- ಬಾಲಚಂದ್ರ ಹೆಗಡೆ


ಈ ಜಗತ್ತಿನಲ್ಲಿ ಹೇಳ ತೀರದಷ್ಟು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಕೆಲವನ್ನಾದರೂ ನೋಡಿ ಅನುಭವಿಸುವ, ಖುಷಿ ಪಡುವ ಅವಕಾಶ ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಲಭಿಸುತ್ತದೆ. ಅಂಥವರಲ್ಲಿ ನಾನೂ ಒಬ್ಬ.

ಬೆಂಕಿ ಜಲಪಾತ ಅಥವಾ ಕುದುರೆ ಬಾಲ ಹೆಸರಿನ ಜಲಪಾತ ಇರುವುದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಯೋಸೆಮೈಟ್ ರಾಷ್ಟ್ರೀಯ ಉದ್ಯಾನದಲ್ಲಿ. ಸ್ಯಾನ್ ಜೋಸ್‌ನಿಂದ ಸುಮಾರು 300ಕಿಮೀ ದೂರದಲ್ಲಿದೆ.

yosemite national park (1)

ಈ ಉದ್ಯಾನ ಪ್ರದೇಶ ಹಿಮಾಚ್ಛಾದಿತ ಪರ್ವತ ಶ್ರೇಣಿಗಳಿಂದ ಕೂಡಿದೆ. ಆದರೆ ಇಲ್ಲಿನ ಬೆಂಕಿಜಲಪಾತ ಮಾತ್ರ ಒಂದು ಅಪರೂಪದ ಹಾಗೂ ಜಗತ್ಪ್ರಸಿದ್ಧ ಜಲಪಾತ.

ಫೆಬ್ರವರಿ ಉತ್ತರಾರ್ಧ ಅವಧಿಯಲ್ಲಿ ಯೋಸೆಮೈಟ್ ರಾಷ್ಟ್ರೀಯ ಉದ್ಯಾನ ಅಪರೂಪದ ದೃಶ್ಯಗಳಿಗೆ ಕಾರಣವಾಗುತ್ತದೆ. ಆ ಸಮಯದಲ್ಲಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಸೇರುತ್ತಾರೆ. ಅಪರೂಪದ ನಿಸರ್ಗ ದೃಶ್ಯಕಾವ್ಯವನ್ನು ಕಣ್ತುಂಬಿಕೊಂಡು ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಂಕಿ ಜಲಪಾತ ವೀಕ್ಷಣೆ ಮಾಡಲು ಸ್ಥಳ ಕಾಯ್ದಿರಿಸಬೇಕು.

ನನ್ನ ಅಮೆರಿಕ ಪ್ರವಾಸದ ಸಮಯದಲ್ಲಿ ಸಂಜೆ 5 ಗಂಟೆಯ ಹೊತ್ತಿಗೆ ನನ್ನ ಮಗಳ ಕುಟುಂಬದೊಂದಿಗೆ ಯೋಸೆಮೈಟ್ ರಾಷ್ಟ್ರೀಯ ಉದ್ಯಾನದ ಹಾರ್ಸ್ ಟೇಲ್(ಕುದುರೆ ಬಾಲ) ಜಲಪಾತ ನೋಡಲು ಹೋದೆವು. ಅಲ್ಲಿ, ವೀಕ್ಷಣೆಗೆ ಅನುಕೂಲವಾಗುವ ಪ್ರಶಸ್ತ ಜಾಗದಲ್ಲಿ ನಿಂತು, ಹಾರ್ಸ್ ಟೇಲ್ ಮಾಂತ್ರಿಕ ಬೆಂಕಿಬೀಳುವ ಜಲಪಾತವಾಗಿ ಬದಲಾಗುವ ಸಮಯಕ್ಕೆ ಕಾಯುತ್ತಿದ್ದೆವು.

yosemite America

ಎಲ್ ಕ್ಯಾಪಿಟಾನ್ ಹೆಸರಿನ ಶಿಖರದಿಂದ ಸುಮಾರು 2032 ಅಡಿ ಆಳಕ್ಕೆ ಧುಮುಕುವ ಜಲಪಾತ ಇದಾಗಿದೆ, ಕುದುರೆ ಬಾಲದಂತೆ ಕಾಣುವ ಕಾರಣಕ್ಕೆ ಇದಕ್ಕೆ ಹಾರ್ಸ್ ಟೆಲ್ ಎಂಬ ಹೆಸರು ಬಂದಿದೆ. ಸೂರ್ಯ ಮುಳುಗುವ ಸಮಯದಲ್ಲಿ ಕಿರಣಗಳು ಹಾರ್ಸ್ ಟೇಲ್ ಜಲಪಾತದ ನೀರಿನ ಮೇಲೆ ಬಿದ್ದು ಪ್ರತಿಫಲನಗೊಂಡು ಕಿತ್ತಳೆ ಬಣ್ಣಕ್ಕೆ ತಿರುಗಿ, ನೋಡ ನೋಡುತ್ತಿದ್ದಂತೆ ಹಾರ್ಸ್ ಟೇಲ್ ಬೆಂಕಿಯಂತೆ ಕಾಣುತ್ತದೆ. ಕೇವಲ ಹತ್ತು ಹದಿನೈದು ನಿಮಿಷದ ಕೌತುಕದ ವಿದ್ಯಮಾನ ಇದು. ಪ್ರತಿಕೂಲ ಹವಾಮಾನವಿದ್ದರೆ ಇದನ್ನು ನೋಡಲು ಸಿಗುವುದು ಕಷ್ಟಸಾಧ್ಯ.

ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಾವು ಮಾತ್ರ ತುಂಬಾ ಅದೃಷ್ಟಶಾಲಿಗಳು, ನಾವು ಇಲ್ಲಿಗೆ ತೆರಳಿದ ಅರ್ಧ ಗಂಟೆಯಲ್ಲಿಯೇ ಈ ವಿಸ್ಮಯ ಸಂಭವಿಸಿತ್ತು.

ಅಲ್ಲಿ ಸೇರಿದ್ದ ಪ್ರವಾಸಿಗರೆಲ್ಲ ಒಬ್ಬರಿಗೊಬ್ಬರು ತಬ್ಬಿಕೊಂಡು, ಹಸ್ತಲಾಘವ ನೀಡುತ್ತ ಆ ಕ್ಷಣವನ್ನು ಸಂಭ್ರಮಿಸಿದರು. ನಾವು ಬೇರೆ ಬೇರೆ ಕೋನಗಳಲ್ಲಿ ನಿಂತು ಸಾಧ್ಯವಾದಷ್ಟು ಫೊಟೋ ಮತ್ತು ವಿಡಿಯೋ ತೆಗೆದುಕೊಂಡೆವು.

ಯೋಸೆಮೈಟ್ ರಾಷ್ಟ್ರೀಯ ಉದ್ಯಾನದ ಹಾರ್ಸ್ ಟೇಲ್ ಜಲಪಾತ ಬೆಂಕಿ ಜಲಪಾತವಾಗಿ ಬದಲಾಗುವದು ಒಂದು ಅದ್ಭುತ ನೈಸರ್ಗಿಕ ಚಮತ್ಕಾರ.