-ಹೊಸ್ಮನೆ ಮುತ್ತು

‘The beauty of life blooms in slowness, not in rush.’ ಎಂಬ ಮಾತಿದೆ. ನಿಧಾನವಾಗಿ ಬದುಕಿದರೆ ಪ್ರತಿಯೊಂದು ಕ್ಷಣವೂ ಹೊಸ ಅರ್ಥ ಪಡೆದುಕೊಳ್ಳುತ್ತದೆ. ನಿಧಾನ ಎಂದರೆ ನಿಲ್ಲುವುದಲ್ಲ; ಅದು ಗ್ರಹಿಸುವುದರ ಕುರಿತಾದದ್ದು. ಬೆಳಗಿನ ಸೂರ್ಯೋದಯವನ್ನೇ ಗಮನಿಸಿ. ಎಷ್ಟು ನಿಧಾನವಾಗಿ ಆಕಾಶವನ್ನು ಬಂಗಾರದ ಹೊಳಪಿನಲ್ಲಿ ಬೆಳಗಿಸುತ್ತದೆ. ಹಕ್ಕಿಗಳ ಕೂಗು, ಎಲೆಗಳ ಚಲನೆ, ಹರಿವ ನೀರು, ಗಾಳಿಯ ತಂಪು ಇವೆಲ್ಲವೂ ಶಾಂತವಾಗಿ, ತಮ್ಮದೇ ಲಯದಲ್ಲಿ ನಡೆಯುತ್ತವೆ. ಪ್ರಕೃತಿ ಎಂದಿಗೂ ಅವಸರದಲ್ಲಿ ಇರುವುದಿಲ್ಲ. ನಿಧಾನವಾದರೂ ನಿಖರವಾದವು. ಒಂದು ಸಸಿ ಮರವಾಗಲು ಸಮಯ ಬೇಕು. ಹೂವು ಅರಳಲು ಕಾಯಬೇಕು. ಮೊಟ್ಟೆಯಿಂದ ಮರಿ ಬರಲು ಸಹನೆಯ ಅಗತ್ಯವಿದೆ. ಪ್ರಕೃತಿ ನಮಗೆ ಪ್ರತಿದಿನ ಹೇಳುತ್ತಿರುವ ಪಾಠ ಇದೇ; ‘Slow and steady wins the race.’ ನಾವು ಬದುಕನ್ನು ಪ್ರಕೃತಿಯ ಈ ನಿಧಾನ ಗತಿಯೊಂದಿಗೆ ಸರಿಹೊಂದಿಸಿದಾಗ, ಮನಸ್ಸಿಗೆ ಶಾಂತಿ, ಶರೀರಕ್ಕೆ ತಾಜಾತನ, ಹೃದಯಕ್ಕೊಂದು ನೆಮ್ಮದಿ ದೊರೆಯುತ್ತದೆ.

ಇಂದಿನ ಮನುಷ್ಯ ದಿನವಿಡೀ ಕೆಲಸ, ಗುರಿ, ಸಾಧನೆ, ಸ್ಪರ್ಧೆ ಎಂದು ಓಡುತ್ತಿದ್ದಾನೆ. ಗಡಿಬಿಡಿಯ ಈ ಓಟದಿಂದ ಬಿಡುಗಡೆಗೊಂಡು ಕ್ಷಣಕಾಲ ನೆಮ್ಮದಿಯ ಉಸಿರಾಡಲು ಮನುಷ್ಯ ಆಯ್ದುಕೊಂಡ ಮಾರ್ಗಗಳಲ್ಲಿ ಪ್ರವಾಸವೂ ಒಂದು. ಆದರೆ ಹೀಗೆ ಪ್ರವಾಸ ಹೊರಟಾಗಲೂ, ಆಧುನಿಕ ಜೀವನದ ವೇಗವನ್ನೇ ಪ್ರಯಾಣಕ್ಕೂ ಕೊಂಡೊಯ್ಯುವುದು ಸಾಮಾನ್ಯ. ಬೇಗ, ಬೇಗ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡುವ, ಗಡಿಬಿಡಿಯ ಪ್ರವಾಸಕ್ಕೆ ವಿರುದ್ಧವಾಗಿ, ಸಮಾಧಾನವಾಗಿ ಹೊಸದೊಂದು ‘ಟ್ರೆಂಡ್’ ಮುನ್ನೆಲೆಗೆ ಬಂದಿದೆ. ಅದುವೇ ’ಸ್ಲೋ ಟ್ರಾವೆಲ್’ (Slow Travel). ಪ್ರವಾಸವನ್ನು ನಿಧಾನಗತಿಯಲ್ಲಿ ಮತ್ತು ಹೆಚ್ಚು ಆಳವಾಗಿ ಅನುಭವಿಸುವ ವಿಧಾನ. ಇಲ್ಲಿ ಗಮ್ಯಸ್ಥಾನಕ್ಕಿಂತ ಪ್ರಯಾಣವೇ ಮುಖ್ಯ.

Slow travel

ಸ್ಲೋ ಟ್ರಾವೆಲ್ ಎಂದರೆ, ವೇಗವಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಸ್ಥಳಗಳನ್ನು ನೋಡಿ ಬರುವ ಆತುರದ ಪ್ರವಾಸವಲ್ಲ; ಬದಲಾಗಿ ಇದು ಒಂದು ಸ್ಥಳದಲ್ಲಿ ಹೆಚ್ಚು ಕಾಲ ಉಳಿದು, ಅಲ್ಲಿನ ಜನ, ಸಂಸ್ಕೃತಿ, ಸಂಗೀತ, ಸಂಪ್ರದಾಯ, ಆಹಾರ, ಭಾಷೆ, ಜೀವನಶೈಲಿ ಮತ್ತು ಪರಿಸರವನ್ನು ಆಳವಾಗಿ ಅರಿಯುವ ಅನುಭವ. ಪ್ರವಾಸವನ್ನು ’ಟಿಕ್ ಮಾರ್ಕ್’ ಕಾರ್ಯವೆಂದು ಪರಿಗಣಿಸದೆ, ಆತ್ಮಸಂತೋಷ ನೀಡುವ ಒಂದು ಅನುಭವವಾಗಿ ಸ್ವೀಕರಿಸುವುದು ಇದರ ಉದ್ದೇಶ. ಈ ಉದ್ದೇಶಪೂರ್ವಕ ನಿಧಾನವು ಒತ್ತಡವನ್ನು ಕಡಿಮೆ ಮಾಡಿ, ಆಳವಾದ ಚಿಂತನೆ ಹಾಗೂ ಸೃಜನಶೀಲತೆಗೆ ದಾರಿ ಮಾಡಿಕೊಡುತ್ತದೆ. ಆತುರದಲ್ಲಿ ಕಳೆದುಹೋಗುವ ಶಾಂತಿಯನ್ನು ಈ 'ಸ್ಲೋ' ಮನಸ್ಥಿತಿ ಮರಳಿ ತರುತ್ತದೆ.

ಹಾಗಾದರೆ ಸ್ಲೋ ಟ್ರಾವೆಲ್‌ನ ಪ್ರಮುಖ ಅಂಶಗಳೇನು?

ಸ್ಥಳೀಯ ಸಂಪರ್ಕ: ಪ್ರಸಿದ್ಧ ಪ್ರವಾಸಿ ತಾಣಗಳ (Tourist spot) ಜನಸಂದಣಿಯಿಂದ ದೂರ ಸರಿದು, ಆ ಊರಿನ ಅಪರೂಪದ ವಿಶೇಷತೆಗಳನ್ನು ಅನ್ವೇಷಿಸುವುದು. ಸ್ಥಳೀಯರ ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವುದು. ಅವರ ಭಾಷೆಯ ಸರಳ ಪದಗಳನ್ನು ಕಲಿಯುವುದು. ಸ್ಥಳೀಯರೊಂದಿಗೆ ಸಂವಾದ, ಮಕ್ಕಳೊಡನೆ ಆಟವಾಡುವುದು ಹಾಗೂ ಅವರ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಅಲ್ಲಿನ ಜೀವನಶೈಲಿಯನ್ನು ನೇರವಾಗಿ ಅನುಭವಿಸುವ ಮಾರ್ಗಗಳಾಗಿವೆ. ಸ್ಥಳೀಯ ಸಾರಿಗೆಯನ್ನು ಬಳಸುವುದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವುದು ಮತ್ತು ಸ್ಥಳೀಯರೊಂದಿಗೆ ಉಳಿದುಕೊಳ್ಳುವುದು, ಇವೆಲ್ಲವೂ ಆ ಸ್ಥಳದ ನಿಜವಾದ ನಾಡಿಯನ್ನು ಅರಿಯಲು ಸಹಾಯ ಮಾಡುತ್ತವೆ. ಸ್ಥಳೀಯರೊಂದಿಗೆ ಬೆರೆತಾಗ ಅವರು ಹೇಗೆ ಬದುಕುತ್ತಾರೆ ಎಂಬ ಅರಿವು ಹೊಸ ದೃಷ್ಟಿಕೋನವನ್ನೇ ನೀಡುತ್ತದೆ. ಇವು ಪುಸ್ತಕಗಳಲ್ಲಿ ಓದಲು ಸಿಗದ ಅನುಭವಗಳು.

Solo travel

ಮನಸ್ಸಿಗೆ ಶಾಂತಿ (Mindfulness): ಕಟ್ಟುನಿಟ್ಟಾದ ವೇಳಾಪಟ್ಟಿ ಅನುಸರಿಸಿ ಏಗುವ ಪಯಣಕ್ಕಿಂತ, ನಿಧಾನ ಪ್ರಯಾಣವು ಮನಸ್ಸಿಗೆ ನೆಮ್ಮದಿ ಮತ್ತು ಸುಂದರ ನೆನಪುಗಳನ್ನು ನೀಡುತ್ತದೆ. ಪ್ರತಿಯೊಂದು ಕ್ಷಣವನ್ನು ಆನಂದಿಸಲು, ಪ್ರಕೃತಿ ಹಾಗೂ ಸುತ್ತಲಿನ ಪರಿಸರದೊಂದಿಗೆ ಆಳವಾದ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತದೆ. ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸುವುದರಿಂದ ಮನಸ್ಸು ಪ್ರಫುಲ್ಲವಾಗಿ ಒತ್ತಡ ಕಡಿಮೆ ಆಗುತ್ತದೆ ಹಾಗೂ ಅತ್ಯಮೂಲ್ಯ ಸ್ಮರಣೆಗಳು ನಮ್ಮದಾಗುತ್ತವೆ. ಉದಾಹರಣೆಗೆ, ಪುರಾತನ ಶಿಲ್ಪಕಲೆಗಳನ್ನು ಆಳವಾಗಿ ತಿಳಿಯಲು ಕನಿಷ್ಠ 4–5 ದಿನಗಳು ಬೇಕು. ವೇಗವಾಗಿ ಸಾಗಿದರೆ, ಕೇವಲ ಚಿತ್ರಗಳು ಮಾತ್ರ ಉಳಿಯುತ್ತವೆ. ನೀವು 'ಟೂರಿಸ್ಟ್' ಆಗಬೇಡಿ, 'ಟ್ರಾವೆಲರ್' ಆಗಿ.

ಪರಿಸರ ಸ್ನೇಹಿ (Sustainable): ಸ್ಲೋ ಟ್ರಾವೆಲ್, ಸಾಮೂಹಿಕ ಪ್ರವಾಸೋದ್ಯಮದಿಂದ ಉಂಟಾಗುವ ಸಮಸ್ಯೆಗಳನ್ನು (ಅತಿಯಾದ ಪ್ರವಾಸಿ ದಟ್ಟಣೆ, ಪರಿಸರ ನಾಶ ಇತ್ಯಾದಿ) ಕಡಿಮೆ ಮಾಡುತ್ತದೆ. ಸಾಂಪ್ರದಾಯಿಕ ಸಾಮೂಹಿಕ ಪ್ರವಾಸೋದ್ಯಮಕ್ಕೆ (Mass Tourism) ಪರ್ಯಾಯವಾಗಿರುವ ಈ ವಿಧಾನದಲ್ಲಿ, ಸಾರ್ವಜನಿಕ ಸಾರಿಗೆ, ಸೈಕಲ್ ಅಥವಾ ಕಾಲ್ನಡಿಗೆಯಂಥ ನಿಧಾನವಾದ ಸಾರಿಗೆ ಬಳಕೆಯಾಗುತ್ತದೆ. ಒಂದೇ ಜಾಗದಲ್ಲಿ ಹೆಚ್ಚು ದಿನ ಇರುವುದರಿಂದ ಇಂಧನ ಬಳಕೆ ಕಡಿಮೆಯಾಗಿ, ಇಂಗಾಲದ ಡೈ ಆಕ್ಸೈಡ್‌ ಉತ್ಪತ್ತಿಯ ಪ್ರಮಾಣವೂ ಕಡಿಮೆಯಿರುತ್ತದೆ. ಪರಿಸರ ಮತ್ತು ಸ್ಥಳೀಯ ಸಮುದಾಯಕ್ಕೆ ಹಾನಿ ಮಾಡದೇ ಪ್ರಯಾಣಿಸುವ ಕಾರಣ, ಆ ಸ್ಥಳಗಳು ಭವಿಷ್ಯದ ಪ್ರವಾಸಿಗಳಿಗೂ ಸುಂದರವಾಗಿ ಉಳಿಯುತ್ತವೆ.

Local market

ಸ್ಥಳೀಯ ಅನುಭವ (Supporting Local): ಸ್ಲೋ ಟ್ರಾವೆಲರ್‌ಗಳು ಒಂದು ಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಸ್ಥಳೀಯ ಹೊಟೇಲ್/ಹೋಮ್‌ಸ್ಟೇಗಳಲ್ಲಿ ಉಳಿಯುತ್ತಾರೆ ಮತ್ತು ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುತ್ತಾರೆ. ಸ್ಥಳೀಯ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಕ್ಕಾಗಿ ಬಳಸುವುದರಿಂದ, ಸ್ಥಳೀಯ ವ್ಯಾಪಾರ ಮತ್ತು ಸೇವೆಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಾರೆ. ಇದು ಸ್ಥಳೀಯ ಆರ್ಥಿಕತೆಗೆ ಸ್ಥಿರ ಮತ್ತು ನೇರ ಲಾಭವನ್ನು ಒದಗಿಸುತ್ತದೆ.

ಅನುಭವಗಳೇ ಪ್ರವಾಸದ ಸಾರ (Quality over Quantity): ಎಷ್ಟು ಸ್ಥಳಗಳನ್ನು ನೋಡಿದ್ದೇವೆ ಎನ್ನುವುದಕ್ಕಿಂತ, ಆ ಸ್ಥಳದಲ್ಲಿ ಎಷ್ಟು ಉತ್ತಮವಾದ ಮತ್ತು ಅರ್ಥಪೂರ್ಣವಾದ ಅನುಭವಗಳನ್ನು ಪಡೆದೆವು ಎಂಬುದೇ ಮುಖ್ಯ. ಹೊಸ ಪರಿಸರ ಮತ್ತು ಹೊಸ ಜನರೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ದೃಷ್ಟಿಕೋನ ವಿಸ್ತಾರವಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಚಲನಕ್ಕೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಿ. ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ. ಲೆನ್ಸ್‌ಗಿಂತ ಕಣ್ಣುಗಳಿಂದ ನೋಡಿ. ಪ್ರತಿ ಕ್ಷಣವನ್ನು ಚಿತ್ರೀಕರಿಸುವ ಬದಲು, ಅದನ್ನು ಅನುಭವಿಸಿ.

ಸ್ಲೋ ಟ್ರಾವೆಲ್ ಎಂದರೆ, ಅಷ್ಟೂ ಸ್ಥಳಗಳನ್ನು ನೋಡಿದೆ ಎಂಬುದಕ್ಕಿಂತ ಅಲ್ಲಿ ನಾನು ಏನು ಕಲಿತೆ, ಏನು ಅನುಭವಿಸಿದೆ ಎಂಬುದು ಮುಖ್ಯವಾಗುವ ಪ್ರವಾಸ. ಮುಂದಿನ ಬಾರಿ ನೀವು ಪ್ರಯಾಣಕ್ಕೆ ಹೋಗುವಾಗ, ನಿಮ್ಮ ಬೆನ್ನುಹೊರೆಯನ್ನು ಇಳಿಸಿ, ಫೋನ್ ಕ್ಯಾಮೆರಾವನ್ನು ಕೆಲವು ಗಂಟೆಗಳಿಗೆ ಆಫ್ ಮಾಡಿ, ಆ ಸ್ಥಳದ ಧ್ವನಿ, ವಾಸನೆ ಮತ್ತು ರುಚಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಜಂಗಮವಾಣಿಯ ಬದಲು ಪ್ರಕೃತಿಯ ನಾದಗಳು, ಸಂವಾದಗಳು, ಮತ್ತು ಚಿಕ್ಕ, ಚಿಕ್ಕ ಅನುಭವಗಳ ಮೇಲೆ ಗಮನ ಹರಿಸಿ. ಯಾಕೆಂದರೆ, ಕೆಲವೊಮ್ಮೆ ನಿಧಾನವಾದ ಹೆಜ್ಜೆಗಳು ಜೀವಿತದ ಅತ್ಯಂತ ಸುಂದರ ನೆನಪುಗಳನ್ನು ನಿರ್ಮಿಸುತ್ತವೆ.