Wednesday, March 18, 2026
Wednesday, March 18, 2026

ಮೂರು ದೇಶ ಸುತ್ತಿ ನೂರು ಅನುಭವ ಪಡೆದ ತಾಯಿ-ಮಗ

ಪ್ರಯಾಣದ ಅನುಭವವೆಂದರೆ ಹಲವು ಪ್ರತ್ಯಕ್ಷ ಅನುಭವಗಳ ಮೂಟೆಯೇ ಆಗಿದೆ. ಮೊದಲನೆಯದಾಗಿ ಯಾತ್ರೆ ಹೊರಡುವುದರಿಂದ ಸ್ಟ್ರೆಸ್ ರಿಲೀಸ್ ಆಗುತ್ತದೆ. ಇದು ನಮ್ಮ ತಾಯಿಯವರ ಆತ್ಮ ಸಂತೋಷಕ್ಕಾಗಿ ಮಾಡಿದ ಯಾತ್ರೆ ಎನ್ನುತ್ತಾರೆ ಮೈಸೂರು ಮೂಲದ ಆಧುನಿಕ ಶ್ರವಣಕುಮಾರ ಖ್ಯಾತಿಯ ಡಿ. ಕೃಷ್ಣಕುಮಾರ್.

  • ಅನಿಲ್ ಹೆಚ್.ಟಿ.

ಮೂರೂವರೆ ವರ್ಷಗಳ ಕಾಲ ಭಾರತ ಮಾತ್ರವಲ್ಲದೇ ಬರ್ಮಾ, ನೇಪಾಳ, ಮಯನ್ಮಾರ್ ದೇಶಗಳನ್ನು ಅಮ್ಮನನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಸುತ್ತಿದ್ದ ಕೃಷ್ಣಕುಮಾರ್ ಈ ಮಾತೃಸಂಕಲ್ಪ ಯಾತ್ರೆಯಿಂದ ಗಳಿಸಿದ ಅನುಭವಗಳ ಬಗ್ಗೆ ಹೇಳುವುದು ಹೀಗೆ:

ಯಾತ್ರೆ ಮುಗಿದ ಬಳಿಕ ಮೊದಲಿಗಿಂತ ಹೆಚ್ಚು ಜವಾಬ್ದಾರಿ ಆಗಿರುವುದನ್ನು ಈ ಪರ್ಯಟನೆ ನನಗೆ ಕಲಿಸಿದೆ.

ಯಾತ್ರೆ ಸಂದರ್ಭ ಹೆಚ್ಚು ಚಟುವಟಿಕೆಗಳಿಂದ ಸಕ್ರಿಯವಾಗಿರಲೇಬೇಕಾದ ಹಿನ್ನೆಲೆಯಲ್ಲಿ ಜೀವನದಲ್ಲಿ ದೊಡ್ಡ ಪಾಠ ಎಂಬಂತೆ ತಾಳ್ಮೆ ಜಾಸ್ತಿಯಾಗಿದೆ. ಪ್ರವಾಸ ಕಾಲದಲ್ಲಿ ಬಹಳ ಮುಖ್ಯವಾದ ಸಮಯ ಪಾಲನೆಯ ಗುಣ ಸಿದ್ಧಿಸಿದೆ. ಯಾರನ್ನೂ ಕಾಯಿಸದೇ ಇರುವುದು. ಸಮಯ ಪಾಲನೆ ಮಾಡುವ ಮೂಲಕ ನಿಗದಿತ ಸಮಯಕ್ಕೆ ನಿಗದಿತ ಊರು ತಲುಪುವುದು ಸುಲಭ ಸಾಧ್ಯವಾಗುತ್ತದೆ ಎಂಬ ಪಾಠವನ್ನು ದೇಶ ಪರ್ಯಟನೆ ಕಲಿಸಿಕೊಟ್ಟಿದೆ..

ಇದನ್ನೂ ಓದಿ: ಭಾರತ ಸುತ್ತಿದ ಅಮ್ಮ ಮಗನಿಗೆ ಕಾರ್ ಉಡುಗೊರೆ ಕೊಟ್ಟ ಆನಂದ್ ಮಹೀಂದ್ರ!

ಪ್ರವಾಸ ಸಣ್ಣ ಹಾದಿಯದ್ದಾಗಿರಲಿ, ದೊಡ್ಡ ಅಂತರದ್ದೇ ಆಗಿರಲಿ. ಪ್ರವಾಸದ ಪ್ಲಾನಿಂಗ್ ಬಹಳ ಮುಖ್ಯ ಎಂಬುದನ್ನು ಚೆನ್ನಾಗಿಯೇ ತಿಳಿದುಕೊಂಡೆ. ಯಾಕೆಂದರೆ 1 ಲಕ್ಷ ಕಿಮೀ. ಅಮ್ಮನೊಂದಿಗೆ ಯಾತ್ರೆ ಮಾಡುವುದು ಅದೂ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವುದು ಸಣ್ಣ ಸಾಹಸವಾಗಿರಲಿಲ್ಲ. ಇದಕ್ಕೆ ಸಾಕಷ್ಟು ಪೂರ್ವತಯಾರಿ ಅಗತ್ಯವಾಗಿತ್ತು. ಇಂಥ ತಯಾರಿಯನ್ನು ಮೈಸೂರಿನಿಂದ ಹೊರಡುವ ಮುನ್ನ ದಿನಗಳಲ್ಲಿ ಸಾಕಷ್ಟು ಮಾಡಿದ್ದರೂ ಕೊನೆಯಹಂತದವರೆಗೆ ಮಾತ್ರವಲ್ಲ, ಪ್ರಯಾಣದ ಸಂದರ್ಭ ಅಲ್ಲಲ್ಲಿ ಇಂಥ ತಯಾರಿಯನ್ನು ಪರಿವರ್ತನೆ ಮಾಡಿ ಬೇರೆ ಹಾದಿ ಹಿಡಿಯುವುದು, ತಂಗುವ ಸ್ಥಳ ಬದಲಾವಣೆ, ವೀಕ್ಷಣೆಯ ಜಾಗ ಬದಲಾವಣೆ ಇಂಥವೆಲ್ಲಾ ಅನಿವಾರ್ಯವಾಗುತ್ತಿತ್ತು. ಆಗೆಲ್ಲಾ ಪೂರ್ವತಯಾರಿ ಎಂಬುದು ಸೂತ್ರ ಕಿತ್ತ ಪಟದಂತಾಗಿ ಆ ಸಂದರ್ಭದ ಬದಲಾವಣೆಯೇ ಮುಖ್ಯವಾಗುತ್ತಿತ್ತು.

ಜೀವ ಹಾಗೂ ಜೀವನ ದೊಡ್ಡದು. ಇದು ಮತ್ತೊಂದು ಅನುಭವ. ಅಮ್ಮನ ಇಚ್ಛೆ ಈಡೇರಿಸಲೆಂದು ಭಾರತ ಪರ್ಯಟನೆ ಕೈಗೊಂಡೆ. ಆದರೆ ಈ ಯಾತ್ರೆ ಸಂದರ್ಭ ನಮ್ಮಂಥ ಸಾಮಾನ್ಯರಿಗೆ ದೇಶದ ಉದ್ದಗಲಕ್ಕೂ ಅನೇಕ ಗಣ್ಯ ಮಾನ್ಯರು. ಸಾಧುಸಂತರು, ಧರ್ಮಗುರುಗಳು, ಗಣ್ಯರು ಭೇಟಿಯಾಗಿ ಯಾತ್ರೆ ಬಗ್ಗೆ ಕುತೂಹಲ ಮತ್ತು ಸಂತೋಷ ವ್ಯಕ್ತಪಡಿಸಿದ್ದು ವಿನೂತನ ಅನುಭವ. ಇಂಥ ಅನುಭವ ನಮ್ಮಿಬ್ಬರ ಪಾಲಿಗೆ ಅನಿರೀಕ್ಷಿತ. ತೆರಳುವ ದಾರಿಯಲ್ಲಿ ಯಾರನ್ನೆಲ್ದಾ ಭೇಟಿಯಾಗುತ್ತೀರಿ ಎಂಬುದೇ ಗೊತ್ತಾಗಿರುವುದಿಲ್ಲ. ಇದು ಪ್ರಯಾಣದ ಪಾಠ ಮಾತ್ರವಲ್ಲ. ಜೀವನ ಪಯಣಕ್ಕೂ ಒಂದು ಉತ್ತಮ ಪಾಠ.

Untitled design (74)

ಪರ್ಯಟನೆಯಿಂದಾಗಿ ಮನಸು ಪ್ರಫುಲ್ಲವಾಗಿದೆ. ಬುದ್ಧಿಚಿತ್ತರಲ್ಲಿರುವ ನಾನೇ ಎಲ್ಲವೂ ಎಂಬ ಅಹಂ ಕಡಿಮೆಯಾಗಿ ಜಗತ್ತು ದೊಡ್ಡದಿದೆ ಎಂಬ ಅರಿವಾಗಿದೆ. ನಾನೇ ಇಲ್ಲಿ ಮುಖ್ಯನಲ್ಲ. ನನ್ನಂತೆ ಅನೇಕರು ಇಲ್ಲಿದ್ದಾರೆ. ಅವರಂತೆ ನಾನೂ ಒಬ್ಬ ಎಂಬುದು ಯಾತ್ರೆಯಿಂದಾಗಿ ಮನದಟ್ಟಾಗಿದೆ. ಬೆಟ್ಟಕ್ಕಿಂತ ಬೆಟ್ಟ ದೊಡ್ಡದು ಎಂಬಂತೆ ನನಗಿಂತ, ನನ್ನ ಸಾಧನೆಗಿಂತ ಮತ್ತಷ್ಟು ಸಾಧಕರು ಎಲ್ಲೆಡೆ ಇದ್ದಾರೆ ಎಂಬುದು ತಿಳಿವಳಿಕೆಗೆ ಬಂದಿದೆ. ಯಾತ್ರೆ ಸಂದರ್ಭ ಬಹುತೇಕ ದೇವಾಲಯಗಳು, ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದ ಹಿನ್ನೆಲೆಯಲ್ಲಿ, ಸಂಸ್ಕಾರಯುತ ಜೀವನದ ಬಗ್ಗೆ ಹೊಸ ಆಸಕ್ತಿ ಮೂಡಿದೆ. ಹಿರಿಯವಳಾಗಿರುವ ಅಮ್ಮನಿಗೂ ಇಂಥ ಪುಣ್ಯ ಕ್ಷೇತ್ರ ದರ್ಶನದ ಅನುಭೂತಿ ದೊರಕಿದರೆ, ಅಮ್ಮನ ಮಗನಾದ ನನಗೂ ಸಾಕಷ್ಟು ಸಿದ್ಧಿಯನ್ನು ಈ ಧರ್ಮಕ್ಷೇತ್ರಗಳು ತಂದಿವೆ.

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ನುಡಿ ಕೇಳದವರಿಲ್ಲ. ಆದರೆ ಇದರ ಅನುಭವ ಕಂಡುಕೊಂಡವರು ಅತಿ ವಿರಳ. ಸಾಮಾನ್ಯ ಆಡುಭಾಷೆಯಲ್ಲಿ ಸಾಕಷ್ಟು ಬಾರಿ ಈ ಪದವನ್ನು ಕೇಳಿರುತ್ತೇವೆ, ಓದಿರುತ್ತೇವೆ ಅಷ್ಟೆ. ಕೋಶಗಳನ್ನು ಓದುವವರಿಗೆ ಜೀವನದ ಅನುಭವ ಕಡಿಮೆ. ದೇಶ ಪರ್ಯಟನೆ ಮಾಡುವವರಿಗೆ ಜನಜೀವನದ ಒಡನಾಟ ದೊರಕಿರುತ್ತದೆ.

ಪ್ರತಿ ಸ್ಥಳದಲ್ಲೂ ಅವರಿಗೆ ಬಗೆಬಗೆಯ ಅನುಭವ ಆಗುತ್ತದೆ. ಭಾರತದಾದ್ಯಂತ ಪ್ರತಿಯೊಂದು ಪ್ರದೇಶದಲ್ಲೂ ಜನರ ಜೀವನ ಶೈಲಿ, ಕಲೆ, ಶಿಲ್ಪ, ಭಾಷೆ, ಸಾಹಿತ್ಯ, ಸಂಸ್ಕೃತಿ, ಹಬ್ಬ ಹರಿದಿನಗಳ ವೈವಿಧ್ಯ ಇದೆ. ಹೀಗಾಗಿ, ಪ್ರತಿಯೊಂದು ಕ್ಷೇತ್ರದಲ್ಲೂ ಬಗೆಬಗೆಯ ಅನುಭವ ಮತ್ತು ಜ್ಞಾನ ಸಿಗುತ್ತದೆ.

ಒಟ್ಟಿನಲ್ಲಿ ದೇಶಪರ್ಯಟನೆ ಮಾಡುವ ಬುದ್ಧಿವಂತನಿಗೆ ಜನಜೀವನದ ಕುಂದುಕೊರತೆ, ಅವರ ಬುದ್ಧಿಮತ್ತೆ,ಅವರ ಜೀವನದ ಸಫಲತೆ ಎಲ್ಲವೂ ಅವನ ಸೂಕ್ಷದೃಷ್ಟಿಗೆ ಗೋಚರವಾಗುತ್ತದೆ

ಜನಮನದ ಮಿಡಿತ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದು ಸೂಕ್ಷ್ಮಗ್ರಾಹಿಯಾದ ಪ್ರವಾಸಿಗ ಊಹಿಸಲು ಪ್ರವಾಸ ಸಾಧ್ಯ ಮಾಡಿಕೊಡುತ್ತದೆ. ಅಂಥ ಒಂದು ಅದ್ಭುತ ಪ್ರವಾಸ ಮಾಡಲು ನಮ್ಮ ಮಾತೃಶ್ರೀಯವರಾದ ಚೂಡರತ್ನಮ್ಮ ಅವರ ದೇಶಪರ್ಯಟನೆಯ ಆಸೆಯ ಮುಖೇನ ಪ್ರೇರಣೆ ದೊರೆತಿದ್ದು ನನ್ನ ಪೂರ್ವ ಜನ್ಮದ ಸೌಭಾಗ್ಯ ಎಂದೇ ಭಾವಿಸಿದ್ದೇನೆ.

ಇದೆಲ್ಲವನ್ನು ಮೀರಿ ಪ್ರತಿ ಕ್ಷಣವೂ ರಸ್ತೆಯಲ್ಲಿ ನೂರಾರು ವಾಹನಗಳ ಸಂಚಾರ ನಡುವೆ ಅಮ್ಮನನ್ನು ಕೂರಿಸಿಕೊಂಡು ಸುರಕ್ಷಿತವಾಗಿ ಸ್ಕೂಟರ್ ಓಡಿಸಬೇಕಾದ ಅನಿವಾರ್ಯತೆ, ರಸ್ತೆಯ ಹಳ್ಳ ಗುಂಡಿ ಏರು ದಿಣ್ಣೆಗಳ ನಡುವೆ ಎಲ್ಲೂ ಬೀಳದೇ ಜಾಗರೂಕತೆಯಿಂದ ತಾಯಿಯನ್ನು ಗಮನಿಸಿಕೊಂಡು ತೆರಳಬೇಕಾದ ಸಂದರ್ಭ ಬೇರೆ ಬೇರೆ ಕಡೆ ವಿವಿಧ ರೀತಿಯ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳದೇ ಪ್ರಯಾಣ ಮುಂದುವರಿಸಬೇಕಾಗಿದ್ದ ಸ್ಥಿತಿ, ಸ್ಕೂಟರ್ ಕೆಟ್ಟು ಹೋಗದೆ, ಸುರಕ್ಷಿತವಾಗಿ ಯಾತ್ರೆಯನ್ನು ಸಂಪೂರ್ಣಗೊಳಿಸಿದ ತೃಪ್ತಿ ಇದೆ. ದೇವರ ಅನುಗ್ರಹವೂ ಪ್ರಯಾಣ ಕಾಲದಲ್ಲಿ ಇರಬೇಕು ಎಂಬುದು ನಾನು ಕಂಡುಕೊಂಡ ಸತ್ಯ.

ಇದನ್ನೂ ಓದಿ: ಭವ್ಯ ಅರಮನೆಯೊಳ್ ಮಹಾರಾಜರೊಂದಿಗೆ ಭೋಜನ!

ನೀವಿರುವ ಊರಿಗೆ ಅಥವಾ ನಿಮಗೆ ತಿಳಿದಿರುವ ಊರಿನ ವ್ಯಾಪ್ತಿಗೇ ಸೀಮಿತರಾಗದೇ ಹೊರಊರುಗಳನ್ನು ದರ್ಶನ ಮಾಡಿ, ಲೋಕದ ಸುದ್ದಿಯ ಜತೆಗೇ ಆ ಹೊರಜಗತ್ತಿನ ಸೌಂದರ್ಯವೂ ನಿಮ್ಮ ಮನಸಿನಲ್ಲಿ ಚಿತ್ರಪಟದಂತೆ ಶಾಶ್ವತವಾಗಿ ಮೂಡಲು ನೆರವಾಗುತ್ತದೆ. ಜೀವನದ ಉದ್ದೇಶ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ತಾವಿರುವ ಸ್ಥಳದಿಂದ ಹೊರ ಊರುಗಳಿಗೆ ಆಗಿಂದಾಗ್ಗೆ ಪ್ರವಾಸ, ಪ್ರಯಾಣ ಮಾಡುತ್ತಿರಬೇಕು. ಹೊಸ ಜ್ಞಾನ. ಹೊಸ ಅನುಭವ, ಹೊಸ ಜನ, ಹೊಸ ಸಂಭ್ರಮ ಖಂಡಿತವಾಗಿಯೂ ಇಂಥ ಪಯಣಿಗರಿಗೆ ದೊರಕುತ್ತದೆ.

ಈ ಯಾತ್ರೆ ನಮ್ಮ ಬದುಕಿನ ಹೆಮ್ಮೆಯ ಸಾರ್ಥಕ ಕ್ಷಣಗಳು. ಕೋಶ ಓದಿಕೊಂಡು ಕೇವಲ ಮನೆಯಲ್ಲೇ ಬದುಕಿನ ಅಸ್ತಿತ್ವ ವಿಟ್ಟುಕೊಂಡಿದ್ದರೆ ನಿರರ್ಥಕ ಎನಿಸುತ್ತಿತ್ತು.

ದೇಶಪರ್ಯಟನೆ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ದೇಶಪರ್ಯಟನೆ ಮಾಡುವ ಆಸಕ್ತಿಯಿದ್ದವರು ಸಂಪರ್ಕಿಸಬಹುದಾದ ನನ್ನ ಸಂಖ್ಯೆ -9110482292

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..