Friday, July 31, 2026
Friday, July 31, 2026

ಕ್ರೂಗರ್ ಶಲಾಟಿ- ದ ಟ್ರೈನ್ ಆನ್ ದಿ ಬ್ರಿಡ್ಜ್

ಮಹಾರಾಜ ಎಕ್ಸ್‌ಪ್ರೆಸ್, ಪ್ಯಾಲೇಸ್ ಆನ್ ವೀಲ್ಸ್, ಡೆಕ್ಕನ್ ಒಡಿಸ್ಸಿ, ಗೋಲ್ಡನ್‌ ಚಾರಿಯೆಟ್‌ ಹೀಗೆ ಅದೆಷ್ಟೋ ಬಗೆಯ ಐಷಾರಾಮಿ ರೈಲುಗಳನ್ನು ನೋಡಿದ್ದೇವೆ. ಆದರೆ ಐಷಾರಾಮಿ ಸ್ಟೇ ಆಗಿ ರೂಪಾಂತರಗೊಂಡಿರುವ ಹೊಟೇಲ್‌ ಬಗೆಗೆ ನಿಮಗೆ ಗೊತ್ತಾ? ದುಬಾರಿಯಾದರೂ ಪರ್ವಾಗಿಲ್ಲ, ಜೀವನದಲ್ಲಿ ಒಮ್ಮೆಯಾದರೂ ವಿಭಿನ್ನ ಹೊಟೇಲ್‌, ರೆಸಾರ್ಟ್‌ಗಳ ಅನುಭವ ಪಡೆಯಬೇಕು ಎಂದುಕೊಳ್ಳುವ ಮಂದಿ ಅದ್ಭುತ ಹಾಗೂ ರೋಮಾಂಚನ ಅನುಭವ ನೀಡುವ ʻಕ್ರೂಗರ್ ಶಲಾಟಿ – ದ ಟ್ರೈನ್ ಆನ್ ದಿ ಬ್ರಿಡ್ಜ್ ʼಗೆ ಭೇಟಿ ನೀಡಲೇಬೇಕು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶೇಷ ಅನುಭವಗಳನ್ನು ನೀಡುವ ಅದೆಷ್ಟೋ ಸ್ಥಳಗಳಿದ್ದರೂ, ದಕ್ಷಿಣ ಆಫ್ರಿಕಾದಲ್ಲಿರುವ ಕ್ರೂಗರ್ ಶಲಾಟಿ – ದ ಟ್ರೈನ್ ಆನ್ ದಿ ಬ್ರಿಡ್ಜ್ ವಿಶ್ವದ ಗಮನ ಸೆಳೆದಿರುವ ಅಪರೂಪದ ತಾಣವಾಗಿದೆ. ಕ್ರೂಗರ್ ಶಲಾಟಿ ಹೊಟೇಲ್ ಪ್ರಸಿದ್ಧ ಕ್ರೂಗರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಸೆಲಾಟಿ ಸೇತುವೆಯ ಮೇಲೆ ಹಳೆಯ ರೈಲು ಬೋಗಿಗಳಿಂದ ನಿರ್ಮಿಸಲಾದ ಅತ್ಯಾಕರ್ಷಕ ಹೊಟೇಲ್.‌ 1920ರ ದಶಕದಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆತರುವ ಸಲುವಾಗಿ ಬಳಸಲಾಗುತ್ತಿದ್ದ ರೈಲುಗಳ ನೆನಪನ್ನು ಉಳಿಸಿಕೊಳ್ಳುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಯಿತು. ಇಂದು ಆ ಬೋಗಿಗಳನ್ನು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಐಷಾರಾಮಿ ಕೊಠಡಿಗಳಾಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ: ಐಲ್ಯಾಂಡ್ ಮಧ್ಯೆ ಅಡ್ವೆಂಚರ್ & ಪೀಸ್

ಈ ಹೊಟೇಲಿನ ಪ್ರಮುಖ ಆಕರ್ಷಣೆಯೆಂದರೆ, ಇದು ನದಿಯ ಮೇಲಿರುವ ಸೇತುವೆಯ ಮೇಲೆ ನಿರ್ಮಿಸಲಾಗಿದೆ. ಹೊಟೇಲಿನ ಕೊಠಡಿಗಳ ಕಿಟಕಿಗಳಿಂದ ಹಾಗೂ ಪ್ರೈವೆಟ್‌ ಬಾಲ್ಕನಿಗಳಿಂದ ಅತಿಥಿಗಳು ಸುತ್ತಮುತ್ತಲಿನ ಅರಣ್ಯ ಪ್ರದೇಶ ಮತ್ತು ಸಬಿ ನದಿಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೆಲವೊಮ್ಮೆ ಆನೆಗಳು, ಜಿರಾಫೆಗಳು, ಜಿಂಕೆಗಳು ಹಾಗೂ ಇತರ ಕಾಡುಪ್ರಾಣಿಗಳು ನದಿಯ ಅಂಚಿನಲ್ಲಿ ಸಂಚರಿಸುವ ದೃಶ್ಯಗಳು ಪ್ರವಾಸಿಗರಿಗೆ ಹೊಸ ಅನುಭವಗಳನ್ನು ಕಟ್ಟಿಕೊಡುತ್ತವೆ.

Untitled design - 2026-07-31T200146.723

ಕ್ರೂಗರ್ ಶಲಾಟಿಯಲ್ಲಿ ಏನೇನಿದೆ ?

ಹಳೆಯ ಬೋಗಿಗಳಿಗೆ ಹೊಸ ರೂಪ ನೀಡಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಹೊಟೇಲ್‌ನಲ್ಲಿ ಅತಿಥಿಗಳಿಗಾಗಿ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅತ್ಯುತ್ತಮ ಆಹಾರ ವ್ಯವಸ್ಥೆ, ಸುಂದರವಾದ ಈಜುಕೊಳ, ವೈಭವಯುತ ವಸತಿ ಸೇರಿದಂತೆ ಆಧುನಿಕ ಸೌಲಭ್ಯಗಳು ಇಲ್ಲಿವೆ. ಅಲ್ಲದೆ, ಹೊಟೇಲಿನ ವಿನ್ಯಾಸವು ಆಫ್ರಿಕಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತೆ ರೂಪುಗೊಂಡಿದ್ದು, ಹಳೆಯ ರೈಲಿನ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡಿದೆ.

ದಕ್ಷಿಣ ಆಫ್ರಿಕಾದ ಅತ್ಯಂತ ಪ್ರಸಿದ್ಧ ಮತ್ತು ಅತಿದೊಡ್ಡ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಈ ವಿಶೇಷ ಹೊಟೇಲ್‌ ನಿರ್ಮಾಣಗೊಂಡಿದೆ. ಇಲ್ಲಿ ಉಳಿದುಕೊಳ್ಳುವ ಅತಿಥಿಗಳಿಗೆ ವಿಶೇಷ ಸಫಾರಿ ವ್ಯವಸ್ಥೆಯಿದ್ದು, ಪ್ರವಾಸಿಗರು ಬೆಳಗ್ಗೆ ಮತ್ತು ಸಂಜೆ ಸಫಾರಿಗೆ ತೆರಳಬಹುದು. ಸಿಂಹ, ಚಿರತೆ, ಖಡ್ಗಮೃಗಗಳು ಸೇರಿದಂತೆ ಅಪರೂಪದ ಪ್ರಾಣಿಗಳನ್ನು ಸಮೀಪದಿಂದ ವೀಕ್ಷಿಸಬಹುದು.

ಕ್ರೂಗರ್ ಶಲಾಟಿ – ದ ಟ್ರೈನ್ ಆನ್ ದಿ ಬ್ರಿಡ್ಜ್ ಹೊಟೇಲ್‌ನಲ್ಲಿ ಒಟ್ಟು 31 ಕೊಠಡಿಗಳಿದ್ದು, ಅವುಗಳಲ್ಲಿ 24 ರೈಲು ಬೋಗಿ ಕೊಠಡಿಗಳು ಮತ್ತು 7 ಬ್ರಿಡ್ಜ್ ಹೌಸ್ ಕೊಠಡಿಗಳಿವೆ. ವಿಶಾಲವಾದ ಗಾಜಿನ ಗೋಡೆಗಳನ್ನು ಹೊಂದಿರುವ ರೈಲು ಕೊಠಡಿಗಳು ಭವ್ಯವಾದ ಸಬಿ ನದಿಯ ಉದ್ದಕ್ಕೂ ಹರಡಿಕೊಂಡಿರುವ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ಅಲ್ಲದೆ ರೈಲಿನ ಒಳಭಾಗದ ವಿನ್ಯಾಸವು ಆಫ್ರಿಕಾದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವಂತಿದೆ.

ಒಟ್ಟಿನಲ್ಲಿ, ವಿಶ್ವದ ಅತ್ಯಂತ ವಿಶಿಷ್ಟ ಹೊಟೇಲ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ʻಕ್ರೂಗರ್ ಶಲಾಟಿ – ದ ಟ್ರೈನ್ ಆನ್ ದಿ ಬ್ರಿಡ್ಜ್ʼ ಹೊಟೇಲ್‌ ವಿಭಿನ್ನ ರೀತಿಯ ಪ್ರವಾಸದ ಅನುಭವವನ್ನು ಹುಡುಕುವವರಿಗೆ ಉತ್ತಮ ಆಯ್ಕೆಯಾಗಿದೆ.

Untitled design - 2026-07-31T200215.683

ಕ್ರೂಗರ್ ರಾಷ್ಟ್ರೀಯ ಉದ್ಯಾನವನ

ದಕ್ಷಿಣ ಆಫ್ರಿಕಾದ ಅತ್ಯಂತ ಪ್ರಸಿದ್ಧ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನ ಪ್ರಕೃತಿ ಪ್ರಿಯರು ಮತ್ತು ಸಾಹಸಮಯ ಪ್ರವಾಸಿಗರ ಪಾಲಿನ ಸ್ವರ್ಗದಂತಿದೆ. 1898ರಲ್ಲಿ ಸ್ಥಾಪನೆಯಾದ ಈ ಉದ್ಯಾನವನವು ಸುಮಾರು 20,000 ಚದರ ಕಿಮೀ. ಪ್ರದೇಶದಲ್ಲಿ ಹರಡಿಕೊಂಡಿದ್ದು, ವಿಶ್ವದ ಅತ್ಯುತ್ತಮ ಸಫಾರಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವೈವಿಧ್ಯಮಯ ಜೀವಜಗತ್ತಿಗೆ ಹೆಸರಾಗಿರುವ ಈ ತಾಣದಲ್ಲಿ ಸಿಂಹ, ಆನೆ, ಖಡ್ಗಮೃಗ, ಚಿರತೆ ಮತ್ತು ಕಾಡೆಮ್ಮೆ ಸೇರಿದಂತೆ ‘ಬಿಗ್ ಫೈವ್’ ಎಂದು ಕರೆಯಲಾಗುವ ಐದು ಪ್ರಮುಖ ಕಾಡುಪ್ರಾಣಿಗಳನ್ನು ಸಮೀಪದಿಂದ ವೀಕ್ಷಿಸುವ ಅವಕಾಶವಿದೆ. ಇದರ ಜತೆಗೆ ಜಿರಾಫೆ, ಜೀಬ್ರಾ, ನೀರಾನೆ, ಮೊಸಳೆ ಹಾಗೂ ಅನೇಕ ಪಕ್ಷಿ ಪ್ರಭೇದಗಳನ್ನು ಹೊಂದಿದೆ.

--

ಇದೇ ಜುಲೈ 1ರಿಂದ ಅಕ್ಟೋಬರ್‌ 31ರವರೆಗೆ ಈ ಸ್ಪೆಷಲ್‌ ಹೊಟೇಲ್‌ ಬುಕಿಂಗ್‌ಗೆ ಅವಕಾಶವಿದೆ. ಬ್ರಿಡ್ಜ್‌ ಹೌಸ್‌ ಸ್ಯೂಟ್ಸ್‌ಗಳ ಪೈಕಿ ಡಬಲ್‌ ರೂಮ್‌,ಸನ್‌ಸೆಟ್‌ ಸ್ಯೂಟ್‌ ಹಾಗೂ ಫ್ಯಾಮಿಲಿ ಸ್ಯೂಟ್ಸ್‌ ಇದ್ದು, ಕಾಲಕ್ಕೆ ಹೊಂದುವಂತೆ ದರದಲ್ಲಿ ಏರಿಳಿತವಾಗುತ್ತವೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ