ಈ 'ಪ್ರವಾಸಿ'ಗಳಿಂದ ಅಂಗೈಯಲ್ಲೇ 'ಪ್ರಪಂಚ'!
ಡಾಕ್ಟರ್ ಬ್ರೋ ಇವತ್ತು 'ನಮ್ಮ ಅಜ್ಜಿಗೂ ಗೊತ್ತು' ಅನ್ನೋವಷ್ಟರ ಮಟ್ಟಿಗೆ ಬೆಳೆದು ನಿಂತಿರೋ ಹುಡುಗ. ಅವರೇ ಹೇಳಿಕೊಂಡಂತೆ, ಕನ್ನಡಿಗರಿಗೆ ಪ್ರತಿ ದೇಶವನ್ನೂ ತೋರಿಸುವ ಗುರಿ ಗಗನ್ ಅವರದ್ದು. ಎಲ್ಲಿಗೆ ಹೋದರೂ ಆದಷ್ಟು ಕನ್ನಡ ಭಾಷೆಯನ್ನೇ ಬಳಕೆ ಮಾಡೋದು ಇವರ ಹೆಗ್ಗಳಿಕೆ.
- ನಾಗೇಂದ್ರ ಭಟ್ ಬಿ.
ಕೋಶ ಓದಿ ನೋಡು, ದೇಶ ಸುತ್ತಿ ನೋಡು ಅಂತ ಹೇಳ್ತಾರೆ!
ಇವೆರಡನ್ನೂ ಸುತ್ತಬಹುದು ಹೇಗೋ. ಆದರೆ ವಿದೇಶ ಸುತ್ತೋದು ಒಂದು ಸವಾಲೇ ಸರಿ. ಆರ್ಥಿಕ ಹೊರೆಯ ಜೊತೆಗೆ, ವೀಸಾ, ಪಾಸ್‌ಪೋರ್ಟು ಸೇರಿದಂತೆ ಹಲವಾರು ಸವಾಲುಗಳು ಈ ವಿದೇಶ ಪ್ರವಾಸಕ್ಕಿದೆ. ಎಷ್ಟೋ ಜನರಿಗೆ ಫಾರಿನ್ ನೋಡಬೇಕು ಅನ್ನೋ ಕನಸಿದ್ದರೂ, ಅದನ್ನು ನನಸು ಮಾಡಿಕೊಳ್ಳೋಕೆ ಸಾಧ್ಯವಾಗೋದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಆ ದೇಶ ತುಂಬಾ ಕ್ಲೀನ್ ಅಂತೆ, ಈ ದೇಶ ಟೆಕ್ನಾಲಜಿಯಲ್ಲಿ ಮುಂದಿದೆಯಂತೆ, ಇನ್ನೊಂದು ದೇಶದಲ್ಲಿ ಮನೆ ಬಾಗಿಲನ್ನು ತೆರೆದಿಟ್ರೂ ಕಳ್ಳರ ಕಾಟವಿಲ್ಲವಂತೆ. ಮಗದೊಂದು ದೇಶದಲ್ಲಿ ಹದಿನೆಂಟು ವರ್ಷ ತುಂಬಿದ ಹುಡುಗರೆಲ್ಲರೂ ಕಡ್ಡಾಯವಾಗಿ ಸೇನೆಗೆ ಹೋಗಬೇಕಂತೆ. ಈ ಅಂತೆ-ಕಂತೆಗಳನ್ನು ಚೆಕ್ ಮಾಡೋಕೆ, ಆ ದೇಶಕ್ಕೆ ಹೋಗೋಕೆ ಕಂತೆ-ಕಂತೆ ಹಣ ಖರ್ಚಾಗುತ್ತೆ!
ಜಿಯೋ ಇಂಟರ್‌ನೆಟ್ ಕ್ರಾಂತಿಯ ನಂತರ, ಮನೆಮನೆಯಲ್ಲೂ ಸೋಷಿಯಲ್ ಮೀಡಿಯಾ ತನ್ನ ಗಟ್ಟಿಯಾದ ತಳಪಾಯ ಹಾಕಿದೆ. ಯೂ ಟ್ಯೂಬ್‌ಗೆ ಹಿರಿಯರು ಕಿರಿಯರು ಸೇರಿದಂತೆ ಎಲ್ಲಾ ವಯೋಮಾನದವರೂ ಆಕರ್ಷಿತರಾಗಿ ಹೋಗಿದ್ದಾರೆ.
ಕನ್ನಡದ ಯೂಟ್ಯೂಬಿಗರು ಕೂಡ ಒಂದು ಹೆಜ್ಜೆ ಮುಂದಿಟ್ಟು, ಪ್ರಪಂಚ ಪರ್ಯಟನೆ ಮಾಡುತ್ತಾ, ಜನರಿಗೂ ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಆಹಾರ ಪದ್ಧತಿ, ಜನ-ಜೀವನವನ್ನು ತೋರಿಸುತ್ತಾ ಇದ್ದಾರೆ.
ಅಂಥ ಕೆಲವು ಪ್ರಮುಖ ಯೂಟ್ಯೂಬ್ ವ್ಲಾಗರ್ಸ್‌ಗಳ ಬಗ್ಗೆ ತಿಳಿದುಕೊಳ್ಳೋ ಸಣ್ಣ ಪ್ರಯತ್ನವನ್ನ ಮಾಡೋಣ.

'ಗಗನ' ಕುಸುಮವಲ್ಲ ವಿದೇಶ ಪ್ರಯಾಣ!- ಡಾಕ್ಟರ್ ಬ್ರೋ
ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್!
ನಮಸ್ಕಾರ ದೇವ್ರು ಅನ್ನುತ್ತಲೇ ಮನೆಮನೆ ಮಾತಾಗಿರೋ, ನಮ್ಮ ಮನೆಯ ಹುಡುಗನೇ ಅನಿಸೋವಷ್ಟು ಆಪ್ತವಾಗಿರೋ ಹುಡುಗ.
ಮಧ್ಯಮ ವರ್ಗದ ಕುಟುಂಬದಿಂದ ಬಂದಿರೋ ಗಗನ್ ಶ್ರೀನಿವಾಸ್, 'ಗಗನ ಸಖಿಯರ ಹಾಗೆ, ವಿಮಾನ ಏರಿ, ವಿದೇಶ ತಿರುಗುತ್ತಾ ಗಗನಸಖ ಎನಿಸಿಕೊಂಡು, ನೋಡುಗರಿಗೆ ಮನರಂಜನೆಯ ಸುಖವನ್ನು ಹಂಚುತ್ತಿದ್ದಾರೆ.
ತಂದೆ ಅರ್ಚಕರಾಗಿದ್ದು, ಕೆಲ ಕಾಲ ಗಗನ್ ಕೂಡ ಅರ್ಚಕರಾಗಿ ಕೆಲಸ ನಿರ್ವಹಿಸಿದ್ದಾರೆ. ಭರತ ನಾಟ್ಯವನ್ನು ಕುಣಿಯೋದರಲ್ಲೂ ಗಗನ್ ಎತ್ತಿದ ಕೈ. ಕೆಲಕಾಲ ಅವರು, ಭರತನಾಟ್ಯ ಕಲಿಯುವ ಆಸಕ್ತರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಡಾಕ್ಟರ್ ಬ್ರೋ ಇವತ್ತು 'ನಮ್ಮ ಅಜ್ಜಿಗೂ ಗೊತ್ತು' ಅನ್ನೋವಷ್ಟರ ಮಟ್ಟಿಗೆ ಬೆಳೆದು ನಿಂತಿರೋ ಹುಡುಗ. ಅವರೇ ಹೇಳಿಕೊಂಡಂತೆ, ಕನ್ನಡಿಗರಿಗೆ ಪ್ರತಿ ದೇಶವನ್ನೂ ತೋರಿಸುವ ಗುರಿ ಗಗನ್ ಅವರದ್ದು.
ಎಲ್ಲಿಗೆ ಹೋದರೂ ಆದಷ್ಟು ಕನ್ನಡ ಭಾಷೆಯನ್ನೇ ಬಳಕೆ ಮಾಡೋದು ಇವರ ಹೆಗ್ಗಳಿಕೆ. ಸಸ್ಯಹಾರಿಯಾಗಿರೋ ಇವರು, ತಾವು ಹೋಗೋ ಪ್ರತಿ ಊರಿನಲ್ಲೂ ಅದನ್ನು ಪಡೆದುಕೊಳ್ಳೋದ್ರಲ್ಲಿ ಸಕ್ಸಸ್ ಆಗಿದ್ದಾರೆ!
ಮೂರು ಮಿಲಿಯನ್ ಚಂದಾದಾರರು!
ಸಬ್‌ಸ್ಕ್ರೈಬರ್‌ಗಳನ್ನು ಗಳಿಸಿದ್ದಾರೆ ಅಂದರೆ, ಇವರ ಜನಪ್ರಿಯತೆ ಯಾವ ಮಟ್ಟದಲ್ಲಿದೆ ಅಂತ ನೀವೇ ಅಂದಾಜು ಮಾಡಬಹುದು!
ಆರಂಭದಲ್ಲಿ ಬೆಂಗಳೂರನ್ನು ಕೇಂದ್ರೀಕೃತವಾಗಿ vlog ಮಾಡ್ತಾ ಇದ್ದ, ಗಗನ್ ಶ್ರೀನಿವಾಸ್ ಅವರು, ನಂತರ ಕರ್ನಾಟಕದ ಅಪರೂಪದ ಸ್ಥಳಗಳನ್ನು ಪರಿಚಯ ಮಾಡುವ ಪ್ರಯತ್ನ ಮಾಡಿದ್ದರು. ನಂತರ ಕೇರಳ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ಥಾನ, ಗೋವಾ, ಅಸ್ಸಾಂ ಆಂಧ್ರ ಪ್ರದೇಶ, ಮಹಾರಾಷ್ಟ್ರ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ವಿಶಿಷ್ಠತೆಯನ್ನು ಜನರಿಗೆ ಪರಿಚಯಿಸಿ, ಪಾಕಿಸ್ತಾನದ ಗಡಿಗೂ ಕಾಲಿಟ್ಟರು.
ಅಲ್ಲಿಂದ ಗಗನ್ ಹಿಂದೆ ತಿರುಗಿ ನೋಡಲೇ ಇಲ್ಲ. ಕಾಲಿಟ್ಟಲೆಲ್ಲಾ ತಮ್ಮ ನಯ-ವಿನಯ ತುಂಬಿರೋ ಮಾತುಗಳಿಂದ ಅಲ್ಲಿನವರ ಮನಗೆದ್ದು, ಕನ್ನಡಿಗರಿಗೆ ಮನರಂಜನೆಯ ಜೊತೆಗೆ ಅಲ್ಲಿನ ಕಲ್ಚರ್ ಪರಿಚಯಿಸುತ್ತಾ ಬಂದಿದ್ದಾರೆ.
ಡಾಕ್ಟರ್ ಬ್ರೋ ತಮ್ಮ ಕ್ಯಾಮೆರಾದಿಂದ ಆಪರೇಷನ್ ಮಾಡಿದ ದೇಶಗಳೆಂದರೆ ದುಬೈ, ರಷ್ಯಾ, ಥೈಲ್ಯಾಂಡ್, ಉಜ್ಬೇಕಿಸ್ಥಾನ್, ಸಿಂಗಾಪುರ್, ಮಲೇಷಿಯಾ, ಹಾಂಗ್‌ಕಾಂಗ್, ತಾಂಜಾನಿಯಾ, ಚೈನಾ, ಇಂಡೋನೇಷ್ಯಾ, ಅಜರ್ ಬೈಜಾನ್, ಈಜಿಪ್ಟ್, ಸೌತ್ ಸುಡಾನ್, ಉಗಾಂಡಾ, ಸಿರಿಯಾ, ನೈಜೀರಿಯಾ, ಲೆಬನಾನ್, ನೇಪಾಳ, ಅಫ್ಘಾನಿಸ್ತಾನ.
ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳ ಹದ್ದಿನ ಕಣ್ಣನ್ನು ತಪ್ಪಿಸಿ, ಮಾಡಿದ ವಿಡಿಯೋಗಳು ಮೈ ಜುಮ್ಮೆನಿಸೋ ಹಾಗಿವೆ. ಆಫ್ರಿಕಾದಲ್ಲಿನ ಬೇಟೆಯಾಡಿ ಬದುಕೋ ಆದಿವಾಸಿಗಳ ಜೀವನಶೈಲಿಯನ್ನು ಅತ್ಯದ್ಭುತವಾಗಿ ಕನ್ನಡದಲ್ಲೇ ಕಟ್ಟಿಕೊಟ್ಟಿರೋ ಶ್ರೇಯ ಡಾಕ್ಟರ್ ಬ್ರೋಗೆ ಸಲ್ಲಬೇಕು. ವೆಸ್ಟ್ ಪಪುವಾದ ದಾನಿ ಬುಡಕಟ್ಟು ಜನಾಂಗದ ವಿಶೇಷತೆಯನ್ನೂ ಇವರು ಸುಂದರವಾಗಿ ಚಿತ್ರಿಸಿ, ಜನರ ಮನಗೆದ್ದಿದ್ದಾರೆ.
ಡಾಕ್ಟರ್ ಬ್ರೋ ಎಷ್ಟು ಫೇಮಸ್ ಆಗಿದ್ದಾರೆ ಅಂತ ಅಂದ್ರೆ,
ಕಳೆದ ಕೆಲವು ಸೀಸನ್‌ನಿಂದ ಬಿಗ್‌ಬಾಸ್ ಶೋ ಶುರುವಾಗೋಕೂ ಮುನ್ನ, ವೈರಲ್ ಆಗೋ ಲಿಸ್ಟ್‌ನಲ್ಲಿ ಡಾಕ್ಟರ್ ಬ್ರೋ ಹೆಸರು ಇದ್ದೇ ಇರುತ್ತೆ. ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ ನಮ್ಮ ಬ್ರೋ!
ಇಷ್ಟೆಲ್ಲ ಜನಪ್ರಿಯತೆಯ ಉತ್ತುಂಗದಲ್ಲಿರೋ ಡಾಕ್ಟರ್ ಬ್ರೋ, ಕಳೆದ ಕೆಲವು ತಿಂಗಳಿಂದ ವಿಡಿಯೋಗಳನ್ನು ಅಪ್‌ಲೋಡ್ ಮಾಡದೇ ಇರೋದು, ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮೂಡಿಸಿದೆ ಅಂತಾನೇ ಹೇಳಬಹುದು.
ಆದಷ್ಟು ಬೇಗ ಡಾಕ್ಟರ್ ಬ್ರೋ, ಇನ್ನಷ್ಟು ದೇಶಗಳ ಬಗ್ಗೆ ತಿಳಿಸಿಕೊಡಲಿ ಅನ್ನೋದೇ ಕನ್ನಡಿಗರ ಆಶಯವಾಗಿದೆ.

ಭರವಸೆಯ 'ಆಶಾ-ಕಿರಣ'- ದ ಫ್ಲಯಿಂಗ್ ಪಾಸ್ ಪೋರ್ಟ್
ಕನ್ನಡಿಗರಿಗೆ ಕೂತಲ್ಲೇ ಪ್ರಪಂಚವನ್ನು ತೋರಿಸುತ್ತಾ ಇರೋ ಅದ್ಭುತ ಜೋಡಿ ಆಶಾ-ಕಿರಣ್! ಗಂಡ-ಹೆಂಡತಿ ಇಬ್ರೂ, ಫಾರಿನ್‌ನಲ್ಲಿ ಐಟಿ ಉದ್ಯೋಗದಲ್ಲಿ ಇದ್ದು, ಕೆಲಸ ಮಾಡ್ತಾನೇ, ಹತ್ತಿರ ಹತ್ತಿರ ನೂರು ದೇಶಗಳಿಗೆ ವಿಸಿಟ್ ಮಾಡಿದ್ದಾರೆ.
ಒಂದೇ ಕಾಲೇಜಲ್ಲಿ ಓದಿ, ಸ್ನೇಹಿತರಾಗಿದ್ದ ಆಶಾ-ಕಿರಣ್, ಆನಂತರ ಮದುವೆಯಾದರು. ಪ್ರಪಂಚದಲ್ಲಿರೋ ಪ್ರತಿ ದೇಶದಲ್ಲೂ ಕನ್ನಡ ಧ್ವಜವನ್ನು ಹಾರಿಸೋ ಗುರಿಯನ್ನು ಈ ಜೋಡಿ ಹೊಂದಿದೆ.
ವಿಶ್ವದ ಏಳು ಅದ್ಭುತಗಳು, ಅಮೇಜಾನ್ ಕಾಡು, ಸೇರಿದಂತೆ ಹಲವಾರು ವಿಶಿಷ್ಠ ಅನುಭವವನ್ನು ಅವರು ತಮ್ಮ 'ಫ್ಲೈಯಿಂಗ್ ಪಾಸ್‌ಪೋರ್ಟ್' ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ್ದಾರೆ. ಎಲ್ಲೇ ಹೋದರೂ ಗಂಡ-ಹೆಂಡತಿ ಜೊತೆಯಾಗಿ ಸಾಗಿ, ಫುಲ್ ಜೋಷ್‌ನಲ್ಲಿ ವ್ಲಾಗ್ ಮಾಡೋದು ಇವರ ಹೆಗ್ಗಳಿಕೆ. ವಿದೇಶದಲ್ಲಿ ಬಾಡಿಗೆ ಕಾರು ಪಡೆದು, ಸಾವಿರಾರು ಕಿಲೋಮೀಟರ್ ರೋಡ್ ಟ್ರಿಪ್‌ಗಳನ್ನು ಇವರಿಬ್ರೇ ಮಾಡೋದು ರೋಮಾಂಚನಕಾರಿ ವಿಷಯ. ಇತ್ತೀಚೆಗೆ ತಮ್ಮದೇ ಆದ ಟೂರ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಆರಂಭಿಸಿ, ಗ್ರೂಪ್ ಟ್ರಿಪ್‌ಗಳನ್ನು ಆಯೋಜನೆ ಮಾಡ್ತಾ ಇದ್ದಾರೆ. ಯೂ ಟ್ಯೂಬಲ್ಲಿ
ಸರಿ ಸುಮಾರು ಏಳು ಲಕ್ಷ ಚಂದಾದಾರರನ್ನು ಇವರ ಚಾನೆಲ್ ಹೊಂದಿದೆ. ವಾರಕ್ಕೆ ಕನಿಷ್ಠ ಎರಡು ವಿಡಿಯೋಗಳನ್ನು ಈ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗತ್ತೆ.
ಕನ್ನಡಿಗರಿಗೆ ನೂರಾ ತೊಂಬತ್ತೆಂಟು ದೇಶಗಳನ್ನು ತೋರಿಸೋ ಈ ಜೋಡಿಯ ಕನಸು, ಆದಷ್ಟು ಬೇಗ ಈಡೇರಲಿ. ಕನ್ನಡಿಗರಿಗೆ ಎಲ್ಲ ದೇಶಗಳನ್ನೂ ಕೂತಲ್ಲೇ ನೋಡುವ ಸೌಭಾಗ್ಯ ಸಿಗಲಿ.

ಪಕ್ಕಾ ಲೋಕಲ್ ಈ ಗ್ಲೋಬಲ್ ಕನ್ನಡಿಗ!
ಗ್ಲೋಬಲ್ ಕನ್ನಡಿಗ ಅಲಿಯಾಸ್ ಮಹಾಬಲರಾಮ್, ಮೂಲತಃ ಕಲಾವಿದರಾಗಿದ್ದರು. ಸೀರಿಯಲ್ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾ ಇದ್ದ ಮಹಾಬಲರಾಮ್, ಫ್ಲೈಯಿಂಗ್ ಪಾಸ್‌ಪೋರ್ಟ್‌ನ ಆಶಾ-ಕಿರಣ್ ಹಾಗೂ ಡಾಕ್ಟರ್ ಬ್ರೋ ಗಗನ್ ಜೊತೆಗೆ ಹೊನ್ನಾವರ ಟ್ರಿಪ್ ಮಾಡಿ, ತಮ್ಮ ಗ್ಲೋಬಲ್ ಕನಸನ್ನು ವ್ಯಕ್ತಪಡಿಸಿ, ವಿದೇಶಕ್ಕೆ ಕಾಲಿಡೋ ಕಾಯಕಕ್ಕೆ ಕೈ ಹಾಕೇಬಿಟ್ಟರು. ಇವರ ವಿಶೇಷತೆ ಎಂದರೆ, ಎಲ್ಲೇ ಹೋದರೂ ಅಲ್ಲಿನ ಲೋಕಲ್ ಜನರ ಜೊತೆಗೆ ಚೆನ್ನಾಗಿ ಹೊಂದಿಕೊಂಡು, ಬೆರೆತುಕೊಂಡು ಅಲ್ಲಿನ ಆಚಾರ-ವಿಚಾರಗಳನ್ನು ತುಂಬಾ ಸರಳವಾಗಿ ಜನರಿಗೆ ಮನಮುಟ್ಟೋ ಹಾಗೆ ಕಟ್ಟಿಕೊಡುತ್ತಾರೆ.
ಹೆಸರಿಗೆ ತಕ್ಕಂತೆ ದೇಶ ಸುತ್ತುವುದರಲ್ಲಿ ಈತ ನಿಜಕ್ಕೂ 'ಮಹಾಬಲ'ನೇ ಸರಿ.
ನಲವತ್ತಕ್ಕೂ ಹೆಚ್ಚಿನ ದೇಶಗಳಿಗೆ ಭೇಟಿ ಕೊಟ್ಟಿರೋ ರಾಮ್, ವ್ಲಾಗ್ ಮತ್ತು ಸಾಂಗ್ ಎರಡನ್ನೂ ಒಂದೇ ಸಂಚಿಕೆಯಲ್ಲಿ ಕೂಡಿಸಿ, 'ವ್ಲಾಂಗ್' ಅನ್ನುವ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ. ಪಾಕಿಸ್ತಾನಕ್ಕೂ ವಿಸಿಟ್ ಮಾಡಿರೋ ರಾಮ್, ಅಲ್ಲಿನ ಜನ-ಜೀವನವನ್ನ ಪರಿಚಯಿಸುವ ಕೆಲಸ ಮಾಡಿದ್ದಾರೆ. ಪ್ರಪಂಚದಲ್ಲಿ ಮಾನವರು ವಾಸ ಇರುವ ಅತಿ ಉಷ್ಣತೆ ಹೊಂದಿರುವ ದಾನಿಕಲ್ ಡಿಪ್ರೆಷನ್‌ಗೂ (Danikal Depression) ಲಗ್ಗೆ ಇಟ್ಟಿದ್ದ ರಾಮ್, ಅದೇ ರೀತಿ ಜಗತ್ತಿನ ಅತ್ಯಂತ ಕೋಲ್ಡೆಸ್ಟ್ ಪ್ಲೇಸ್ ಆಗಿರುವ ರಷ್ಯಾದ ಓಯ್-ಮಿ-ಯಾ-ಕಾನ್‌ಗೂ (oymyakon) ಹೋಗಿ ಬಂದಿದ್ದಾರೆ. ಇವರ ಇರಾಕ್, ಇರಾನ್, ಉಕ್ರೇನ್, ಪಾಕಿಸ್ತಾನ್, ಜೋರ್ಡಾನ್, ಮಂಗೋಲಿಯಾ, ರಷ್ಯಾ, ಮಡಗಾಸ್ಕರ್, ಚೈನಾ, ಲಾವೋಸ್, ಇಸ್ರೇಲ್ ಸರಣಿಗಳು ಜನಮೆಚ್ಚುಗೆಗೆ ಪಾತ್ರ ಆಗಿವೆ. ಜಗತ್ತಿನ ಅತ್ಯಂತ ಕೋಲ್ಡೆಸ್ಟ್ ಪ್ಲೇಸಲ್ಲಿನ ವ್ಲಾಗ್ಸ್, ಮುಂಗೋಲಿಯಾ ಹಾಗೂ ಅಲ್ಲಿನ ಜನ-ಜೀವನ ಕಟ್ಟಿಕೊಟ್ಟ ರೀತಿಯಂತೂ ತುಂಬಾ ವಿಭಿನ್ನವಾಗಿದೆ. ಮಂಗೋಲಿಯಾದ ರಣ ಬೇಟೆಗಾರರು ಅಂತ ಹೇಳಬಹುದಾದ, 'ಈಗಲ್ ಹಂಟರ್ಸ್' ಮನೆಗೂ ಭೇಟಿಕೊಟ್ಟು, ಅವರ ಜೀವನಶೈಲಿಯನ್ನು ಕನ್ನಡಿಗರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.
ವಿಶ್ವದ ಮೂಲೆ ಮೂಲೆಯಲ್ಲಿರೋ ಕನ್ನಡಿಗರನ್ನ ಒಂದುಗೂಡಿಸಿ, ಒಂದು ಚೈನ್ ಲಿಂಕ್ ಸೃಷ್ಟಿಸುವ ಮಹಾ ಕನಸನ್ನು ರಾಮ್ ಇಟ್ಟುಕೊಂಡಿದ್ದಾರೆ. ಇವರ ಯೂ ಟ್ಯೂಬ್ ಚಾನೆಲ್‌ಗೆ ನಾಲ್ಕು ಲಕ್ಷ ಜನ ಚಂದಾದಾರರಿದ್ದಾರೆ.
ಸದಾ ಕಾಲ ನಗುತ್ತಾ, ನಗಿಸುತ್ತಾ, ತಿರುಗುತ್ತಾ, ಕನ್ನಡಿಗರಿಗೆ ಹೊಸ ದೇಶಗಳನ್ನು ತೋರಿಸುತ್ತಾ, ಪ್ರೀತಿ ಹಂಚುತ್ತಿರುವ ಈ ಗ್ಲೋಬಲ್ ಕನ್ನಡಿಗನಿಗೆ ಇನ್ನಷ್ಟು ಯಶಸ್ಸು ಸಿಗಲಿ.

ಕೆಲಸ ಬಿಟ್ಟು ಪ್ರವಾಸಕ್ಕಿಳಿದ ಮಹಾಲಕ್ಷ್ಮಿ!
ಇದೇ ರೀತಿ ಬ್ಯಾಕ್ ಪ್ಯಾಕ್ ವಿತ್ ಮಹಾಲಕ್ಷ್ಮಿ ಕೂಡ ವಿದೇಶ ಸುತ್ತಿ, ವ್ಲಾಗ್‌ಗಳನ್ನು ಮಾಡುತ್ತಾ ಇದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದ ಮಹಾಲಕ್ಷ್ಮಿ, ಈಗ ಕೆಲಸ ಬಿಟ್ಟು ಫುಲ್ ಟೈಮ್ ವ್ಲಾಗರ್ ಆಗಿದ್ದಾರೆ. ಏಕಾಂಗಿಯಾಗಿ ವಿದೇಶ ಸುತ್ತುವ ಇವರ ಧೈರ್ಯ ಎಂಥವರಿಗೂ ಸ್ಫೂರ್ತಿ ನೀಡುವಂಥದ್ದು. 85 ಸಾವಿರ ಸಬ್‌ಸ್ಕ್ರೈಬರ್ಸ್ ಹೊಂದಿರುವ ಮಹಾಲಕ್ಷ್ಮಿ, ಶ್ರೀಲಂಕಾ, ಬಾಲಿ, ಮಾಲ್ಡೀವ್ಸ್,ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಸಿಂಗಾಪುರ್, ಮಲೇಷಿಯಾ, ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಿಗೆ ಹಾರಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲ ವ್ಲಾಗರ್ಸ್‌ಗಳು ಕೂತಲ್ಲಿಯೇ ಕನ್ನಡಿಗರಿಗೆ ಪ್ರಪಂಚ ಪರ್ಯಟನೆ ಮಾಡಿಸುತ್ತಾ ಇರುವುದು ಸಂತಸದ ವಿಷಯ. ವಿದೇಶಗಳಿಗೆ ಭೇಟಿ ಕೊಡೋಕೆ ಸಾಧ್ಯ ಆಗದ ಎಷ್ಟೋ ಜನರಿಗೆ, ಇವರೆಲ್ಲರ ವಿಡಿಯೋಗಳನ್ನು ನೋಡಿ, ಆಯಾ ದೇಶಗಳ ಬಗ್ಗೆ ತಿಳಿದುಕೊಳ್ಳೋಕೆ ಸಾಧ್ಯ ಆಗುತ್ತಿದೆ. ಯೂ ಟ್ಯೂಬಲ್ಲಿ ಹೊಸ 'ಪ್ರಪಂಚ'ವನ್ನೇ ಸೃಷ್ಟಿಸಿದ ಈ ಸಾಹಸಿ 'ಪ್ರವಾಸಿ'ಗಳ ಪ್ರಯತ್ನಕ್ಕೆ ಪ್ರವಾಸಿ ಪ್ರಪಂಚದಿಂದ ಬೆಸ್ಟ್ ವಿಶಸ್ ತಿಳಿಸೋಣ.