತರ ಮನಸಿಗೆ ಒಂದು ವಿಶಿಷ್ಟ ಶಾಂತಿ ನೀಡುತ್ತದೆ. ಕೆಂಪು ಕಲ್ಲಿನ ಗುಹೆಯಲ್ಲಿ, ತಂಪಾದ ನೀರಿನ ಮಧ್ಯೆ, ಭಕ್ತಿ ತುಂಬಿದ ಮನಸಿನಿಂದ ದೇವರನ್ನು ಕಾಣುವ ಆ ಕ್ಷಣದ ಅನುಭವವನ್ನು ವರ್ಣಿಸಲು ಪದಗಳು ಸಾಕಾಗವು. ಈ ನೀರಿಗೆ ಸಾಕಷ್ಟು ರೋಗಗಳನ್ನು ನಿವಾರಿಸುವ ಔಷದೀಯ ಗುಣವಿದೆ ಎನ್ನುವುದು ಹಲವರ ಮಾತು.

ಬೀದರ್ ಕೋಟೆ
ಬೀದರ್ ಕೋಟೆ, ಇದು ಕೇವಲ ರಕ್ಷಣಾತ್ಮಕ ಪ್ರಾಕಾರವಲ್ಲ. ಬಹಮನಿ ಸಾಮ್ರಾಜ್ಯದ ಶಕ್ತಿ, ಕಲೆ-ವಾಸ್ತುಶಿಲ್ಪದ ಉತ್ತುಂಗವನ್ನು ಪ್ರತಿಬಿಂಬಿಸುವ ಜೀವಂತ ಸಾಕ್ಷಿ. ಅಲ್ಲಾ-ಉದ್-ದಿನ್ ಬಹಮನ್ ಶಾ ಆಡಳಿತದಲ್ಲಿ ಈ ಕೋಟೆ ನಿರ್ಮಾಣವಾಯಿತು. ಬೀದರ್ ನಗರದ ಐತಿಹಾಸಿಕ ಹೃದಯವಾಗಿ, ಅದರ ವೈಭವವನ್ನು ಇಂದಿಗೂ ಉಳಿಸಿಕೊಂಡಿದೆ.
ಈ ಕೋಟೆಯ ನಿರ್ಮಾಣದಲ್ಲಿ ಪರ್ಷಿಯನ್ ವಾಸ್ತುಶೈಲಿಯನ್ನು ಕಾಣಬಹುದು. ಎತ್ತರದ ಗೋಡೆಗಳು, ವಿಶಾಲ ಪ್ರಾಕಾರಗಳು ಮತ್ತು ಸೂಕ್ಷ್ಮ ಅಲಂಕಾರಗಳು, ಅಂದಿನ ಶಿಲ್ಪಿಗಳ ನೈಪುಣ್ಯವನ್ನು ಪ್ರದರ್ಶಿಸುತ್ತದೆ. ಕೋಟೆಯ ಒಳಗೆ ಪ್ರವೇಶಿಸುವಾಗ ಗತಕಾಲದ ಒಳನೋಟ ನಮಗೆ ಸಿಗುತ್ತದೆ.
ಕೋಟೆಯ ಒಳಾಂಗಣದಲ್ಲಿ ರಂಗಿನ್ ಮಹಲ್, ಗಗನ್ ಮಹಲ್ ಮತ್ತು ತಖತ್ ಮಹಲ್ ಮೊದಲಾದ ಮಹತ್ವದ ನಿರ್ಮಾಣಗಳಿವೆ. ಇವು ಬಹಮನಿ ರಾಜವಂಶದ ವೈಭವವನ್ನು ನಿರೂಪಿಸುವ ಪ್ರಮುಖ ಸಾಂಸ್ಕೃತಿಕ ಸಾಕ್ಷಿಗಳಾಗಿವೆ. ವಿಶೇಷವಾಗಿ ರಂಗಿನ್ ಮಹಲ್‌ನ ದ್ವಾರ ಪರ್ಷಿಯನ್-ದಕ್ಷಿಣ ಭಾರತ ಶೈಲಿಯನ್ನು ಹೊತ್ತಿದೆ.

ಗುರು ನಾನಕ್ ಝೀರಾ ಸಾಹಿಬ್
ಗುರು ನಾನಕ್ ಝೀರಾ ಸಾಹಿಬ್, ಸಿಖ್ ಜನರ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಯಾತ್ರಾ ಕ್ಷೇತ್ರವಾಗಿದೆ. ಇದು ನಂಬಿಕೆ, ದಯೆ ಮತ್ತು ಆಧ್ಯಾತ್ಮಿಕ ಶಾಂತಿಯ ಪ್ರತೀಕವಾಗಿ ಇಂದಿಗೂ ಉಳಿದಿದೆ. ಇದು ಗುರು ನಾನಕ್ ದೇವ್ ಜೀ ಅವರ ದಿವ್ಯ ಸ್ಪರ್ಶದಿಂದ ಪಾವನಗೊಂಡಿದೆ. ಅವರೊಂದಿಗೆ ಗುರು ಗೋಬಿಂದ್ ಸಾಹಿಬ್ ಜೀ ಹಾಗೂ ಗುರು ತೇಗ್ ಬಹದ್ದೂರ್ ಜೀ ಅವರ ಆಗಮನವೂ ಈ ಸ್ಥಳದ ಮಹತ್ವವನ್ನು ಗಾಢಗೊಳಿಸಿದೆ.
ʻಝೀರಾʼಎಂದರೆ ಜಲಧಾರೆ. ಇಲ್ಲಿ ಒಂದು ಪವಿತ್ರ ನೀರಿನ ಕುಂಡವಿದೆ. ಅದು ಈ ಗುರುದ್ವಾರದ ವಿಶೇಷತೆ. ಈ ಜಲವು ದೈವಿಕ ಕೃಪೆಯ ಸಂಕೇತ ಎಂಬುದು ಭಕ್ತರ ನಂಬಿಕೆ. ಇಲ್ಲಿ ಹರಿಯುವ ನೀರು ಭಕ್ತರ ಮನಸಿಗೆ ಶಾಂತಿಯ ಜತೆಗೆ ಆತ್ಮಕ್ಕೆ ಪವಿತ್ರತೆಯ ಅನುಭವವನ್ನೂ ನೀಡುತ್ತದೆ.
ಪ್ರತಿವರ್ಷ ಲಕ್ಷಾಂತರ ಭಕ್ತರು ಈ ಪವಿತ್ರ ಕ್ಷೇತ್ರಕ್ಕೆ ಆಗಮಿಸುತ್ತಾರೆ. ತಮ್ಮ ಕೈಲಾದ ಕೆಲಸಗಳನ್ನು ಇಲ್ಲಿ ಅಂದು ಮಾಡುತ್ತಾರೆ. ಅವರ ಶಾಂತಿ, ಸೇವಾ ಮನೋಭಾವ ಮತ್ತು ಭಕ್ತಿಯ ವಾತಾವರಣ, ಪ್ರತಿಯೊಬ್ಬರ ಮನಸನ್ನು ಮುಟ್ಟುವಂಥದ್ದು.
ಪಾಪನಾಶ ಮಹಾದೇವ ದೇಗುಲ
ಪಾಪನಾಶ ಮಹಾದೇವ ಸನ್ನಿಧಾನ. ಇದು ಶಿವನ ಕ್ಷೇತ್ರವಾಗಿದೆ. ಗರ್ಭಗುಡಿಯಲ್ಲಿ ಭವ್ಯ ಶಿವಲಿಂಗವಿದ್ದು, ಈ ಕ್ಷೇತ್ರದ ಹಿನ್ನೆಲೆಯು ತ್ರೇತಾಯುವನ್ನು ಸಂಪರ್ಕಿಸುತ್ತದೆ. ಕಥೆಯ ಪ್ರಕಾರ, ಶ್ರೀ ರಾಮಚಂದ್ರನು ರಾವಣನ ಸಂಹಾರದ ನಂತರ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಬಾಣದಿಂದ ಒಂದು ತೀರ್ಥವನ್ನೂ ಸೃಷ್ಟಿಸಿದನು. ಅಂದು ರಾಮನು ಸೃಷ್ಟಿಸಿದ ತೀರ್ಥ ಇಂದಿಗೂ ಇಲ್ಲಿದೆ. ಅದಕ್ಕೆ ʻಪಾಪನಾಶ ತೀರ್ಥʼ ಎಂದು ಹೆಸರು ಇಡಲಾಗಿದೆ. ವಿಶೇಷವೆಂದರೆ ಈ ತೀರ್ಥ ವರ್ಷಪೂರ್ತಿ ನೀರಿನಿಂದ ತುಂಬಿರುತ್ತದೆ. ಭಕ್ತರು ಈ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ.
ಬಹಮನಿಗಳ ಗೋರಿಗಳು
ಬಹಮನಿ ಸುಲ್ತಾನರು ಗೋರಿ ಕಟ್ಟಿಸಿಕೊಳ್ಳುವುದರಲ್ಲಿ ನಿಷ್ಣಾತರು. ಇಲ್ಲಿ 12 ಗುಮ್ಮಟಗಳಿರುವ ಗೋರಿಗಳಿವೆ. ಅಹಮದ್ ಷಾ ವಲಿಯ ಸಮಾಧಿಯು ಚಿನ್ನ ಲೇಪಿತ ಅಲಂಕಾರ ಮತ್ತು ಚಿತ್ರಕಲೆಯಿಂದ ಕೂಡಿದ್ದು, ಆಕರ್ಷಣೀಯವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ಉರುಸ್ ಜಾತ್ರೆ ನಡೆಯುತ್ತದೆ.

14ನೆಯ ಶತಮಾನದ ಪ್ರಸಿದ್ಧ ಶಿಕ್ಷಣ ಕೇಂದ್ರ
ಮೊಹಮ್ಮದ್ ಗವಾನ್ ಮದರಸಾ, ಇದು ಮಹಮ್ಮದ್ ಗವಾನ್ 1472ರಲ್ಲಿ ನಿರ್ಮಿಸಿದ ಪ್ರಸಿದ್ಧ ಶಿಕ್ಷಣ ಕೇಂದ್ರ. ಸುಮಾರು 1000 ವಿದ್ಯಾರ್ಥಿಗಳಿಗೆ ಅರೇಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. 3000ಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯ, ಉಪನ್ಯಾಸ ಸಭಾಂಗಣ, ಪ್ರಾರ್ಥನಾ ಸ್ಥಳ ಮತ್ತು ವಸತಿ ಸೌಲಭ್ಯಗಳೊಂದಿಗೆ ಇದು ಆ ಕಾಲದ ಉನ್ನತ ವಿದ್ಯಾಕೇಂದ್ರವಾಗಿತ್ತು ಎನ್ನಲಾಗಿದೆ.
ಹೀಗೆ ಬೀದರ್‌ಗೆ ನೀವು ಹೋದಾಗ ನೋಡಿ ಬರಲು ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಒಂದೆರಡು ದಿನಗಳಲ್ಲಿ ಒಟ್ಟು ಬೀದರ್ ಅನ್ನು ನೋಡುವ ಗೋಜು ಬಿಟ್ಟು ಸಮಯಕೊಟ್ಟು ಅಡ್ಡಾಡಿ ಬನ್ನಿ. ಒಟ್ಟು ಪ್ರವಾಸ ನಿಮ್ಮದಾಗಲಿ.
ದಾರಿ ಹೇಗೆ?
ಬೀದರ್ ಒಂದು ಜಿಲ್ಲಾ ಕೇಂದ್ರ. ರಾಜ್ಯದ ವಿವಿದೆಡೆಯಿಂದ ಸಾರಿಗೆ ಸೌಕರ್ಯ ಉತ್ತಮವಾಗಿದೆ. ಬೆಂಗಳೂರಿನಿಂದ ಬೀದರ್‌ಗೆ ನೇರ ಬಸ್ ಸೌಲಭ್ಯವಿದ್ದು, ಅಲ್ಲಿಂದ ಪ್ರವಾಸಿ ತಾಣಗಳಿಗೆ ಸ್ಥಳೀಯ ವಾಹನಗಳನ್ನು ಬಳಸಬಹುದು. ಬೀದರ್ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನೂ ಹೊಂದಿದೆ.