ಈ ಚಳಿ ತಾಳೆನು ಟ್ರಿಪ್ ಹೋಗದೆ ಇರೆನು!
ಇದು ವಿಂಟರ್ ಟೂರಿಸಂ ಸ್ಪೆಷಲ್. ವಿಂಟರ್ನಲ್ಲಿ ಟೂರ್ ಹೋಗುವುದು ಹೊಸ ಟ್ರೆಂಡ್. ಈ ಋತುವಿನಲ್ಲಿ ಬೈಕ್ ರೈಡ್ ಮತ್ತು ಕಾರ್ ರೈಡ್ ಹೋಗುವ ದೊಡ್ಡ ಗುಂಪೇ ಇದೆ. ಸೋಲೋ ಟ್ರಿಪ್ ಹೋಗುವ ಕ್ರೇಜ್ ಕೂಡ ಹಲವರಲ್ಲಿದೆ. ಕೇರಳ, ಗೋವಾ ಮತ್ತು ಇನ್ನಿತರ ರಾಜ್ಯಗಳಲ್ಲಿ ವಿಂಟರ್ ಟೂರಿಸಂ ದೊಡ್ಡಮಟ್ಟದಲ್ಲಿ ಬೆಳೆದಿದೆ. ವಿಂಟರ್ನಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಬಹುದಾದ ತಾಣಗಳು, ಪ್ರವಾಸಕ್ಕೆ ಹೊರಡುವ ಮುನ್ನ ಮಾಡಿಕೊಳ್ಳಬೇಕಾದ ತಯಾರಿಗಳು ಮತ್ತು ಒಬ್ಬ ಫೊಟೋಗ್ರಾಫರ್ನ ವಿಂಟರ್ ಅನುಭವವನ್ನು ಓದಿಕೊಳ್ಳಿ.
-ಹರೀಶ್ ಕೇರ
ಚುಮುಚುಮು ಚಳಿ. ಹೊದಿಕೆಯೊಳಗಿಂದ ಆಚೆ ಬರುವ ಮನಸ್ಸೇ ಇಲ್ಲ. ಎದ್ದು ಗಡಿಬಿಡಿ ಮಾಡಿಕೊಂಡು ಟಿಫಿನ್ ಕೂಡ ಮರೆತು ಹೊರಡಬೇಕಿಲ್ಲ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಒದ್ದಾಡಬೇಕಿಲ್ಲ. ಹಾಗೇ ಎದ್ದು ಹೊರಗೆ ಬಂದರೆ ಇನ್ನೂ ಎಲೆಗಳಿಂದ ಹನಿ ತೊಟ್ಟಿಕ್ಕಿಸುತ್ತ ನಿಂತ ಮರಗಳು ಕಾಣಿಸುತ್ತವೆ. ಮರಗಳ ಮರೆಯಿಂದ ಬೇಕೋ ಬೇಡವೋ ಎಂದು ಸೂರ್ಯ ಹಣಿಕಿ ಹಾಕುತ್ತಾನೆ. ನಸುಬಿಸಿಲು ಮೈ ಚುರುಕ್ಕೆನ್ನಿಸುವಾಗ ಹಬೆಯಾಡುವ ಕಾಫಿ ಬರುತ್ತದೆ. ಹಾಗೇ ಅದನ್ನು ಹೀರುತ್ತ ಕಣ್ಣೆದುರು ಹಬ್ಬಿದ ಕಾಫಿ ತೋಟದ ಹಸಿರು ಟೋಪಿಯನ್ನು ವೀಕ್ಷಿಸುತ್ತ ಇಡೀ ದಿನವನ್ನು ನಿಮ್ಮ ಫ್ಯಾಮಿಲಿ ಜೊತೆ ಕಳೆಯುವ ಕನಸು ನನಸಾಗಿಸಬೇಕಿದ್ದರೆ ಈ ಚಳಿಗಾಲ ಸೂಕ್ತ ಸಮಯ.
ʼಒಂದು ರಾಜ್ಯ, ಹಲವು ಜಗತ್ತುʼ ಎಂಬುದು ಕರ್ನಾಟಕ ಟೂರಿಸಂ ಘೋಷವಾಕ್ಯ. ಈ ಚಳಿಗಾಲದಲ್ಲಿ ನೀವು ಭೇಟಿ ನೀಡಬಹುದಾದ ಜಗತ್ತುಗಳು ಈ ರಾಜ್ಯದೊಳಗೇ ಹಲವಾರು ಇವೆ. ಅನುಮಾನವಿಲ್ಲ, ಒಂದೊಂದು ಊರೂ ಒಂದೊಂದು ವಿಶ್ವವೇ. ಅಲ್ಲಿನ ಅನುಭವ ವಿಶಿಷ್ಟವೇ. ಡಿಸೆಂಬರ್‌ನಿಂದ ಫೆಬ್ರವರಿ ಪ್ರವಾಸಕ್ಕೆ ಅತ್ಯಂತ ಸುಂದರ ಸಮಯ. ಮಂಜು ಹೊದ್ದ ಬೆಟ್ಟಗಳ ಜತೆಗೆ ತೆರೆಗಳು ಅಪ್ಪಳಿಸುವ ಕಡಲ ತೀರಗಳು ಸಹ ಆಪ್ಯಾಯಮಾನ ಅನುಭವ ಕೊಡುತ್ತವೆ.
ಕೊಡಗು
ಹಸಿರು ಕಾಫಿ ತೋಟಗಳು ಮೇಲೊಂದು ಮಂಜಿನ ಟೋಪಿ ಹೊದ್ದು ನಿಗೂಢವಾಗಿ ನಿಮ್ಮನ್ನು ಕರೆಯುತ್ತವೆ. ಹೋಂಸ್ಟೇಗಳು, ರೆಸಾರ್ಟ್‌ಗಳು ಹೊಸ ಸ್ವರೂಪದಲ್ಲಿ ಪ್ರವಾಸಿಗರಿಗೆ ಕಾದಿರುತ್ತವೆ. ಬಿಸಿ ಕಾಫಿ, ಮಾಂಸಾಹಾರಿಗಳಿಗೆ ಇಷ್ಟವಾಗಬಹುದಾದ ನಾನಾ ಕರಿಗಳು ಇಲ್ಲಿನ ವಿಶೇಷ. ತಡಿಯಂಡಮೋಳ್ ಬೆಟ್ಟ ಟ್ರೆಕ್‌ಗೆ ಕರೆಯುತ್ತದೆ.
ಚಿಕ್ಕಮಗಳೂರು
ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿಯ ಬೆಟ್ಟಗಳು ಮಂಜಿನ ಹೊದಿಕೆಯಲ್ಲಿ ಮಿಂದು, ಕಾಲಿಟ್ಟಲ್ಲಿ ಮಂಜಿನ ಮೇಲೆ ನಡೆದ ಫೀಲ್ ಕೊಡುತ್ತವೆ. ಕಳಸ, ಕುದುರೆಮುಖದಂಥ ಬೆಟ್ಟಗಳಿಗೆ ಟ್ರೆಕ್ ಹೋಗವುದು ಜೀವಮಾನದ ಸುಂದರ ಅನುಭವ. ಚಿಕ್ಕಮಗಳೂರಿನ ಫಿಲ್ಟರ್ ಕಾಫಿ ಸವಿಯಲು ಮರೆಯಬೇಡಿ.
ಆಗುಂಬೆ
ಅಣ್ಣಾವ್ರು ಹಾಡಿದಂತೆ, ಆಗುಂಬೆಯ ಪ್ರೇಮಸಂಜೆಯನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಇದು ಸೂರ್ಯಾಸ್ತಕ್ಕೆ ಪ್ರಸಿದ್ಧ. ಹಾಗೇ ಸುತ್ತಮುತ್ತಲಿನ ಕಾಡುಗಳಲ್ಲಿ ಓಡಾಡಲು ಸಾಧ್ಯವಾಗುವ ರೆಸಾರ್ಟ್ ಆರಿಸಿಕೊಳ್ಳಿ. ರಾತ್ರಿಗಳಲ್ಲಿ ಮಿಂಚುಹುಳಗಳ ಲೇಸರ್ ಶೋ ಮಿಸ್ ಮಾಡಿಕೊಳ್ಳಬೇಡಿ.

ಶಿವಮೊಗ್ಗ
ಜೋಗ ಜಲಪಾತ ಈಗ ಸರಳ ಸುಂದರಿಯಂತೆ ಬಳುಕುತ್ತಿರುತ್ತದೆ. ಮಂಜಿನ ಮೋಡಗಳು ಈಗ ತೆರವಾಗಿ ನೋಟ ಸಲೀಸು. ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ತಂಪಿನಲ್ಲಿ ಹೆಚ್ಚು ಸುಂದರ. ಬೆಳಗಿನ ಚಳಿಯಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಸಫಾರಿಗೆ ಸೂಕ್ತ. ಕೊಡಚಾದ್ರಿಗೆ ಒಂದು ಬಾರಿ ಹತ್ತಿ ಇಳಿಯುವುದು ಆನಂದದಾಯಕ ಶ್ರಮ.
ಸಕಲೇಶಪುರ
ಚಿಕ್ಕಮಗಳೂರಿನಂತೆಯೇ ಸಕಲೇಶಪುರದ ಕಾಫಿ ಎಸ್ಟೇಟ್‌ಗಳು ಮತ್ತು ಹೋಂ ಸ್ಟೇಗಳು ಅಫರ್ಡಬಲ್ ಬೆಲೆಯಲ್ಲಿ ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಮಧ್ಯಮ ವರ್ಗದ ಫ್ಯಾಮಿಲಿ ಸಲೀಸಾಗಿ ಎರಡು ದಿನ ಕಳೆಯಬಲ್ಲ ಹೋಂಸ್ಟೇಗಳು ಸಾಕಷ್ಟು ಇಲ್ಲಿ ಲಭ್ಯ. ದೇವರಮನೆಯಂಥ ತಾಣಗಳು ಈಗ ಇನ್ನಷ್ಟು ಕೂಲ್ ಕೂಲ್.

ಮೈಸೂರು
ದಸರಾಗೆ ಹೋಗಲು ಆಗದ ಬೇಸರವನ್ನು ಚಳಿಗಾಲದಲ್ಲಿ ತೀರಿಸಿಕೊಳ್ಳಬಹುದು. ಬೃಂದಾವನ ಗಾರ್ಡನ್ ಈ ತಂಪಾದ ಹವೆಯಲ್ಲಿ ಇನ್ನಷ್ಟು ಮಜಾ. ಅರಮನೆ, ಜೂ, ಚಾಮುಂಡಿ ಬೆಟ್ಟಗಳು ಬೇಸರ ನೀಗಲು ಪ್ರಶಸ್ತ ತಾಣಗಳು. ಎರಡು ದಿನಗಳ ಫ್ಯಾಮಿಲಿ ಔಟಿಂಗ್‌ಗೆ ಸೂಕ್ತ ತಾಣ.
ಹಂಪಿ
ಬಿರುಬಿಸಿಲಿನ ತಾಪ ಈಗ ಇಲ್ಲದಿರುವುದರಿಂದ ಇಲ್ಲಿನ ಸ್ಮಾರಕಗಳನ್ನು ನಿಧಾನವಾಗಿ ಸುತ್ತಾಡಲು ಸೂಕ್ತ ಸಮಯ. ಕಲ್ಲಿನ ಮಂಟಪಗಳು, ಬಂಡೆಗಲ್ಲುಗಳು, ಕೊಳಗಳು ನಿಮ್ಮ ಚಳಿಗಾಲಕ್ಕೆ ಇನ್ನಷ್ಟು ಸೌಂದರ್ಯ, ಸೊಗಸಾದ ಫೊಟೋಗ್ರಫಿಗೆ ಅವಕಾಶ ಕಲ್ಪಿಸುವ ಸ್ಥಳಗಳು.
ದಾಂಡೇಲಿ
ದಾಂಡೇಲಿ ಹಾಗೂ ಜೋಯಿಡಾದ ದಟ್ಟ ಅರಣ್ಯ ಪ್ರದೇಶ ಜನಜಂಗುಳಿಯಿಲ್ಲದ ಪ್ರಶಾಂತ ತಾಣ. ರೆಸಾರ್ಟ್‌ಗಳ ಜತೆಗೆ ಜಂಗಲ್ ಲಾಡ್ಜಸ್ ಕೂಡ ಇದೆ. ಸಾಹಸ ಕ್ರೀಡೆಗಳು, ಕಾಳಿ ನದಿ ರಾಫ್ಟಿಂಗ್ ಇಲ್ಲಿ ಜನಪ್ರಿಯ. ಅರಣ್ಯ ಸಫಾರಿಗೆ ಚಳಿಗಾಲ ಸೂಕ್ತ ಸಮಯ. ಅದೃಷ್ಟವಿದ್ದರೆ ಬಿಸಿಲಿಗೆ ಬಂದು ನಿಂತ ಕಪ್ಪು ಚಿರತೆಯನ್ನು ನೋಡಬಹುದು.
ಗೋಕರ್ಣ
ದಂಡೆಗೆ ಬಂದು ಬಡಿಯುವ ತೆರೆಗಳಲ್ಲಿ ಆಡುವುದು, ಕಡಲ ತೀರದ ತಂಪಾದ ಗಾಳಿ ಮತ್ತು ಶಾಂತ ವಾತಾವರಣ ಯಾರಿಗೆ ಇಷ್ಟವಿಲ್ಲ? ಮಕ್ಕಳನ್ನು ಕರೆದುಕೊಂಡು ಹೋದರಂತೂ ಒಂದು ದಿನವಿಡೀ ಸಮುದ್ರ ತೀರದಲ್ಲಿ ಆಟವಾಡುತ್ತಲೇ ಕಳೆಯಬಹುದು. ಗೋಕರ್ಣ ಆಧುನಿಕ ಹಾಗೂ ಪುರಾತನಗಳೆರಡೂ ಸೇರುವ ಜಾಗ.

ಕಬಿನಿ ಅರಣ್ಯ
ಆನೆ, ಹುಲಿ ಮೊದಲಾದ ವನ್ಯಜೀವಿಗಳನ್ನು ನೋಡಲು ಇದು ಗ್ಯಾರಂಟಿ ಪ್ರದೇಶ. ವನ್ಯಜೀವಿ ವೀಕ್ಷಣೆಗೆ ಇದು ಉತ್ತಮ ಕಾಲವೂ ಹೌದು. ಇಲ್ಲಿ ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್‌ನ ಕಾಟೇಜ್‌ಗಳು ನಿಮ್ಮ ಚಳಿಗಾಲದ ರಾತ್ರಿಗಳನ್ನು ಬಲು ರಮ್ಯವಾಗಿಸಬಲ್ಲವು.
ವಿಂಟರ್ ಪಯಣಕ್ಕೆ ಒಂದಿಷ್ಟ ಟಿಪ್ಸ್
ಬೆಳಗ್ಗೆ ಮತ್ತು ರಾತ್ರಿ ಚಳಿ ಇರುವುದರಿಂದ ಲಘು ಜಾಕೆಟ್ ತೆಗೆದುಕೊಂಡಿರಿ.ಬೆಟ್ಟ ಪ್ರದೇಶಗಳಲ್ಲಿ ಟ್ರೆಕ್ ಮಾಡುವಾಗ ಸುಲಭವಾಗಿ ನಡೆಯಬಹುದಾದ ಶೂ ಧರಿಸಿ.
ಚಳಿಗಾಲದಲ್ಲಿ ಹೆಚ್ಚಿನ ಜನ ಪ್ರವಾಸ ಹೋಗುವುದರಿಂದ ಕೆಲವು ತಾಣಗಳನ್ನು ಮುಂಗಡ ಬುಕ್ಕಿಂಗ್ ಮಾಡುವುದು ಉತ್ತಮ.
ಸ್ಥಳೀಯ ಆಹಾರವನ್ನು ಪ್ರಯತ್ನಿಸಿ. ಆದರೆ ಅಲ್ಲಿನ ಸ್ವಚ್ಛತೆಯನ್ನು ಗಮನಿಸಿ.
ಅರಣ್ಯ, ಬೀಚ್ ಮುಂತಾದ ನಿಸರ್ಗ ರಮ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು, ಎಸೆಯುವುದನ್ನು ತಪ್ಪಿಸಿ. ಸ್ಥಳೀಯರ ಸಂಸ್ಕೃತಿಗೆ ಗೌರವ ನೀಡಿ.
ಮೊಬೈಲ್‌ನಲ್ಲಿ ಫೊಟೋ, ವಿಡಿಯೋ ತೆಗೆದುಕೊಳ್ಳಿ. ಆದರೆ ರೀಲ್ಸ್ ಮಾಡುವುದಕ್ಕಾಗಿಯೇ ಪ್ರವಾಸಕ್ಕೆ ಬಂದವರಂತೆ ವರ್ತಿಸಬೇಡಿ.