Tuesday, March 3, 2026
Tuesday, March 3, 2026

ಭವ್ಯ ಅರಮನೆಯೊಳ್ ಮಹಾರಾಜರೊಂದಿಗೆ ಭೋಜನ!

ಪಾಟಲಿಪುತ್ರದ ಮಹಾರಾಜರಾದ ಪ್ರತಾಪ ಮೃಗೇಂದ್ರ ಬಹದ್ದೂರ್ ಸಾಹಿ ಮಹಾರಾಜ್ ಅವರ ಭವ್ಯವಾದ ಅರಮನೆಗೆ ತೆರಳಿದೆವು. ಬಾಗಿಲಲ್ಲಿಯೇ ಮಹಾರಾಜರು ನಮ್ಮನ್ನು ಸ್ವಾಗತಿಸಿದರು. ಅರಮನೆಯ ವಿಶಾಲವಾದ ಹಾ ಲ್‌ಗೆ ಕರೆದೊಯ್ದು ಅಮ್ಮ ಮತ್ತು ನನ್ನನ್ನು ತಮ್ಮ ಎದುರುಗಡೆಯೇ ಇದ್ದ ಆಸನದಲ್ಲಿ ಕೂರಿಸಿಕೊಂಡರು.

  • ಅನಿಲ್ ಹೆಚ್.ಟಿ.

ಆಧುನಿಕ ಶ್ರವಣಕುಮಾರ -05

ಅಮ್ಮನ ಇಚ್ಛೆ ಪೂರೈಸಲು ಭಾರತ ಪರ್ಯಟನೆ ಕೈಗೊಂಡ ದಿನಗಳಲ್ಲಿ ಮೈಸೂರಿನ ಡಿ. ಕೃಷ್ಣಕುಮಾರ್ ಅವರಿಗೆ ಪ್ರತಿನಿತ್ಯವೂ ಒಂದಿಲ್ಲೊಂದು ಅಪೂರ್ವ ಅನುಭವಗಳಾಗುತ್ತಲೇ ಇತ್ತು. ಆಧುನಿಕ ಶ್ರವಣಕುಮಾರ ಖ್ಯಾತಿಯ ಕೃಷ್ಣಕುಮಾರ್ ಅಮ್ಮನೊಂದಿಗೆ ಚೇತಕ್ ಸ್ಕೂಟರ್‌ನಲ್ಲಿ 1 ಲಕ್ಷ ಕಿಮೀ. ದೇಶ ಪರ್ಯಟನೆ ಮಾಡುತ್ತಿರುವ ವಿಚಾರವೇ ಹಲವರ ಅಚ್ಚರಿ, ಕುತೂಹಲಕ್ಕೆ ಕಾರಣವಾಗಿತ್ತು. ವಿಷಯ ಗೊತ್ತಾಗಿ ಅನೇಕರು ಅಮ್ಮ ಮಗನನ್ನು ಮನೆಗೆ ಆಹ್ವಾನಿಸಿ ಸತ್ಕಾರ ಮಾಡುತ್ತಿದ್ದರಂತೆ. ಇಂಥ ಅನೇಕ ಸತ್ಕಾರಗಳ ನಡುವೇ ಜೀವನ ಪರ್ಯಂತ ಸ್ಮರಣೀಯವಾಗಿ ಉಳಿಯುವಂಥ ಆತಿಥ್ಯ ದೊರಕಿದ್ದು ನಮ್ಮ ಪುಣ್ಯವೇ ಸರಿ ಎಂಬುದು ಕೃಷ್ಣಕುಮಾರ್ ಅಭಿಪ್ರಾಯ.

ಇದನ್ನೂ ಓದಿ: ಆಧುನಿಕ ಶ್ರವಣಕುಮಾರನ ಸಾಹಸಗಾಥೆ!
ಈ ಅಚ್ಚರಿಯ ಘಟನೆಯನ್ನು ಅವರ ಮಾತಿನಲ್ಲಿಯೇ ಕೇಳಿದರೆ ಸ್ವಾರಸ್ಯಕರ. ಓವರ್‌ ಟು ಕೃಷ್ಣಕುಮಾರ್‌..

ಬಿಹಾರದ ಪಾಟ್ನಾ ನಗರವನ್ನು ನಾವು ತಲುಪಿದ್ದೆವು. ಆಗ ಓರ್ವ ಆಗಂತುಕ ನಮ್ಮನ್ನು ಭೇಟಿಯಾಗಿ ನೀವು ಅಮ್ಮನೊಂದಿಗೆ ಅರಮನೆಗೆ ಬರಬೇಕಂತೆ. ಮಹಾರಾಜರು ಆಹ್ವಾನಿಸಿದ್ದಾರೆ ಎಂದು ಹೇಳಿದರು. ನಮಗೋ ಬಹಳ ಆಶ್ಚರ್ಯವಾಯಿತು.

ಮಹಾರಾಜರಿಗೆ ನಮ್ಮ ವಿಚಾರ ತಿಳಿಯಿತೇ? ನಮ್ಮನ್ನು ಆಹ್ವಾನಿಸಿದ್ದಾರೆಯೇ ಎಂದು ಎರಡೆರಡು ಬಾರಿ ವಿಚಾರ ಖಚಿತಪಡಿಸಿಕೊಂಡೆವು. ಮಹಾರಾಜರ ಮಗನ ಸ್ನೇಹಿತನ ಮೂಲಕ ಪಾಟ್ನಾದ ಮಹಾರಾಜರಿಗೆ ನಾವು ಅವರ ನಗರಕ್ಕೆ ಬಂದ ಸುದ್ದಿ ತಲುಪಿತ್ತಂತೆ.

ಪಾಟಲಿಪುತ್ರದ ಮಹಾರಾಜರಾದ ಪ್ರತಾಪ ಮೃಗೇಂದ್ರ ಬಹದ್ದೂರ್ ಸಾಹಿ ಮಹಾರಾಜ್ ಅವರ ಭವ್ಯವಾದ ಅರಮನೆಗೆ ತೆರಳಿದೆವು. ಬಾಗಿಲಲ್ಲಿಯೇ ಮಹಾರಾಜರು ನಮ್ಮನ್ನು ಸ್ವಾಗತಿಸಿದರು. ಅರಮನೆಯ ವಿಶಾಲವಾದ ಹಾ ಲ್‌ಗೆ ಕರೆದೊಯ್ದು ಅಮ್ಮ ಮತ್ತು ನನ್ನನ್ನು ತಮ್ಮ ಎದುರುಗಡೆಯೇ ಇದ್ದ ಆಸನದಲ್ಲಿ ಕೂರಿಸಿಕೊಂಡರು.

Untitled design (99)

ಬಹದ್ದೂರ್ ಸಾಹಿ ಮಹಾರಾಜ್ ಅವರ ಸೊಸೆ ವಿಧಿಶಾ ಸಾಹಿ ಯುವರಾಣಿಯವರು ನಮ್ಮ ಪಕ್ಕದ ಆಸನದಲ್ಲಿ ಕುಳಿತರು. ಮಾತೃ ಸಂಕಲ್ಪ ಯಾತ್ರೆಯ ಬಗ್ಗೆ ವಿವರವಾಗಿ ಹೇಳುತ್ತಾ ಹೋದೆ. ಬಹಳ ಆಸಕ್ತಿಯಿಂದ ಮಹಾರಾಜರು ಮತ್ತು ಸೊಸೆ ಕೇಳುತ್ತಾ ಕುಳಿತರು. ಆಗಾಗ್ಗೆ ವಾಹ್.. ವಾಹ್ ಎಂಬ ಹರ್ಷೋದ್ಗಾರ ಅವರಿಂದ ಕೇಳಿಬರುತ್ತಿತ್ತು. ವಿಧಿಶಾ ಸಾಹಿಯವರು ಕೆಲ ಹೊತ್ತಿನಲ್ಲಿಯೇ ತನ್ನ ಮಕ್ಕಳನ್ನೂ ಬರಲು ಹೇಳಿ ನಮ್ಮ ಪರ್ಯಟನೆಯ ಕಥೆ ಕೇಳುವಂತೆ ಸೂಚಿಸಿದರು.

ನಮ್ಮಮ್ಮ ಸ್ಕೂಟರ್‌ನಲ್ಲಿ ಕುಳಿತು ಈ ರೀತಿ ಸಾವಿರಾರು ಕಿಮೀ. ಸಂಚರಿಸಿದ್ದನ್ನು ಕೇಳಿ ಆಶ್ಚರ್ಯಗೊಂಡ ಯುವರಾಣಿಯವರು, ಅಮ್ಮನಿಗೆ ಶಿರಬಾಗಿ ನಮಿಸಿ ಆಶೀರ್ವಾದ ಪಡೆದುಕೊಂಡರು. ಅಮ್ಮನನ್ನು ಐರನ್ ಲೇಡಿ ಆಫ್ ಇಂಡಿಯಾ ಎಂದು ಸಂತೋಷದಿಂದ ವರ್ಣಿಸಿದರು. ನೀವು ಆಶ್ಚರ್ಯಕರ ವ್ಯಕ್ತಿ.. ನಿಮ್ಮಂಥ ಮಗ ಬಹಳ ಅಪರೂಪ ಎಂದೂ ಮಹಾರಾಜರು ಬಣ್ಣಿಸಿದರು. ಪ್ರತಿ ಅಮ್ಮನಿಗೂ ಒಂದಲ್ಲ ಒಂದು ಆಸೆ ಇರುತ್ತದೆ. ಆದರೆ ಅದನ್ನು ಪೂರೈಸಲು ನಿಮ್ಮಂತೆ ದೇಶಪರ್ಯಟನೆಗೆ ಹೊರಡುವ ಮಗನನ್ನು ನಾನಂತೂ ಕಂಡಿಲ್ಲ ಎಂದು ಮಹಾರಾಜರು ಹೇಳಿದಾಗ ನಮಗೂ ಸಂತೋಷವಾಗಿತ್ತು.

ಸುಮಾರು ಒಂದೂವರೆ ಗಂಟೆ ಕಾಲ ಅರಮನೆಯಲ್ಲಿ ಕಳೆದೆವು. ಇದೇ ವೇಳೆ ಪಾಟ್ನಾದ ಮಾಧ್ಯಮದವರು ಅಲ್ಲಿಗೆ ಬಂದರು. ಅವರೊಂದಿಗೆ ಪ್ರತಿಕ್ರಿಯಿಸಿದ ಮಹಾರಾಜರು, ಕಲಿಯುಗದ ಶ್ರವಣಕುಮಾರ ಹಾಗೂ ಅವರ ತಾಯಿ ನಮ್ಮ ಮನೆಗೆ ಬಂದಿರುವುದು ನಮಗೆ ಅತ್ಯಂತ ಸಂತಸವಾಗಿದೆ, ಮೈಸೂರಿನ ಇವರಿಬ್ಬರಿಗೆ ನಾನು ಇಲ್ಲಿರುವಷ್ಟು ದಿನ ಸಹಾಯ ಮಾಡುವೆ ಎಂದು ಘೋಷಿಸಿದರು.

ಮಾತುಕತೆ ನಂತರ ಭರ್ಜರಿ ಸಸ್ಯಾಹಾರಿ ಭೋಜನವನ್ನು ನಮಗೆ ನೀಡಿದರು. ಅಮ್ಮನಿಗೆ ಸಮಸ್ಯೆಯಾಗಬಾದೆಂದು ಅರಮನೆಯ ಬಾಣಸಿಗನನ್ನು ಕರೆದು ಕಡಿಮೆ ಮಸಾಲೆ ಹಾಕಿ ಅಡುಗೆ ಸಿದ್ಧಪಡಿಸುವಂತೆಯೂ ಸೂಚಿಸಿದ್ದುಅವರ ಕಾಳಜಿಗೆ ನಿದರ್ಶನವಾಗಿತ್ತು.

ಅದೇ ದಿನ, ’ಥಾವೇ’ ನಗರದಲ್ಲಿರುವ ತಮ್ಮ ಮತ್ತೊಂದು ಅರಮನೆಗೆ ಭೇಟಿ ನೀಡಿ ಮನೆತನದ ಕುಲದೇವಿ ಮಾ ಚಾಮುಂಡಾ ದೇವಿಯ ದರ್ಶನಕ್ಕೂ ವ್ಯವಸ್ಥೆ ಮಾಡಿದರು. ಅರಮನೆಯಲ್ಲಿದ್ದ ಮಹಾರಾಣಿ ಪೂನಂ ಸಾಹಿಯವರ ಜತೆಗೂ ಮಾತುಕತೆಗೆ ಅವಕಾಶ ದೊರಕಿತ್ತು. ಮಹಾರಾಣಿಯವರು ಖುದ್ದಾಗಿ ಅಮ್ಮ ಮತ್ತು ನನಗೆ ತಮ್ಮ ಅರಮನೆಯ ಇತಿಹಾಸ ಮತ್ತು ಅರಮನೆಯೊಳಗಿನ ವಿಶೇಷತೆಗಳನ್ನು ಪರಿಚಯಿಸಿದರು.

ಮಾತ್ರವಲ್ಲ, ತಮ್ಮ ಪಲ್ಲವಿ ಇಂಟರ್ ನ್ಯಾಷನಲ್ ಹೆಸರಿನ ಪಂಚತಾರಾ ಹೊಟೇಲ್‌ನಲ್ಲಿ ಮೂರು ದಿನ ನಮ್ಮ ವಾಸ್ತವ್ಯಕ್ಕೆ ಪ್ರತಾಪ ಮೃಗೇಂದ್ರ ಬಹದ್ದೂರ್ ಸಾಹಿ ಮಹಾರಾಜ್ ಅವಕಾಶ ಕಲ್ಪಿಸಿದರು. ಸ್ಥಳೀಯ ಸಾಂಪ್ರದಾಯಿಕ ತಿನಿಸುಗಳನ್ನೇ ನೀಡುವಂತೆ ಸಿಬ್ಬಂದಿಗೆ ನೀಡಿದ್ದ ಸೂಚನೆ ಗಮನ ಸೆಳೆಯಿತು.

ಮಹಾರಾಜರು ನಮಗೆ ನೀಡಿದ ಗೌರವ ನಮ್ಮ ನೆನಪಿನಂಗಳದಲ್ಲಿ ಬಹುಕಾಲ ಇರುವಂಥದ್ದು. ಕೆಲವರನ್ನು ಸಾಮಾನ್ಯರಿಗೆ ಭೇಟಿಯಾಗಲು ಸಾಧ್ಯವೇ ಇಲ್ಲ. ವಿಶೇಷವಾಗಿ ಅರಮನೆಯಲ್ಲಿರುವ ರಾಜವಂಶಸ್ಥರ ಭೇಟಿ ಸಾಮಾನ್ಯರಿಗೆ ದೊರಕುವುದು ಕಷ್ಟ. ಆದರೆ ನಮ್ಮ ಭಾರತ ಪರ್ಯಟನೆಯಿಂದಾಗಿ ಅರಮನೆಯಲ್ಲಿನ ಮಹಾರಾಜ- ಮಹಾರಾಣಿಯವರನ್ನು ಭೇಟಿಯಾಗಿ ಅವರೆದುರು ಕುಳಿತು ಮಾತನಾಡುವ ಅವಕಾಶವಾಯ್ತು.
ಮೈಸೂರಿನ ಪುಟ್ಟ ಮನೆಯ ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಹೀಗೆ ಅರಮನೆಗೆ ಕರೆತಂದು ರಾಜ-ರಾಣಿಯರ ಜತೆ ಊಟ ಮಾಡುವಂತೆ ಮಾಡಿದ ಪರ್ಯಟನೆ, ಪೂರ್ವಜನ್ಮದ ಪುಣ್ಯವಲ್ಲವೇನೋ ಎಂದು ಅಮ್ಮ ಆಗಾಗ್ಗೆ ಹೇಳುತ್ತಿರುತ್ತಾಳೆ.
ಮನೆಯಿಂದ ಹೊರಬಂದು ಕೈಗೊಳ್ಳುವ ಇಂಥ ಪರ್ಯಟನೆ ಕೆಲವೊಮ್ಮೆ ಗಣ್ಯಾತಿಗಣ್ಯರ ಭೇಟಿಯೊಂದಿಗೆ ಅನೇಕ ಅಚ್ಚರಿಗಳಿಗೂ ಕಾರಣವಾಗುತ್ತದೆ.
(ಪಯಣ ಮುಂದುವರಿಯುವುದು...)

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!